news18-kannada Updated:September 15, 2020, 2:16 PM IST
ಆದಿತ್ಯ ಆಳ್ವ ಅವರ ಮನೆ
ಬೆಂಗಳೂರು (ಸೆ. 15): ಮಾಜಿ ಸಚಿವ ಜೀವರಾಜ್ ಆಳ್ವ ಅವರ ಮಗ ಆದಿತ್ಯ ಆಳ್ವ ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ಸಿಲುಕಿಕೊಂಡಿದ್ದಾರೆ. ನಟಿ ರಾಗಿಣಿ ದ್ವಿವೇದಿ, ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದ. ಆತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಇಂದು ಆದಿತ್ಯ ಆಳ್ವನ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ. ಆದಿತ್ಯ ಆಳ್ವ ಅವರ ಫಾರ್ಮ್ ಹೌಸ್ ಮ್ಯಾನೇಜರ್ ರಾಮದಾಸ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದಿತ್ಯ ಆಳ್ವ ಅವರ ರೆಸಾರ್ಟ್ನಲ್ಲಿ ಗಾಂಜಾ ಪತ್ತೆಯಾಗಿದ್ದು, ಎರಡು ಲ್ಯಾಪ್ಟಾಪ್, ಒಂದು ಕಂಪ್ಯೂಟರ್ ಹಾಗೂ ಸಿಸಿಟಿವಿ ಡಿವಿಆರ್ ಪತ್ತೆಯಾಗಿದ್ದು, ಅವೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
2018 ರವರೆಗೂ ಆದಿತ್ಯ ಆಳ್ವಾ ಮನೆ ಇರೋ ಜಾಗದಲ್ಲಿ ರೆಸಾರ್ಟ್ ನಡೆಯುತ್ತಾ ಇತ್ತು. ಆದರೆ, 2018ಕ್ಕೆ ರೆಸಾರ್ಟ್ ಅನುಮತಿಯ ಲೈಸೆನ್ಸ್ ಅವಧಿ ಮುಗಿದಿತ್ತು. ಅವಧಿ ಮುಗಿದ ಬಳಿಕ ರೆಸಾರ್ಟ್ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಆದಿತ್ಯಾ ಆಳ್ವ ಆ ಜಾಗದಲ್ಲಿ ಆಗಾಗ ಪಾರ್ಟಿಗಳನ್ನು ನಡೆಸುತ್ತಿದ್ದರು. ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿದ್ದ ಆದಿತ್ಯ ಆಳ್ವ ಡ್ರಗ್ಸ್ ದಂಧೆಯ ಕಿಂಗ್ಪಿನ್ ವಿರೇನ್ ಖನ್ನಾ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ರವಿಶಂಕರ್ ಜೊತೆ ಸೇರಿ ಬೆಂಗಳೂರಿನಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಆದಿತ್ಯ ಸ್ಯಾಂಡಲ್ವುಡ್, ಬಾಲಿವುಡ್ ನಟರ ನಂಟನ್ನೂ ಹೊಂದಿದ್ದರು. ಹೀಗಾಗಿ, ತಮ್ಮ ಪಾರ್ಟಿಗಳಿಗೆ ನಟ-ನಟಿಯರನ್ನು ಆಹ್ವಾನಿಸುತ್ತಿದ್ದರು. ಆ ಪಾರ್ಟಿಗಳಿಗೆ ರವಿಶಂಕರ್ ಮತ್ತು ರಾಹುಲ್ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಆ ಪಾರ್ಟಿಗಳಿಗೆ ನಟಿ ರಾಗಿಣಿ ಕೂಡ ಹೋಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Sandalwood Drug Case: ಸ್ಯಾಂಡಲ್ವುಡ್ ಡ್ರಗ್ ಕೇಸ್; ಆದಿತ್ಯ ಆಳ್ವ ಮನೆ ಮೇಲೆ ಸಿಸಿಬಿ ದಾಳಿ
ಸರ್ಚ್ ವಾರೆಂಟ್ ಪಡೆದು ಹೆಬ್ಬಾಳದ ಬಳಿ ಇರುವ ಆದಿತ್ಯ ಆಳ್ವ ಅವರ ಹೌಸ್ ಆಫ್ ಲೈಫ್ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಅಲ್ಲಿ ಸಿಕ್ಕಿರುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಲಿವುಡ್ ಖ್ಯಾತ ನಟ ವಿವೇಕ್ ಒಬೆರಾಯ್ ಅವರ ಹೆಂಡತಿಯ ಸೋದರನಾಗಿರುವ ಆದಿತ್ಯ ಆಳ್ವ ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ 6ನೇ ಆರೋಪಿಯಾಗಿದ್ದಾರೆ. ರಾಗಿಣಿಯ ಬಂಧನವಾದ ಕೂಡಲೆ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೂ ಆತ ಪತ್ತೆಯಾಗಿರಲಿಲ್ಲ. ಇಂದು ಆತನ ಮನೆ ಮೇಲೆ ಇನ್ಸ್ಪೆಕ್ಟರ್ ಪುನೀತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಹೆಬ್ಬಾಳ ಸಮೀಪದ ಆದಿತ್ಯ ಆಳ್ವ ಅವರ ಮನೆ ಸುಮಾರು 4 ಎಕರೆ ವಿಸ್ತೀರ್ಣದಲ್ಲಿದೆ.
ಮಾಜಿ ಸಚಿವ ಜೀವರಾಜ್ ಆಳ್ವ ಮತ್ತು ನಂದಿನಿ ಆಳ್ವ ಅವರ ಮಗನಾಗಿರುವ ಆದಿತ್ಯ ಆಳ್ವ ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ಎ6 ಆರೋಪಿಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಆದಿತ್ಯ ಆಳ್ವ ಮಾತ್ರವಲ್ಲದೆ ಅವರ ಕುಟುಂಬಸ್ಥರೂ ನಾಪತ್ತೆಯಾಗಿದ್ದಾರೆ. ಜನತಾ ಪರಿವಾರದ ಹಿರಿಯ ರಾಜಕಾರಣಿ ಜೀವರಾಜ್ ಆಳ್ವ ಕರ್ನಾಟಕದ ಸಚಿವರಾಗಿದ್ದವರು. ಅವರ ಹೆಂಡತಿ ನಂದಿನಿ ಆಳ್ವ ಖ್ಯಾತ ನೃತ್ಯಗಾರ್ತಿ. ಅವರ ಮಗಳು ಪ್ರಿಯಾಂಕಾ ಆಳ್ವ ಅವರನ್ನು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮದುವೆಯಾಗಿದ್ದಾರೆ. ಅವರ ಮಗ ಆದಿತ್ಯ ಆಳ್ವ ಇದೀಗ ಡ್ರಗ್ಸ್ ದಂಧೆಯಲ್ಲಿ ಆರೋಪಿಯಾಗಿದ್ದಾರೆ.
Published by:
Sushma Chakre
First published:
September 15, 2020, 2:16 PM IST