Akul Balaji: ಡ್ರಗ್ಸ್​ ಪ್ರಕರಣ: ಖ್ಯಾತ ನಿರೂಪಕ ಅಕುಲ್​ ಬಾಲಾಜಿ ಸೇರಿದಂತೆ ಮೂವರಿಗೆ ಸಿಸಿಬಿ ನೋಟಿಸ್​

Sandalwood Drug Scandal: ರಿಯಾಲಿಟಿ ಶೋಗಳ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಮಾತಿನ ಮಲ್ಲ ಎಂದೇ ಗುರುತಿಸಿಕೊಂಡಿರುವ ಅಕುಲ್​ ಬಾಲಾಜಿ ಹೆಸರು ತನಿಖೆ ವೇಳೆ ಕೇಳಿ ಬಂದ ಹಿನ್ನೆಲೆ ಅವರಿಗೆ ನೋಟಿಸ್​​ ನೀಡಲಾಗಿದೆ.

ಅಕುಲ್​ ಬಾಲಾಜಿ-ಸಂತೋಷ್​

ಅಕುಲ್​ ಬಾಲಾಜಿ-ಸಂತೋಷ್​

  • Share this:
ಡ್ರಗ್ಸ್ ಜಾಲದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು  ಚಂದನವನದ ತಾರೆಯರ ತೀವ್ರ ವಿಚಾರಣೆ ನಡೆಸಿದ್ದಾರೆ. ಈಗಾಗಲೇ ನಟಿ ರಾಗಿಣಿ ಹಾಗೂ ಸಂಜನಾ ನ್ಯಾಯಾಂಗ ಬಂಧನದಲ್ಲಿದ್ದು, ಇವರ ಮಾಹಿತಿ ಮೇರೆಗೆ ಹಲವರ ವಿಚಾರಣೆ ನಡೆಸಿದ್ದಾರೆ. ನಿನ್ನೆಯಷ್ಟೇ ತಾರಾ ದಂಪತಿಗಳಾದ ದಿಂಗತ್​-ಐಂದ್ರಿತಾ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದರ ಬೆನ್ನಲ್ಲೇ  ಇಂದು ಮತ್ತೆ ಮೂವರಿಗೆ ಸಿಸಿಬಿ ನೋಟಿಸ್​ ನೀಡಿದೆ. ಖ್ಯಾತ ಟಿವಿ ನಿರೂಪಕ ಅಕುಲ್​ ಬಾಲಾಜಿ, ನಟ ಸಂತೋಷ್​ ​, ಮಾಜಿ ಕಾಂಗ್ರೆಸ್​ ಶಾಸಕ ಆರ್​ ವಿ ದೇವರಾಜ್​ ಮಗ ಯುವರಾಜ್​ಗೆ ಸಿಸಿಬಿ ನೋಟಿಸ್​ ಜಾರಿ ಮಾಡಿದೆ. ಈ ಮೂವರನ್ನು ನಾಳೆ ಬೆಳಗ್ಗೆ  ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಇವರ ವಿಚಾರಣೆ ನಡೆಸುವ ಮೂಲಕ ಮತ್ತಷ್ಟು ಮಾಹಿತಿ ಪಡೆಯಲಿದ್ದಾರೆ. ಇದರಿಂದಾಗಿ ಮತ್ತಷ್ಟು ನಟ-ನಟಿಯರು, ರಾಜಕಾರಣಿಗಳ ಹೆಸರುಗಳು ಹೊರಬರುವ ಸಾಧ್ಯತೆ ಎನ್ನಲಾಗಿದೆ.

ರಿಯಾಲಿಟಿ ಶೋಗಳ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಮಾತಿನ ಮಲ್ಲ ಎಂದೇ ಗುರುತಿಸಿಕೊಂಡಿರುವ ಅಕುಲ್​ ಬಾಲಾಜಿ ಹೆಸರು ತನಿಖೆ ವೇಳೆ ಕೇಳಿ ಬಂದ ಹಿನ್ನೆಲೆ ಅವರಿಗೆ ನೋಟಿಸ್​​ ನೀಡಲಾಗಿದೆ.  ನೋಟಿಸ್​ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಅಕುಲ್​ ಬಾಲಾಜಿ, ವಾಟ್ಸಾಪ್​ ಮೂಲಕ ನನಗೆ ನೋಟಿಸ್​ ಸಿಕ್ಕಿದೆ. ಸದ್ಯ ನಾನು ಹೈದ್ರಾಬಾದ್​ನಲ್ಲಿದ್ದು,  ನಾಳೆಯೇ ವಿಚಾರಣೆಗೆ ಹಾಜರಾಗುವುದಾಗಿ ಪೊಲೀಸರಿಗೆ ಉತ್ತರಿಸಿದ್ದೇನೆ ಎಂದು ನ್ಯೂಸ್​ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.

'ನೂರು ಜನ್ಮಕೂ', 'ಇಷ್ಟ' ಸೇರಿದಂತೆ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ ಸಂತೋಷ್​ ​ಗೂ ನೋಟಿಸ್​ ನೀಡಲಾಗಿದೆ. ಈತ ಸಂಜನಾ ಜೊತೆ ಪಾರ್ಟಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

CCB Police issue the notice to anchor akul balaji and two others
ಸಂಜನಾ ಜೊತೆ ಪಾರ್ಟಿಯಲ್ಲಿ ಸಂತೋಷ್​
ಸುಧಾಮನಗರ ಕಾರ್ಪೋರೇಟರ್​ ಆರ್​ವಿ ದೇವರಾಜ್​ ಮಗ ಆರ್​ವಿ ಯುವರಾಜ್​ಗೆ ನೋಟಿಸ್​ ನೀಡಿರುವುದರಿಂದ ಚಿತ್ರರಂಗದ ಜೊತೆ ರಾಜಕೀಯ ನಾಯಕರ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯುವರಾಜ್​, ತನಿಖೆಗೆ ನನ್ನ ಸಂಪೂರ್ಣ ಸಹಕಾರ ಇದೆ, ನನ್ನ ಹೆಸರು ಈ ಪ್ರಕರಣದಲ್ಲಿ ಯಾಕೆ ಬಂತು ಗೊತ್ತಿಲ್ಲ ಎಂದಿದ್ದಾರೆ, ದಿಂಗತ್​ ಐಂದ್ರಿತಾ, ರಾಗಿಣಿ ಯಾರ ಜೊತೆ ಕೂಡ ನನ್ನ ಒಡನಾಟವಿಲ್ಲ. ಬೇಕಾದಲ್ಲಿ ನನ್ನ ಕಾಲ್​ ಡೀಟೈಲ್​ ತೆಗೆದು ನೋಡಲಿ, ವಿರೇನ್​ ಖನ್ನಾ ಸೇರಿದಂತೆ ಯಾವ ಆರೋಪಿಗಳು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಕರಣದಲ್ಲಿ ತಮ್ಮ ಮಗನ ಹೆಸರು ಬಂದ ಕೂಡಲೇ ಮಾಜಿ ಶಾಸಕ ಆರ್​ವಿ ದೇವರಾಜ್​ ಮೊಬೈಲ್​ ಸ್ವಿಚ್​ ಆಫ್​ ಮಾಡಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ಡ್ರಗ್ಸ್​ ಪ್ರಕರಣದೊಂದಿಗೆ ಕಾಂಗ್ರೆಸ್​ ನಾಯಕರ ಹೆಸರು ಕೇಳಿ ಬಂದಿರುವ ಹಿನ್ನೆಲೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ತನಿಖೆಯಲ್ಲಿ ನಾವು ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದಿಲ್ಲ. ಅನುಮಾನ ಇರುವವರೆ ಮೇಲೆ ಪೊಲೀಸರು ನೋಟಿಸ್​ ಕೊಟ್ಟು ವಿಚಾರಣೆ ಮಾಡಬಹುದು. ಪೊಲೀಸರು ಏಕಾಏಕಿ ಯಾರಿಗೂ ಈ ರೀತಿ ನೋಟಿಸ್​ ಜಾರಿ ಮಾಡುವುದಿಲ್ಲ ಅವರಿಗೆ ಯಾವುದೋ ಮಾಹಿತಿ ಲಭ್ಯವಿರುತ್ತದೆ. ಯಾರು ತಪ್ಪ ಮಾಡಿದರೂ ಅವರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೇ ಅವರು ಕಾರ್ಯನಿರ್ವಹಿಸಬೇಕು ಎಂದಿದ್ದಾರೆ.
Published by:Seema R
First published: