news18-kannada Updated:September 16, 2020, 8:44 AM IST
ನಟಿ ರಾಗಿಣಿ
ಬೆಂಗಳೂರು (ಸೆ. 16): ಸ್ಯಾಂಡಲ್ವುಡ್ ಡ್ರಗ್ಸ್ ದಂಧೆಯ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಡ್ರಗ್ಸ್ ದಂಧೆಯಲ್ಲಿ ನಟಿ ರಾಗಿಣಿ ದ್ವಿವೇದಿ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧನಕ್ಕೊಳಗಾಗಿರುವ ರಾಗಿಣಿ ದ್ವಿವೇದಿ ಸೇರಿದಂತೆ 5 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಇಂದು ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಇಂದು ಮಧ್ಯಾಹ್ನದ ಬಳಿಕ ನಟಿಯ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ. ಸಿಟಿ ಸಿವಿಲ್ ಕೋರ್ಟ್ ಹಾಲ್ 33ರಲ್ಲಿ ನಟಿ ರಾಗಿಣಿ ಅರ್ಜಿ ವಿಚಾರಣೆ ನಡೆಯಲಿದೆ.
ಜಾಮೀನು ಸಿಕ್ಕರೆ ಇಂದೇ ರಾಗಿಣಿ ದ್ವಿವೇದಿ ಜೈಲಿನಿಂದ ಹೊರಗಡೆ ಬರಲಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಸಾಕಷ್ಟು ಪ್ರಭಾವಿಗಳ ಹೆಸರು ಬೆಳಕಿಗೆ ಬರುತ್ತಿದೆ. ರಾಗಿಣಿ ಇದುವರೆಗೂ ಸಿಸಿಬಿ ಪೊಲೀಸರ ಯಾವ ಪ್ರಶ್ನೆಗಳಿಗೂ ಸೂಕ್ತ ಮಾಹಿತಿ ನೀಡಿಲ್ಲ. ಈ ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ರಾಗಿಣಿಗೆ ಜಾಮೀನು ಸಿಗೋದು ಅನುಮಾನ ಎನ್ನಲಾಗಿದೆ. ಒಂದು ವೇಳೆ ಜಾಮೀನು ತಿರಸ್ಕಾರ ಮಾಡಿದರೆ ಹೈಕೋರ್ಟ್ನಲ್ಲಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬೇಕಾಗುತ್ತದೆ.
ನಟಿ ರಾಗಿಣಿಯ ಜೊತೆಗೆ ನಟಿ ಸಂಜನಾ ಗಲ್ರಾನಿ ಕೂಡ ಬಂಧನಕ್ಕೊಳಗಾಗಿದ್ದಾರೆ. ಇಂದು ನಟರಾದ ದಿಗಂತ್ ಮತ್ತು ಐಂದ್ರಿತಾ ರೇಗೂ ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್ ನೀಡಿದೆ. ಈ ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ವುಡ್ನ ಹಲವು ನಟರು, ಪ್ರಭಾವಿಗಳು ಶಾಮೀಲಾಗಿರುವ ಸಾಧ್ಯತೆಯಿದೆ.
ಇದನ್ನೂ ಓದಿ: Sanjjanaa Galrani: ನಟಿ ಸಂಜನಾಗೆ ಇಂದು ಮಹತ್ವದ ದಿನ; ಗಲ್ರಾನಿಗೆ ಜಾಮೀನೋ ಅಥವಾ ಜೈಲೋ?
ಸಿಸಿಬಿ ವಶದಲ್ಲಿದ್ದ ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ರಾಗಿಣಿ, ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಇದರೊಂದಿಗೆ ನಟಿ ಸಂಜನಾ ಅವರ ಪೊಲೀಸ್ ಕಸ್ಟಡಿ ಕೂಡ ಇಂದು ಅಂತ್ಯವಾಗಲಿದೆ. ಹೀಗಾಗಿ, ಅವರು ಕೂಡ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಸಂಜನಾ ಅಷ್ಟೆ ಅಲ್ಲದೆ ಡ್ರಗ್ ಪ್ರಕರಣದ ಆರೋಪಿಗಳಾದ ವಿರೇನ್ ಖನ್ನಾ ಹಾಗೂ ರವಿಶಂಕರ್ ಪೊಲೀಸ್ ಕಸ್ಟಡಿ ಸಹ ಇಂದಿಗೆ ಕೊನೆಯಾಗಲಿದೆ. ಸಿಸಿಬಿ ಪೊಲೀಸರು ಇಂದು ಮದ್ಯಾಹ್ನದ ಬಳಿಕ ಮೂವರು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಈಗಾಗಲೆ 11 ದಿನಗಳ ಕಾಲ ನಟಿ ಸಂಜನಾ ಅವರನ್ನು ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ತುಂಬಾ ಕಡಿಮೆ ಇದೆ. ಸಂಜನಾ ನಿನ್ನೆ ಅವರ ವಕೀಲರ ಜೊತೆ ಮಾತನಾಡಿದ್ದು ಇಂದು ಜಾಮೀನಿಗಾಗಿ ಅರ್ಜಿ ಸಲ್ಲಿಸೋ ಸಾಧ್ಯತೆ ಇದೆ. ಒಂದು ವೇಳೆ ಪೊಲೀಸರು ಕಸ್ಟಡಿಗೆ ಕೇಳದೆ ಇದ್ದರೆ, ಇತ್ತ ಜಾಮೀನು ಸಿಗದೆ ಇದ್ದರೆ ನಟಿ ಸಂಜನಾ ಸಹ ಇಂದು ಪರಪ್ಪನ ಅಗ್ರಹಾರ ಜೈಲು ಸೇರೋದು ಖಚಿತ ಎನ್ನಲಾಗಿದೆ.
Published by:
Sushma Chakre
First published:
September 16, 2020, 8:44 AM IST