news18-kannada Updated:September 22, 2020, 1:38 PM IST
ಕಿರುತೆರೆ ನಟರಾದ ಅಭಿಷೇಕ್ ದಾಸ್- ಗೀತಾ ಭಾರತಿ ಭಟ್
ಬೆಂಗಳೂರು (ಸೆ. 22): ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ಹಲವು ಸೆಲೆಬ್ರಿಟಿಗಳ ಹೆಸರುಗಳು ಕೇಳಿಬರುತ್ತಿವೆ. ಈಗಾಗಲೇ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಬಂಧನಕ್ಕೊಳಗಾಗಿದ್ದಾರೆ. ಚಿತ್ರರಂಗದ ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ, ಸಂತೋಷ್ ಸೇರಿದಂತೆ ಹಲವರ ವಿಚಾರಣೆ ನಡೆಸಿದೆ. ಇದರ ಜೊತೆಗೆ ಕಿರುತೆರೆ ನಟರಿಗೂ ಡ್ರಗ್ ಕೇಸ್ನ ಬಿಸಿ ತಟ್ಟಿದೆ. ಖ್ಯಾತ ಧಾರಾವಾಹಿಗಳ ಪ್ರಮುಖ ನಟ-ನಟಿಯರನ್ನು ಇಂದು ವಿಚಾರಣೆ ನಡೆಸಲಾಗಿದೆ. ಈಗಾಗಲೇ ಪೊಲೀಸರಿಗೆ ಸೆರೆ ಸಿಕ್ಕಿರುವ ಆರೋಪಿಗಳಾದ ಡ್ಯಾನಿಯಲ್ ಮತ್ತು ಗೋಕುಲ್ ಕೃಷ್ಣ ಮೊಬೈಲ್ಗಳನ್ನು ಐಎಸ್ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅವರ ಮೊಬೈಲ್ಗಳಿಂದ ಕಿರುತೆರೆ ನಟ- ನಟಿಯರಿಗೆ ಫೋನ್ ಹೋಗಿರೋದು ಬೆಳಕಿಗೆ ಬಂದಿತ್ತು.
ಹೀಗಾಗಿ, ಡ್ರಗ್ ಪೆಡ್ಲರ್ಗಳ ಮಾಹಿತಿ ಮೇರೆಗೆ ಕಿರುತೆರೆ ನಟ ಅಭಿಷೇಕ್ ದಾಸ್, ನಟಿಯರಾದ ಗೀತಾ ಭಾರತಿ ಭಟ್, ರಶ್ಮಿತಾ ಚೆಂಗಪ್ಪ ಅವರಿಗೆ ಐಎಸ್ಡಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಇಂದು ಈ ಮೂವರೂ ವಿಚಾರಣೆಗೆ ಹಾಜರಾಗಿದ್ದಾರೆ. 'ಗಟ್ಟಿಮೇಳ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅಭಿಷೇಕ್ ದಾಸ್ ಮತ್ತು ಅದೇ ಧಾರಾವಾಹಿಯ ನಟಿ ರಶ್ಮಿತಾ ಚೆಂಗಪ್ಪ, 'ಬ್ರಹ್ಮಗಂಟು' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಗೀತಾ ಭಾರತಿ ಭಟ್ ಅವರನ್ನು ಇಂದು ವಿಚಾರಣೆ ನಡೆಸಲಾಗಿದೆ.

ಗೀತಾ ಭಾರತಿ ಭಟ್
ನಿನ್ನೆ ರಾತ್ರಿ ವಾಟ್ಸ್ಆ್ಯಪ್ ಮೂಲಕ ವಿಚಾರಣೆಗೆ ಹಾಜರಾಗಲು ನೋಟೀಸ್ ಕೊಟ್ಟಿದ್ದಾರೆ. ನಂತರ ಪೋನ್ ಕೂಡ ಮಾಡಿದ್ದರು. ಹೀಗಾಗಿ, ಇಂದು ವಿಚಾರಣೆಗೆ ಹಾಜರಾಗಿದ್ದೇನೆ. ಯಾರೋ ಬಂಧನ ಆಗಿದ್ದಾರೆ. ಅವರ ಬಗ್ಗೆ ಕೇಳಲು ನಮ್ಮನ್ನು ಕರೆದಿದ್ದಾರೆ. ಏನೇ ಪ್ರಶ್ನಿಸಿದರೂ ಉತ್ತರ ಕೊಡುತ್ತೇನೆ. ಕೆಲವು ವ್ಯಕ್ತಿಗಳ ಬಗ್ಗೆ ವಿಚಾರಣೆ ಮಾಡಬೇಕು, ನಿಮ್ಮ ಬಳಿ ಮಾಹಿತಿ ಏನಿದೆಯೋ ಅದನ್ನು ಹೇಳಿ ಅಂದಿದ್ದಾರೆ. ನನಗೆ ಗೊತ್ತಿರೋದು ನಾನು ಹೇಳುತ್ತೇನೆ ಎಂದು ನಟ ಅಭಿಷೇಕ್ ದಾಸ್ ಹೇಳಿದ್ದಾರೆ.

ಅಭಿಷೇಕ್ ದಾಸ್
ಕಿರುತೆರೆ ನಟಿ ಗೀತಾ ಭಾರತಿ ಭಟ್ ಕೂಡ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. 19 ನೇ ತಾರೀಖು ನನಗೆ ನೋಟೀಸ್ ಕೊಟ್ಟಿದ್ದಾರೆ. ನಾನು ಅವರ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ. ನಾನು ಅಪರಾಧಿಯಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ. ನಮ್ಮನ್ನು ವಿಚಾರಣೆಗೆಂದು ಕರೆದಿದ್ದಾರೆಯೋ ಹೊರತು ಆರೋಪಿಗಳೆಂದು ಘೋಷಿಸಿಲ್ಲ. ಪೊಲೀಸರು ಏನೇ ಪ್ರಶ್ನೆ ಮಾಡಿದರೂ ನನಗೆ ಗೊತ್ತಿರುವುದನ್ನು ಹೇಳುತ್ತೇನೆ. ನಮಗೂ ಕುಟುಂಬ ಇದೆ. ನಮ್ಮನ್ನು ಅಪರಾಧಿ ಎಂಬಂತೆ ಬಿಂಬಿಸಬೇಡಿ. ಡ್ರಗ್ ಪ್ರಕರಣದಲ್ಲಿ ನಾನು ಅಧಿಕಾರಿಗಳಿಗೆ ಸಹಕಾರ ಕೊಡುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ರಶ್ಮಿತಾ ಚೆಂಗಪ್ಪ
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ದಾಳಿ ನಂತರ ಸಿಸಿಬಿ ಬೆನ್ನಲ್ಲೇ ಐಎಸ್ಡಿ ಕೂಡ ಅಲರ್ಟ್ ಆಗಿತ್ತು. ಸ್ಯಾಂಡಲ್ವುಡ್ ಸೆಲೆಬ್ರೆಟಿಗಳ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿತ್ತು. ಕಿರುತೆರೆ ಕಲಾವಿದರ ಪಾತ್ರದ ಬಗ್ಗೆ ಐಎಸ್ಡಿ ಮಾಹಿತಿ ಕಲೆ ಹಾಕಲು ಮುಂದಾಗಿತ್ತು. ಶಾಂತಿನಗರದ ಐಎಸ್ಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಸೆಪ್ಟೆಂಬರ್ 12ರಂದು ಐಎಸ್ಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.
ಸೆಪ್ಟೆಂಬರ್ 12ರಂದು ಕೇರಳ ಮೂಲದ ಡ್ರಗ್ ಪೆಡ್ಲರ್ಗಳನ್ನು ಐಎಸ್ಡಿ ಪೊಲೀಸರು ಬಂಧಿಸಿದ್ದರು. ಕೇರಳ ಮೂಲದ ಪೆಡ್ಲರ್ ರ್ಯಾನ್ ಡ್ಯಾನಿಯಲ್ ಹಾಗೂ ಗೋಕುಲ್ ಕೃಷ್ಣನನ್ನು ಬಂಧಿಸಲಾಗಿತ್ತು. ಕೇರಳದ ಊರಂ ನಿಂದ ಬೆಂಗಳೂರಿಗೆ LSD ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ ಆರೋಪಿಗಳನ್ನು ಐಎಸ್ಡಿ ಇನ್ಸ್ಪೆಕ್ಟರ್ ಬಾಲರಾಜು ನೇತೃತ್ವದಲ್ಲಿ ಬಂಧಿಸಲಾಗಿತ್ತು.
ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯ ಅಂಧ್ರಹಳ್ಳಿ ಮೈನ್ ರೋಡ್ ನಲ್ಲಿ ಐಎಸ್ಡಿ ಪೊಲೀಸರ ಕೈಗೆ ಡ್ರಗ್ ಪೆಡ್ಲರ್ಗಳು ಸೆರೆಸಿಕ್ಕಿದ್ದರು. ಇವರು ಕನ್ನಡದ ಕಿರುತೆರೆ ಕಲಾವಿದರಿಗೆ ಎಲ್ಎಸ್ಡಿ ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅವರನ್ನು ವಿಚಾರಣೆ ಮಾಡುವ ವೇಳೆ ಕಿರುತೆರೆ ನಟ-ನಟಿಯರ ಸಂಪರ್ಕದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂವರು ನಟ-ನಟಿಯರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು.
Published by:
Sushma Chakre
First published:
September 22, 2020, 1:38 PM IST