ಬೆಂಗಳೂರು(ನ.30): ಡ್ರಗ್ಸ್ ಪೂರೈಕೆ ಜಾಲದಲ್ಲಿ ಸಕ್ರಿಯರಾಗಿದ್ದ ಆರೋಪದ ಮೇಲೆ ಬಂಧಿತರಾಗಿರುವ ನಟಿ ರಾಗಿಣಿ ಮತ್ತು ಸಂಜನಾ ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹೌದು, ನಟಿ ರಾಗಿಣಿ ಜಾಮೀನು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ಹಾಗೂ ಹೈಕೋರ್ಟ್ ನಟಿ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಮಾಡಿತ್ತು .ಈ ಹಿನ್ನಲೆ ರಾಗಿಣಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇನ್ನು ಸಂಜನಾ ನಡೆ ಕುತೂಹಲ ಮೂಡಿಸಿದೆ. ಹೌದು, ರಾಗಿಣಿ ಸುಪ್ರೀಂ ಕೋರ್ಟ್ ಮೊರೆ ಹೋದರೆ, ಸಂಜನಾ ಗಲ್ರಾನಿ ಜಾಮೀನು ಕೋರಿ ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನ.3 ರಂದು ರಾಗಿಣಿ, ಸಂಜನಾ ಸೇರಿ ಆರು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಈಗ ಮತ್ತೆ ಜಾಮೀನು ಕೋರಿ ಸಂಜನಾ ಬೇರೆ ಬೇರೆ ಕಾರಣಗಳನ್ನು ನೀಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಾಲ್ಕು ದಿನದ ಹಿಂದೆ ಅರ್ಜಿ ಸಲ್ಲಿಕೆ ಮಾಡಿದ್ದು, ವಿಚಾರಣೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.ಇದೇ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಪ್ರಶಾಂತ್ ರಾಜು ಜಿ. ಅಭಿಸ್ವಾಮಿ ಮತ್ತು ಶಿವಪ್ರಕಾಶ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.
ಸಂವಿಧಾನ ಸುಟ್ಟು ಬಿಡಲಿ ಬಿಡಿ: ಈಶ್ವರಪ್ಪ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ
ಈ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 24ರಂದು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ತೀರ್ಪು ಕಾಯ್ದಿರಿಸಿದ್ದರು. ಆದರೆ ನವೆಂಬರ್ 3 ಮಂಗಳವಾರ ತೀರ್ಮಾನ ಪ್ರಕಟಿಸಿದ ನ್ಯಾಯಮೂರ್ತಿ, ಎಲ್ಲಾ ಆರೋಪಿಗಳ ಅರ್ಜಿಗಳನ್ನೂ ತಿರಸ್ಕರಿಸಿದ್ದರು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿಯನ್ನ ಸೆ. 4ರಂದು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಸೆ. 8ರಂದು ಸಂಜನಾರನ್ನೂ ಬಂಧಿಸಲಾಗಿತ್ತು. ಸೆ.14ರಿಂದ ಎಲ್ಲ ಆರೋಪಿಗಳು ಜೈಲಿನಲ್ಲಿದ್ದಾರೆ.
ಇನ್ನು ರಾಗಿಣಿ, ಸಂಜನಾ ಮತ್ತು ಪ್ರಶಾಂತ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಎನ್ ಡಿಪಿಎಸ್ ವಿಶೇಷ ಕೋರ್ಟ್ ಸೆ.28ರಂದು ತಿರಸ್ಕರಿಸಿತ್ತು. ಬಳಿಕ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಬಿ.ಕೆ. ರವಿಶಂಕರ್ ಹೇಳಿಕೆ ಆಧಾರದಲ್ಲಿ ತಮ್ಮನ್ನು ಬಂಧಿಸಲಾಗಿದೆ. ಯಾವುದೇ ಸಂಚಿನಲ್ಲೂ ತಾವು ಭಾಗಿಯಾಗಿಲ್ಲ. ತಮ್ಮ ಮನೆಗಳಲ್ಲಿ ಡ್ರಗ್ಸ್ ಪತ್ತೆಯಾಗಿಲ್ಲ. ಪೊಲೀಸರು ದುರುದ್ದೇಶದಿಂದ ತಮ್ಮನ್ನು ಬಂಧಿಸಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ನಮೂದಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ