ಉಡುಪಿ: ಉಡುಪಿಯ ಶ್ರೀಕೃಷ್ಣ ಮಠಕ್ಕೆ (Udupi Sri Krishna Mutt) ಜಮೀನು ದಾನ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಮಿಥುನ್ ರೈ (Mithun Rai) ನೀಡಿದ ಹೇಳಿಕೆ ರಾಜಕೀಯ ತಿರುವು ಪಡೆದು ಬಿಜೆಪಿ ಅವರ ವಿರುದ್ಧ ಮುಗಿಬಿದ್ದಿದೆ. ಇತ್ತ ಉಡುಪಿ ಮಠದ ಈಗಿನ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ (Vishwaprasanna Theertha Shri) ಶ್ರೀ ಕೂಡ ಮಿಥುನ್ ರೈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಮಧ್ಯೆ ಈ ವಿವಾದಕ್ಕೆ ಇದೀಗ ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ (Actor Rakshith Shetty) ಕೂಡ ಎಂಟ್ರಿ ಕೊಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ರಕ್ಷಿತ್ ಶೆಟ್ಟಿ ಪರೋಕ್ಷವಾಗಿ ಮಿಥುನ್ ರೈ ಹೆಸರು ಹೇಳದೆಯೇ ಕಿಡಿಕಾರಿದ್ದಾರೆ. ನಟ ರಕ್ಷಿತ್ ಶೆಟ್ಟಿ ತಮ್ಮ ಟ್ವೀಟ್‌ನಲ್ಲಿ, ‘ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಮಾಹಿತಿ ಗೊತ್ತಿಲ್ಲದೆ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ?’ ಎಂದು ಪ್ರಶ್ನೆ ಮಾಡಿದ್ದಾರೆ. ನಟ ರಕ್ಷಿತ್ ಶೆಟ್ಟಿ ಅವರು ಮಿಥುನ್ ರೈ ಹೆಸರು ಬಳಸದೇ ಇದ್ದರೂ ಇದು ಅವವರಿಗೇ ಕೊಟ್ಟ ತಿರುಗೇಟು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: Hemanth Rao: ಅಪ್ಪು-ಯಶ್ ಮೆಚ್ಚಿದ ಕಥೆಗೆ ರಕ್ಷಿತ್ ಶೆಟ್ಟಿ ನಾಯಕ; ಹೊರಬಿತ್ತು ರೋಚಕ ಸ್ಟೋರಿ!
ರಕ್ಷಿತ್ ಶೆಟ್ಟಿಗೆ 'ಬಕೆಟ್ ಹಿಡಿಯಬೇಡಿ' ಎಂದ ಯುವಕ!
ಇನ್ನು ನಟ ರಕ್ಷಿತ್ ಶೆಟ್ಟಿ ಅವರು ಮಾಡಿರುವ ಟ್ವೀಟ್‌ಗೆ ಪ್ರದೀಪ್ ಶೆಟ್ಟಿ ಎಂಬುವವರು ಪ್ರತಿಕ್ರಿಯೆ ನೀಡಿದ್ದು, ‘ರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ. ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟೇ ಸಾಕು’ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ರಕ್ಷಿತ್ ಶೆಟ್ಟಿ, ‘ಉಡುಪಿ ನನ್ನ ಜನ್ಮಸ್ಥಳ. ಬಕೆಟ್ ಅಲ್ಲಾ, ಟ್ಯಾಂಕರ್ ಹಿಡಿತೀನಿ. ಅಂದಹಾಗೆ ಅವರು ಯಾವ ಭೂಮಿಯ ಬಗ್ಗೆ ಮಾತನಾಡಿದ್ದಾರೆಂಬುದು ಖಚಿತ ಆಗಿಲ್ಲ. ಆದರೆ ಕಾರ್ ಸ್ಟ್ರೀಟ್‌ನಲ್ಲಿರುವ ಜಮೀನು ಖಂಡಿತವಾಗಿಯೂ ಅಲ್ಲ. ಕೃಷ್ಣಮಠಕ್ಕಿಂತ ಅನಂತೇಶ್ವರ ದೇವಸ್ಥಾನ ಹಳೆಯದು. ಇವೆಲ್ಲಕ್ಕಿಂತ ಚಂದ್ರಮೌಳೀಶ್ವರ ದೇವಸ್ಥಾನ ಇನ್ನೂ ಹಳೆಯದು’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಮುಂದುವರಿದು ಟ್ವೀಟ್ ಮಾಡಿರುವ ರಕ್ಷಿತ್ ಶೆಟ್ಟಿ, ‘ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಎಂದಿಗೂ ಮಾತನಾಡುವುದಿಲ್ಲ. ಇದು ನನ್ನ ಆಸಕ್ತಿಯ ಕ್ಷೇತ್ರ. ಹೀಗಾಗಿ ನಾನು ಏನು ಮಾತನಾಡುತ್ತಿದ್ದೇನೆಂದು ನನಗೆ ಗೊತ್ತಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Rakshit shetty: ಸಿಂಪಲ್ ಸ್ಟಾರ್ ಕಾಂಪ್ಲೆಕ್ಸ್ ಕ್ಯಾರೆಕ್ಟರ್! ಸಪ್ತ ಸಾಗರದಾಚೆ ಎಲ್ಲೋ ರಕ್ಷಿತ್ ಪಾತ್ರ ರಿವೀಲ್!
ಮೂಡಬಿದ್ರೆಯಲ್ಲಿ ಮಾತನಾಡಿದ್ದ ಮಿಥುನ್ ರೈ
ಇತ್ತೀಚೆಗೆ ಮೂಡಬಿದ್ರೆ ತಾಲೂಕಿನ ಪುತ್ತಿಗೆಯಲ್ಲಿ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಸಭೆಯಲ್ಲಿ ಮಾತನಾಡಿದ್ದರು. ಈ ವೇಳೆ ಅವರು ಪೇಜಾವರ ಮಠದ ಹಿರಿಯ ಶ್ರೀಗಳು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ‘ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು’ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಉಡುಪಿ ಶಾಸಕ ರಘುಪತಿ ಭಟ್ ಟೀಕಿಸಿದ ನಂತರ, ಮಿಥುನ್ ರೈ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿತ್ತು.
ನಟ ರಕ್ಷಿತ್ ಶೆಟ್ಟಿ ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳ ಹೇಳಿಕೆಗಳಿಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಈ ತರಹದ ವಿವಾದವೊಂದಕ್ಕೆ ರಿಯಾಕ್ಟ್ ಮಾಡಿದ್ದಾರೆ. ಸ್ವತಃ ತಮ್ಮ ಮೇಲೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದಾಗಲೂ ರಕ್ಷಿತ್ ತುಟಿ ಪಿಟಿಕ್ ಅಂದಿರಲಿಲ್ಲ. ಇದೀಗ ರಕ್ಷಿತ್ ಶೆಟ್ಟಿ ಟ್ವೀಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ. ಕೆಲವರು ರಕ್ಷಿತ್ ಅವರನ್ನು ಬೆಂಬಲಿಸಿದರೆ, ಇನ್ನೂ ಕೆಲವರು ರಕ್ಷಿತ್ ಶೆಟ್ಟಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ