ಕೊಪ್ಪಳದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಮಾಫಿಯಾ; ದಂಧೆಕೋರರಿಗೆ ರಾತ್ರಿಯೇ ಹಗಲು

ದೀಪದ ಕೆಳಗೆ ಕತ್ತಲು ಎನ್ನುವಂತೆ ಜಿಲ್ಲೆಯ‌ ಜನರಿಗೆ ಸಿಗದ ಮರಳು ಹೊರ ರಾಜ್ಯಗಳಿಗೆ ರಾತ್ರೋರಾತ್ರಿ ಸದ್ದು ಗದ್ದಲವಿಲ್ಲದೇ ಸಾಗಣೆಯಾಗುತ್ತಿದೆ. ನಿದ್ದೆ ಬಿಟ್ಟು ಎದ್ದುಬಂದು ಟ್ರ್ಯಾಕ್ಟರ್ ಬಿಟ್ಟಿರುವವರಿಗೆ, ಗದ್ದಲ ಮಾಡಿದವರ ಬಾಯಿ ಬಂದ್ ಮಾಡುವುದೂ ಗೊತ್ತು. ಅಡ್ಡ ಕೈ ಹಾಕುವವರ ಜೇಬು ಉಬ್ಬಿಸುವುದೂ ಗೊತ್ತು, ಹಾಗೆಯೇ ಜಾಸ್ತಿ ದಬಾಯಿಸಿದರೆ ಬೆರಳು ತೋರಿಸುವ ಮೂಲಕ ಬೆದರಿಸುವುದೂ ಗೊತ್ತಿದೆ ಎಂದು ತಿಳಿದು ಬಂದಿದೆ.

ಮರಳು ದಂಧೆ

ಮರಳು ದಂಧೆ

  • Share this:
ಕೊಪ್ಪಳ(ಏ.06): ಕೊಪ್ಪಳ ಜಿಲ್ಲೆಯ ಮರಳುಗಾರಿಕೆಗೆ ಮೊದಲಿನಿಂದಲೂ ಹೆಸರುವಾಸಿ. ಕಳೆದ ನಾಲ್ಕೈದು ವರ್ಷಗಳಲ್ಲಿ ಮರಳಿಗೆ ಬಂಗಾರದ ದರ ಎಂದರೂ ತಪ್ಪಾಗಲಿಕ್ಕಿಲ್ಲ. ಅಂತೆಯೇ ಮರಳಿನ ಅಕ್ರಮಗಳಿಗೆ ಕೊನೆ ಮೊದಲಿಲ್ಲ ಎನ್ನುವಂತಾಗಿದೆ. ಕೊಪ್ಪಳ ಜಿಲ್ಲೆಯ ಹಿರೇಹಳ್ಳ, ತುಂಗಭದ್ರಾ ಕಾಲುವೆಗಳ ಹರಿವಿನಿಂದ ಜಲಾವೃತಗೊಳ್ಳುವ ಹಳ್ಳ-ಕೊಳ್ಳಗಳ ಒಡಲು ಮರಳಿನಿಂದ ಸಮೃದ್ಧವಾಗಿದೆ. ಇಲ್ಲಿನ ಮರಳಿಗೆ ಸೀಮಾಂಧ್ರ, ಮಹಾರಾಷ್ಟ್ರದಿಂದಲೂ ಬೇಡಿಕೆ ಇರುವುದು ಸುಳ್ಳೇನಲ್ಲ, ಹಾಗೂ ಇಲ್ಲಿನ ಮರಳು ಅಲ್ಲೆಲ್ಲ ಸರಬರಾಜು ಆಗುತ್ತಿರುವುದು ಸತ್ಯವೆಂದು ಖಚಿತ ಮೂಲಗಳು ತಿಳಿಸಿವೆ.

ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತೆ ಜಿಲ್ಲೆಯ‌ ಜನರಿಗೆ ಸಿಗದ ಮರಳು ಹೊರ ರಾಜ್ಯಗಳಿಗೆ ರಾತ್ರೋರಾತ್ರಿ ಸದ್ದು ಗದ್ದಲವಿಲ್ಲದೇ ಸಾಗಣೆಯಾಗುತ್ತಿದೆ. ನಿದ್ದೆ ಬಿಟ್ಟು ಎದ್ದುಬಂದು ಟ್ರ್ಯಾಕ್ಟರ್ ಬಿಟ್ಟಿರುವವರಿಗೆ, ಗದ್ದಲ ಮಾಡಿದವರ ಬಾಯಿ ಬಂದ್ ಮಾಡುವುದೂ ಗೊತ್ತು. ಅಡ್ಡ ಕೈ ಹಾಕುವವರ ಜೇಬು ಉಬ್ಬಿಸುವುದೂ ಗೊತ್ತು, ಹಾಗೆಯೇ ಜಾಸ್ತಿ ದಬಾಯಿಸಿದರೆ ಬೆರಳು ತೋರಿಸುವ ಮೂಲಕ ಬೆದರಿಸುವುದೂ ಗೊತ್ತಿದೆ ಎಂದು ತಿಳಿದು ಬಂದಿದೆ.

West Bengal Assembly Elections 2021: ಟಿಎಂಸಿ ನಾಯಕನ ಮನೆಯಲ್ಲಿ ಮತಯಂತ್ರ ಇಟ್ಟುಕೊಂಡು ಮಲಗಿದ್ದ ಚುನಾವಣಾಧಿಕಾರಿ ಅಮಾನತು

ಗಂಗಾವತಿ ಜನರಿಗೆ ಸಿಗುತ್ತಿಲ್ಲ ಮರಳು

ಮೊದಲು ಕೊಪ್ಪಳ ಹಾಗೂ ಯಲಬುರ್ಗಾ‌ ತಾಲೂಕಿನ ಕೆಲ ಪ್ರದೇಶಗಳಿಲ್ಲದ ಮರಳು ಮಾಫಿಯಾ ಈಗ ತನ್ನ ಕಬಂಧಬಾಹುಗಳನ್ನು ಗಂಗಾವತಿ, ಕನಕಗಿರಿ, ಕಾರಟಗಿ ಭಾಗಕ್ಕೂ ಚಾಚಿದೆ. ಮುಷ್ಟೂರು, ನಂದಿಹಳ್ಳಿ, ಕೆರೆಹಳ್ಳಿ ಮತ್ತಿತರೆಡೆ ಇರುವ ಮರಳು ಪಾಯಿಂಟ್‌ಗಳು ಹೆಸರಿಗಷ್ಟೇ ಒಂದೆಡೆ ಇವೆ. ಆದರೆ ಆ ಪಾಯಿಂಟ್‌ಗಳ ಹೆಸರಿನ ಮೇಲೆ ಮರಳು ಎತ್ತುವಳಿ ಆಗುತ್ತಿರುವುದು ಮತ್ತೊಂದೆಡೆ ಎಂದು ಹೆಸರು ಹೇಳಲಿಚ್ಛಿಸದ ಆರ್‌ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ ಮರಳು ಮಾಫಿಯಾದಿಂದ ನಿಜಕ್ಕೂ ತೊಂದರೆ ಅನುಭವಿಸುತ್ತಿರುವವರು ಜಿಲ್ಲೆಯ ಮಧ್ಯಮ ವರ್ಗದ ಹೊಸದಾಗಿ ಮನೆ ನಿರ್ಮಾಣಕ್ಕೆ ಮುಂದಾಗಿರುವವರು. ಅವರಿಗೆ ಮನೆ ಕಟ್ಟಲು ಮರಳು ಸಿಗದೇ ಎಂಟು-ಹತ್ತು ತಿಂಗಳುಗಳೇ ಕಳೆದು ಹೋಗಿವೆ. ಜೊತೆಗೆ ಕಳೆದ ತಿಂಗಳು ಇದ್ದ ಮರಳಿನ ದರ ಮುಂದಿನ ತಿಂಗಳು ಏರಿಕೆಯಾಗಿರುತ್ತದೆ. ಮನೆ ಕಟ್ಟುವ ಕಾರ್ಯ, ಕನಸು ನಿಲ್ಲಬಾರದೆಂದರೆ ಕೇಳಿದಷ್ಟು ದರ ಕೊಡಲೇಬೇಕು ಎಂಬುದು ಜನಸಾಮಾನ್ಯರ ಅಳಲು.

ಮಾಫಿಯಾದವರಿಂದ ಜೀವ ಬೆದರಿಕೆ..?

ಮುಷ್ಟೂರು ಮರಳು ಪಾಯಿಂಟ್‌ನಲ್ಲಿ ನಡೆಯುತ್ತಿರುವ ಅಕ್ರಮ ಪ್ರಶ್ನಿಸಿದ್ದಕ್ಕೆ, ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದಕ್ಕೆ ನಿತ್ಯ ಜೀವ ಬೆದರಿಕೆ ಕರೆಗಳನ್ನು ಎದುರಿಸುವಂತಾಗಿದೆ. ಅಧಿಕಾರಿಗಳಿಗೆ ಮಾಹಿತಿ ಕೇಳಿರುವ ವಿಷಯ ಮಾಫಿಯಾದವರಿಗೆ ಹೇಗೆ ಗೊತ್ತಾಗುತ್ತದೆ? ಖುದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವ ಶಂಕೆ ದಟ್ಟವಾಗಿದೆ ಎಂದು ಆರ್‌ಟಿಐ ಕಾರ್ಯಕರ್ತರು ತಿಳಿಸಿದ್ದಾರೆ.

ತಕ್ಷಣವೇ ಕ್ರಮ..

ಮುಷ್ಟೂರು ಮರಳು ಪಾಯಿಂಟ್ ‌ಹೆಸರಿನಡಿ ನಡೆಯುತ್ತಿರುವ ಅಕ್ರಮದ ಬಗ್ಗೆ ಈಗಷ್ಟೇ ವಿಷಯ ಗೊತ್ತಾಗಿದೆ. ಈ ಬಗ್ಗೆ ಇಲಾಖೆ ಪರಿಶೀಲನೆ ನಡೆಸುತ್ತದೆ. ಅಕ್ರಮ‌ ಕಂಡು ಬಂದರೆ ತಕ್ಷಣವೇ ಕ್ರಮಕ್ಕೆ ಮುಂದಾಗಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಮುತ್ತಪ್ಪ ತಿಳಿಸಿದ್ದಾರೆ.

ಜೀವ ಬೆದರಿಕೆ ಆರೋಪ ಸುಳ್ಳು

ಮುಷ್ಟೂರು ಬಳಿ ಇರುವ ಮರಳು ಪಾಯಿಂಟ್ ನಮ್ಮದೇ.. ಸರಕಾರದ ನಿಯಮಾವಳಿ ಪ್ರಕಾರ ಈ ಭಾಗದಲ್ಲಿ ಇರುವ ಏಕೈಕ ಪಾಯಿಂಟ್ ನಮ್ಮದು. ಸಹಜವಾಗಿ ಸಾಕಷ್ಟು ಜನರ ಕಣ್ಣು ಈ ಪಾಯಿಂಟ್ ಮೇಲಿದೆ. ಹಲವರು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ನಾವಂತೂ ಯಾರಿಗೂ ಜೀವ ಬೆದರಿಕೆ ಹಾಕಿಲ್ಲ. ಅದೆಲ್ಲ ಶುದ್ಧ ಸುಳ್ಳು ಎಂದು ಗಂಗಾವತಿಯ ಪೀರಸಾಬ್ ಹೇಳುತ್ತಾರೆ.
Published by:Latha CG
First published: