HOME » NEWS » State » SAIBABA TEMPLE ADMINISTRATIVE ORGANIZE BABY SHOWER PROGRAMME TO PREGNANT WOMEN AT KOLAR LG

ಕೋಲಾರದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ; ಮುಸ್ಲಿಂ ಮಹಿಳೆಯೂ ಭಾಗಿ

ಸ್ನೇಹಿತೆಯ ಜೊತೆಗೂಡಿ ಸಾಯಿಬಾಬಾ ದೇಗುಲಕ್ಕೆ ಆಗಮಿಸಿದ್ದ ಮುಸ್ಲಿಂ ಧರ್ಮದ ಗರ್ಭಿಣಿ ಮಹಿಳೆ,  ಕಾರ್ಯಕ್ರಮದಲ್ಲಿ ಎಲ್ಲರಂತೆ ಮಡಿಲು  ತುಂಬಿಸಿಕೊಂಡು,  ಕೋಮು ಸೌಹಾರ್ದತೆ ಮೆರೆದಿದ್ದು ವಿಶೇಷವಾಗಿತ್ತು. ಮುಸ್ಲಿಂ ಧರ್ಮದ ಗರ್ಭಿಣಿ ಮಹಿಳೆಗೂ ಇತರೆ ಮಹಿಳೆಯರು ಪರಸ್ಪರ ಶುಭಕೋರಿದ್ದು ಕಂಡುಬಂತು.

news18-kannada
Updated:January 28, 2021, 9:02 AM IST
ಕೋಲಾರದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ; ಮುಸ್ಲಿಂ ಮಹಿಳೆಯೂ ಭಾಗಿ
ಗರ್ಭಿಣಿ ಮಹಿಳೆಯರಿಗೆ ಮಡಿಲು ತುಂಬುತ್ತಿರುವ ದೃಶ್ಯ
  • Share this:
ಕೋಲಾರ(ಜ.28): ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೇರಳೆಕೆರೆ ಗ್ರಾಮದ ಪ್ರಸಿದ್ದ ಸಾಯಿಬಾಬಾ ದೇಗುಲದಲ್ಲಿ ಗರ್ಭಿಣಿ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇಗುಲ ಧರ್ಮದರ್ಶಿ ಮುನಿಮಾರಪ್ಪ ಮತ್ತು ಸ್ಥಳೀಯ ಮಹಿಳಾ ಹೋರಾಟಗಾರ್ತಿ ಶಾಂತಮ್ಮ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮದಲ್ಲಿ  ಬಂಗಾರಪೇಟೆ ಹಾಗು ಕೆಜಿಎಪ್ ತಾಲೂಕಿನ ವಿವಿಧೆಡೆಯಿಂದ 150 ಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರು ಭಾಗಿಯಾಗಿದ್ದು ವಿಶೇಷವಾಗಿತ್ತು. ವಿವಿಧ ಗ್ರಾಮಗಳಲ್ಲಿನ ಗರ್ಭಿಣಿಯರ ಮಾಹಿತಿಯನ್ನ ಸ್ಥಳೀಯ ಆಶಾ ಕಾರ್ಯಕರ್ತೆಯರು ನೀಡಿದ್ದರಿಂದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಸೇರಲು ಸಹಕಾರಿಯಾಗಿದೆ.

ದೇಗುಲದಲ್ಲಿ  ಬೆಳಗ್ಗೆ 11.30 ರಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸೀಮಂತ  ಕಾರ್ಯಕ್ರಮದಲ್ಲಿ,  ದೇಗುಲ ಅರ್ಚಕರು ಸೀಮಂತ ಕಾರ್ಯಕ್ರಮದ ವಸ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ಸಾಲಾಗಿ ಕುಳಿತಿದ್ದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಂದು ಪ್ರಮುಖವಾಗಿ ನೀಡುವ, ಹರಿಶಿನ, ಕುಂಕುಮ, ಸೀರೆ, ಕೊಬ್ಬರಿ ಚಿಪ್ಪು ಬಳೆ, ಎಲೆ,ಅಡಿಕೆ,  ತಿಂಡಿ-ನಿಸುಗಳು ಒಳಗೊಂಡ ಪಂಚಭಕ್ಷಗಳು, ಸೇರಿದಂತೆ ಎಲ್ಲಾ ವಸ್ತುಗಳಿಂದ  ಮಡಿಲು ತುಂಬಿ,  ಹಾಡು ಹಾಡುತ್ತಾ, ಮುತ್ತೈದೆಯರು ಆರತಿ ಬೆಳಗಿದರು.

ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಆಗಬೇಕು: ವಾಟಾಳ್ ನಾಗರಾಜ್ ಆಗ್ರಹ

ಸೀಮಂತ ಕಾರ್ಯಕ್ರಮದಲ್ಲಿ ಓರ್ವ ಮುಸ್ಲಿಂ ಧರ್ಮದ ಗರ್ಭಿಣಿಯೊಬ್ಬರು ಭಾಗಿಯಾಗಿದ್ದು ವಿಶೇವಾಗಿತ್ತು.  ಸ್ನೇಹಿತೆಯ ಜೊತೆಗೂಡಿ ಸಾಯಿಬಾಬಾ ದೇಗುಲಕ್ಕೆ ಆಗಮಿಸಿದ್ದ ಮುಸ್ಲಿಂ ಧರ್ಮದ ಗರ್ಭಿಣಿ ಮಹಿಳೆ,  ಕಾರ್ಯಕ್ರಮದಲ್ಲಿ ಎಲ್ಲರಂತೆ ಮಡಿಲು  ತುಂಬಿಸಿಕೊಂಡು,  ಕೋಮು ಸೌಹಾರ್ದತೆ ಮೆರೆದಿದ್ದು ವಿಶೇಷವಾಗಿತ್ತು. ಮುಸ್ಲಿಂ ಧರ್ಮದ ಗರ್ಭಿಣಿ ಮಹಿಳೆಗೂ ಇತರೆ ಮಹಿಳೆಯರು ಪರಸ್ಪರ ಶುಭಕೋರಿದ್ದು ಕಂಡುಬಂತು. ಕಾರ್ಯಕ್ರಮದ ನಂತರ ಎಲ್ಲರಿಗೂ ಬಗೆ ಬಗೆಯ ಊಟದ ವ್ಯವಸ್ಥೆಯನ್ನು ದೇಗುಲ ಆಡಳಿತ ಮಂಡಳಿ ಮಾಡಿದ್ದರಿಂದ ಕಾರ್ಯಕ್ರಮಕ್ಕೆ ಬಂದವರು ಊಟವನ್ನ ಸವಿದು ಮನೆಗೆ ತೆರಳಿದರು.

ಇದೇ ವೇಳೆ ಮಾತನಾಡಿದ ಗರ್ಭಿಣಿ ಮಹಿಳೆಯಾದ ಸುಚಿತ್ರ ಎನ್ನುವರು,  ಮನೆಯಲ್ಲಿ ನಮ್ಮವರ ಎದುರು ನಡೆಯುವ ಕಾರ್ಯಕ್ರಮಕ್ಕಿಂತ, ಇಂತಹ ಸಾಮೂಹಿಕ ಕಾರ್ಯಕ್ರಮ ತುಂಬಾ ಖುಷಿಕೊಟ್ಟಿದೆ ಎಂದರು. ಬಳಿಕ ಮಾತನಾಡಿದ ಆಶಾ  ಕಾರ್ಯಕರ್ತೆಯಾದ ಅಶ್ವಿನಿ ಎನ್ನುವರು, ಇಂತಹ ಸಾಹಾರ್ದಯುತ  ಕಾರ್ಯಕ್ರಮ ಎಂದೂ ನೋಡಿಲ್ಲ, ಇಂತಹ ಕಾರ್ಯಕ್ರಮ  ಮರೆಯಲಾಗದ ದಿನ ಎಂದು ಬಣ್ಣಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಆಯೋಜಕರಲ್ಲಿ ಒಬ್ಬರಾದ ಶಾಂತಮ್ಮ, ನಮ್ಮ ಮನೆಯಲ್ಲು ಒಬ್ಬ ಗರ್ಭಿಣಿ ಮಗಳಿದ್ದಾಳೆ, ಅದೆಷ್ಟೊ ಜನರಿಗೆ ಸೀಮಂತ ಕಾರ್ಯಕ್ರಮ ಮಾಡಲು ಆರ್ಥಿಕ ಸಹಕಾರ ಇರಲ್ಲ, ಹಾಗಾಗಿ ದೇಗುಲ ಧರ್ಮಾಧಿಕಾರಿ ಮುನಿಮಾರಪ್ಪ ಮತ್ತು ಹಲವು ದಾನಿಗಳು ಸ್ವಯಂ ಮುಂದೆ ಬಂದು ಸಹಾಯ ಮಾಡಿದ್ದಾರೆ, ಎಲ್ಲರಿಂದಲೂ ಸಹಕಾರವನ್ನ ಪಡೆದು ಕಾರ್ಯಕ್ರಮ ಮಾಡಿದ್ದು, ಎಲ್ಲಾ ಗರ್ಭಿಣಿ ಸ್ತ್ರೀಯರಿಗೂ ಸಾಯಿ ಬಾಬಾ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

ಮುಂದೆ ತಿಂಗಳಿಗೊಮ್ಮೆ ಎರಡು ಬಾರಿ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ಮಾಡಿರುವುದಾಗಿ ದೇಗುಲ ಧರ್ಮಾಧಿಕಾರಿ ಮುನಿಮಾರಪ್ಪ ತಿಳಿಸಿದ್ದಾರೆ. ಒಟ್ಟಿನಲ್ಲಿ ಗ್ರಾಮೀಣ ಭಾಗದ ಬಡ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದೆಡೆಯಾದರೆ, ಹಿಂದೂ ಸಂಪ್ರದಾಯದ ಸೀಮಂತ ಕಾರ್ಯಕ್ರಮದಲ್ಲಿ,  ಮುಸ್ಲಿಂ ಧರ್ಮದ ಗರ್ಭಿಣಿ ಸ್ತ್ರೀ ಭಾಗಿಯಾಗಿದ್ದು ಕೋಮು ಸಾಮರಸ್ಯ ಸಾರುವ ಸಂಕೇತವಾಗಿತ್ತು ಎಂದರು ತಪ್ಪಾಗಲಾರದು.
Published by: Latha CG
First published: January 28, 2021, 9:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories