ಬೆಂಗಳೂರು (ಮೇ 30) : ಕೋಮು ದ್ವೇಷವನ್ನು ರಾಜಾರೋಷವಾಗಿ ಹರಡುತ್ತಾ ಆಟಾಟೋಪ ಮಾಡುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ’ದ (G.S Shivarudrappa Foundation) ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ. ಸಿದ್ದರಾಮಯ್ಯ (S. G Siddaramaiah) ಸೋಮವಾರ ರಾಜೀನಾಮೆ (Resignation) ನೀಡಿದ್ದಾರೆ. ಜತೆಗೆ ಸದಸ್ಯರಾದ ಹೆಚ್.ಎಸ್. ರಾಘವೇಂದ್ರ ರಾವ್, ನಟರಾಜ ಬೂದಾಳು, ಚಂದ್ರಶೇಖರ ನಂಗಲಿ ಸಹ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಅವರು ಪತ್ರ ಬರೆದಿದ್ದಾರೆ.
ಅಸಾಂವಿಧಾನಿಕ ದಬ್ಬಾಳಿಕೆ ಕಂಡು ಆತಂಕ
‘ತಮಗೆ ಗೌರವ ಪೂರ್ವಕ ನಮಸ್ಕಾರಗಳು. ನಮ್ಮ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಸಾಂವಿಧಾನಿಕ ದಬ್ಬಾಳಿಕೆಗಳನ್ನು ಕಂಡು ಆತಂಕ, ಭಯ ಉಂಟಾಗಿದೆ. ಕೋಮು ದ್ವೇಷವನ್ನು ರಾಜಾರೋಷವಾಗಿ ಮಾತನಾಡುತ್ತಾ ಆಟಾಟೋಪ ಮೆರೆಯುತ್ತಾ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಸರ್ಕಾರ ಮೌನವಹಿಸಿರುವುದು ಇನ್ನೂ ಹೆಚ್ಚಿನ ಆತಂಕ, ಭಯ ಉಂಟು ಮಾಡುತ್ತಿದೆ.
ಈ ಬೆಳವಣಿಗೆಗೆ ಬೇಸತ್ತು ರಾಜೀನಾಮೆ
ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ನಾವು ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದೇವೆ. ಮಾನ್ಯ ಮುಖ್ಯಮಂತ್ರಿಗಳು ನಮ್ಮ ರಾಜೀನಾಮೆ ಒಪ್ಪಿಕೊಂಡು ಈ ಕೂಡಲೇ ನಮ್ಮನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕೆಂದು ವಿನಂತಿಸುತ್ತೇವೆ’ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಮತ್ತು ಇತರರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: UPSC ಪರೀಕ್ಷೆಯಲ್ಲಿ ಕನ್ನಡಿಗರ ಸಾಧನೆ; ಇಲ್ಲಿದೆ ಕರ್ನಾಟಕದ ಟಾಪರ್ಸ್ ಲಿಸ್ಟ್
ಪಠ್ಯ ಪರಿಷ್ಕರಣೆ ವಿವಾದ
ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಾದ ಪಠ್ಯ ಪರಿಷ್ಕರಣೆ ಹಲವು ದಿನಗಳಿಂದ ವಿವಾದಕ್ಕೀಡಾಗಿದೆ. ಪಠ್ಯದಲ್ಲಿ ಕೋಮು ರಾಜಕೀಯ, ಬ್ರಾಹ್ಮಣಿಕರಣವಾಗಿದೆ ಎಂದೇಳಿ ಹಲವು ದಿನಗಳಿಂದ ನಾಡಿನ ಅನೇಕ ಜನರು ವಿರೋಧ ವ್ಯಕ್ತಪಡಿಸಿ ಹಲವು ಸಾಹಿತಿಗಳು ಪಠ್ಯದಲ್ಲಿ ತಮ್ಮ ಲೇಖನವನ್ನು ಹಿಂತೆಗೆದುಕೊಳ್ಳುವುದಾಗಿ ಪತ್ರ ಬರೆದಿದ್ದರು.
ಈ ಪಠ್ಯ ಕ್ರಮ, ಪರಿಷ್ಕರಣೆ ರೀತಿ ಅಸಂವಿಧಾನಿಕ
ಈ ಪಠ್ಯ ಕ್ರಮ, ಪರಿಷ್ಕರಣೆ ರೀತಿ ಅಸಂವಿಧಾನಿಕ ಮತ್ತು ಬ್ರಾಹ್ಮಣಿಕರಣ ಎಂದೇಳಿ ಹಿರಿಯ ಸಾಹಿತಿ ದೇವನೂರು ಮಹಾದೇವ ಮತ್ತು ಜಿ ರಾಮಕೃಷ್ಣ ಅವರು ಪಠ್ಯದಿಂದ ತಮ್ಮ ಲೇಖನವನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಈಗ ರಾಷ್ಟ್ರ ಕವಿ ಡಾ. ಜಿಎಸ್ ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಮತ್ತವರ ಸದಸ್ಯರು ತಮ್ಮ ಸ್ಥಾನಕ್ಕೆ ಇಂದು ಸೋಮವಾರ ಸಿಎಂ ಬೊಮ್ಮಾಯಿಗೆ ರಾಜೀನಾಮೆ ನೀಡಿದ್ದಾರೆ.
ಕಾರ್ಯಜವಾಬ್ದಾರಿಯಿಂದ ಬಿಡುಗಡೆ ಮಾಡಿ
ಮಾನ್ಯ ಮುಖ್ಯಮಂತ್ರಿಗಳು ನಮ್ಮ ರಾಜೀನಾಮೆ ಒಪ್ಪಿಕೊಂಡು ಈ ಕೂಡಲೇ ಕಾರ್ಯಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕೆಂದು ವಿನಂತಿಸುತ್ತೇವೆ ಎಂದು. ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಜಿ ಸಿದ್ದರಾಮಯ್ಯ ಸದಸ್ಯರಾದ ಎಚ್.ಎಸ್ ರಾಘವೇಂದ್ರ ರಾವ್, ಡಾ. ಚಂದ್ರಶೇಖರ್ ನಂಗಲಿ ಮತ್ತು ಡಾ. ನಟರಾಜ್ ಬೂದಾಳು ಸಹಿ ಹಾಕಿ ರಾಜಿನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Yogi Adityanath: ಅಯೋಧ್ಯೆ ಬಳಿಕ ಕಾಶಿ, ಮಥುರಾದ ಮೇಲೆ ಗಮನ! ಯೋಗಿ ಆದಿತ್ಯನಾಥ್ ಘೋಷಣೆ
ತಮ್ಮ ಕೃತಿ ತೆಗೆದುಹಾಕುವಂತೆ ಮನವಿ
10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಂಡಿರುವ ತಮ್ಮ ಕೃತಿಗಳನ್ನು ತೆಗೆದುಹಾಕುವಂತೆ ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರ ಮನವಿ ಮಾಡಿದ್ರು. ಈ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಎಂದು ಕರ್ನಾಟಕ ಸರಕಾರದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ