HOME » NEWS » State » RURAL WOMEN SUCCESSFUL IN AGRICULTURE THOUGH PLANTING BANANA PLANTS LG

ಗ್ರಾಮೀಣ ಮಹಿಳೆಯರ ಅದ್ಭುತ ಸಾಧನೆ; ಬಾಳೆಗೊನೆಗಳಿಂದ ನಳನಳಿಸುತ್ತಿರುವ ತೋಟ

ಈಗಾಗಲೇ ಒಂದೊಂದು ಗೊನೆ 20 ಕೆ.ಜಿಗಿಂತ ಹೆಚ್ಚು ತೂಗುತ್ತಿದ್ದು, 30ಕೆ.ಜಿ ವರೆಗೂ ಬರುವ ನೀರೀಕ್ಷೆ ಇವರದ್ದಾಗಿದೆ. ಈಗಾಗಲೇ ಬೆಳೆದ ಬಾಳೆಗೊನೆಗೆ ಮಾರುಕಟ್ಟೆ ವ್ಯವಸ್ಥೆಗೆ ಉಜಿರೆಯ ವ್ಯಾಪಾರಿಯೊಬ್ಬರಲ್ಲಿ ಮಾತುಕತೆಯನ್ನು ನಡೆಸಿದ್ದಾರೆ. ಅವರೇ ತಮ್ಮ ವಾಹನದಲ್ಲಿ ಮಂಗಳೂರಿನ ಸಗಟು ವ್ಯಾಪಾರಿಗಳಿಗೆ ಮಾರುಕಟ್ಟೆಗೆ ವ್ಯವಸ್ಥೆ ಮಾಡುವ ಭರವಸೆಯನ್ನು ನೀಡಿದ್ದಾರೆ.

news18-kannada
Updated:January 13, 2021, 1:15 PM IST
ಗ್ರಾಮೀಣ ಮಹಿಳೆಯರ ಅದ್ಭುತ ಸಾಧನೆ; ಬಾಳೆಗೊನೆಗಳಿಂದ ನಳನಳಿಸುತ್ತಿರುವ ತೋಟ
ಬಾಳೆ ತೋಟ
  • Share this:
ದಕ್ಷಿಣ ಕನ್ನಡ(ಜ.13): ಮಹಿಳೆಯರ ಸಶಕ್ತೀಕರಣಕ್ಕೆ ಹೆಚ್ಚಿನ ಕಡೆಗಳಲ್ಲಿ ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿದೆ. ಹಳ್ಳಿಯ ಯಾವ ಮೂಲೆಗೂ ಹೋದರೂ ಸ್ವಸಹಾಯ ಸಂಘಗಳು ಇದ್ದೇ ಇರುತ್ತದೆ. ಆದ್ರೆ ಇದರಲ್ಲಿ ಗಮನ ಸೆಳೆಯುವ ಸಾಧನೆಗಳನ್ನು ಮಾಡಿರುವ ಸಂಘಗಳು ಬಹಳಷ್ಟು ಕಡಿಮೆ ಇದೆ. ಆದ್ರೆ ಇವತ್ತು ನಾವು ಹೇಳುತ್ತಿರುವ ಈ ಸ್ವಸಹಾಯ ಸಂಘದ ಸಾಧನೆ ಮಾತ್ರ ಇದಕ್ಕೆ ತದ್ವಿರುದ್ದ ಎನ್ನುವಂತಿದೆ. ಗುಂಪಿನ ಸದಸ್ಯರು ಒಟ್ಟಾಗಿ ಸೇರಿ ಮಾಡಿದ ಬಾಳೆ ಕೃಷಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕಸ್ತೂರ್ಬಾ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರೇ ಈ ಮಾದರಿ ಬಾಳೆತೋಟವನ್ನು ನಿರ್ಮಾಣ ಮಾಡಿದವರು. ಸಂಘದಲ್ಲಿ ಒಟ್ಟು ಹತ್ತು ಜನ ಸದಸ್ಯರಿದ್ದು, ಅದರಲ್ಲಿ ಏಳು ಜನ ಸದಸ್ಯರು ಒಟ್ಟು ಸೇರಿ ಈ ಹಚ್ಚ ಹಸಿರಾಗಿ ಬೆಳೆದು ನಿಂತಿರುವ ಬಾಳೆ ತೋಟವನ್ನು ನಿರ್ಮಾಣ ಮಾಡಿದ್ದಾರೆ. ಮಧುರಾ ಎಂಬವರು ಈ ಸಂಘದ ಅಧ್ಯಕ್ಷರಾಗಿದ್ದರೆ, ಹರಿಣಾಕ್ಷಿ ಕಾರ್ಯದರ್ಶಿಯಾಗಿದ್ದಾರೆ. ಭವ್ಯಾ, ಯಶೋಧಾ, ವನಿತಾ, ಸೀತಾಲಕ್ಷ್ಮೀ ಮತ್ತು ಕಮಲಾ ಸಂಘದ ಸದಸ್ಯರಾಗಿದ್ದಾರೆ. ಈ ಸಂಘ ಪ್ರಾರಂಭ ಮಾಡಿ ಒಂದೂವರೆ ವರ್ಷದಲ್ಲೇ ಬಾಳೆ ತೋಟ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿ, ಯಶಸ್ವಿಯಾಗಿದ್ದಾರೆ.

ಪ್ರಾರಂಭದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎಂಬ ನಿರ್ಧಾರಕ್ಕೆ ಇವರೆಲ್ಲಾ ಬಂದಿದ್ದಾರೆ. ಏನು ಮಾಡಬಹುದು ಎಂದು ಯೋಚನೆ ಮಾಡಿದಾಗ, ಇವರದ್ದು ಕೃಷಿ ಊರೇ ಆಗಿರುವುದರಿಂದ ಕೃಷಿಯಲ್ಲಿ ಸಾಧನೆ ಮಾಡಬಹುದಲ್ವಾ ಎಂದು ಚಿಂತನೆ ಮಾಡಿದ್ದಾರೆ. ಇದಕ್ಕೆ ಮಧುರಾ ಅವರ ಪತಿ ರವೀಂದ್ರ ಗೌಡ ಅವರು ಬಾಳೆ ಕೃಷಿ ಮಾಡಿ ಎಂಬ ಸಲಹೆಯನ್ನು ಇವರಿಗೆ ನೀಡಿದ್ದಾರೆ. ಅದರಂತೆ ಬಾಳೆ ಕೃಷಿ ಮಾಡುವ ಬಗ್ಗೆ ಎಲ್ಲಾ ಮಾಹಿತಿಗಳನ್ನು ಪಡೆದು ಬಾಳೆ ತೋಟ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಸ್ವಸಹಾಯ ಗುಂಪಿನ ಸದಸ್ಯರಲ್ಲಿ ಒಬ್ಬರಾಗಿರುವ ಕಮಲ ಅವರಿಂದ ವರ್ಷಕ್ಕೆ ಇಪ್ಪತ್ತು ಸಾವಿರ ರೂ ಬಾಡಿಗೆಗೆ ಎರಡೂವರೆ ಎಕ್ರೆ ಜಮೀನನ್ನು ಪ್ರಾರಂಭದಲ್ಲಿ ಲೀಸ್‌ಗೆ ಪಡೆದಿದ್ದಾರೆ. ಜಮೀನನ್ನು ಜೆ.ಸಿ.ಬಿ ಯಂತ್ರದ ಮೂಲಕ ಸಮತಟ್ಟು ಮಾಡಿ ಬಾಳೆ ತೋಟ ನಿರ್ಮಾಣದ ಕಾರ್ಯ ಆರಂಭಿಸಿದ್ರು. ಕಳೆದ ಜನವರಿ ತಿಂಗಳಿನಲ್ಲಿ ಬಾಳೆತೋಟ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ್ದು, ಇದೀಗ ಬಾಳೆತೋಟ ನಳನಳಿಸುತ್ತಿದ್ದು ಗೊನೆ ಕಟಾವಿಗೆ ರೆಡಿಯಾಗಿ ಬೆಳೆದುನಿಂತಿದೆ.

ಪಚ್ಚೆ ಬಾಳೆ ಮತ್ತು ನೇಂದ್ರ ಜಾತಿಯ ಬಾಳೆ ಗಿಡವನ್ನು ಬೆಳೆಯಲಾಗಿದೆ. 800 ಪಚ್ಚೆ ಬಾಳೆ ಗಿಡವನ್ನು ಹಾಕಿದ್ರೆ, 700 ನೇಂದ್ರ ಜಾತಿಯ ಬಾಳೆಗಿಡವನ್ನು ಬೆಳೆಯಲಾಗಿದೆ. ಒಟ್ಟು 1,500 ಸಾವಿರ ಬಾಳೆ ಗಿಡಗಳ ತೋಟ ನಿರ್ಮಾಣ ಮಾಡಲಾಗಿದೆ. ಗಿಡವನ್ನು ಪ್ರಾರಂಭದಲ್ಲಿ ಬೆಂಗಳೂರಿನಿಂದ ಬೆಳ್ತಂಗಡಿಗೆ ತರಿಸಲಾಗಿದೆ. ಬಸ್ಸಿನ ಮೂಲಕ ಗಿಡವನ್ನು ಸಾಗಾಟ ಮಾಡಿಕೊಂಡು ತರಲಾಗಿದೆ. ಗಿಡವನ್ನು ಒಂದೇ ಕಡೆ ಮನೆಯ ಅಂಗಲದಲ್ಲೇ ಒಂದೂವರೆ ತಿಂಗಳು ಸಾಕಿ ಸಲಹಿ ಬಳಿಕ ಸಾಲು- ಸಾಲಾಗಿ ನಾಟಿ ಮಾಡಲಾಗಿದೆ.

ಒಟ್ಟು ಈ ಬಾಳೆ ಕೃಷಿಗೆ ಒಂದೂವರೆ ಲಕ್ಷ ಇನ್ವೆಸ್ಟ್‌ಮೆಂಟ್ ಮಾಡಲಾಗಿದೆ. ಇದರಲ್ಲಿ 75 ಸಾವಿರ ರೂ ಸಾಲವಾಗಿ ಸ್ವಸಹಾಯ ಸಂಘದಿಂದಲೇ ಪಡೆಯಲಾಗಿದೆ. ಉಳಿದ ಹಣವನ್ನು ಸದಸ್ಯರೇ ಒಟ್ಟು ಸೇರಿಸಿ ಬಾಳೆ ಕೃಷಿಗೆ ಹೂಡಿಕೆ ಮಾಡಿದ್ದಾರೆ. ಪ್ರಾರಂಭದಲ್ಲಿ ಬಾಳೆ ಗಿಡಕ್ಕೆ ನೆರಳಿಗಾಗಿ ತರಕಾರಿ ಗಿಡವನ್ನು ನೆಡಲಾಗಿತ್ತು. ಅಲಸಂಡೆ, ಬೆಂಡೆ ಸೇರಿದಂತೆ ವಿವಿಧ ತರಕಾರಿಗಳನ್ನು ಬಾಳೆ ತೋಟದ ಮದ್ಯೆ ನೆರಳಿಗಾಗಿ ಬೆಳೆಯಲಾಗಿತ್ತು. ಆದ್ರೆ ಆ ಟೈಮಲ್ಲಿ ಲಾಕ್‌ಡೌನ್ ಆಗಿದ್ದ ಕಾರಣ ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಕೊಂಡು ಹೋಗಿ ಮಾರಾಟ ಮಾಡುವುದಕ್ಕೆ ಸಾಧ್ಯ ಆಗಿರಲಿಲ್ಲ. ಹೀಗಾಗಿ ಗುಂಪಿನ ಸದಸ್ಯರೇ ಕರೊನಾ ಲಾಕ್‌ಡೌನ್ ಟೈಮಲ್ಲಿ ಮನೆ ಮನೆಗೆ ತೆರಳಿ ತರಕಾರಿ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ. ಕೇವಲ ತರಕಾರಿಯಿಂದಲೇ ಸುಮಾರು 50 ಸಾವಿರ ಲಾಭವನ್ನು ಇವರು ಈಗಾಗಲೇ ಪಡೆದಿದ್ದಾರೆ.

ಪಚ್ಚೆ ಬಾಳೆ ಗಿಡವೊಂದಕ್ಕೆ 6 ರೂಪಾಯಿ, ನೇಂದ್ರ ಬಾಳೆ ಗಿಡಕ್ಕೆ 14 ರೂಪಾಯಿಯಂತೆ ಇವರು ಖರೀದಿ ಮಾಡಿದ್ದಾರೆ. ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 10 ಅಡಿ, ಗಿಡದಿಂದ ಗಿಡಕ್ಕೆ ಮೂರು- ಮೂರು ಅಡಿ ಅಂತರವನ್ನಿಟ್ಟು ಗಿಡವನ್ನು ನೆಡಲಾಗಿದೆ. ಇನ್ನೊಂದು ವಿಶೇಷವೆಂದರೆ ಬಾಳೆ ಗಿಡದ ಸಾಲನ್ನು ಟ್ರೈಂಗಾಲ್ ಮಾದರಿಯಲ್ಲಿ ಗಿಡವನ್ನು ನೆಡಲಾಗಿದೆ. ಇದರಿಂದಾಗಿ ಭೂಮಿಗೆ ಸೂರ್ಯನ ಕಿರಣ ಬೀಳುವುದಿಲ್ಲ. ಹೀಗಾಗಿ ತೋಟ ಪೂರ್ತಿ ಫುಲ್ ಕ್ಲೀನ್ ಆಗಿದ್ದು, ಯಾವುದೇ ಕಳೆಗಳು ಇಲ್ಲಿ ಕಾಣಸಿಗುವುದಿಲ್ಲ. ಇದರ ಜೊತೆ ಬಾಳೆ ಗೊಣೆ ಹಾಕಿದ ಬಳಿಕ ಸಪೋರ್ಟ್‌ಗೆ ಯಾವುದೇ ಮರದ ಗೂಟ ಹಾಕಬೇಕೆಂದು ಇಲ್ಲ. ಕೇವಲ ಸಿಂಥೆಟಿಕ್ ಹಗ್ಗದ ಮೂಲಕ ಒಂದು ಬಾಳೆ ಗಿಡದಿಂದ ಇನ್ನೊಂದು ಬಾಳೆಗಿಡಕ್ಕೆ ಸಪೋರ್ಟ್‌ಗೆ ಕಟ್ಟಿದರಾಯಿತು. ಇದರ ಜೊತೆ ಕಡಿಮೆ ಜಾಗದಲ್ಲಿ ಹೆಚ್ಚು ಗಿಡವನ್ನು ನಾಟಿ ಮಾಡುವುದಕ್ಕೂ ಸಾಧ್ಯವಾಗಿದೆ, ಎರಡು ವರ್ಷದಲ್ಲಿ ಮೂರು ಗೊನೆಯನ್ನು ಇದರಿಂದ ತೆಗೆಯಬಹುದು. ಇದಕ್ಕಾಗಿ ಗಿಡದಿಂದ ಬರುವ ಉಪ ಕಾಂಡವನ್ನು ಹಾಗೇ ಇಟ್ಟು ಬೆಳೆಸಲಾಗುತ್ತೆ.ಇನ್ನು ಈ ಬಾಳೆ ತೋಟಕ್ಕೆ ಹೆಚ್ಚಾಗಿ ರಾಸಾಯನಿಕವನ್ನು ಬಳಸದೇ ಸಾವಯವವಾಗಿ ಬೆಳೆಯಲಾಗಿದೆ. ಪ್ರಾರಂಭದಲ್ಲಿ ಗಿಡವಿದ್ದಾಗ ಸೆಗಣಿ ನೀರನ್ನು ಗಿಡಕ್ಕೆ ನೀಡಲಾಗಿದೆ. ಗಿಡ ನೆಟ್ಟು ನಾಲ್ಕು ತಿಂಗಳು ಆಗುವಾಗ ಕುರಿಗೊಬ್ಬರವನ್ನು ಹಾಕಲಾಗಿದೆ. ಆ ಬಳಿಕ ಕೋಳಿ ಗೊಬ್ಬರ ಹಾಕಿ ಫಲವತ್ತಾಗಿ ಬಾಳೆ ಬೆಳೆಯುವಂತೆ ಮಾಡಲಾಗಿದೆ. ಇದರ ಜೊತೆಗೆ ಇನ್ನೊಂದು ವಿಶೇಷವೆಂದರೆ ಗೊಣೆ ಫಲಭರಿತವಾಗಲೂ ಜೀವಾಮೃತವನ್ನು ಇದಕ್ಕೆ ನೀಡಲಾಗಿದೆ.

ಗೋಮಯ, ಗೋ ಮೂತ್ರ, ಕಡಲೆಹಿಟ್ಟು, ಒಂದು ಮುಷ್ಟಿ ಶುದ್ದ ಮಣ್ಣನ್ನು ಇಪ್ಪತ್ತು ಲೀಟರ್ ನೀರಿಗೆ ಹಾಕಿ ಕಲಸಿ ನಾಲ್ಕೂ ದಿನ ಇಟ್ಟು ಜೀವಾಮೃತವನ್ನು ತಯಾರು ಮಾಡಲಾಗುತ್ತೆ. ಐದನೇ ದಿನಕ್ಕೆ ಗೊನೆಯಲ್ಲಿನ ಹೂವನ್ನು ಕಟ್ ಮಾಡಿ ಅದಕ್ಕೆ ಈ ಜೀವಾಮೃತವನ್ನು ಕಟ್ಟಬೇಕು. ಇದರಿಂದ ಗೊನೆ ತುಂಬಾ ದೊಡ್ಡದಾಗಿ, ತೂಕಭರಿತವಾಗಿರುತ್ತದೆ. ರೋಗ ಭಾದೆ, ಕೀಟಭಾದೆಗೆ ಗೂಮೂತ್ರದ ಸ್ಪ್ರೇ ಮಾಡಿ ಇವರು ಸೈ ಏನಿಸಿಕೊಂಡಿದ್ದಾರೆ. ಇದರ ಪರಿಣಾಮ ಬಾಳೆತೋಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಬಾಳೆ ಗೊನೆಯು ಉತ್ತಮವಾಗಿ ಬೆಳೆದು ನಿಂತಿದೆ.

ಇನ್ನು ಗಿಡಗಳಿಗೆ ವೇಸ್ಟ್ ಡಿ ಕಂಪೋಸರ್‌ನಿಂದ ತಯಾರಿಸಲಾದ ಗೊಬ್ಬರವನ್ನು ನೀಡಿದ್ದರಿಂದ ಬೆಳೆ ಉತ್ತಮವಾಗಿ ಬಂದಿದೆ. ಮಧುರಾ ಅವರ ಪತಿ ರವೀಂದ್ರ ಅವರು ಆನ್‌ಲೈನ್ ಮೂಲಕ ಘಾಝೀಯಬಾದ್‌ನಿಂದ ಒಂದು ಟಿನ್ ಈ ವೇಸ್ಟ್ ಡಿ ಕಂಪೋಸರ್‌ನ್ನು ತರಿಸಿಕೊಂಡಿದ್ದಾರೆ. ಇದನ್ನು ಎರಡು ಕೆ.ಜಿ ಬೆಲ್ಲ, ಇನ್ನೂರು ಲೀಟರ್ ನೀರಿನ ಬ್ಯಾರೆಲ್‌ನಲ್ಲಿ ಕರಗೊದಕ್ಕೆ ಹಾಕಲಾಗುತ್ತೆ. ಐದರಿಂದ ಏಳು ದಿನದವರಗೆ ಆಗಾಗ ಇದನ್ನು ಸರಿಯಾಗಿ ಮಿಕ್ಸ್ ಆಗುವಂತೆ ತಿರುಗಿಸುತ್ತಿರಬೇಕು. ಆ ಬಳಿಕ ಈ ಗೊಬ್ಬರದ ನೀರು ರೆಡಿಯಾಗುತ್ತೆ. ಆ ಬಳಿಕ ಈ ನೀರನ್ನು ಸ್ಪ್ರೇ ಪಂಪ್ ಮೂಲಕ ಗಿಡಕ್ಕೆ, ಬುಡಕ್ಕೆ ಸ್ಪ್ರೇ ಮಾಡಿದರಾಯಿತು.

ಗೆಳತಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬೆಂಗಳೂರಿನಿಂದ ಲಕ್ನೋಗೆ ತೆರಳಿದ ಯುವಕನಿಗೆ ಕಾದಿತ್ತು ಶಾಕ್..!

ಈಗಾಗಲೇ ಒಂದೊಂದು ಗೊನೆ 20 ಕೆ.ಜಿಗಿಂತ ಹೆಚ್ಚು ತೂಗುತ್ತಿದ್ದು, 30ಕೆ.ಜಿ ವರೆಗೂ ಬರುವ ನೀರೀಕ್ಷೆ ಇವರದ್ದಾಗಿದೆ. ಈಗಾಗಲೇ ಬೆಳೆದ ಬಾಳೆಗೊನೆಗೆ ಮಾರುಕಟ್ಟೆ ವ್ಯವಸ್ಥೆಗೆ ಉಜಿರೆಯ ವ್ಯಾಪಾರಿಯೊಬ್ಬರಲ್ಲಿ ಮಾತುಕತೆಯನ್ನು ನಡೆಸಿದ್ದಾರೆ. ಅವರೇ ತಮ್ಮ ವಾಹನದಲ್ಲಿ ಮಂಗಳೂರಿನ ಸಗಟು ವ್ಯಾಪಾರಿಗಳಿಗೆ ಮಾರುಕಟ್ಟೆಗೆ ವ್ಯವಸ್ಥೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಇನ್ನು ಈಗಾಗಲೇ ಇವರ ಬಾಳೆ ತೋಟ ನಿರ್ಮಾಣ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಈ ಬಾರಿ ಇವರ ಸ್ವಸಹಾಯ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

ಬಾಳೆ ತೋಟಕ್ಕೆ ನೀರಿಗಾಗಿ ತೋಟದಲ್ಲೇ ಬೋರ್‌ವೆಲ್ ವ್ಯವಸ್ಥೆ ಇದೆ. ರಾತ್ರಿ ಸಮಯ ಒಟ್ಟು ಮೂರು ಗಂಟೆಗಳ ನೀರನ್ನು ಸ್ಪಿಂಕ್ಲರ್ ಮೂಲಕ ಹಾಯಿಸಲಾಗುತ್ತೆ. ಪ್ರಾರಂಭದಲ್ಲಿ ಹನಿ ನೀರಾವರಿ ಮೂಲಕ ನೀರನ್ನು ನೀಡಲಾಗಿತ್ತು. ಇದೀಗ ಬೆಳೆ ಅಂತಿಮ ಹಂತದಲ್ಲಿ ಇರುವುದರಿಂದ ಸ್ಪಿಂಕ್ಲರ್ ಮೂಲಕ ನೀಡಲಾಗುತ್ತೆ. ಇನ್ನು ಕಾಡುಪ್ರಾಣಿಗಳಾದ ಮಂಗ, ನವಿಲುಗಳ ಹಾವಳಿಯನ್ನು ತಪ್ಪಿಸಲು ಪ್ರಾರಂಭದಲ್ಲಿ ತೋಟದ ಸುತ್ತ ಹಸಿರು ನೆಟ್‌ನ್ನು ಅಳವಡಿಸಲಾಗಿತ್ತು. ಆದ್ರೆ ಮಂಗಗಳು ಇದನ್ನು ಲೆಕ್ಕಿಸದೇ ತೋಟದೊಳಗೆ ನುಗ್ಗುತ್ತಿದ್ದರಿಂದ ಸೋಲಾರ್ ಆಧಾರಿತ ಹೈಬೆಕ್ಸ್ ತಂತಿ ಬೇಲಿಯನ್ನು ತೋಟದ ಸುತ್ತ ಹಾಕಲಾಗಿದೆ. ಇದಿರಂದ ಕಾಡುಪ್ರಾಣಿಗಳ ಹಾವಳಿಯಿಂದ ಮುಕ್ತಿ ಸಿಕ್ಕಂತಾಗಿದೆ.

ಈ ಗುಂಪಿನ ಮಹಿಳೆಯರಿಗೆ ಅವರ ಮನೆಯವರ ಸಪೋರ್ಟ್ ಕೂಡಾ ಉತ್ತಮವಾಗಿ ಸಿಕ್ಕಿದೆ. ಮನೆಯ ಕೆಲಸಗಳನ್ನು ಮುಗಿಸಿ ಇವರು ಈ ಬಾಳೆ ತೋಟದ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಒಂದಷ್ಟು ಮಹಿಳಾ ಸದಸ್ಯರು ಇದರ ಜೊತೆ ಬೀಡಿ ಕಟ್ಟುವ ಕೆಲಸವನ್ನು ನಿರ್ವಹಿಸಿಕೊಂಡು ಈ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಮುಂದೆ ಇನ್ನಷ್ಟು ಜಾಗವನ್ನು ಲೀಸ್‌ಗೆ ಪಡೆದು ಬಾಳೆ ಕೃಷಿ ವಿಸ್ತರಿಸುವುದರ ಜೊತೆ ಪಪ್ಪಾಯಿ ಕೃಷಿ ಮಾಡಬೇಕೆಂದು ನಿರ್ಧಾರವನ್ನು ಮಾಡಿದ್ದಾರೆ.

ಒಟ್ಟಿನಲ್ಲಿ ಬೆಳಾಲುವಿನ ಈ ಕಸ್ತೂರ್ಬಾ ಸಂಜೀವಿನಿ ಸ್ವಸಹಾಯ ಸಂಘ ಎಲ್ಲರಿಗೂ ಮಾದರಿಯಾಗಿದೆ. ಮಹಿಳೆಯರೇ ಗುಂಪಾಗಿ ಸೇರಿ ಬಾಳೆ ತೋಟ ನಿರ್ಮಾಣ ಮಾಡುವ ಮೂಲಕ ಸಮಾಜದಲ್ಲಿ ಹೆಣ್ಣು ಮನೆಯೊಳಗೆ ಇರುವ ಸ್ವತ್ತಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
Published by: Latha CG
First published: January 13, 2021, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading