ಬೆಂಗಳೂರು(ಮಾ. 23): ತಾವು ಮುಂದಿಟ್ಟಿದ್ದ ಹಲವು ಬೇಡಿಕೆಗಳನ್ನ ಈಡೇರಿಸದ ಹಿನ್ನೆಲೆಯಲ್ಲಿ ಇಂದು ಧರಣಿ ನಡೆಸಿದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ಸರ್ಕಾರ ಸಂಧಾನ ನಡೆಸಿ ಹೋರಾಟ ಕೈಬಿಡುವಂತೆ ಮನವೊಲಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಖಾಸಗಿ ಶಾಲೆಗಳ ಕೆಲವು ಬೇಡಿಕೆಗಳನ್ನ ಈಡೇರಿಸುವುದಾಗಿ ಸರ್ಕಾರ ಒಪ್ಪಿಕೊಂಡಿತು. ಈ ಹಿನ್ನೆಲೆಯಲ್ಲಿ ಧರಣಿಯ ನೇತೃತ್ವ ವಹಿಸಿದ್ದ ರುಪ್ಸಾ ಸಂಘಟನೆ ತನ್ನ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡಲು ನಿರ್ಧರಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ಯಾವುದೇ ಹೋರಾಟ ನಡೆಸುವುದಿಲ್ಲ. ಭರವಸೆ ಕೊಟ್ಟಂತೆ ಬೇಡಿಕೆ ಈಡೇರಿಸದಿದ್ದರೆ ಪರೀಕ್ಷೆ ಬಳಿಕ ಮತ್ತೆ ಹೋರಾಟ ಮಾಡುತ್ತೇವೆ ಎಂದು ರುಪ್ಸಾ ಸಂಘಟನೆ ಎಚ್ಚರಿಕೆಯನ್ನೂ ನೀಡಿದೆ.
ಸಂಧಾನ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಖಾಸಗಿ ಶಾಲೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ್ದು ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ಸಲ್ಲಿಸಿದ ಬಳಿಕ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: By Elections - ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆ: ಇಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
1995ರಿಂದ 2000ರ ಒಳಗಿನ ಶಾಲೆಗಳಿಗೆ ಅನುದಾನಕ್ಕೆ ಒಳಪಡಿಸಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಶಾಲೆಗಳ ಮರುನೊಂದಣಿಗೆ ಸಂಕನೂರು ಸಮಿತಿ ವರದಿ ತರಿಸಿಕೊಳ್ಳುತ್ತೇವೆ. ಮರುನೊಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುತ್ತೇವೆ. ಖಾಸಗಿ ಶಾಲಾ ಶಿಕ್ಷಕರಿಗೆ ಶಿಕ್ಷಕರ ಕಲ್ಯಾಣ ನಿಧಿಯಿಂದ ಅನುದಾನ ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ ಸಚಿವ ಸುರೇಶ್ ಕುಮಾರ್, SSLC ಪರೀಕ್ಷೆ ಮುಗಿಯುವವರೆಗೂ ಯಾವುದೇ ಹೋರಾಟಕ್ಕೆ ಇಳಿಯುವುದಿಲ್ಲ ಎಂದು ರುಪ್ಸಾ ಮುಖಂಡರು ಸರ್ಕಾರಕ್ಕೆ ಭರವಸೆ ನೀಡಿದ್ಧಾರೆಂದು ತಿಳಿಸಿದ್ಧಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರುಪ್ಸಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, 1995ರಿಮದ 2000ರ ವರೆಗಿನ ಶಾಲೆಗಳಿಗೆ ಅನುದಾನ ಕೊಡಲು ಸಚಿವರು ಒಪ್ಪಿಕೊಂಡಿದ್ಧಾರೆ. ಸೇವಾ ಭದ್ರತೆ ಸೇರಿ ಹಲವು ಬೇಡಿಕೆಗಳನ್ನ ಈ ತಿಂಗಳ 31ರೊಳಗೆ ಈಡೇರಿಸುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ. ಇದು ಈಡೇರದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳ ಕೆಲ ಪ್ರಮುಖ ಬೇಡಿಕೆಗಳು:
1) ಈ ವರ್ಷದ ಶೇ.70 ರಷ್ಟು ಬೋಧನಾ ಶುಲ್ಕ ಕಟ್ಟುವಂತೆ ಪೋಷಕರಿಗೆ ಸೂಚನೆ ನೀಡಬೇಕು
2) 1995 ರಿಂದ 2005ರವರೆಗೆ ಕನ್ನಡ ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು
3) ಕಟ್ಟಡ ಸುರಕ್ಷತಾ ಪ್ರಮಾಣ ಪತ್ರದ ವಿಷಯದಲ್ಲಿ ಹತ್ತು ಸಾವಿರ ಶಾಲೆಗಳು ಬಂದ್ ಆಗಲಿವೆ. ಈ ವಿಚಾರದಲ್ಲಿ ಸರ್ಕಾರ ಪರಿಶೀಲಿಸುವುದು
4) ಶಿಕ್ಷಕರ ಕಲ್ಯಾಣ ನಿಧಿಯಿಂದ ಖಾಸಗಿ ಶಾಲಾ ಶಿಕ್ಷಕರಿಗೂ ಪರಿಹಾರ ಸಿಗುವಂತೆ ಮಾಡುವುದು
5) ಬಿಸಿಯೂಟ ಕಾರ್ಯಕ್ರಮವನ್ನ ಅನುದಾನರಹಿತ ಶಾಲಾ ಮಕ್ಕಳಿಗೂ ಯೋಜನೆ ವಿಸ್ತರಿಸಬೇಕು
6) ಕರ್ನಾಟಕ ಖಾಸಗಿ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕೆಂದು ಒತ್ತಾಯ
7) ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಖಾಸಗಿ ಶಾಲಾ ಶಿಕ್ಷಕರಿಗೂ ನೀಡಬೇಕು
ವರದಿ: ಆಶಿಕ್ ಮುಲ್ಕಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ