ಆರ್​ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣ: ಎಲ್ಲಾ 12 ಮಂದಿಗೆ ಜೀವಾವಧಿ ಶಿಕ್ಷೆ

2012ರ ನವೆಂಬರ್ 20 ರಂದು ಆರ್​ಟಿಐ ಕಾರ್ಯಕರ್ತ ಲಿಂಗರಾಜುವಿನ ಹತ್ಯೆ ಮಾಡಲಾಗಿತ್ತು. ಈಗ 10 ವರ್ಷಗಳ ಬಳಿಕ ಆ ಕೊಲೆಗೆ ಸುಪಾರಿ ಕೊಟ್ಟವರು ಸೇರಿ 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಸಿಕ್ಕಿದೆ.

news18-kannada
Updated:October 29, 2020, 9:10 PM IST
ಆರ್​ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣ: ಎಲ್ಲಾ 12 ಮಂದಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಅ. 29): ಹತ್ತು ವರ್ಷಗಳ ಹಿಂದೆ ನಡೆದ ಆರ್​ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಗೌರಮ್ಮ ಹಾಗೂ ಆಕೆಯ ಪತಿ ಗೋವಿಂದರಾಜು ಸೇರಿದಂತೆ ಎಲ್ಲಾ 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಸಿಕ್ಕಿದೆ. ಬೆಂಗಳೂರಿನ ಸಿಸಿಎಚ್ ನ್ಯಾಯಾಲಯ ಇವರಿಗೆ ತಲಾ 25 ಸಾವಿರ ರೂ ದಂಡವನ್ನೂ ವಿಧಿಸಿದೆ. ಈ ಹತ್ಯೆ ಪ್ರಕರಣದಲ್ಲಿ ಗೋವಿಂದರಾಜು, ಗೌರಮ್ಮ ಗೋವಿಂದರಾಜು ಜೊತೆಗೆ ರಂಗನಾಥ್, ಶಂಕರ್, ರಾಘವೇಂದ್ರ, ಚಂದ್ರ, ಉಮಾಶಂಕರ್, ಭವಾನಿ, ವೇಲು, ಸುರೇಶ್ ಮತ್ತು ಜಾಹೀರ್ ಅವರು ಇತರ ಅಪರಾಧಿಗಳಾಗಿದ್ದಾರೆ.

2012ರ, ನವೆಂಬರ್ 20ರಂದು ದುಷ್ಕರ್ಮಿಗಳು ಆರ್​ಟಿಐ ಕಾರ್ಯಕರ್ತ ಲಿಂಗರಾಜು ಅವರನ್ನ ಅವರ ವಿಠಲ್ ನಗರ ನಿವಾಸದ ಬಳಿ ಹಲ್ಲೆ ಮಾಡಿ ಹತ್ಯೆಗೈದಿದ್ದರು. ಆಗ ಆಜಾದನಗರ್ ಕಾರ್ಪೊರೇಟರ್ ಆಗಿದ್ದ ಗೌರಮ್ಮ ಅವರ ಗಂಡ ಗೋವಿಂದರಾಜು ಈ ಕೊಲೆಗೆ ಏಳು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು. ಹಾಗೆ ಕೊಡಲು ಕಾರಣವಾಗಿದ್ದು ಲಿಂಗರಾಜು ಅವರು ಗೋವಿಂದರಾಜು ವಿರುದ್ಧ ಲೋಕಾಯುಕ್ತ ಕೋರ್ಟ್​ನಲ್ಲಿ ಕೊಟ್ಟಿದ್ದ ಪ್ರೈವೇಟ್ ಕಂಪ್ಲೇಂಟ್. ಕಾರ್ಪೊರೇಟರ್ ಮತ್ತವರ ಪತಿಯಿಂದ ಹಣದ ಅವ್ಯವಹಾರ ನಡೆದಿದೆ, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ಉಪಲೋಕಾಯುಕ್ತರ ಬಳಿಯೂ ಅವರು ದೂರು ದಾಖಲಿಸಿದ್ದರು. ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಲಿಂಗರಾಜು ಅವರು ಲೋಕಾಯುಕ್ತಕ್ಕೆ ನೀಡಿದ್ದರು.

ಇದನ್ನೂ ಓದಿ: Drugs Case: ಕೇರಳ ಮಾಜಿ ಗೃಹ ಸಚಿವರ ಮಗ ಬಿನೀಶ್ ಕೊಡಿಯೇರ್​ ಬಂಧನ

ಈ ದೂರಿನ ಮೇರೆಗೆ 2012ರ ನವೆಂಬರ್ 9ರಂದು ಲೋಕಾಯುಕ್ತ ಪೊಲೀಸರು ಕಾರ್ಪೊರೇಟರ್ ಮನೆಗೆ ರೇಡ್ ಮಾಡಿ ಏಳು ಕೋಟಿ ರೂ ಮೊತ್ತದ ಚಿನ್ನ, ಆಸ್ತಿಪತ್ರ ಮತ್ತಿತರ ಆಸ್ತಿಗಳನ್ನ ವಶಪಡಿಸಿಕೊಂಡಿದ್ದರು. ಇದಾಗಿ 10 ದಿನಗಳ ಬಳಿಕ ವಿಠಲ್ ನಗರದಲ್ಲಿರುವ ತಮ್ಮ ಮನೆಯ ಬಳಿ ಲಿಂಗರಾಜು ಅವರು ಹತ್ಯೆಯಾಗಿದ್ದರು. ಮರುದಿನವೇ ರಾಜ್ಯ ಉಚ್ಚ ನ್ಯಾಯಾಲಯವು ಸುವೋ ಮೋಟೋ ಪ್ರಕರಣ ದಾಖಲಿಸಿಕೊಂಡಿತು. ಬಳಿಕ ಕೋರ್ಟ್ ಸೂಚನೆ ಮೇರೆಗೆ ಕೊಲೆ ಪ್ರಕರಣದ ತನಿಖೆಗೆ ಎಸ್​ಐಟಿ ರಚಿಸಲಾಯಿತು.

ಇದನ್ನೂ ಓದಿ: ಬಂಟ್ವಾಳದಲ್ಲಿ ಬಿಜೆಪಿ ಮುಖಂಡನ ಕೊಲೆಗೆ ಯತ್ನ; ಮೂವರ ಬಂಧನ

ವಿಶೇಷ ತನಿಖಾ ತಂಡ ಗೌರಮ್ಮ ಮತ್ತು ಗೋವಿಂದರಾಜು ಸೇರಿ 12 ಮಂದಿ ವಿರುದ್ಧ 4,500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಆ 12 ಮಂದಿಯ ಅಪರಾಧ ಸಾಬೀತಾಗಿ ಈಗ ಸರಿಯಾಗಿ 10 ವರ್ಷಗಳ ಬಳಿಕ ಲಿಂಗರಾಜು ಸಾವಿಗೆ ನ್ಯಾಯ ಸಿಕ್ಕಿದ್ದು, ಅಪರಾಧಿಗಳಿಗೆ ಶಿಕ್ಷೆ ನೀಡಲಾಗಿದೆ.

ವರದಿ: ಗಂಗಾಧರ ವಾಗಟ
Published by: Vijayasarthy SN
First published: October 29, 2020, 8:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading