ಬೆಂಗಳೂರು: ವೇತನ ಹೆಚ್ಚಳ (Salary Revision) ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟು ರಾಜ್ಯದ ನಾಲ್ಕೂ ನಿಗಮಗಳ ನೌಕರರು (RTC Employees) ಇಂದಿನಿಂದ ಪ್ರತಿಭಟನೆ (Protest) ನಡೆಸಲಿವೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು 6 ವರ್ಷ ಕಳೆದರೂ ವೇತನ ಪರಿಷ್ಕರಣೆ ಮಾಡಿಲ್ಲ. ಇದರ ಜೊತೆಗೆ 14 ಬೇಡಿಕೆಗಳನ್ನಿಟ್ಟು ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್ (Freedom Park) ಹಾಗೂ ಕಲಬುರಗಿ, ಹುಬ್ಬಳ್ಳಿ, ಬೆಂಗಳೂರು ನಿಗಮಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿವೆ.
ಸಾರ್ವಜನಿಕ ಸಂಚಾರಕ್ಕೆ ಯಾವುದೇ ಸಮಸ್ಯೆಯಿಲ್ಲ
ಸಾರಿಗೆ ನೌಕರರು ಪ್ರತಿಭಟನೆ ಹಿನ್ನೆಲೆ ಸಂಚಾರದಲ್ಲಿ ಅಸ್ತವ್ಯಸ್ತವಾಗಬಹುದು ಎನ್ನಲಾಗಿತ್ತು. ಆದರೆ ತಮ್ಮ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಾಕಷ್ಟು ಬಸ್ಸುಗಳು ಎಂದಿನಂತೆ ಸಂಚಾರ ಆರಂಭಿಸಿವೆ. ಬೇರೆ ಬೇರೆ ನಗರ, ಊರುಗಳಿಗೆ ಪ್ರಯಾಣಕರು ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.ನೌಕರರು ಶಾಂತಿಯುತ ಪ್ರತಿಭಟನೆ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಲ್ಲಾ ಸಿದ್ಧತೆ ನಡೆಯುತ್ತಿದೆ ಎಂದು ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಿಗೆ ನೌಕರರು; ರಾಜ್ಯದಲ್ಲಿ ಮತ್ತೆ ಸ್ತಬ್ಧವಾಗುತ್ತಾ ಸಾರಿಗೆ ಸಂಚಾರ?
ಸಾರಿಗೆ ನೌಕರರ ಬೇಡಿಕೇನು..?
ಕಳೆದ 6 ವರ್ಷಗಳಿಂದ ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಆಗಿಲ್ಲದಿರುವುದರಿಂದ ಶೇ 25 ರಷ್ಟು ವೇತನ ಹೆಚ್ಚಳ ಆಗಬೇಕು. ನೌಕರರ ಹಾಲಿ ಇರುವ ಬಾಟ, ಭತ್ಯೆಗಳನ್ನ 5 ಪಟ್ಟು ಹೆಚ್ಚಿಸಬೇಕು. ವೈದ್ಯಕೀಯ ಸೌಲಭ್ಯಕ್ಕಾಗಿ ಎಲ್ಲಾ ನೌಕರರಿಗೆ ಪ್ರತಿ ತಿಂಗಳು ಹೊರರೋಗಿ ಚಿಕಿತ್ಸೆ ವೆಚ್ಚಕ್ಕಾಗಿ 2 ಸಾವಿರ ನೀಡಬೇಕು. ಕಳೆದ ಬಾರಿ ಮುಷ್ಕರ ವೇಳೆ ವಜಾಗೊಂಡ ನೌಕರರ ಮರುನೇಮಕ ಆಗಬೇಕು. ಹೆಚ್ಚುವರಿ ಕೆಲಸದ ಅವಧಿಗೆ ಭತ್ಯೆ ನೀಡಬೇಕು. ನೌಕರರಿಗೆ ಪಾಳಿ ವ್ಯವಸ್ಥೆ ಜಾರಿಯಾಗಬೇಕು. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ನಿಲ್ಲಿಸಬೇಕು. ಎಲ್ಲಾ ನೌಕರರಿಗೆ ಗ್ರಾಚ್ಯೂಟಿ ನೀಡಬೇಕು. ಕೂಡಲೇ ಖಾಲಿ ಹುದ್ದೆಗಳನ್ನ ಭರ್ತಿ ಮಾಡಬೇಕು ಸೇರಿ ಇನ್ನು ಹಲವು ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟು ನೌಕರರು ಪ್ರತಿಭಟನೆ ಕೈಗೊಂಡಿದ್ದಾರೆ.
2016 ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಣೆ
ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2021 ರ ಏಪ್ರಿಲ್ ನಲ್ಲಿ 15 ದಿನಗಳ ಕಾಲ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆದ್ರೂ ಇಲ್ಲಿಯವರೆಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದರಿಂದ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಇಲ್ಲ. ನಿಯಮಬದ್ಧವಾಗಿ 2020 ಮಾರ್ಚ್ನಲ್ಲಿ ವೇತನ ಪರಿಷ್ಕರಣೆಯಾಗಬೇಕಿತ್ತು. 2016 ರಲ್ಲಿ ಶೇ 12.5 ರಷ್ಟು ವೇತನ ಪರಿಷ್ಕರಣೆ ಮಾಡಲಾಗಿತ್ತು.
ಪ್ರತಿಭಟನೆ ನಡೆಸದಂತೆ ಎಚ್ಚರಿಕೆ
ಹಲವು ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಆದರೆ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ನಿಗಮಗಳು ಕರರಿಗೆ ಎಚ್ಚರಿಕೆ ನೀಡಿವೆ. ನಾಲ್ಕು ನಿಗಮಗಳಿಂದ ಸಾರಿಗೆ ನೌಕರರಿಗೆ ಮೌಖಿಕ ಆದೇಶ ನೀಡಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸುವ ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ನೌಕರರಿಗೆ ಶಿಸ್ತುಕ್ರಮದ ಎಚ್ಚರಿಕೆ ನೀಡಿವೆ ಎಂದು ತಿಳಿದುಬಂದಿದೆ. ಅಲ್ಲದೆ ವಾರದ ರಜೆ ಹೊರತುಪಡಿಸಿ ಬೇರೆ ಅನಗತ್ಯವಾಗಿ ನೌಕರರಿಗೆ ನೀಡುವುದಿಲ್ಲ. ಸೇವೆಗೆ ಗೈರಾದ್ರೆ ವೇತನ ಕಡಿತದ ಜೊತೆ ಶಿಸ್ತುಕ್ರಮ ಜರುಗಿಸುವುದಾಗಿ ನಿಗಮಗಳಿಂದ ಮೌಖಿಕ ಸೂಚನೆ ನೀಡಿವೆ ಎಂದು ತಿಳಿದು ಬಂದಿದೆ.
ಆದರೂ ಕೆಲವು ನೌಕರರು ತಮ್ಮ ಪಟ್ಟನ್ನು ಸಡಿಲಿಸದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳವಾರ 11 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ. ಇನ್ನೂ ಈ ಪ್ರತಿಭಟನೆ ಚುನಾವಣೆ ಹತ್ತಿರವಿರುವಾಗ ಸರ್ಕಾರಕ್ಕೆ ದೊಡ್ಡ ತಲೆ ನೋವನ್ನುಂಟು ಮಾಡಿದೆ. ಇದು ವಿರೋಧ ಪಕ್ಷಗಳಿಗೆ ಅಸ್ತ್ರವಾದರೂ ಅಚ್ಚರಿ ಪಡಬೇಕಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ