Siddaramaiah: 'RSSನವರು ಮೂಲ ಭಾರತೀಯರಾ? ಹೆಡಗೆವಾರ್​ಗಿಂತ ಒಂದು ಹೆಜ್ಜೆ ಮುಂದಿದ್ದಾನೆ ರೋಹಿತ್ ಚಕ್ರತೀರ್ಥ'

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿ. ನೆಹರು ಅವರ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹೆಡ್ಗೆವಾರ್​ಗಿಂತ ಆ ರೋಹಿತ್ ಚಕ್ರತೀರ್ಥ ಒಂದು ಹೆಜ್ಜೆ ಮುಂದಿದ್ದಾನೆ. ಅಂಥವನ ಕೈಗೆ ಪಠ್ಯ ಪರಿಷ್ಕರಣೆ ಕೊಟ್ರೆ ನಮ್ಮ ದೇಶ ಎತ್ತ ಸಾಗುತ್ತದೆ?’ ಎಂದು ಆಕ್ಷೇಪಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

 • Share this:
  ಬೆಂಗಳೂರು (ಮೇ 27): ಮಾಜಿ ಪ್ರಧಾನಿ ದಿ. ಪಂಡಿತ್ ಜವಾಹರ್​ ಲಾಲ್ ನೆಹರು (Jawaharlal Nehru) ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಆರ್​ಎಸ್​ಎಸ್​ (RSS) ಮೂಲಕ್ಕೆ ‘ಕೈ’ ಹಾಕಿದ್ದಾರೆ. ಆ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಜೆಂಡಾವನ್ನು ಪರೋಕ್ಷವಾಗಿ ಜನರಿಗೆ ತಲುಪಿಸಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ, (Mallikarjun Kharge) ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರೆಲ್ಲರೂ (Congress Leaders) ಒಂದೇ ವೇದಿಕೆಯ ಮೇಲೆ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು.

  ಒಬ್ಬೊಬ್ಬ ನಾಯಕರು ಒಂದೊಂದು ವಿಚಾರವನ್ನಿಟ್ಟುಕೊಂಡು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಮಾಜಿ ಪ್ರಧಾನಿ ದಿ. ಪಂಡಿತ್ ನೆಹರು ಅವರೊಂದಿಗೆ ಈಗಿನ ಪ್ರಧಾನಿ ಮೋದಿಯನ್ನು ಹೋಲಿಕೆ ಮಾಡಲು ಬರಲ್ಲ. ಆಕಾಶಕ್ಕೂ ಭೂಮಿಗೂ ಹೋಲಿಕೆ ಮಾಡಿದಂತಾಗುತ್ತದೆ ಎನ್ನುವ ಮೂಲಕ ಪ್ರಧಾನಿ ಮೋದಿ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಜೊತೆಗೆ ಪಠ್ಯ ಪರಿಷ್ಕರಣೆ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿ ಕಾರಿದರು.

  ಆರ್​ಎಸ್​ಎಸ್​ ಮೂಲವನ್ನೇ ಪ್ರಶ್ನಿಸಿದ ಸಿದ್ದರಾಮಯ್ಯ!

  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಠ್ಯ ಪರಿಷ್ಕರಣೆಯ ವಿರುದ್ಧ ಕಿಡಿ ಕಾರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿ. ನೆಹರು ಅವರ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹೆಡ್ಗೆವಾರ್​ಗಿಂತ ಆ ರೋಹಿತ್ ಚಕ್ರತೀರ್ಥ ಒಂದು ಹೆಜ್ಜೆ ಮುಂದಿದ್ದಾನೆ. ಅಂಥವನ ಕೈಗೆ ಪಠ್ಯ ಪರಿಷ್ಕರಣೆ ಕೊಟ್ರೆ ನಮ್ಮ ದೇಶ ಎತ್ತ ಸಾಗುತ್ತದೆ?’ ಎಂದು ಆಕ್ಷೇಪಿಸಿದರು. ಇದೇ ಸಂದರ್ಭದಲ್ಲಿ ಆರ್​ಎಸ್​ಎಸ್​ ಮೂಲವನ್ನೇ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು. ‘ಇಷ್ಟೆಲ್ಲ ಮಾಡುತ್ತಿದ್ದಾರಲ್ಲ ಈ ಆರ್​ಎಸ್​ಎಸ್​ನವರು, ಇವರೆಲ್ಲ ನಮ್ಮ ದೇಶದ ಮೂಲ ನಿವಾಸಿಗಳಾ? ಈ ದೇಶದವರಾ? ಅವರು ಮೂಲ ಭಾರತೀಯರಾ? ಅಲ್ಲ. ಆರ್​ಎಸ್​ಎಸ್​ನವರು ಆರ್ಯರು. ಆರ್ಯರು ಭಾರತದವರಲ್ಲ. ಹೊರಗಿನಿಂದ ಬಂದವರು. ದ್ರಾವಿಡರು ಇಲ್ಲಿನ ಮೂಲ ನಿವಾಸಿಗಳು’ ಎಂದರು ವಿಪಕ್ಷ ನಾಯಕ ಸಿದ್ದರಾಮಯ್ಯ.

  ಇದನ್ನೂ ಓದಿ; Belagavi: ಮತ್ತೆ ಎಂಇಎಸ್ ಪುಂಡಾಟ; ಕನ್ನಡ ಹಾಡು ಹಾಕಿದ್ದಕ್ಕೆ ಬೈಕ್​ಗೆ ಬೆಂಕಿ ಹಚ್ಚಿ ಹಲ್ಲೆ

  ಆಗ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಮೇಲಿದ್ದ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಮಧ್ಯೆ ಪ್ರವೇಶಿಸಿ, ‘ನಾನಾಗಲೇ ಇದರ ಬಗ್ಗೆ ಸಂಸತ್ತಿನಲ್ಲಿಯೇ ಮಾತನಾಡಿದ್ದೇನೆ. ಶಾರುಖ್ ಖಾನ್ ದೇಶ ತೊರೆಯಬೇಕು ಎಂದಿದ್ದರು. ಅವರು ಎಲ್ಲಿಗೆ ಹೋಗಬೇಕಪ್ಪ? ಎಂದು ನಾನಾಗ ಪ್ರಶ್ನೆ ಮಾಡಿದ್ದೆ. ಮಧ್ಯಪ್ರಾಚ್ಯದಿಂದ ಬಂದವರು ನೀವು. ಇಲ್ಲಿಂದ ನೀವು ಹೋಗಬೇಕು ಎಂದು ರಾಜನಾಥ್ ಸಿಂಗ್​ಗೆ ಆಗಲೇ ನಾನು ಹೇಳಿದ್ದೆ’ ಎಂದರು. ನೀವು ಹೇಳಿದ್ದರೆ, ಅದು ಸರಿಯಾಗಿದೆ ಎಂದು ಸಿದ್ದರಾಮಯ್ಯ ತಮ್ಮ ಮಾತು ಮುಂದುವರೆಸಿದರು.

  ಹೆಡಗೆವಾರ್ ಮೇಲೆ ಏಕವಚನದಲ್ಲಿ ವಾಗ್ದಾಳಿ!

  ಇನ್ನು ಆರ್​ಎಸ್​ಎಸ್​ ಸಂಸ್ಥಾಪಕ ಹೆಡಗೆವಾರ್ ಅವರ ಮೇಲೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಪಠ್ಯದಲ್ಲಿ ಆರ್​ಎಸ್​ಎಸ್​ ಸಂಸ್ಥಾಪಕ ಹೆಡಗೆವಾರ್ ವಿಷಯ ಸೇರಿಸಿರುವುದನ್ನು ವಿರೋಧಿಸಿದ ಅವರು, ‘ಪಠ್ಯ ಪುಸ್ತಕದಲ್ಲಿ ಹೆಡಗೆವಾರ್ ವಿಚಾರ ಸೇರಿಸಿದ್ದಾರೆ. ಅವನ 1921ರ ಭಾಷಣವನ್ನು ಸೇರಿಸಿದ್ದಾರೆ. ಅವನು ಇಲ್ಲಿ ಬಂದು ಏನು ಮಾಡಿದ್ದ? ದೇಶ ಒಡೆಯುವವರನ್ನು ಪಠ್ಯದಲ್ಲಿ ಸೇರಿಸುತ್ತಿದ್ದಾರೆ.

  ಆರ್​ಎಸ್​ಎಸ್​ ವಿಚಾರಗಳನ್ನು ಮಕ್ಕಳ ಪಠ್ಯ ಪುಸ್ತಕದಲ್ಲಿ ಸೇರಿಸಿ, ಮಕ್ಕಳ ಮನಸ್ಸು ಕೆಡಿಸುವ ಕೆಲಸ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ನಮ್ಮ ರಾಜ್ಯದಲ್ಲಿ ಅವರ ಸಿದ್ದಾಂತ ಸೇರಿಸಲು ಬಿಡಬಾರದು. ಜೊತೆಗೆ ಪಂ. ನೆಹರು, ಭಗತ್ ಸಿಂಗ್ ಅವರ ಪಾಠ ತೆಗೆಯುತ್ತಿದ್ದಾರೆ’ ಎಂದು ಮಲ್ಲಿಕಾರ್ಜುನ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮೇಲೆ ಕೆಪಿಸಿಸಿ ಅಧ್ಯಕ್ಷರೂ ತೀವ್ರ ವಾಗ್ದಾಳಿ ನಡೆಸಿದರು.

  ಕನ್ನಡ ಬಾವುಟ ಅಂಡರ್ ವೇರ್ ಗೆ ಹೋಲಿಸಿದ್ದ ಚಕ್ರತೀರ್ಥ!

  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೂಡ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ಮೇಲೆ ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರೋಹಿತ್ ಚಕ್ರತೀರ್ಥ ಯಾರು? ಕನ್ನಡ ಬಾವುಟವನ್ನು ಅಂಡರ್ ವೇರ್​ಗೆ ಹೋಲಿಸಿದ್ದವನು. ಆದರೆ ಈಗ ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ? ನಾನು ಹೇಳುತ್ತೇನೆ. ಕನ್ನಡ ನೆಲ, ಜಲ ಉಳಿಸಿಕೊಳ್ಳಬೇಕಾದರೆ ಹೋರಾಟ ಮಾಡಿ. ಇದರ ವಿರುದ್ಧವೂ ಹೋರಾಟ ಮಾಡಬೇಕು. ನಮ್ಮ ಕನ್ನಡ ಧ್ವಜವನ್ನು ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

  ಇದನ್ನೂ ಓದಿ:  Text Book Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧ; ಮೇ 31ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರವೇ ಸಜ್ಜು

  ಕಾಂಗ್ರೆಸ್ ನಾಯಕರು ಪಂ. ನೆಹರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಪಠ್ಯಕ್ರಮ ಪರಿಷ್ಕರಣೆ ಹಾಗೂ ಆರ್​ಎಸ್​ಎಸ್​ ವಿರುದ್ಧವೇ ಮಾತನಾಡಿದ್ದು ವಿಶೇಷವಾಗಿತ್ತು. ಜೊತೆಗೆ ಮಾಜಿ ಪ್ರಧಾನಿ ದಿ. ಪಂ. ಜವಾಹರ್ ಲಾಲ್ ನೆಹರು ಅವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಕಾಂಗ್ರೆಸ್ ನಾಯಕರು ನೆನಪಿಸಿಕೊಂಡರು.

  ವರದಿ: ಅನಿಲ್ ಬಾಸೂರ್
  Published by:Pavana HS
  First published: