FACT CHECK | ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಇರುವ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿಯೇ?

ಬಾಂಬರ್​ ಆದಿತ್ಯರಾವ್ ಹೆಸರನ್ನು ತನ್ನ ಫೋಟೋದೊಂದಿಗೆ ತಳುಕು ಹಾಕಿ ಪೋಸ್ಟ್​ ಮಾಡಿರುವುದರ ಬಗ್ಗೆ ಸ್ವತಃ ಸಂದೀಪ್ ಲೊಬೊ ಅವರು ಅಸಮಾಧಾನ ಹೊರಹಾಕಿದ್ದು, ಹೀಗೆ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಸಮರ ಸಾರುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋ.

  • Share this:
ಬೆಂಗಳೂರು(ಜ.24) :  ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರು ತಮ್ಮ ಸಂಘದ ಸದಸ್ಯರೊಂದಿಗೆ ನಿಂತಿರುವ ಫೋಟೋವೊಂದು ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಪ್ರಭಾಕರ್ ಭಟ್ ಜೊತೆಗೆ ನಿಂತ ವ್ಯಕ್ತಿ ಮತ್ಯಾರು ಅಲ್ಲ, ಮಂಗಳೂರಿನಲ್ಲಿ ಬಾಂಬ್​ ಇಟ್ಟ ವ್ಯಕ್ತಿ ಆದಿತ್ಯರಾವ್ ಎಂಬ ಕಾರಣಕ್ಕೆ ಈ ಫೋಟೋ ಇಷ್ಟು ವೈರಲ್ ಆಗಿತ್ತು. 

ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇರಿಸಲಾಗಿದ್ದ ಅನುಮಾನಾಸ್ಪದ ಬ್ಯಾಗ್​ಅನ್ನು ವಶಕ್ಕೆ ಪಡೆದ ಪೊಲೀಸರು ಅದರಲ್ಲಿ ಬಾಂಬ್ ಇರುವುದನ್ನು ಖಚಿತಪಡಿಸಿಕೊಂಡ ಬಳಿಕ ಆ ಬ್ಯಾಗ್​ಅನ್ನು ಮೈದಾನಕ್ಕೆ ಕೊಂಡೋಗಿ ಸುರಕ್ಷಿತವಾಗಿ ಸ್ಫೋಟಿಸಿದ್ದರು. ಆ ಬಳಿಕ ಬಾಂಬ್​ಬ್ಯಾಗ್​ ಅನ್ನು ವಿಮಾನ ನಿಲ್ದಾಣದಲ್ಲಿ ಇಟ್ಟಿದ್ದ ಆದಿತ್ಯ ರಾವ್ ನೇರವಾಗಿ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದ.

ಪಿಎಫ್​ಎ ಸಂಘಟನೆಯ ಶಾಹಿದ್ ನಾಸೀರ್ ಎಂಬುವವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಮಂಗಳೂರು ವಿಮಾನನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಆರ್​ಎಸ್​ಎಸ್​ ರಾಷ್ಟ್ರೀಯ ನಾಯಕ ಪ್ರಭಾಕರ್ ಭಟ್ ಜೊತೆಗೆ ಇರುವುದು ಎಂದು ಶೀರ್ಷಿಕೆ ಸಹ ನೀಡಿದ್ದರು. ಈ ಒಂದು ಫೋಟೋ ಫೇಸ್​ಬುಕ್​ನಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರು. ಅದೇ ರೀತಿ ಟ್ವಿಟರ್​ನಲ್ಲೂ ಸಹ.

ಆದರೆ, ಕಲ್ಲಡ್ಕ ಪ್ರಭಾಕರ್ ಭಟ್ ಜೊತೆಗಿದ್ದ ವ್ಯಕ್ತಿ ಬಾಂಬ್​ ಇಟ್ಟ ಆರೋಪಿ ಆದಿತ್ಯ ರಾವ್ ಅಲ್ಲ ಬದಲಿಗೆ ಆರ್​ಎಸ್​ಎಸ್​ ಸದಸ್ಯ ಸಂದೀಪ್ ಲೊಬೊ. ಇಲ್ಲಿನ ಕೆಳಗಿನ ಚಿತ್ರದಲ್ಲಿ ಸಂದೀಪ್ ಲೊಬೊ ಅವರು ಬಿಜೆಪಿ ಸಂಸದ ತೇಜಸ್ವಿ ಅವರೊಂದಿಗೆ ಇರುವ ಚಿತ್ರವನ್ನು ಎರಡು ತಿಂಗಳ ಹಿಂದೆ ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿದ್ದರು ಎಂಬ ಸತ್ಯ ವರದಿಯನ್ನು ಆಲ್ಟ್​ ನ್ಯೂಸ್​ ವರದಿ ಮಾಡಿದೆ.

 



ಬಾಂಬರ್​ ಆದಿತ್ಯರಾವ್ ಹೆಸರನ್ನು ತನ್ನ ಫೋಟೋದೊಂದಿಗೆ ತಳುಕು ಹಾಕಿ ಪೋಸ್ಟ್​ ಮಾಡಿರುವುದರ ಬಗ್ಗೆ ಸ್ವತಃ ಸಂದೀಪ್ ಲೊಬೊ ಅವರು ಅಸಮಾಧಾನ ಹೊರಹಾಕಿದ್ದು, ಹೀಗೆ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಸಮರ ಸಾರುವುದಾಗಿ ಎಚ್ಚರಿಕೆ ನೀಡಿದ್ದಾರೆ. "ಮಂಗಳೂರು ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ಆರೋಪಿ ಎಂಬಂತೆ ತೋರಿಸಿ ಫೋಟೋಗಳನ್ನು ಅಥವಾ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಗೈಗೊಳ್ಳುವ ಬಗ್ಗೆ ನಾನು ನಿರ್ಧರಿಸಿದ್ದೇನೆ." ಎಂದು ಬರೆದುಕೊಂಡಿದ್ದಾರೆ.



ಸಂದೀಪ್ ಲೊಬೊ ಅವರ ಫೋಟೊವನ್ನು ಆದಿತ್ಯ ರಾವ್ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರ ವಿರುದ್ಧ ದಕ್ಷಿಣ ಕನ್ನಡ ಬಿಜೆಪಿ ಘಟಕ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದೆ.

 



 
First published: