ನಮ್ಮ ಬಲಿದಾನಕ್ಕೂ ಮೊದಲು ನಿಮ್ಮ ರಾಜಕೀಯ ಭವಿಷ್ಯ ನಾಶ; ಡಿಕೆಶಿಗೆ ಕಲ್ಲಡ್ಕ ಪ್ರಭಾಕರ ಭಟ್ ಎಚ್ಚರಿಕೆ

Kanakapura Chalo: ಗೆಲುವಿಗಾಗಿಯೇ ನಮ್ಮ ಹೋರಾಟ. ನಮ್ಮ ತಾಕತ್ತೇನು ಎಂಬುದನ್ನು ನಾವು ತೋರಿಸುತ್ತೇವೆ. ಹಿಂದೂ ಸಮಾಜದ ತಾಕತ್ತು ತೋರಿಸುತ್ತೇವೆ. ಹಿಂದೂಗಳಿಗೆ ವಂಚಿಸಲು ಸಾಧ್ಯವಿಲ್ಲ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸುವುದು ಅಸಾಧ್ಯ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.

Sushma Chakre | news18-kannada
Updated:January 13, 2020, 1:23 PM IST
ನಮ್ಮ ಬಲಿದಾನಕ್ಕೂ ಮೊದಲು ನಿಮ್ಮ ರಾಜಕೀಯ ಭವಿಷ್ಯ ನಾಶ; ಡಿಕೆಶಿಗೆ ಕಲ್ಲಡ್ಕ ಪ್ರಭಾಕರ ಭಟ್ ಎಚ್ಚರಿಕೆ
ಕಲ್ಲಡ್ಕ ಪ್ರಭಾಕರ್ ಭಟ್- ಡಿ.ಕೆ. ಶಿವಕುಮಾರ್
  • Share this:
ರಾಮನಗರ (ಜ. 13): ಯಾವುದೇ ಕಾರಣಕ್ಕೂ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆಯನ್ನು ನಿರ್ಮಿಸಲು ಅವಕಾಶ ನೀಡುವುದಿಲ್ಲ. ನಾವು ಬಲಿದಾನಕ್ಕೆ ಸಿದ್ಧರಿದ್ದೇವೆ. ಆದರೆ, ಅದಕ್ಕೂ ಮೊದಲು ನಿಮ್ಮ ಬಲಿದಾನವಾಗಲಿದೆ ಎಂದು 'ಕನಕಪುರ ಚಲೋ' ವೇಳೆ ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಎಚ್ಚರಿಕೆ ನೀಡಿದ್ದಾರೆ. 

ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣವನ್ನು ವಿರೋಧಿಸಿ ಇಂದು 'ಕನಕಪುರ ಚಲೋ'ಗೆ ಕರೆ ನೀಡಲಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಾವಿರಾರು ಹಿಂದು ಕಾರ್ಯಕರ್ತರು ಭಾಗವಹಿಸಿದ್ದಾರೆ. ತೀವ್ರ ಪ್ರತಿಭಟನೆಯ ನಡುವೆಯೂ ಇಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕಪಾಲಬೆಟ್ಟದ ವಿವಾದಿತ ಗೋಮಾಳದಲ್ಲೇ ಏಸು ಪ್ರತಿಮೆ ನಿರ್ಮಾಣ ಮಾಡಲಾಗುವುದು. , ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಧಿಕಾರಿ ವರದಿ ಕೊಟ್ಟಿದಾರೆ. ಸಂಪುಟ ಸಭೆಯಲ್ಲೇ ಎಲ್ಲವೂ ಕ್ಲಿಯರ್ ಆಗುತ್ತದೆ ಎಂದಿದ್ದರು.

ಇದಕ್ಕೆ ಪ್ರತಿಯಾಗಿ ಕನಕಪುರದಲ್ಲಿ ಸವಾಲು ಹಾಕಿರುವ ಕಲ್ಲಡ್ಕ ಪ್ರಭಾಕರ್ ಭಟ್, ಗೆಲುವಿಗಾಗಿಯೇ ನಮ್ಮ ಹೋರಾಟ. ನಮ್ಮ ತಾಕತ್ತೇನು ಎಂಬುದನ್ನು ನಾವು ತೋರಿಸುತ್ತೇವೆ. ಹಿಂದೂ ಸಮಾಜದ ತಾಕತ್ತು ತೋರಿಸುತ್ತೇವೆ. ಹಿಂದೂಗಳಿಗೆ ವಂಚಿಸಲು ಸಾಧ್ಯವಿಲ್ಲ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸುವುದು ಅಸಾಧ್ಯ ಎಂದಿದ್ದಾರೆ.

ನಾವು ಸಾವಿರಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನೀವು ಮತಾಂತರ ಮಾಡಲು ಷಡ್ಯಂತ್ರ ರೂಪಿಸಿದ್ದೀರಿ. ನಾವು ಬಲಿದಾನಕ್ಕೆ ಸಿದ್ಧರಿದ್ದೇವೆ. ಅದಕ್ಕೂ ಮೊದಲು ನಿಮ್ಮ ಬಲಿದಾನವಾಗಬೇಕು. ಇದನ್ನೂ ಮೀರಿ ನೀವು ಮುಂದುವರಿದರೆ ನಿಮ್ಮ ರಾಜಕೀಯ ಭವಿಷ್ಯ ನಾಶವಾಗುತ್ತದೆ. ನಿಮ್ಮ ದೇಶದ್ರೋಹದ ಕೆಲಸವನ್ನು ನಾವು ಒಪ್ಪುವುದಿಲ್ಲ ಎಂದು ಡಿಕೆ ಶಿವಕುಮಾರ್​ಗೆ ಕಲ್ಲಡ್ಕಪ್ರಭಾಕರ್  ಭಟ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಜಮೀನು ಆಸೆ ತೋರಿಸಿ ಮುಗ್ಧರ ಮತಾಂತರ: ಕನಕಪುರ ಚಲೋ ವೇಳೆ ಬಿಜೆಪಿ ನಾಯಕರ ಆಕ್ರೋಶ

ಶಾಂತಿಯ ಹೆಸರಿನಲ್ಲಿ ನೀವು ಅಶಾಂತಿ ಸೃಷ್ಟಿಸಿದ್ದೀರಿ. ನಿಮಗೆ ಶಾಂತಿಯೇ ಬೇಕೆಂದಿದ್ದರೆ ಬುದ್ಧ, ಬಾಲಗಂಗಾಧರ ಶ್ರೀಗಳು, ಪೇಜಾವರ ಶ್ರೀಗಳು, ಗಾಂಧಿ ಪ್ರತಿಮೆ ನಿರ್ಮಾಣ ಮಾಡಬಹುದಿತ್ತು. 33 ಕೋಟಿ ದೇವರ ಜೊತೆ ಏಸು, ಅಲ್ಲಾ ಇರಲಿ. ಸುಮ್ಮನೆ ಮತಾಂತರ ಮಾಡುವ ಹುನ್ನಾರ ಮಾಡಬೇಡಿ ಎಂದು ಕನಕಪುರ ಚಲೋ ವೇಳೆ ಕಲ್ಲಡ್ಕ ಪ್ರಭಾಕರ ಭಟ್ ಕಿಡಿಕಾರಿದ್ದಾರೆ.

ಕನಕಪುರ ಚಲೋ ಬಗ್ಗೆ ಇಂದು ವ್ಯಂಗ್ಯವಾಡಿದ್ದ ಡಿ.ಕೆ. ಶಿವಕುಮಾರ್ ಕಲ್ಲಡ್ಕ ಪ್ರಭಾಕರ್ ಭಟ್ ಯಾರೆಂಬುದೇ ನನಗೆ ಗೊತ್ತಿಲ್ಲ. ಅಧಿಕಾರಕ್ಕಾಗಿ ಈ ರೀತಿಯ ಹೋರಾಟ ಮಾಡುತ್ತಿದ್ದಾರೆ ಎಂದಿದ್ದರು.ಕನಕಪುರದಲ್ಲಿ ಶಾಂತಿ ಕಾಪಾಡಬೇಕೆಂದು ನಾನು ಹೇಳಿದ್ದೇನೆ. ನಮ್ಮಲ್ಲಿಂದ ಒಂದು ನರಪಿಳ್ಳೆಯೂ ಪ್ರತಿಭಟನಾ ಸ್ಥಳಕ್ಕೆ ಹೋಗುವುದಿಲ್ಲ. ಬಿಜೆಪಿ ಅಧಿಕಾರದಲ್ಲಿರೋದ್ರಿಂದ ಕೆಲವರು ಹೋಗುತ್ತಾರೆ. ರಾಜಕಾರಣದಲ್ಲಿ ಪ್ರತಿಭಟನಾಕಾರರು ಇರಬೇಕು. ಆಗ ನಾವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಪ್ರತಿಭಟನಾಕಾರರಿಗೆ ಒಳ್ಳೆಯದಾಗಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು.

ಇದನ್ನೂ ಓದಿ: ಕಪಾಲಬೆಟ್ಟದ ಗೋಮಾಳದಲ್ಲೇ ಏಸು ಪ್ರತಿಮೆ ನಿರ್ಮಾಣ; ಡಿ.ಕೆ. ಶಿವಕುಮಾರ್ ಭರವಸೆ

ಏನಿದು ಘಟನೆ?
ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶಗಳು ಕೇಳಿಬಂದ ನಂತರ ಪ್ರತಿಮೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಕನಕಪುರದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವ ಯೋಜನೆಯನ್ನು ವಿರೋಧಿಸಿ ಜ. 13ರಂದು 'ಕನಕಪುರ ಚಲೋ' ನಡೆಸಲಾಗುತ್ತಿದೆ.

ಕಪಾಲಬೆಟ್ಟ ಅಭಿವೃದ್ಧಿ ಸಮಿತಿಗೆ ಮಂಜೂರಾಗಿದ್ದ 10 ಎಕರೆ ಜಾಗದಲ್ಲಿ ಒಂದು ಧರ್ಮದ ದೇವರ ಪ್ರತಿಮೆ ನಿರ್ಮಾಣ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಸ್​ಮಸ್ ವೇಳೆ ಅದರ ಶಂಕುಸ್ಥಾಪನೆ ನೆರವೇರಿಸಿದ್ದ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದಿತ್ತು. ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಏಸು ಪ್ರತಿಮೆಯ ಶಂಕುಸ್ಥಾಪನೆ ಮಾಡುವ ಮೂಲಕ ಆಡಳಿತ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇಂದು ವಿವಿಧ ಸಂಘಟನೆಗಳಿಂದ 'ಕನಕಪುರ ಚಲೋ'ಗೆ ಕರೆ ನೀಡಲಾಗಿದ್ದು, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ತುಮಕೂರಿನಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಪಾಲಬೆಟ್ಟದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕನಕಪುರ ನಗರದಲ್ಲಿ ಬೃಹತ್ ಪ್ರತಿಭಟನೆ ಹಿನ್ನೆಲೆ ಕಪಾಲಬೆಟ್ಟ, ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ