RR Nagar, Sira Bypolls: ಆರ್​ಆರ್​ ನಗರ, ಶಿರಾ ಉಪಚುನಾವಣೆ; ಅಭ್ಯರ್ಥಿಗಳಿಂದ ಇಂದು ಮನೆ ಮನೆ ಪ್ರಚಾರ

ಆರ್​ಆರ್​ ನಗರ, ಶಿರಾ ಕ್ಷೇತ್ರಗಳಲ್ಲಿ ನಾಳೆ ಮತದಾನ ಇರುವುದರಿಂದ ನಿನ್ನೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಎರಡೂ ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಇಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ.

ಆರ್​ಆರ್​ ನಗರ ಉಪಚುನಾವಣೆ ಅಭ್ಯರ್ಥಿಗಳಾದ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ

ಆರ್​ಆರ್​ ನಗರ ಉಪಚುನಾವಣೆ ಅಭ್ಯರ್ಥಿಗಳಾದ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ

  • Share this:
ಬೆಂಗಳೂರು (ನ. 2): ಶಿರಾ ಮತ್ತು ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇವಲ ಒಂದು ದಿನ ಬಾಕಿ ಉಳಿದಿದೆ. ನಾಳೆ ಮತದಾನ ಇರುವುದರಿಂದ ನಿನ್ನೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಎರಡೂ ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಇಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ. ಜೆಡಿಎಸ್​ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ನ. 3ರಂದು ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್, ಜೆಡಿಎಸ್​, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಆಯಾ ಪಕ್ಷದ ನಾಯಕರು ಕಾರ್ಯಕರ್ತರ ಮೂಲಕ ಅಂತಿಮ ಹಂತದ ಪ್ರಯತ್ನ ನಡೆಸುತ್ತಿದ್ದಾರೆ.

ಇಂದು ಶಿರಾದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳಿಂದ ಮನೆ ಮನೆ ಪ್ರಚಾರ ನಡೆಯಲಿದೆ. ಶಿರಾದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ, ಬಿಜೆಪಿಯ ರಾಜೇಶ್ ಗೌಡ ಹಾಗೂ ಜೆಡಿಎಸ್ ನ ಅಮ್ಮಾಜಮ್ಮ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ. ಪಕ್ಷದ ನಾಯಕರು, ಸೆಲೆಬ್ರಿಟಿಗಳಿಂದ ಪ್ರಚಾರ ಅಂತ್ಯಗೊಂಡಿದ್ದು, ಇಂದು ತಮ್ಮ ಪರವಾಗಿ ತಾವೇ ಮತದಾರರ ಮುಂದೆ ಹೀಗಿ ಮತ ಕೇಳಲಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದಲೇ ಅಭ್ಯರ್ಥಿಗಳು ಆಯ್ದ ಭಾಗಗಳಲ್ಲಿ ಮನೆ ಮನೆ ಪ್ರಚಾರ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: Sira Bypolls: ಶಿರಾ ಉಪಚುನಾವಣೆಗೆ ಅಂತಿಮ ಕಸರತ್ತು; ಇಳಿ ವಯಸ್ಸಿನಲ್ಲೂ ಮಧುಗಿರಿಯಲ್ಲೇ ಬೀಡು ಬಿಟ್ಟ ಹೆಚ್​ಡಿ ದೇವೇಗೌಡ

ಆರ್.ಆರ್ ನಗರದಲ್ಲೂ ಇಂದು ಅಭ್ಯರ್ಥಿಗಳಿಂದ ಕೊನೆಯ ಕ್ಷಣದ ಹೋರಾಟ ನಡೆಯಲಿದೆ. ಇಂದು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಜ್ಞಾನಭಾರತಿ ವಾರ್ಡ್ ಹಾಗೂ ಲಗ್ಗೆರೆ ವಾರ್ಡ್ ಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಲಿದ್ದಾರೆ. ಬೆಳಗ್ಗೆ 9 ಗಂಟೆಯಿಂದಲೇ ಕೃಷ್ಣಮೂರ್ತಿ ಮತಯಾಚನೆ ಆರಂಭಿಸಲಿದ್ದಾರೆ. ಆರ್​ಆರ್​ ನಗರ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಕೂಡ ಇಂದು ಮನೆ ಮನೆಗೆ ತೆರಳಿ ಮತ ಯಾಚಿಸಲಿದ್ದಾರೆ. ಬೆಳಗ್ಗೆ 10 ಗಂಟೆಯ ನಂತರ ಅವರು ಮನೆ ಮನೆಗೆ ತೆರಳಿ ಮತ ಕೇಳಲಿದ್ದಾರೆ. ಹಾಗೇ, ಬಿಜೆಪಿ ಅಭ್ಯರ್ಥಿ ಮುನಿರತ್ನ ಕೂಡ ಇಂದು ಮನೆಗಳಿಗೆ ತೆರಳಿ ತಮಗೆ ಮತ ಹಾಕುವಂತೆ ಮನವಿ ಮಾಡಲಿದ್ದಾರೆ.

ಶಿರಾ ಮತ್ತು ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದಲ್ಲಿ ನ. 3ರಂದು ಉಪಚುನಾವಣೆ ನಡೆಯಲಿದೆ. ನ. 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನಿನ್ನೆ ಸಂಜೆ ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯವಾಗಿರುವುದರಿಂದ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಈ ವಿಧಾನಸಭಾ ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಚುನಾವಣಾ ನೀತಿಸಂಹಿತೆ ಪ್ರಕಾರ ಇಂದು ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಆರ್.ಆರ್‌ ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಮದ್ಯ ಅಥವಾ ಯಾವುದೇ ಮಾದಕವಸ್ತುಗಳ ಮಾರಾಟ ಮತ್ತು ಸಂಗ್ರಹ ಮಾಡುವುದನ್ನು ನಿಷೇಧಿಸಲಾಗಿದೆ. ನ. 3ರ ಮಧ್ಯರಾತ್ರಿಯವರೆಗೆ ಆರ್​ಆರ್​ ನಗರದಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ.
Published by:Sushma Chakre
First published: