ಬೆಂಗಳೂರು (ಅ.31): ಆರ್ಆರ್ನಗರ ಹಾಗೂ ಶಿರಾ ಉಪಚುನಾವಣೆಗಳ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ ಆರು ಗಂಟೆಗೆ ತೆರೆಬೀಳಲಿದೆ. ಪ್ರಚಾರಕ್ಕೆ ಒಂದು ದಿನ ಬಾಕಿ ಉಳಿದಿದ್ದು, ಕೊನೆಯ ದಿನದ ಅಬ್ಬರ ಪ್ರಚಾರ ನಾಯಕರು ಸಜ್ಜಾಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಅನುಸಾರವಾಗಿ ನಾಳೆಯೊಂದು ದಿನ ಅಬ್ಬರ ಪ್ರಚಾರ ನಡೆಸಬಹುದಾಗಿದೆ. ನಾಳೆ ಸಂಜೆ ಆರು ಗಂಟೆ ಬಳಿಕ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಬಹುದಾಗಿದೆ. ಈ ವೇಳೆ ಅಭ್ಯರ್ಥಿ ಜೊತೆ ಮೂರು ನಾಲ್ಕು ಜನರಿಗೆ ಮಾತ್ರ ಅವಕಾಶವಿದೆ. ನವೆಂಬರ್ 3ರಂದು ಎರಡು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 10ರಂದು ಫಲಿತಾಂಶ ಹೊರಬರಲಿದೆ. ಮೂರು ಪಕ್ಷಗಳಿಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿದ್ದು, ಎರಡು ಕ್ಷೇತ್ರಗಳಲ್ಲಿಯೂ ಮೂರು ಪಕ್ಷದ ನಾಯಕರು ಅಬ್ಬರ ಪ್ರಚಾರ ನಡೆಸಿದ್ದಾರೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ, ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ ಇದ್ದರೆ, ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಕಣದಲ್ಲಿ ಇದ್ದಾರೆ. ಮೂರು ಪಕ್ಷಗಳಿಗೂ ಪ್ರತಿಷ್ಟೆಯಾಗಿರುವ ಚುನಾವಣೆಯಲ್ಲಿ ಮತದಾನಕ್ಕೆ ಆಯೋಗ ಸಕಲ ತಯಾರಿ ನಡೆಸಿದೆ. ಮತಗಟ್ಟೆ ಸುತ್ತ ಮುತ್ತ ಬಿಗಿ ಭದ್ರತೆ ನಡೆಸಿದೆ.
ಮೂರು ಪಕ್ಷದ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿದೆ. ಆರ್ಆರ್ನಗರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಸಚಿವ ಆರ್ ಅಶೋಕ್ ಪರಸ್ಪರ ವಾಗ್ದಾಳಿ ನಡೆಸಿದರು. ಶಿರಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರವನ್ನು ಜಪಿಸಿರುವ ಸಿಎಂ ಕ್ಷೇತ್ರವನ್ನು ತಮ್ಮ ತವರು ಕ್ಷೇತ್ರ ಅಭಿವೃದ್ಧಿ ಮಾಡುವಂತೆ ಭರವಸೆ ನೀಡಿದ್ದಾರೆ. ಮುನಿರತ್ನ ಪರ ನಟ ದರ್ಶನ್ ಪ್ರಚಾರ ನಡೆಸುವ ಮೂಲಕ ತಾರಾ ಮೆರಗು ಮೂಡಿಸಿದರೆ, ಜೆಡಿಎಸ್ ಯುವ ನಾಯಕ ನಿಖಿಲ್ ಅಬ್ಬರ ಪ್ರಚಾರ ಗಮನಸೆಳೆಯಿತು. ಇನ್ನು ಚುನಾವಣಾ ಪ್ರಚಾರದ ನಡುವೆ ಆರ್ ಆರ್ ನಗರದಲ್ಲಿನ ಚಿತ್ರ ನಟರಾದ ಪ್ರೇಮ್ ಹಾಗೂ ವಿನೋದ್ ಪ್ರಭಾಕರ್ ಮನೆಗೆ ಡಿಕೆಶಿ ಭೇಟಿ ಕುತೂಹಲ ಮೂಡಿಸಿತು.
ಇದನ್ನು ಓದಿ: ದೃಷ್ಟಿಬೊಟ್ಟಿನಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದೇ ಸೀಟು; ಆರ್ ಅಶೋಕ್ ವ್ಯಂಗ್ಯ
ಇಂದು ಶಿರಾದಲ್ಲಿ ಪ್ರಚಾರ ನಡೆಸಿದ ಜೆಡಿಎಸ್ ವರಿಷ್ಠ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ. ಇನ್ನು ಆರ್ಆರ್ನಗರದಲ್ಲಿ ಪ್ರಚಾರದಲ್ಲಿ ಭಾಗಿಯಾದ ಸಿಎಂ ಬಿಎಸ್ವೈ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಆರೋಪಗಳ ಮಳೆ ಸುರಿಸಿದರು.
ಆರ್.ಆರ್ ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಮದ್ಯ ಅಥವಾ ಯಾವುದೇ ಮಾದಕವಸ್ತುಗಳ ಮಾರಾಟ, ಬಳಕೆ, ಸಂಗ್ರಹಣೆಯನ್ನು ನಿಷೇಧಿಸಲಾಗಿದೆ. ನವೆಂಬರ್ 1 ರಂದು ಸಂಜೆ 5 ಗಂಟೆಯಿಂದ ನವೆಂಬರ್ 3ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಯಶವಂತಪುರ, ಆರ್ಎಂಸಿ ಯಾರ್ಡ್ಮ ರಾಜಗೋಪಲ ನಗರ, ಪೀಣ್ಯ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಜಾಲಹಳ್ಳಿ, ಗಂಗಮ್ಮನ ಗುಡಿ , ಆರ್ಆರ್ನಗರ, ಕಾಮಾಕ್ಷಿ ಪಾಳ್ಯ, ಜ್ಞಾನಭಾರತಿ, ಬ್ಯಾಟರಾಯನ ಪರು, ಅನ್ನಪೂರ್ಣೇಶ್ವರಿ, ಗಿರಿನಗರ ಪೊಲೀಸ್ ಠಾಣೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ