ಬೆಂಗಳೂರು: ಆರ್ಆರ್ ನಗರ ವಿಧಾನಸಭಾ ಕ್ಷೇತ್ರದ (RR Nagar Assembly Constituency) ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ (Kusuma Hanumantharayappa) ಎದುರಾಳಿ ಬಿಜೆಪಿ ಅಭ್ಯರ್ಥಿ ಸಚಿವ ಮುನಿರತ್ನ (Minister Munirathna) ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಯಶವಂತಪುರ (Yeshwanthpur) ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಸಚಿವ ಮುನಿರತ್ನ ಅವರು ತಮ್ಮ ಬೆಂಬಲಿಗನನ್ನೇ ಚುನಾವಣೆ ಕಣಕ್ಕೆ ಇಳಿಸಿ ತಮ್ಮ ವಿರುದ್ಧ ಷಡ್ಯಂತ್ರ ರಚನೆ ಮಾಡಿದ್ದಾರೆ ಎಂದು ಕುಸುಮಾ ಹೆಚ್. ಆರೋಪಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೂ ಕುಸುಮಾ ಅವರು ಬರೆದುಕೊಂಡಿದ್ದಾರೆ.
ಆರ್ಆರ್ ನಗರ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡಿರುವ ಯಾರಬ್ಎಂಬವರು ಸಚಿವ ಬೆಂಬಲಿಗ. ಆದ್ರೆ ಕ್ಷೇತ್ರದಲ್ಲಿ ತಾನೋರ್ವ ಕಾಂಗ್ರೆಸ್ ಬೆಂಬಲಿತನಾಗಿದ್ದು ಎಂದು ಹೇಳಿಕೊಂಡು ಪಾಕಿಸ್ತಾನ ಧ್ವಜ ಇರೋ ಕರಪತ್ರ ಮುದ್ರಿಸಿ ಹಂಚುತ್ತಿದ್ದಾರೆ ಎಂದು ಕುಸುಮಾ ಆರೋಪ ಮಾಡಿದ್ದಾರೆ.
ಪಾಕಿಸ್ತಾನ ಧ್ವಜವುಳ್ಳ ಕರಪತ್ರ
ಪಾಕಿಸ್ತಾನ ಧ್ವಜ ಮುದ್ರಣದ ಕರಪತ್ರ ಹಂಚಿ ಕಾಂಗ್ರೆಸ್ ಬೆಂಬಲಿಸಿ ಯಾರಬ್ ಪ್ರಚಾರ ಮಾಡುತ್ತಿದ್ದಾರೆ. ಬೆಂಬಲಿಗನನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಾಡಿ, ತಮ್ಮ ವಿರುದ್ದ ಷಡ್ಯಂತ್ರ ರೂಪಿಸಲಾಗಿದೆ. ಪಾಕಿಸ್ತಾನ ಧ್ವಜವುಳ್ಳ ಕರಪತ್ರ ಹಂಚುವ ಮೂಲಕ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗುತ್ತಿದ್ದಾರೆ ಎಂದು ಕುಸುಮಾ ದೂರಿನಲ್ಲಿ ತಿಳಿಸಿದ್ದಾರೆ.
ಕುಸುಮಾ FB ಪೋಸ್ಟ್
ಸಾರ್ವಜನಿಕರ ಗಮನಕ್ಕೆ,
ಪಕ್ಷೇತರ ಅಭ್ಯರ್ಥಿಯಾದ ಆರಿಫ್ ಪಾಷಾ ಅಲಿಯಾಸ್ ಯಾರಬ್ ಎಂಬವರು ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೊತೆಗೂಡಿ ಪಾಕಿಸ್ತಾನದ ಹೆಸರಿನಲ್ಲಿ ನಕಲಿಯಾಗಿ ನನಗೆ ಬೆಂಬಲ ಸೂಚಿಸುವುದಾಗಿ ಘೋಷಣೆ ಮಾಡುವ ಷಡ್ಯಂತ್ರ ರೂಪಿಸಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ.
ಕ್ಷೇತ್ರದಲ್ಲಿ ಪದೇ ಪದೇ ಶಾಂತಿ-ಸುವ್ಯವಸ್ಥೆಯನ್ನು ಕದಡಿ ಕೋಮುಗಲಭೆ ಸೃಷ್ಟಿಸಲೆತ್ನಿಸುತ್ತಿರುವ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಛೇಲಾಗಳ ವಿರುದ್ಧ ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆಗೆ ನಾಳೆ ದೂರು ಸಲ್ಲಿಸುತ್ತಿದ್ದೇನೆ.
ಸಿನಿಮಾ ಶೈಲಿಯಲ್ಲಿ ರಾಜಕಾರಣ ಮಾಡಲೆತ್ನಿಸುತ್ತಿರುವ ಬಿಜೆಪಿ ಅಭ್ಯರ್ಥಿಯು ಚುನಾವಣಾ ಸಮಯದಲ್ಲಿ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿ ಮತದಾರರ ಕಣ್ಣಿಗೆ ಮಣ್ಣೆರಚುವುದೂ ಅಲ್ಲದೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲೆತ್ನಿಸುತ್ತಿರುವ ಹೇಯ ಕೃತ್ಯದ ಬಗ್ಗೆ ಮತದಾರರ ಗಮನಕ್ಕೆ ತರಲು ಬಯಸುತ್ತೇನೆ ಎಂದು ಬರೆದುಕೊಂಡಿರುವ ಕುಸುಮಾ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ