HOME » NEWS » State » RR NAGAR BYPOLLS TULASI MUNIRAJU GOWDA REACTION ON SUPREME COURT VERDICT ON RR NAGAR BY ELECTION SCT

ಆರ್​ಆರ್​ ನಗರ ಉಪಚುನಾವಣೆ; ಬಿಜೆಪಿ ಟಿಕೆಟ್ ವಿಚಾರದಲ್ಲಿ ಗೊಂದಲವಿಲ್ಲ ಎಂದ ತುಳಸಿ ಮುನಿರಾಜು ಗೌಡ

RR Nagar By-Election: ಸುಪ್ರೀಂ ಕೋರ್ಟ್ ತೀರ್ಪಿಗೆ ನಾವು ತಲೆಬಾಗಲೇಬೇಕು. ವರಿಷ್ಠರು ಏನು ಸೂಚನೆ ಕೊಡುತ್ತಾರೋ ಅದರಂತೆ ನಡೆಯುತ್ತೇನೆ. ನಾನು ಮತ್ತು ಮುನಿರತ್ನ ಈಗ ಒಂದೇ ಪಕ್ಷದಲ್ಲಿದ್ದೇವೆ. ನಮಗೆ ಬಿಜೆಪಿ ಪಕ್ಷ ಗೆಲ್ಲಬೇಕು ಎಂದು ತುಳಸಿ ಮುನಿರಾಜು ಗೌಡ ಹೇಳಿದ್ದಾರೆ.

news18-kannada
Updated:October 13, 2020, 2:11 PM IST
ಆರ್​ಆರ್​ ನಗರ ಉಪಚುನಾವಣೆ; ಬಿಜೆಪಿ ಟಿಕೆಟ್ ವಿಚಾರದಲ್ಲಿ ಗೊಂದಲವಿಲ್ಲ ಎಂದ ತುಳಸಿ ಮುನಿರಾಜು ಗೌಡ
ತುಳಸಿ ಮುನಿರಾಜು ಗೌಡ
  • Share this:
ಬೆಂಗಳೂರು (ಅ. 13): 2018ರಲ್ಲಿ ನಡೆದ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅಕ್ರಮ ಎಸಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಗೌಡ ಕೋರ್ಟ್​ ಮೆಟ್ಟಿಲೇರಿದ್ದರು. ತುಳಸಿ ಮುನಿರಾಜು ಗೌಡ ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್​ ಮರು ಚುನಾವಣೆ ನಡೆಸಲು ಸೂಚಿಸಿತ್ತು. ಅದಾದ ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ಇಂದು ಈ ಬಗ್ಗೆ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್​ ಹೈಕೋರ್ಟ್​ನ ತೀರ್ಪನ್ನು ಎತ್ತಿ ಹಿಡಿದಿದೆ. ತುಳಸಿ ಮುನಿರಾಜು ಗೌಡ ಅವರ ಅರ್ಜಿಯನ್ನು ತಿರಸ್ಕರಿಸಿ, ಆರ್​ಆರ್​ ನಗರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಲು ಅನುಮತಿ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತುಳಸಿ ಮುನಿರಾಜು ಗೌಡ, ಸುಪ್ರೀಂ ಕೋರ್ಟ್ ತೀರ್ಪಿಗೆ ನಾವು ತಲೆಬಾಗಲೇಬೇಕು. ವರಿಷ್ಠರು ಏನು ಸೂಚನೆ ಕೊಡುತ್ತಾರೋ ಅದರಂತೆ ನಡೆಯುತ್ತೇನೆ. ಮುಂದೆ ಏನು‌ ಮಾಡಬೇಕು ಎಂದು ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಈಗ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೇನೆ. ಚುನಾವಣೆಗೆ ಏನೇನು ಮಾಡಬೇಕು ಎಂದು ಅವರು ಹೇಳಿದ್ದಾರೆ. ವರಿಷ್ಠರು ಏನು ಹೇಳುತ್ತಾರೋ ನೋಡೋಣ. ಬಿಜೆಪಿ ಟಿಕೆಟ್ ವಿಚಾರದಲ್ಲಿ ಏನೂ ಗೊಂದಲ‌ ಇಲ್ಲ. ನಾಮಪತ್ರ ಸಲ್ಲಿಕೆಗೆ ಇನ್ನೂ ಮೂರು ದಿನ ಸಮಯ ಇದೆ. ಗೊಂದಲದ ಯಾವುದೇ ವಾತಾವರಣ ಇಲ್ಲ. ಪಕ್ಷದ ನಿರ್ಧಾರಕ್ಕೆ ನಾವೆಲ್ಲಾ ತಲೆ ಬಾಗಲೇಬೇಕು. ನಾನು ಮತ್ತು ಮುನಿರತ್ನ ಈಗ ಒಂದೇ ಪಕ್ಷದಲ್ಲಿದ್ದೇವೆ. ನಮಗೆ ಬಿಜೆಪಿ ಪಕ್ಷ ಗೆಲ್ಲಬೇಕು. ಅದಕ್ಕೆ ಏನು ಮಾಡಬೇಕೋ ಆ ಎಲ್ಲಾ ಕೆಲಸಗಳನ್ನು ನಾನು ಮಾಡುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ತಲೆ ಬಾಗುತ್ತೇನೆ ಎಂದಿದ್ದಾರೆ.

ಆರ್​ಆರ್​ ನಗರ ಉಪ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್​ ತೀರ್ಪು ಹೊರಬೀಳದ ಕಾರಣ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿದಿತ್ತು. ಇಂದು ಮುನಿರತ್ನ ಪರವಾಗಿ ತೀರ್ಪು ಪ್ರಕಟವಾಗಿರುವುದರಿಂದ ಬಿಜೆಪಿ ಸಂಸದೀಯ ಮಂಡಳಿ ಇಂದು ಸಂಜೆ ಟಿಕೆಟ್ ಘೋಷಣೆ ಮಾಡಲಿದೆ ಎನ್ನಲಾಗಿದೆ.

ಇದನ್ನೂ ಓದಿ: RR Nagar Bypolls: ಆರ್​ಆರ್​ ನಗರ ಉಪಚುನಾವಣೆಗೆ ಸುಪ್ರೀಂ ಕೋರ್ಟ್​ ಅನುಮತಿ; ಮುನಿರತ್ನಗೆ ಬಿಗ್ ರಿಲೀಫ್​

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಗಳಿಗೆ ನ. 3ರಂದು ಉಪಚುನಾವಣೆ ಘೋಷಿಸಲಾಗಿದೆ. ಆರ್​.ಆರ್ ನಗರದ ಅಭ್ಯರ್ಥಿಯಾಗಿ ಇತ್ತೀಚೆಗೆ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದ ಐಎಎಸ್​ ಅಧಿಕಾರಿ ದಿ. ಡಿ.ಕೆ. ರವಿ ಅವರ ಪತ್ನಿ ಕುಸುಮಾ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಮುನಿರತ್ನ ಸ್ಪರ್ಧಿಸುತ್ತಾರಾ? ಅಥವಾ ತುಳಸಿ ಮುನಿರಾಜು ಗೌಡ ಸ್ಪರ್ಧಿಸುತ್ತಾರಾ? ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

ಆರ್​ಆರ್​ ನಗರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರತ್ನ ಗೆಲುವು ಸಾಧಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಗೌಡ ಆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ಆಪರೇಷನ್ ಕಮಲಕ್ಕೆ ಒಳಗಾದ ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ, 2018ರ ಚುನಾವಣಾ ಅಕ್ರಮದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದ್ದುದರಿಂದ ಮುನಿರತ್ನ ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿರಲಿಲ್ಲ.
Youtube Video
ಆ ಅರ್ಜಿಯ ತೀರ್ಪನ್ನು ಇಂದು ನೀಡಿರುವ ಸುಪ್ರೀಂ ಕೋರ್ಟ್​ ಉಪಚುನಾವಣೆ ನಡೆಸಲು ಅನುಮತಿ ನೀಡಿದೆ. ಈ ಮೂಲಕ ತುಳಸಿ ಮುನಿರಾಜು ಗೌಡ ಅವರಿಗೆ ಸುಪ್ರೀಂ ಕೋರ್ಟ್​ನಲ್ಲೂ ಭಾರೀ ಹಿನ್ನಡೆಯಾಗಿದೆ. ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್​ ಆರ್​ಆರ್​ ನಗರ ಉಪಚುನಾವಣೆಗೆ ಅನುಮತಿ ನೀಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಕಾಂಗ್ರೆಸ್​ನಿಂದ ವಲಸೆ ಬಂದ ಶಾಸಕರ ಪೈಕಿ ಒಬ್ಬರಾಗಿರುವ ಮುನಿರತ್ನ ಅವರಿಗೆ ಆರ್​ಆರ್​ ನಗರ ಉಪಚುನಾವಣೆ ಟಿಕೆಟ್ ಸಿಗುವುದು ಖಚಿತ ಎನ್ನಲಾಗುತ್ತಿದೆ.
Published by: Sushma Chakre
First published: October 13, 2020, 2:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories