ಮುನಿರತ್ನ ಪರವಾಗಿ ಸುಪ್ರೀಂ ತೀರ್ಪು ಹಿನ್ನೆಲೆ; ಇಂದು ಸಂಜೆ ಆರ್​ಆರ್​ ನಗರ, ಶಿರಾ ಬಿಜೆಪಿ ಟಿಕೆಟ್ ಘೋಷಣೆ ಸಾಧ್ಯತೆ

Karnataka Assembly Bypolls: ಆರ್​ಆರ್​ ನಗರ ಉಪ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್​ ತೀರ್ಪು ಹೊರಬೀಳದ ಕಾರಣ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿದಿತ್ತು. ಇಂದು ಮುನಿರತ್ನ ಪರವಾಗಿ ತೀರ್ಪು ಪ್ರಕಟವಾಗಿರುವುದರಿಂದ ಬಿಜೆಪಿ ಇಂದು ಸಂಜೆ ಟಿಕೆಟ್ ಘೋಷಣೆ ಮಾಡಲಿದೆ ಎನ್ನಲಾಗಿದೆ.

ಮುನಿರತ್ನ

ಮುನಿರತ್ನ

  • Share this:
ಬೆಂಗಳೂರು (ಅ. 13): ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯುತ್ತದೋ? ಇಲ್ಲವೋ? ಎಂಬ ಗೊಂದಲಕ್ಕೆ ಇಂದು ತೆರೆಬಿದ್ದಿದೆ. ಮುನಿರತ್ನ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಅವರ ವಿರುದ್ಧ ಬಿಜೆಪಿಯ ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್​ ಮರು ಚುನಾವಣೆ ನಡೆಸಲು ಸೂಚಿಸಿತ್ತು. ಅದಾದ ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ಇಂದು ಈ ಬಗ್ಗೆ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್​ ಹೈಕೋರ್ಟ್​ನ ತೀರ್ಪನ್ನು ಎತ್ತಿ ಹಿಡಿದಿದೆ. ತುಳಸಿ ಮುನಿರಾಜು ಗೌಡ ಅವರ ಅರ್ಜಿಯನ್ನು ತಿರಸ್ಕರಿಸಿ, ಆರ್​ಆರ್​ ನಗರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಹೈಕಮಾಂಡ್ ಆರ್​ಆರ್​ ನಗರ ಮತ್ತು ಶಿರಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುವ ಸಾಧ್ಯತೆಯಿದೆ. ಆರ್​ಆರ್​ ನಗರ ಉಪ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್​ ತೀರ್ಪು ಹೊರಬೀಳದ ಕಾರಣ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿದಿತ್ತು. ಇಂದು ಮುನಿರತ್ನ ಪರವಾಗಿ ತೀರ್ಪು ಪ್ರಕಟವಾಗಿರುವುದರಿಂದ ಬಿಜೆಪಿ ಸಂಸದೀಯ ಮಂಡಳಿ ಇಂದು ಸಂಜೆ ಟಿಕೆಟ್ ಘೋಷಣೆ ಮಾಡಲಿದೆ ಎನ್ನಲಾಗಿದೆ.

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಗಳಿಗೆ ನ. 3ರಂದು ಉಪಚುನಾವಣೆ ಘೋಷಿಸಲಾಗಿದೆ. ಆರ್​.ಆರ್ ನಗರದ ಅಭ್ಯರ್ಥಿಯಾಗಿ ಇತ್ತೀಚೆಗೆ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದ ಐಎಎಸ್​ ಅಧಿಕಾರಿ ದಿ. ಡಿ.ಕೆ. ರವಿ ಅವರ ಪತ್ನಿ ಕುಸುಮಾ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಮುನಿರತ್ನ ಸ್ಪರ್ಧಿಸುತ್ತಾರಾ? ಅಥವಾ ತುಳಸಿ ಮುನಿರಾಜು ಗೌಡ ಸ್ಪರ್ಧಿಸುತ್ತಾರಾ? ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಮುನಿರತ್ನ ಆರ್​ಆರ್​ ನಗರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ಇಂದು ಬೆಳಗ್ಗೆ ಕೂಡ ಬಿಜೆಪಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದ ಮುನಿರತ್ನ ಹಿರಿಯ ನಾಯಕರನ್ನು ಭೇಟಿಯಾಗಿದ್ದರು.

ಇದನ್ನೂ ಓದಿ: RR Nagar Bypolls: ಆರ್​ಆರ್​ ನಗರ ಉಪಚುನಾವಣೆಗೆ ಸುಪ್ರೀಂ ಕೋರ್ಟ್​ ಅನುಮತಿ; ಮುನಿರತ್ನಗೆ ಬಿಗ್ ರಿಲೀಫ್​

ಆರ್​ಆರ್​ ನಗರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರತ್ನ ಗೆಲುವು ಸಾಧಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಗೌಡ ಆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ಆಪರೇಷನ್ ಕಮಲಕ್ಕೆ ಒಳಗಾದ ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ, 2018ರ ಚುನಾವಣಾ ಅಕ್ರಮದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದ್ದುದರಿಂದ ಮುನಿರತ್ನ ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿರಲಿಲ್ಲ.

ಆ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿರುವ ಸುಪ್ರೀಂ ಕೋರ್ಟ್​ ಉಪಚುನಾವಣೆ ನಡೆಸಲು ಅನುಮತಿ ನೀಡಿದೆ. ಈ ಮೂಲಕ ತುಳಸಿ ಮುನಿರಾಜು ಗೌಡ ಅವರಿಗೆ ಸುಪ್ರೀಂ ಕೋರ್ಟ್​ನಲ್ಲೂ ಭಾರೀ ಹಿನ್ನಡೆಯಾಗಿದೆ. ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್​ ಆರ್​ಆರ್​ ನಗರ ಉಪಚುನಾವಣೆಗೆ ಅನುಮತಿ ನೀಡಿದೆ. ಈಗಾಗಲೇ ಮುನಿರತ್ನ ಅವರಿಗೆ ತಮ್ಮನ್ನು ಭೇಟಿಯಾಗಲು ಸೂಚಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಮುನಿರತ್ನ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಬಿಜೆಪಿ ಹೈಕಮಾಂಡ್​ನ ಅನುಮತಿ ಪಡೆದು ಅಭ್ಯರ್ಥಿಗಳ ಪಟ್ಟಿ ಘೋಷಿಸಲಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಕಾಂಗ್ರೆಸ್​ನಿಂದ ವಲಸೆ ಬಂದ ಶಾಸಕರ ಪೈಕಿ ಒಬ್ಬರಾಗಿರುವ ಮುನಿರತ್ನ ಅವರಿಗೆ ಆರ್​ಆರ್​ ನಗರ ಉಪಚುನಾವಣೆ ಟಿಕೆಟ್ ಸಿಗುವುದು ಖಚಿತ ಎನ್ನಲಾಗುತ್ತಿದೆ.
Published by:Sushma Chakre
First published: