ಬೆಂಗಳೂರು(ನವೆಂಬರ್. 10): ಆರ್.ಆರ್. ನಗರ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಿರುವ ಮುನಿರತ್ನ ಆರ್.ಆರ್.ನಗರ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 125734 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 67798 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಮುನಿರತ್ನ ಅವರು 57936 ಸಾವಿರ ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ. ಜೆಡಿಎಸ್ ಪಕ್ಷದ ವಿ ಕೃಷ್ಣಮೂರ್ತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮುನಿರತ್ನ ಭಾರೀ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಮತಎಣಿಕೆ ಕೇಂದ್ರದ ಹೊರಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುನಿರತ್ನ ಅಭಿಮಾನಿಗಳು ಗೆಲುವಿನ ಸಂಭ್ರಮಾಚರಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್‌ನ ಅಬ್ಬರದ ಪ್ರಚಾರ, ಆರೋಪ– ಪ್ರತ್ಯಾರೋಪ, ಜಾತಿ– ಕಣ್ಣೀರ ರಾಜಕಾರಣದ ಕಾರಣದಿಂದ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಭಾರೀ ಕುತೂಹಲ ಕೆರಳಿಸಿತ್ತು.
ಇದನ್ನೂ ಓದಿ : RR Nagar By-Election 2020 Result: ಸೋತರು ಕ್ಷೇತ್ರದಲ್ಲಿ ನೊಂದವರ ದನಿಯಾಗಿ ಕೆಲಸ ಮುಂದುವರೆಸುತ್ತೇನೆ; ಕಾಂಗ್ರೆಸ್ ಅಭ್ಯರ್ಥಿ ಕುಸುಮಾ
ಅಲ್ಲದೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ನಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಮತದಾರ ಬಿಜೆಪಿ ‘ಕೈ ಹಿಡಿದಿರುವುದು ಬಹುತೇಕ ಸ್ಪಷ್ಟವಾಗಿದೆ
ಶಿರಾ ಹಾಗೂ ಆರ್ಆರ್ನಗರ ಎರಡು ಕ್ಷೇತ್ರದಲ್ಲಿಯೂ ಬಿಜೆಪಿ ಜಯಭೇರಿ ಭಾರಿಸಿದೆ. ಈ ಸಂಭ್ರಮವನ್ನು ಸಿಎಂ ಬಿಎಸ್ ಯಡಿಯೂರಪ್ಪ ಸಿಹಿ ತಿನ್ನುವ ಮೂಲಕ ಆಚರಿಸಿದ್ದಾರೆ. ಸಚಿವರಾದ ಬಿ ಶ್ರೀರಾಮುಲು, ಆರ್ ಅಶೋಕ್, ಬಸವರಾಜ್ ಬೊಮ್ಮಾಯಿ ಮತ್ತಿತ್ತರ ನಾಯಕರು ಸಿಎಂ ನಿವಾಸಕ್ಕೆ ಆಗಮಿಸಿ ಸಂಭ್ರಮ ಆಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ