ಬೆಂಗಳೂರು (ನವೆಂಬರ್ 10); ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಆರ್ಆರ್ ನಗರ ಉಪ ಚುನಾವಣೆ ಮುಕ್ತಾಯವಾಗಿದ್ದು ಇಂದು ಮತ ಎಣಿಕೆ ಆರಂಭವಾಗಿದೆ. ಆರ್ಆರ್ ನಗರ ಕ್ಷೇತ್ರ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಮೂರೂ ಪಕ್ಷಗಳಿಗೆ ಗೆಲ್ಲಲೇಬೇಕಾದ ಪ್ರತಿಷ್ಠೆಯ ಕಣವಾಗಿರುವ ಕಾರಣ ಮತ ಎಣಿಕೆ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಅಲ್ಲದೆ, ಚುನಾವಣೆಯಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಕೊರೋನಾ ಮಾರ್ಗಸೂಚಿ ಅನ್ವಯ ಸಂಭ್ರಮಾಚರಣೆಯನ್ನೂ ನಡೆಸುವಂತಿಲ್ಲ ಎಂದು ತಾಕೀತು ಮಾಡಲಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ನಡೆಯಬಹುದಾದ ಯಾವುದೇ ಅಹಿತಕರ ಘಟನೆಯನ್ನು ತಡೆಯುವ ಸಲುವಾಗಿ ಮತ ಎಣಿಕೆ ನಡೆಯಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆ ಸುತ್ತ ಓರ್ವ ಡಿಸಿಪಿ, 4 ಎಸಿಪಿ, 20 ಇನ್ಸ್‌ಪೆಕ್ಟರ್, 48 ಪಿಎಸ್ಐ ಸೇರಿ 592 ಸಿಬ್ಬಂದಿ ನಿಯೋಜಿಸಲಾಗಿದೆ. 1 ಸಿಎಪಿಎಫ್ ತುಕಡಿ, 9 ಕೆಎಸ್ಆರ್ ಪಿ, 9 ಸಿಎಆರ್ ತುಕಡಿಯನ್ನೂ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಅದೇರೀತಿ ಇಡೀ ಕ್ಷೇತ್ರದೆಲ್ಲೆಡೆ ಖಾಕಿ ಕಣ್ಗಾವಲನ್ನು ಚುರುಕುಗೊಳಿಸಲಾಗಿದೆ ಎನ್ನಲಾಗುತ್ತಿದೆ.
ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಎಲ್ಲೆಡೆ ಪೊಲೀಸರ ನಿಯೋಜನೆ ಮಾಡಲಾಗಿದೆ. ಇಬ್ಬರು ಡಿಸಿಪಿ, 4 ಜನ ಎಸಿಪಿ, 21 ಇನ್ಸ್‌ಪೆಕ್ಟರ್, 57 ಪಿಎಸ್ಐ ಸೇರಿ 899 ಸಿಬ್ಬಂದಿಯಿಂದ ಕ್ಷೇತ್ರದಲ್ಲಿ ಬಂದೋಬಸ್ತ್ಗೆ ನೇಮಕ ಮಾಡಲಾಗಿದೆ. 9 ಕೆಎಸ್ಆರ್ ಪಿ ತುಕಡಿ, 9 ಸಿಎಆರ್ ತುಕಡಿಗಳು ಹಾಗೂ 104 ಚೀತಾ, 60 ಹೊಯ್ಸಳ ವಾಹನಗಳ ಗಸ್ತು ತಿರುಗಲಿವೆ.
ಚುನಾವಣೆ ಫಲಿತಾಂಶದಿಂದ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆರ್ ಆರ್ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ನೆ ಜಾರಿಗೊಳಿಸಲಾಗಿದೆ ಹಾಗೂ ಬೆಳಗ್ಗೆ 6 ರಿಂದ ರಾತ್ರಿ 12 ರವರೆಗೆ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ