ಬೆಂಗಳೂರು (ನ.9): ನಾಳೆ ರಾಜರಾಜೇಶ್ವರಿನಗರ ಮತ್ತು ಶಿರಾ ಉಪಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎಂಬುದು ಮಧ್ಯಾಹ್ನದ ವೇಳೆಗೆ ಖಚಿತವಾಗಲಿದೆ. ಕೋವಿಡ್ ಹಿನ್ನಲೆ ಮತಎಣಿಕೆಗೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಈ ಕುರಿತು ಬಿಬಿಎಂಪಿ ಆಯುಕ್ತ ಮತ್ತು ಚುನಾವಣಾಧಿಕಾರಿ ಮಂಜುನಾಥ ಪ್ರಸಾದ ಮತ್ತು ಮತ ಎಣಿಕೆ ಆಯುಕ್ತ ಹಾಗೂ ನಗರ ಪೊಲೀಸ್ ಆಯುಕ್ತ ಕಮಲಪಂಥ್ ಪತ್ರಿಕಾಗೋಷ್ಠಿ ನಡೆಸಿದರು. ಕ್ಷೇತ್ರದ ಹಲಗೇವಡೇರಹಳ್ಳಿಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ಕ್ರಿಯೆ ನಡೆಲಿದೆ. ಕೋವಿಡ್ ನಿಯಮಗಳನ್ನ ಪಾಲನೆ ಮಾಡಲು ಸೂಚನೆ ನೀಡಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಬರುವವರಿಗೆ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ನಾಳೆ ಬೆಳಗ್ಗೆ 8ಕ್ಕೆ ಮತ ಏಣಿಕೆ ಆರಂಭವಾಗಲಿದ್ದು,ಬೆಳಗ್ಗೆ 7:45ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗುವುದು. 8:30ಕ್ಕೆ ಇತರೆ ಮತ ಎಣಿಕೆ ನಡೆಸಲಾಗುವುದು. ಮಧ್ಯಾಹ್ನ 12.30ರಿಂದ 1 ಗಂಟೆಗೆ ಎಣಿಕೆ ಮುಗಿಯಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
ಮತ ಎಣಿಕೆ ವೇಳೇ 1 ಟೇಬಲ್ಗೆ ಮೂರು ಜನ ಸಿಬ್ಬಂದಿ ಈ ಕ್ರಿಯೆ ನಡೆಸಲಿದ್ದಾರೆ. ಒಟ್ಟು ನಾಲ್ಕು ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಇದಕ್ಕಾಗಿ ಒಟ್ಟು 28 ಟೇಬಲ್ಹಾಕಲಾಗಿದೆ. ಮತ ಎಣಿಕೆ ಮೇಲುಸ್ತುವಾರಿಗಾಗಿ ಓರ್ವ ಕೆಎಎಸ್ ಅಧಿಕಾರಿ ನೇಮಿಸಲಾಗಿದೆ. ಒಟ್ಟು 250 ಸಿಬ್ಬಂದಿ ಮತ ಎಣಿಕೆಯಲ್ಲಿ ಭಾಗಿಯಾಗಲಿದ್ದಾರೆ. ಆರ್ಆರ್ನಗರದಲ್ಲಿ ಈ ಬಾರಿ ಶೇ 54.48ರಷ್ಟು ಮತದಾನವಾಗಿದೆ ಎಂದು ತಿಳಿಸಿದರು.
ನಾಲ್ಕು ಹಂತದ ಭದ್ರತೆ:
ಮತ ಎಣಿಕೆ ಪ್ರಕ್ರಿಯೆ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ನಾಳೆ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 12ಗಂಟೆವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣೆಕೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ಶಾಂತಿಯುತ ಮತದಾನ ನಡೆಸಲು ನಾಲ್ಕು ಹಂತದಲ್ಲಿ ಭದ್ರತೆ ನಡೆಸಲಾಗಿದೆ.
ಇದನ್ನು ಓದಿ: ಮದುವೆಗೆ ಹೆಚ್ಚು ಜನ ಸೇರಿಸಿದ್ರೆ ಕಲ್ಯಾಣ ಮಂಟಪ ಮಾಲೀಕರ ಮೇಲೆಯೇ ಕ್ರಿಮಿನಲ್ ಕೇಸ್ : ಪೊಲೀಸರ ಕ್ರಮ
ನೂರು ಮೀಟರ್ ವ್ಯಾಪ್ತಿಯಲ್ಲಿ ಪ್ರತಿಬಂಧನೆ ಇರುತ್ತದೆ. ಮತ ಎಣಿಕೆಗೆ ಬರುವವ ಮುನ್ನ ತಪಾಸಣೆ ನಡೆಯಲಿದೆ. ಎರಡು ಗೇಟ್ನಲ್ಲಿ ಪಾಸ್ ನೋಡಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಎಣಿಕೆ ನಡೆಯುವ ಕೊಠಡಿ ಮತ್ತು ಹೊರಗು ಎರಡು ಕಡೆ ಭದ್ರತೆ ಇರಲಿದೆ, ನಾಲ್ಕು ಎಸಿಪಿಗಳ ಉಸ್ತುವಾರಿಯಲ್ಲಿ ಭದ್ರತೆ ಇರಲಿದೆ. ಅಲ್ಲದೇ ಈ ಕ್ಷೇತ್ರದಲ್ಲಿ ನಾಳೆ ಮದ್ಯ ಮಾರಾಟ ಕೂಡ ನಡೆಯುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ಪಂಥ್ ತಿಳಿಸಿದರು.
ಸಂಭ್ರಮಾಚಾರಣೆಗೆ ಇಲ್ಲ ಅವಕಾಶ:
ಮತ ಎಣಿಕೆ ಬಳಿಕೆ ಗೆದ್ದ ಅಭ್ಯರ್ಥಿಗಳ ಪರ ಮತಗಟ್ಟೆ ಸಮೀಪ ಯಾವುದೇ ಸಂಭ್ರಮಾಚರಣೆ ಹಾಗೂ ಪಟಾಕಿ ಸಿಡಿಸಲು ಅವಕಾಶ ಇಲ್ಲ. ಮತ ಎಣಿಕೆ ಕೇಂದ್ರದ ಮುಂದಿನ ರಸ್ತೆಯಲ್ಲಿ ಸಂಚಾರ ನಿಷೇಧ ಮಾಡಲಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಪಟಾಕಿ ನಿಷೇಧವಿದ್ದು, ಪಟಾಕಿ ಹೊಡೆದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ