ಕಾಂಗ್ರೆಸ್ ತೊರೆದ ಮೇಲೆ ಮುನಿರತ್ನ ಅವರ ಕೆಂಪು ರಕ್ತ ಕೇಸರಿಯಾಗಿದೆ; ಸಂಸದ ಡಿಕೆ ಸುರೇಶ್ ವ್ಯಂಗ್ಯ
ನನ್ನ ತಾಯಿ ಕಾಂಗ್ರೆಸ್, ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ಕಾಂಗ್ರೆಸ್ ಅಂದಿದ್ದವರು ಮುನಿರತ್ನ. ಈಗ ಅವರ ರಕ್ತ ಬದಲಾಗಿದೆ. ಕೆಂಪಗಿದ್ದ ಅವರ ರಕ್ತ ಈಗ ಕೇಸರಿಯಾಗಿದೆ ಎಂದು ಸಂಸದ ಡಿಕೆ ಸುರೇಶ್ ಟೀಕಿಸಿದ್ದಾರೆ.
ಬೆಂಗಳೂರು (ಅ. 28): ನನ್ನ ಬಗ್ಗೆ ಕಾಂಗ್ರೆಸ್ ನಾಯಕರು ಏನು ಬೇಕಾದರೂ ಹೇಳಲಿ. ಆದರೆ, ತೀರಿಹೋಗಿರುವ ನನ್ನ ತಾಯಿಯ ಬಗ್ಗೆ ಮಾತನಾಡಿದ್ದು ಎಷ್ಟು ಸರಿ? ಎಂದು ಇಂದು ಆರ್ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ನಿರ್ಮಾಪಕರಿಗೆ ಕಣ್ಣೀರು ಹಾಕೋದು, ಹಾಕಿಸುವುದು ಚೆನ್ನಾಗಿ ಗೊತ್ತಿರುತ್ತದೆ. ಯಾವ ಸಮಯದಲ್ಲಿ ಯಾವ್ಯಾವ ಸೀನ್ ಇರಬೇಕು, ಯಾವಾಗ ಕಟ್ ಮಾಡಬೇಕು, ಯಾವಾಗ ಜೋಡಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಮುನಿರತ್ನ ಅವರಿಗೆ ಅದರಲ್ಲಿ ಸಾಕಷ್ಟು ಅನುಭವ ಇದೆ. ಸುಮ್ಮನೆ ಪ್ರಚಾರಕ್ಕಾಗಿ ಡ್ರಾಮಾ ಶುರು ಮಾಡಿದ್ದಾರೆ. ಕೆಂಪಗಿದ್ದ ಅವರ ರಕ್ತ ಈಗ ಕೇಸರಿಯಾಗಿದೆ ಎಂದು ಟೀಕಿಸಿದ್ದಾರೆ.
ನನ್ನ ತಾಯಿ ಕಾಂಗ್ರೆಸ್, ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ಕಾಂಗ್ರೆಸ್ ಅಂದಿದ್ದವರು ಮುನಿರತ್ನ. ಅದೆಲ್ಲ ಅವರಿಗೆ ಈಗ ಮರೆತು ಹೋಗಿರಬಹುದು. ಆದರೆ, ಆರ್ಆರ್ ನಗರ ಕ್ಷೇತ್ರದ ಜನರು ಅದನ್ನು ಮರೆತಿಲ್ಲ. ಕಟ್, ಪೇಸ್ಟ್ ಮಾಡೋದು ಅವರ ಅಭ್ಯಾಸ. ಹೀಗಾಗಿ, ಮರೆತು ಹೋಗಿರುತ್ತಾರೆ. ಅವರಿಗೆ ಯಾವಾಗ ಯಾರನ್ನು ಅಳಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಅಂಥವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಡಿಕೆ ಸುರೇಶ್ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷವೇ ನನ್ನ ತಾಯಿ ಎಂದು ಮುನಿರತ್ನ ಹೇಳಿದ್ದರು. ಈಗ ಅವರ ರಕ್ತ ಬದಲಾಗಿದೆ, ಕೆಂಪು ಬಣ್ಣದ ಬದಲು ಕೇಸರಿ ರಕ್ತ ಆಗಿದೆ. ನಾವು ರಾಜಕೀಯವಾಗಿ ಮಾತ್ರ ಮಾತನಾಡುತ್ತೇವೆಯೇ ಹೊರತು ವೈಯಕ್ತಿಕ ನಿಂದನೆ ಮಾಡಲ್ಲ, ನಮಗೂ ಜವಾಬ್ದಾರಿ ಇದೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನ. 3ರಂದು ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಕೂಡ ನ. 3ರಂದು ಉಪಚುನಾವಣೆ ಘೋಷಿಸಲಾಗಿದೆ. ಆರ್.ಆರ್ ನಗರದ ಅಭ್ಯರ್ಥಿಯಾಗಿ ಇತ್ತೀಚೆಗೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಐಎಎಸ್ ಅಧಿಕಾರಿ ದಿ. ಡಿ.ಕೆ. ರವಿ ಅವರ ಪತ್ನಿ ಕುಸುಮಾ ಸ್ಪರ್ಧಿಸಲಿದ್ದಾರೆ. ಆರ್ಆರ್ ನಗರ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಕಣಕ್ಕಿಳಿಯಲಿದ್ದಾರೆ. ಆರ್ಆರ್ ನಗರ ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಸ್ಪರ್ಧಿಸಲಿದ್ದಾರೆ.
ಶಿರಾ ಕ್ಷೇತ್ರದಿಂದ ಸತ್ಯನಾರಾಯಣ ಅವರ ಹೆಂಡತಿ ಅಮ್ಮಾಜಮ್ಮ ಅವರನ್ನು ಜೆಡಿಎಸ್ ಕಣಕ್ಕಿಳಿಸಲಿದೆ. ಶಿರಾ ಬಿಜೆಪಿ ಅಭ್ಯರ್ಥಿಯಾಗಿ ಡಾ. ರಾಜೇಶ್ ಗೌಡ ಸ್ಪರ್ಧಿಸಲಿದ್ದಾರೆ. ಶಿರಾದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಬಿ ಜಯಚಂದ್ರ ಸ್ಪರ್ಧಿಸಲಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ