ಮೈಸೂರು: ಹಾಡಹಗಲೇ ರೌಡಿಶೀಟರ್ (Rowdy Sheeter) ಹತ್ಯೆ ನಡೆದಿದ್ದು, ಮೈಸೂರಿನ (Mysuru) ಜನತೆ ಬೆಚ್ಚಿಬಿದ್ದಿದ್ದಾರೆ. ಚಂದ್ರಶೇಖರ್ ಆಲಿಯಾಸ್ ಚಂದು ಕೊಲೆಯಾದ ರೌಡಿಶೀಟರ್. ಕೊಲೆ ಮಾಡುವ ದೃಶ್ಯಗಳು ಸಿಸಿಟಿವಿ ದೃಶ್ಯದಲ್ಲಿ (CCTV Footage) ಸೆರೆಯಾಗಿವೆ. ಕೇವಲ ಐದು ಸೆಕೆಂಡ್ನಲ್ಲಿಯೇ ಹತ್ಯೆ ನಡೆಸಿದ ಹಂತಕರು, ಮಾರಕಾಸ್ತ್ರ ಹಿಡಿದು ರಸ್ತೆಯಲ್ಲಿ ತಿರುಗಾಡಿದ್ದಾರೆ. ಕೊಲೆಯಾದ ರೌಡಿಶೀಟರ್ ಚಂದ್ರಶೇಖರ್, ಮಾಜಿ ನಗರಪಾಲಿಕೆ ಸದಸ್ಯ ಅವ್ವ ಮಾದೇಶ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದನು. ಹುಣಸೂರು ಜೋಡಿ ಕೊಲೆ (Hunasuru Double Murder) ಹಾಗೂ ಪಡುವಾರಹಳ್ಳಿಯ ದೇವು ಕೊಲೆ ಪ್ರಕರಣದಲ್ಲಿ ಚಂದ್ರಶೇಖರ್ ಆರೋಪಿಯಾಗಿದ್ದನು. ದೇವು ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ. ಕೊಲೆಯ ಬಳಿಕ ಎಂಟು ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಟೈಲ್ಸ್ ಅಂಗಡಿ ಮಾಲೀಕನ ಭೀಕರ ಹತ್ಯೆ.
ತುಮಕೂರು ಹೊರಹೊಲಯದಲ್ಲಿರುವ ಯಲ್ಲಾಪುರದಲ್ಲಿ ಟೈಲ್ಸ್ ಅಂಗಡಿ ಮಾಲೀಕನ ಹತ್ಯೆ ನಡೆದಿದೆ. ಚಿಕ್ಕಮಗಳೂರು ಮೂಲದ ಜಾಕೀರ್ ಇಸ್ಮಾಯಿಲ್ (36) ಕೊಲೆಯಾದ ವ್ಯಕ್ತಿ. ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.
ಕೊಲೆಯಾದ ಜಾಕೀರ್ ಇಬ್ಬರು ಮಕ್ಕಳೊಂದಿಗೆ ಯಲ್ಲಾಪುರದ ಗಣೇಶ ದೇವಸ್ಥಾನದ ಬಳಿ ವಾಸವಾಗಿದ್ದರು. ಎರಡು ತಿಂಗಳ ಹಿಂದೆ ಯಲ್ಲಾಪುರದಲ್ಲಿ ನೂತನ ಟೈಲ್ಸ್‌ನ ಅಂಗಡಿ ಆರಂಭಿಸಿದ್ದರು.
ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಜಾಕೀರ್ ಸಹಾಯಕ ಖಾದರ್ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಜಾಕೀರ್ ಶವವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.
ಮಂಡ್ಯ : ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು
ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರದ ಗ್ರಾಮದ ರಾಜು ಮೃತ ವ್ಯಕ್ತಿ.
ಮಾವಿನಕಾಯಿ ಕೀಳಲು ರಾಜು ಮರ ಏರಿದ್ದರು. ಈ ವೇಳೆ ವಿದ್ಯುತ್ ತಗುಲಿದ್ದರಿಂದ ರಾಜು ಮೃತರಾಗಿದ್ದಾರೆ. ಘಟನಾ ಸ್ಥಳಕ್ಕೆ ಸೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿದ್ದಾರೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ
ಸುರೇಶ್ ಬಾಬು ಅಲಿಯಾಸ್ ಅಲ್ಯೂಮಿನಿಯಂ ಬಾಬು ಶವ ತಮಿಳುನಾಡಿನ ಕೃಷ್ಣಗಿರಿಯ ಡೆಂಕಣಿಕೋಟೆ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಲ್ಯೂಮಿನಿಯಂ ಬಾಬು ಬೆಂಗಳೂರಿನ ಜಯನಗರ ಠಾಣೆ ರೌಡಿಶೀಟರ್ ಆಗಿದ್ದನು.
ಇದನ್ನೂ ಓದಿ: Crime News: ಪ್ರಿಯತಮೆಯನ್ನು ತಬ್ಬಿ ಶೂಟ್ ಮಾಡಿದ ವಿದ್ಯಾರ್ಥಿ! ಆತ ಕೊಂದಿದ್ದು ಆಕೆಯನ್ನಲ್ಲ, ನಂಬಿಕೆಯನ್ನು!
ಕೊಲೆ, ಸುಲಿಗೆ, ಬೆದರಿಕೆ, ದರೋಡೆಯಂತ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಬು ತಮಿಳುನಾಡು ಭಾಗದಲ್ಲಿ ವಾಸವಾಗಿದ್ದನು. ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ