ರೌಡಿ ಶೀಟರ್ ಸೈಲೆಂಟ್ ಸುನೀಲ್ (Silent Sunil) ಬಿಜೆಪಿ (BJP) ಸೇರಲು ದೊಡ್ದ ಕಾರ್ಯಕ್ರಮ ಆಯೋಜನೆ ಮಾಡಿ ಸುಳಿವು ನೀಡಿದ್ದನು. ರೌಡಿಶೀಟರ್ ಆಯೋಜನೆಯ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರು (BJP MPs And MLAs) ಭಾಗಿಯಾಗಿದ್ದರು. ಇತ್ತ ವೈಯಾಲಿಕಾವಲ್ ರೌಡಿಶೀಟರ್ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ (Fighter Ravi) ಕೂಡ ಕಮಲ ಹಿಡಿದಿದ್ದಾನೆ. ಈತ ಕ್ರಿಕೆಟ್ ಬುಕ್ಕಿಯಾಗಿದ್ದು ಅನೇಕ ಕಾನೂನು ಬಾಹಿರ ಚಟುವಟಕೆಯಲ್ಲಿ (Illegal Activity) ಭಾಗಿಯಾಗಿದ್ದಾನೆ. ಸೈಲೆಂಟ್ ಸುನೀಲ್, ಫೈಟರ್ ರವಿ ಬೆನ್ನಲ್ಲೇ ನಟೋರಿಯಸ್ ರೌಡಿ ಬೆತ್ತನಗೆರೆ ಶಂಕರ (Rowdy Bettanagere Shanakar) ರಾಜಕೀಯದತ್ತ ಮುಖ ಮಾಡಿದ್ದಾನೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ (HD Kote, Mysuru) ಕ್ಷೇತ್ರದಲ್ಲಿರುವ ಶಂಕರ ಬಿಜೆಪಿ ನಾಯಕರ (BJP Leaders) ಜೊತೆ ಗುರುತಿಸಿಕೊಳ್ಳುತ್ತಿದ್ದಾನೆ. ಬಿಜೆಪಿ ಮೂಲಕ ರಾಜಕೀಯ ಜೀವನ ಆರಂಭಿಸಲು ಶಂಕರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ.
ಮೂಲತಃ ನೆಲಮಂಗಲದವನಾದ ಶಂಕರ, ಸದ್ಯ ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಸಕ್ರಿಯನಾಗಿದ್ದಾನೆ. ಸದ್ಯ ಹೆಚ್.ಡಿ ಕೋಟೆಯ ಸರಗೂರು ತಾಲೂಕಿನಲ್ಲಿ ವಾಸ್ತವ್ಯ ಹೂಡಿರುವ ಶಂಕರ, ಕ್ಷೇತ್ರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ.
ಸರಗೂರು ತಾಲೂಕಿನಲ್ಲಿ 15 ಎಕರೆ ಜಮೀನು ಖರೀದಿ
ಸರಗೂರು ತಾಲೂಕಿನ ನಲ್ಲೂರಿನಲ್ಲಿ 15 ಎಕರೆ ಜಮೀನು ಖರೀದಿ ಮಾಡಿರೋ ಶಂಕರ ಅಲ್ಲೇ ವ್ಯವಸಾಯ ಮಾಡಿಕೊಂಡಿದ್ದಾನೆ. ವ್ಯವಸಾಯದ ಜೊತೆ ಸರಗೂರು ಪರಿಸರದಲ್ಲಿ ಸಮಾಜಸೇವೆಯಲ್ಲಿಯೂ ಶಂಕರ ತೊಡಗಿಕೊಂಡಿದ್ದಾನೆ.
2028ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣು
ಸಮಾಜ ಸೇವೆ ಜೊತೆ ಜೊತೆಯಲ್ಲೆ ರಾಜಕೀಯಕ್ಕೂ ಎಂಟ್ರಿ ಕೊಡಲು ತಯಾರಿ ನಡೆಸಿರುವ ಶಂಕರ, ಬಿಜೆಪಿಯತ್ತ ಒಲವು ತೋರಿದ್ದಾನೆ. 2028ರಲ್ಲಿ ಡಿ ಲಿಮಿಟೇಷನ್ ಆದರೆ ಸರಗೂರು ತಾಲೂಕು ಹೊಸ ಕ್ಷೇತ್ರವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಅಂತರಸಂತೆ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದಾನೆ.
ಜಿಲ್ಲಾ ಪಂಚಾಯ್ತಿ ಮೂಲಕ ರಾಜಕೀಯ ಆರಂಭಿಸಲು ಮುಂದಾಗಿರುವ ಶಂಕರ, 2028ರಲ್ಲಿ ಸರಗೂರು ವಿಧಾನಸಭಾ ಕ್ಷೇತ್ರವಾದ್ರೆ ಅಲ್ಲಿಯ ಪ್ರಬಲ ನಾಯಕನಾಗಿ ಗುರುತಿಸಿಕೊಳ್ಳಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ.
ಇದನ್ನೂ ಓದಿ: Silent Sunil: ಸೈಲೆಂಟ್ ಸುನೀಲ್ನನ್ನ ವಶಕ್ಕೆ ಪಡೆಯಲು ಸಿಸಿಬಿ ಸೂಚನೆ; ರೌಡಿಗೆ ಪೊಲೀಸರು ಎಸ್ಕಾರ್ಟ್ ನೀಡಿದ್ರಾ?
ಬಿಜೆಪಿ ನಾಯಕರ ಜೊತೆ ಕ್ಷೇತ್ರ ಸುತ್ತಾಟ
ಸದ್ಯ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಇಡೀ ಕ್ಷೇತ್ರ ಸುತ್ತುತ್ತಿರುವ ಶಂಕರ, ಅಲ್ಲಿಯೇ ಸೆಟಲ್ ಆಗಲು ತೀರ್ಮಾನಿಸಿದ್ದಾನೆ ಎಂದು ತಿಳಿದು ಬಂದಿದೆ. ಸರಗೂರಿನಲ್ಲಿ ಜಮೀನು ಖರೀದಿ ಮಾಡಿರುವ ದಾಖಲೆಗಳು ನ್ಯೂಸ್ 18ಗೆ ಲಭ್ಯವಾಗಿವೆ. ರಾಜಕೀಯ ಎಂಟ್ರಿ ಹಿನ್ನೆಲೆ ಬಿಜೆಪಿ ಘಟಾನುಘಟಿ ನಾಯಕರ ಸಖ್ಯ ಬೆಳೆಸುತ್ತಿದ್ದಾನೆ. ರಾಜಕೀಯ ನಾಯಕರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು, ತಾನೋರ್ವ ಬಿಜೆಪಿ ಮುಖಂಡ ಎಂದು ಮುದ್ರಿಸಿರುವ ಬ್ಯಾನರ್ಗಳು ಸಹ ನ್ಯೂಸ್ 18ಗೆ ಲಭ್ಯವಾಗಿವೆ.
ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿ
ಬಿಜೆಪಿ ಪಕ್ಷಕ್ಕೆ ರೌಡಿಶೀಟರ್ಗಳ ಸೇರ್ಪಡೆ ಹಾಗೂ ಚಾಮರಾಜಪೇಟೆಯಲ್ಲಿ (Chamarajapete) ಸೈಲೆಂಟ್ ಸುನೀಲ್ ಸ್ಫರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ (Government) ವಿರುದ್ಧ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.
ಇದನ್ನೂ ಓದಿ: Silent Sunil and Fighter Ravi: ಸೈಲೆಂಟ್ ಆಗಿಯೇ ಸದ್ದು ಮಾಡುತ್ತಿರುವ ಸುನೀಲ ಯಾರು? ಫೈಟರ್ ರವಿ ಇತಿಹಾಸ ನಿಮಗೆ ಗೊತ್ತಾ?
ಕಳ್ಳರು, ಸುಳ್ಳರು, ಭ್ರಷ್ಟರು, ರೌಡಿಗಳು ಎಲ್ಲರಿಗೂ ಒಂದೇ ಸೂರು ಅಂದ್ರೆ ಅದು ಬಿಜೆಪಿ (BJP) ಎಂದು ಕಾಂಗ್ರೆಸ್ ಟ್ವೀಟ್ (Congress Tweet) ಮಾಡಿದೆ. ವಾಂಟೆಡ್ ಲಿಸ್ಟ್ನಲ್ಲಿರುವ ರೌಡಿ ಪೊಲೀಸರ ಕೈಗೆ ಸಿಗುವುದಿಲ್ಲ. ಆದರೆ ಬಿಜೆಪಿ ನಾಯಕರ ಜೊತೆಯಲ್ಲಿರುತ್ತಾನೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.
ಕಾಂಗ್ರೆಸ್ ಲೇವಡಿ
ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ ಅಥವಾ ನೀವೇ ಪೊಲೀಸರನ್ನು ಕಟ್ಟಿ ಹಾಕಿದ್ದೀರಾ? ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ ಈಗ ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ ಎಂದು ಬಿಜೆಪಿ ನಡೆಗೆ ಟ್ವೀಟ್ ಮೂಲಕವೇ ಕಾಂಗ್ರೆಸ್ ಲೇವಡಿ ಮಾಡಿದೆ.
ವರದಿ: ಚಿದಾನಂದ್ ಪಟೇಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ