ರೌಡಿ ಲಕ್ಷ್ಮಣ ಕೊಲೆ ಪ್ರಕರಣ: ಆರು ಆರೋಪಿಗಳ ಬಂಧನ, ಮಾ. 21ರವರೆಗೆ ಪೊಲೀಸ್​ ವಶಕ್ಕೆ

ಬೆಂಗಳೂರಿನ ಅತ್ಯಂತ ಸಿರಿವಂತ ರೌಡಿಗಳಲ್ಲೊಬ್ಬನೆನಿಸಿದ್ದ ಲಕ್ಷ್ಮಣನ ಕೊಲೆ ಪ್ರಕರಣ ಈಗ ಸಾಕಷ್ಟು ತಿರುವು ಪಡೆಯುತ್ತಿದೆ. ಕೊಲೆಗೆ ವಿವಿಧ ಆಯಾಮಗಳು ಸಿಕ್ಕಿದ್ದು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Latha CG | news18
Updated:March 12, 2019, 6:47 PM IST
ರೌಡಿ ಲಕ್ಷ್ಮಣ ಕೊಲೆ ಪ್ರಕರಣ: ಆರು ಆರೋಪಿಗಳ ಬಂಧನ, ಮಾ. 21ರವರೆಗೆ ಪೊಲೀಸ್​ ವಶಕ್ಕೆ
ರೌಡಿ ಲಕ್ಷ್ಮಣ
Latha CG | news18
Updated: March 12, 2019, 6:47 PM IST
ಬೆಂಗಳೂರು(ಮಾ. 12): ಸಿಲಿಕಾನ್​ ಸಿಟಿಯಲ್ಲಿ ಭಾರೀ ಕುತೂಹಲ ಕೆರಳಿಸಿರುವ ರೌಡಿ ಲಕ್ಷ್ಮಣ್​​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 6  ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಮದ್ದೂರಿನ ಜೆಡಿಎಸ್​​ ಘಟಕದ ನಾಯಕಿಯೊಬ್ಬರ ಮಗಳು ವರ್ಷಿಣಿ  ಹೆಸರು ಪ್ರಮುಖವಾಗಿದೆ. ಕ್ಯಾಟ್ ರಾಜ, ಹೇಮಂತ್, ರೂಪೇಶ್, ದೇವರಾಜ ಅಲಿಯಾಸ್ ಕರಿಯ ಮತ್ತು ವಿಜಿ ಎಂಬುವವರು ಇತರ ಬಂಧಿತ ಆರೋಪಿಗಳಾಗಿದ್ದಾರೆ.

ಮಾರ್ಚ್​​ 7 ರಂದು ಹಾಡಹಗಲೇ ರೌಡಿ ಲಕ್ಷ್ಮಣನ ಕೊಲೆಯಾಗಿತ್ತು. ಕೊಲೆಯಲ್ಲಿ ವರ್ಷಿಣಿ ಎಂಬ ಯುವತಿಯ ಕೈವಾಡವಿದೆ ಎನ್ನಲಾಗಿದೆ.

'ನನ್ನ ಪತಿ ಕೊಲೆ ಆಗುವ ಒಂದು ಗಂಟೆ ಮೊದಲು ವರ್ಷಿಣಿಯಿಂದ ವಾಟ್ಸ್‌ಆ್ಯಪ್‌ ಕರೆ ಬಂದಿತ್ತು. ನನ್ನ ಪತಿ ಕೊಲೆಗೆ ಆಕೆಯೇ ಕಾರಣ ಇರಬಹುದು' ಎಂದು ಲಕ್ಷ್ಮಣನ ಹೆಂಡತಿ ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧರಿಸಿ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿ ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಬಳಿಕ ಸಿಸಿಬಿ ಪೊಲೀಸರು ಮಂಗಳವಾರ ವರ್ಷಿಣಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ರೌಡಿಶೀಟರ್​ ಲಕ್ಷ್ಮಣ ಕೊಲೆ ಪ್ರಕರಣ; ಯುವತಿಯನ್ನು ಮುಂದಿಟ್ಟುಕೊಂಡು ಹತ್ಯೆಗೆ ಸಂಚು

ಲಕ್ಷ್ಮಣ್​​​ ಅಂದು ಮನೆಯಿಂದ ಹೊರಡುವ ಮೊದಲು ವರ್ಷಿಣಿಯಿಂದ ವಾಟ್ಸ್‌ಆ್ಯಪ್‌ ಕರೆ ಬಂದಿದ್ದು, ಅವರು ಅದನ್ನು ಅಲ್ಲಿ ಸ್ವೀಕರಿಸದೇ, ಮನೆಯಿಂದ ಕೆಳಕ್ಕೆ ಹೋಗಿ ಸ್ವೀಕರಿಸಿದ್ದರು. ಆಕೆ ಲಂಡನ್‌ನಲ್ಲಿ ಇದ್ದಾಳೆ ಎಂದು ಹೇಳಿದ್ದನ್ನು ನಾನು ನಂಬಿದ್ದೆ. ಆದರೆ, ಆಕೆ ಲಂಡನ್‌ಗೆ ಹೋಗೇ ಇಲ್ಲ. ಇಲ್ಲೇ ಎಲ್ಲೋ ಇದ್ದುಕೊಂಡು ನನ್ನ ಕುಟುಂಬವನ್ನು ಹಾಳು ಮಾಡಿಬಿಟ್ಟಳು. ಇದನ್ನೆಲ್ಲ ಕೊಲೆ ಆದ ದಿನವೇ ಪೊಲೀಸರಿಗೆ ಹೇಳಿದ್ದೆ. ನಮ್ಮನ್ನು 'ಅಕ್ಕ-ಅಂಕಲ್‌' ಎಂದು ಮಾತಾಡಿಸಿಕೊಂಡೇ ಎಲ್ಲವನ್ನೂ ಮುಗಿಸಿಬಿಟ್ಟಳು. ನಮ್ಮ ಮನೆಯಲ್ಲಿ ಅವಳ ವಿಷಯಕ್ಕೆ ಬಿಟ್ಟರೇ ಬೇರೆ ಯಾವುದೇ ಕಾರಣಕ್ಕೆ ಜಗಳವಾಗುತ್ತಿರಲಿಲ್ಲ'' ಎಂದು ಲಕ್ಷ್ಮಣ್‌ ಹೆಂಡತಿ ಚೈತ್ರಾ ಹೇಳಿದ್ದಾರೆ.

ಈ ವಿಡಿಯೋ ನೋಡಿ: ಕೊಲೆಯಾಗುವ ಮುನ್ನ ವರ್ಷಿಣಿ ಜೊತೆ ಲಕ್ಷ್ಮಣ ನಡೆಸಿದ ದೂರವಾಣಿ ಸಂಭಾಷಣೆಜೆಡಿಎಸ್‌ ಶಾಸಕ ಅನ್ನದಾನಿ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ವರ್ಷಿಣಿ ಪ್ರಿಯಕರ ರೂಪೇಶ ಬಂಧಿತನಾಗಿದ್ದ. ಕಳ್ಳತನಕ್ಕೆ ಅನ್ನದಾನಿ ಅವರ ಮನೆಯ ಕೀಯನ್ನು ವರ್ಷಿಣಿ ಮನೆಯಿಂದಲೇ ರೂಪೇಶ ಪಡೆದುಕೊಂಡಿದ್ದ. ಈ ಘಟನೆಯ ನಂತರ ರೂಪೇಶನನ್ನು 'ದಿ ಕ್ಲಬ್‌'ಗೆ ಕರೆಸಿಕೊಂಡ ಲಕ್ಷ್ಮಣ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದ. ಮತ್ತೆ ವರ್ಷಿಣಿ ಜತೆ ನಿನ್ನನ್ನು ನೋಡಿದರೆ ಹೆಣ ಬೀಳುತ್ತೆ ಎಂದೂ ಬೆದರಿಕೆ ಹಾಕಿದ್ದ. ಈ ಘಟನೆ ನಂತರ ವರ್ಷಿಣಿ ತನ್ನ ಮನೆಯಿಂದ ಹೊರಟು ಹೋಗಿದ್ದಳು. ಆಕೆಯ ಮನೆಯವರು 'ವರ್ಷಿಣಿ ಲಂಡನ್‌ಗೆ ಹೋಗಿದ್ದಾಳೆ' ಎಂದು ಹೇಳಿದ್ದರು. ಲಕ್ಷ್ಮಣನ ಪತ್ನಿಯೂ ಹಾಗೆಯೇ ನಂಬಿಕೊಂಡಿದ್ದರು. ಆದರೆ, ಕೊಲೆ ಆದ ಮರು ದಿನ ವರ್ಷಿಣಿ ಪ್ರತ್ಯಕ್ಷವಾದಾಗ ಎಲ್ಲರಿಗೂ ಶಾಕ್‌ ಆಗಿತ್ತು.

ಈ ವಿಡಿಯೋವನ್ನೂ ನೋಡಿ: ಅಕ್ಕ-ಅಂಕಲ್ ಅಂದುಕೊಂಡೇ ಮುಗಿಸಿಬಿಟ್ಟಲು: ಲಕ್ಷ್ಮಣನ ಹೆಂಡತಿ ಚೈತ್ರಾ ಆಕ್ರೋಶದ ನುಡಿ


ವರ್ಷಿಣಿ ಪ್ರಿಯಕರ ರೂಪೇಶ್​ ಸಂಚು:

ಡ್ಯಾನ್ಸ್​​ ಕ್ಲಾಸ್​ನಲ್ಲಿ ರೂಪೇಶ್​ ಎಂಬ ಯುವಕ ವರ್ಷಿಣಿಗೆ ಪರಿಚಯವಾಗಿದ್ದ. ರೂಪೇಶ್​​ ಪ್ರೀತಿಸುವಂತೆ ವರ್ಷಿಣಿಯ ಹಿಂದೆ ಹಿಂದೆ ಬಿದ್ದಿದ್ದ. ರೂಪೇಶನ ಕಾಟ ತಪ್ಪಿಸಲು ವರ್ಷಿಣಿ ಈ ವಿಷಯವನ್ನು ಲಕ್ಷ್ಮಣನಿಗೆ ತಿಳಿಸಿದ್ದಳು. ಆಗ ಲಕ್ಷ್ಮಣ ರೂಪೇಶನಿಗೆ ಎಚ್ಚರಿಕೆ ಕೊಟ್ಟಿದ್ದ. ನನ್ನ ಪ್ರೀತಿಗೆ ಅಡ್ಡಿಯಾದ ಎಂದು ರೂಪೇಶ್​​ ಲಕ್ಷ್ಮಣನಿಗೆ ಮುಹೂರ್ತ ಫಿಕ್ಸ್​ ಮಾಡಿರುವ ಶಂಕೆ ಇದೆ. ಜೊತೆಗೆ ಲಕ್ಷ್ಮಣ್​ ಪತ್ನಿ ಚೈತ್ರಾ ಸಹ ವರ್ಷಿಣಿ ಮತ್ತು ಆಕೆಯ ಗಂಡನ ಒಡನಾಟದ ಬಗ್ಗೆ ತಿಳಿಸಿದ್ದಳು. ಇದೇ ವಿಚಾರಕ್ಕೆ ಗಂಡನೊಂದಿಗೆ ಚೈತ್ರಾ ಜಗಳವಾಡಿಕೊಂಡಿದ್ದಳು.

ಇದನ್ನೂ ಓದಿ: ನಿಖಿಲ್​​ಗೆ ನಮ್ಮ ಬೆಂಬಲ ಇಲ್ಲ: ಗೋ ಬ್ಯಾಕ್​​ ಡಿಕೆಶಿ ಎಂದ ಕಾಂಗ್ರೆಸ್ಸಿಗರು!

ರೂಪೇಶ್​​​, ಲಕ್ಷ್ಮಣ್ ನಡುವಿನ ಭಿನ್ನಾಭಿಪ್ರಾಯಕ್ಕೆ ಎರಡು ಕಾರಣಗಳಿದ್ದವು. ಎರಡು ವಿಚಾರದಲ್ಲಿ ಲಕ್ಷ್ಮಣ್ ಹಾಗೂ ರೂಪೇಶನಿಗೆ ವೈರತ್ವ ಶುರುವಾಗಿತ್ತು. ಮೊದಲನೆಯದಾಗಿ ಕೆಲ ಆಸ್ತಿ ವಿಚಾರವಾಗಿ ಲಕ್ಷ್ಮಣ್ ಜೊತೆ ರೂಪೇಶ್ ಕಿರಿಕ್‌ ಶುರುವಾಗಿತ್ತು. ಎರಡನೆಯದಾಗಿ ಲಕ್ಷ್ಮಣ್ ರೂಪೇಶನ ಪ್ರೇಯಸಿ ಹಿಂದೆ ಬಿದ್ದಿದ್ದ. ಮಿರ್ಲೆ ವರದರಾಜ್ ಕೇಸಿನಲ್ಲಿ ಲಕ್ಷ್ಮಣ ಜೈಲು ಸೇರುತ್ತಿದ್ದಂತೆ ರೂಪೇಶ್​​​ ಕೊಲೆ ಮಾಡಲು ಸ್ಕೆಚ್​​ ಹಾಕಿದ್ದ. ಹೊರಗಡೆ ಬರುತ್ತಿದ್ದಂತೆ ಕೊಲೆ ಮಾಡಲು ರೂಪೇಶ್​​ ಪ್ಲಾನ್​ ಮಾಡಿದ್ದ. ಇದಕ್ಕಾಗಿ ಮಚ್ಚಾ ಮಂಜ ಹಾಗೂ ಕುರಿ ಕೃಷ್ಣನ ಹುಡುಗರನ್ನು ಸಂಪರ್ಕ ಮಾಡಿದ್ದ.

ಲಕ್ಷ್ಮಣ್ 2005 ರಲ್ಲಿ ಮಚ್ಚಾ ಮಂಜ‌ ಹಾಗೂ 2010 ರಲ್ಲಿ ಕುರಿ ಕೃಷ್ಣನ ಕೊಲೆಯಲ್ಲಿ ಭಾಗಿಯಾಗಿದ್ದ. ಹೀಗಾಗಿ ಅವರ ಬಳಗದ ಹುಡುಗರಾದ ಹೇಮಿ, ಕ್ಯಾಟ್ ರಾಜ ಅಲೋಕ್ ಮತ್ತು ವರುಣ್ ಲಕ್ಷ್ಮಣ್ ಹತ್ಯೆಗೆ ಒಪ್ಪಿದ್ದರು. ರೂಪೇಶ್​​ ತನ್ನ ಪ್ರೇಯಸಿ ವರ್ಷಿಣಿ ಮೂಲಕ ಕೊಲೆಗೆ ಸ್ಕೆಚ್​​​ ಹಾಕಿದ್ದ. ಕೆಲ ದಿನಗಳ ಹಿಂದಷ್ಟೆ ಜೈಲಿನಿಂದ ಹೊರ ಬಂದಿದ್ದ ಲಕ್ಷ್ಮಣನನ್ನು ಭೇಟಿಯಾಗಲು ವರ್ಷಿಣಿ ಕಡೆಯಿಂದ ಕರೆ ಮಾಡಿಸಿದ್ದರು. ಭೇಟಿಯಾಗಲು ಹೊಟೇಲ್ ಬುಕ್ ಮಾಡಿ ಬರುವಂತೆ ವರ್ಷಿಣಿ ವಾಟ್ಸಾಪ್ ಕರೆ ಮಾಡಿದ್ದಳು. ಮಾರ್ಚ್ 7 ರಂದು ಲಕ್ಷ್ಮಣ್ ಮನೆಯಿಂದ ಹೊರಟಿದ್ದ. ದಾರಿ ಮಧ್ಯೆ ಕ್ಯಾಟ್​​ ರಾಜನ ಗ್ಯಾಂಗ್​ ಲಕ್ಷ್ಮಣನ ಕಾರನ್ನು ಹಿಂಬಾಲಿಸಿತ್ತು. ಸೋಪ್ ಫ್ಯಾಕ್ಟರಿ ಬಳಿ ಕಾರು ಬರುತ್ತಿದ್ದಂತೆ ಅಡ್ಡಗಟ್ಟಿ ಕೊಲೆ ಮಾಡಿದ್ದರು.

 ಲಕ್ಷ್ಮಣ್​ ಮತ್ತು ಹರೀಶ್​​ ನಡುವೆ ಜಗಳ:

4 ತಿಂಗಳ ಹಿಂದೆ ರೌಡಿ ಲಕ್ಷ್ಮಣ್ ಹಾಗೂ ವರ್ಷಿಣಿ ತಂದೆ ಹರೀಶ್​ ನಡುವೆ ಜಗಳವಾಗಿತ್ತು. ಮಂಡ್ಯ ಜೆಡಿಎಸ್​ ನಾಯಕಿಯ ಪತಿ ಹರೀಶ್​ ಆಸ್ತಿ ವಿಚಾರವಾಗಿ ಲಕ್ಷ್ಮಣ್​ ಜೊತೆ ಜಗಳ ಮಾಡಿಕೊಂಡಿದ್ದ. ತಾವರೆಕೆರೆ ಜಾಗ ಸೆಟ್ಲ್​ಮೆಂಟ್ ಮಾಡು ಎಂದು ಲಕ್ಷ್ಮಣ್ ಹೇಳಿದ್ದ. ಆದರೆ ಜಾಗ ಬಿಟ್ಟುಕೊಡಲ್ಲ ಅಂತ ಹರೀಶ್​​ ಹೇಳಿದ್ದ.  ಇದೇ ವಿಚಾರಕ್ಕೆ ಇಬ್ಬರ ನಡುವೆ ನಡೆದಿತ್ತು. ಆಸ್ತಿ ವಿಚಾರಕ್ಕೆ ಜಗಳ ನಡೆದು ಲಕ್ಷ್ಮಣ್​​​ ವರ್ಷಿಣಿ ಕುಟುಂಬಕ್ಕೆ ಕಂಟಕವಾಗಿದ್ದ.

ರೌಡಿ ಲಕ್ಷ್ಮಣ ಹತ್ಯೆಗೆ ವರ್ಷಿಣಿ ತಂದೆಯಿಂದಲೇ ಸುಪಾರಿ?

ರೌಡಿ ಲಕ್ಷ್ಮಣ ಹತ್ಯೆಗೆ ವರ್ಷಿಣಿ ತಂದೆಯೇ 20 ಲಕ್ಷ ಸುಪಾರಿ ನೀಡಿರುವ ಆರೋಪ ಕೇಳಿಬಂದಿದೆ. ಕೊಲೆಯಾದ ಬಳಿಕ ವರ್ಷಿಣಿ ತಂದೆ ಹರೀಶ್​ ಬೆಂಗಳೂರಿನಲ್ಲಿದ್ದರೂ ಲಂಡನ್​​ನಲ್ಲಿ ಇರುವುದಾಗಿ ನಾಟಕವಾಡಿದ್ದರು ಎನ್ನಲಾಗಿದೆ. ಆಸ್ತಿ ವಿಚಾರವಾಗಿ ಲಕ್ಷ್ಮಣ್​ ಕೊಲೆ ಮಾಡಿಸಲು ಸ್ಕೆಚ್​ ಹಾಕಿದ್ದರು. ವರ್ಷಿಣಿ ಹೆಸರಿನಲ್ಲಿಯೂ ಸಾಕಷ್ಟು ಆಸ್ತಿ ಇರುವ ಹಿನ್ನೆಲೆ ಸಿಸಿಬಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದೇ ವಿಚಾರವಾಗಿ ಹರೀಶ್ , ಪದ್ಮ ಹಾಗೂ ವರ್ಷಿಣಿಯನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

 ಹೆಚ್ಚುವರಿ ಪೊಲೀಸ್ ಆಯುಕ್ತರು ಹೇಳಿದ್ದೇನು?

ಲಕ್ಷ್ಮಣ್​​ ಒಂದು‌ ಲಕ್ಷ ಹಣವನ್ನು ವರ್ಷಿಣಿಗೆ ಕೊಟ್ಟಿದ್ದ. ಲಕ್ಷ್ಮಣ್​​  ಕೊಟ್ಟ ಒಂದು ಲಕ್ಷ ಹಣವನ್ನು ವರ್ಷಿಣಿ ತನ್ನ ಪ್ರಿಯಕರ ರೂಪೇಶ್ ಅಕೌಂಟ್​ಗೆ ಹಾಕಿದ್ದರು. ವರ್ಷಿಣಿ ತಂದೆ ತಾಯಿಗೆ ರೂಪೇಶ್ ಜೊತೆ ತಕರಾರಿತ್ತು. ಈ ಹಿನ್ನೆಲೆಯಲ್ಲಿ ವರ್ಷಿಣಿಯನ್ನ ಲಂಡನ್​ಗೆ ಕಳಿಸಲಾಗಿತ್ತು. ಇನ್ನು, ಲಕ್ಷ್ಮಣನಿಗೂ ವರ್ಷಿಣಿಯನ್ನು ಲಂಡನ್ ಗೆ ಕಳಿಸೋಕೆ ಇಷ್ಟ ಇತ್ತು ಎಂದು ತಿಳಿದು ಬಂದಿದೆ. 2018 ರ ಅನ್ನದಾನಿ‌ ಮನೆಯಲ್ಲಿ ನಡೆದ ಕಳ್ಳತನದಲ್ಲೂ ವರ್ಷಿಣಿ ಭಾಗಿಯಾಗಿದ್ದಾಳೆ ಎನ್ನಲಾಗಿದೆ.  ಮೂಟೆ ಹರೀಶ ಎನ್ನುವ ಹೆಸರಲ್ಲಿ ಲಕ್ಷ್ಮಣನ ಬೇನಾಮಿ ಆಸ್ತಿ‌ ಇದೆ. ಹಾಗಾಗಿ ಪ್ರಾಥಮಿಕವಾಗಿ ಇಷ್ಟು ಮಾಹಿತಿ ಸಿಕ್ಕಿದೆ. 14 ದಿನ ಆರೋಪಿಗಳಿಗೆ ಕಸ್ಟಡಿಗೆ ತೆಗೆದುಕೊಳ್ಳಲಿದ್ದೇವೆ. ಇಂದೇ ಎಲ್ಲಾ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿಲಿದ್ದೇವೆ. ಇದರ ಕಂಪ್ಲೀಟ್ ಡೀಟೇಲ್ಸ್ ತನಿಖೆ ನಡೆಸಿದಾಗಲೇ ಸಿಗಲು ಸಾಧ್ಯ. ವಾಟ್ಸ್ಯಾಪ್ ಮೂಲಕ ವರ್ಷಿಣಿ ಲಕ್ಷ್ಮಣನಿಗೆ ಕರೆ ಮಾಡುತ್ತಿದ್ದಳು. ಒಂದು ವೇಳೆ ವರ್ಷಿಣಿ ಕರೆ ಬ್ಯುಸಿ ಬರುತ್ತಿದ್ದರೆ, ಕೂಡಲೇ ಲಕ್ಷ್ಮಣ ರೂಪೇಶನಿಗೂ ಕರೆ ಮಾಡುತ್ತಿದ್ದ. ಲಕ್ಷ್ಮಣ ವರ್ಷಿಣಿಯನ್ನ ತುಂಬಾ ಅನುಮಾನಿಸುತ್ತಿದ್ದ. ಇದೆಲ್ಲಾ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇನ್ನಷ್ಟು ಸಂಪೂರ್ಣ ತನಿಖೆಯಾಗಬೇಕಿದೆ ಎಂದರು.

ಇದನ್ನೂ ಓದಿ: ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯ ಎರಡನೇ ಗೆಲುವಿನ ಓಟಕ್ಕೆ ತಡೆ ಹಾಕಲಿದೆಯೇ ಕಾಂಗ್ರೆಸ್​?

ಫಂಡಿಂಗ್ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸಾಕಷ್ಟು ವಿಷಯಗಳು ಓಡಾಡುತ್ತಿವೆ. ಗಾಳಿ ಮಾತಿಗೆ ನಾವು ತಲೆಕೆಡಿಸಿಕೊಳ್ಳಲ್ಲ. ಯಾವ ಆಯಾಮದಲ್ಲಿ ಅನುಮಾನ‌ ಬರುತ್ತೆ ಅದರ ಪ್ರಕಾರ ತನಿಖೆ ನಡೆಸುತ್ತೇವೆ.  ಈ ಪ್ರಕರಣದಲ್ಲಿ ವರ್ಷಿಣಿ ಪ್ರಮುಖ ಆರೋಪಿಯಾಗಿದ್ದಾಳೆ. ನಮಗೆ ಯಾರು ಕೂಡ ಕರೆ ಮಾಡಿಲ್ಲ. ನಮ್ಮ ಅಧಿಕಾರಿಗಳಿಗೂ ಯಾವುದೇ ಕರೆ ಬಂದಿಲ್ಲ. ನಾವು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಮಗೆ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದರು

ವರ್ಷಿಣಿ ತಾಯಿ ಸ್ಪಷ್ಟನೆ:

ರೌಡಿ ಲಕ್ಷ್ಮಣ ಕೊಲೆಯಲ್ಲಿ ತನ್ನ ಮಗಳ ಕೈವಾಡವಿಲ್ಲ ಎಂದು ವರ್ಷಿಣಿ ತಾಯಿ ಪದ್ಮ ಹರೀಶ್ ವಾಯ್ಸ್ ಮೇಸೇಜ್ ಮೂಲಕ ಸ್ಪಷ್ಟನೆ ನೀಡಿದ್ದರು. ಮದ್ದೂರು ಜನರಿಗೆ ಪದ್ಮ ಹರೀಶ್ ಏನು ಅಂತಾ ಗೊತ್ತಿದೆ. ನಾನು ಮತ್ತು ನನ್ನ ಮಗಳ ಕೈವಾಡ ಏನಿಲ್ಲ. ನನ್ನ ಮಗಳು ವರ್ಷಿಣಿ ಲಂಡನ್​​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನನ್ನ ರಾಜಕೀಯ ಏಳಿಗೆಯನ್ನು ಸಹಿಸದೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಅವರು ಇದ್ದಾಗಲೂ ತೊಂದರೆ ಕೊಡುತ್ತಿದ್ದರು, ಸತ್ತಾಗಲೂ ತೊಂದರೆ ಕೊಡುತ್ತಿದ್ದಾರೆ. ಈ ಕೊಲೆಗೂ ನನ್ನ ಮಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.

ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳನ್ನು 1 ನೇ ಎಸಿಎಂಎಂ ಕೋರ್ಟ್​​ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಮಾರ್ಚ್​​ 21 ರವರೆಗೆ ಪೊಲೀಸ್​​ ಕಸ್ಟಡಿಗೆ ನೀಡಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ಸಲುವಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಸಿಸಿಬಿ ಕೇಳಿದೆ.
First published:March 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...