ಕೊಡಗು(ಜ.08): ಕೆಲವು ವರ್ಷಗಳ ಹಿಂದಕ್ಕೆ ಹೋದ್ರ ಸಾಕು, ಮಾರ್ಕೆಟ್ ಗಳಲ್ಲಿ, ಇಲ್ಲ ಗಲ್ಲಿ-ಗಲ್ಲಿಗಳಲ್ಲಿ ಪುಡಿ ರೌಡಿಸಂ ಮಾಡಿಕೊಂಡು ಹವಾ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದದ್ದು ಗೊತ್ತೇ ಇದೆ. ಇದೆಲ್ಲವನ್ನೂ ಈಗ ಮಟ್ಟ ಹಾಕಲಾಗಿದೆ. ಆದರೆ ಈಗಲೂ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲಿ ಹತ್ತು ಜನರ ಗುಂಪೊಂದು ಕ್ಯಾಂಟೀನ್ ವೊಂದಕ್ಕೆ ನುಗ್ಗಿ ದಾಂಧಲೆ ನಡೆಸಿ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ನಡೆದಿದೆ. ಹೌದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆಯ ಅಸ್ಕರ್ ಅಲಿ ಎಂಬುವವರ ಕ್ಯಾಂಟಿನ್ ಗೆ ಪುಡಿರೌಡಿಗಳು ನುಗ್ಗಿದ್ದಾರೆ.
ಹತ್ತು ಜನರಿದ್ದ ಯುವಕರ ಗುಂಪು ಕ್ಯಾಂಟಿನ್ ನ ಮಾಲೀಕ ಅಸ್ಕರ್ ಅಲಿಗೆ ದೊಡ್ಡ ದೊಡ್ಡ ಗಾತ್ರದ ಬಡಿಗೆಗಳಿಂದ ಮನಸ್ಸೋ ಇಚ್ಚೆ ಬಡಿದಿದೆ. ಅದಕ್ಕೂ ಮೊದಲು ಅಸ್ಕರ್ ಅಲಿಯ ಕಣ್ಣಿಗೆ ಖಾರದ ಪುಡಿ ಎರಚಿರುವ ಯುವಕರ ಗುಂಪು ಕ್ಯಾಂಟಿನ್ ಒಳಗಿದ್ದ ವಸ್ತುಗಳನ್ನೆಲ್ಲಾ ಪುಡಿಗೈದಿದೆ. ಜೊತೆಗೆ ಕ್ಯಾಂಟಿನ್ ನಲ್ಲಿ ಇದ್ದ ಗ್ರಾಹಕರಿಗೂ ಹೊಡಿದಿದೆ.
ಇದರಿಂದಾಗಿ ಮಾಲೀಕ ಅಸ್ಕರ್ ಅಲಿಯ ಕಣ್ಣಿಗೆ ತೀವ್ರ ಪೆಟ್ಟು ಬಿದ್ದಿದೆ. ಅಲ್ಲದೇ ಅವರ ಮೂಗಿನ ಮೂಳೆ ಕೂಡ ಮುರಿದು ಹೋಗಿದೆ. ಇನ್ನು ಶಬ್ಬೀರ್ ಎಂಬುವವರ ಕೈಮುರಿದು ಹೋಗಿದೆ. ಅಷ್ಟೇ ಅಲ್ಲ ಇಮ್ರಾನ್ ಎಂಬುವವರ ತಲೆಗೆ ಕೂಡ ಗಂಭೀರ ಪೆಟ್ಟು ಬಿದ್ದಿದ್ದು ತಲೆಗೆ ಎಂಟು ಹೊಲಿಗೆ ಹಾಕಲಾಗಿದೆ. ಕ್ಯಾಂಟಿನ್ ಗೆ ನುಗ್ಗಿ ದಾಂಧಲೆ ನಡೆಸಿ ಸಿಕ್ಕ ಸಿಕ್ಕವರಿಗೆ ಹೊಡೆದಿರುವ ಯುವಕರ ಪುಂಡಾಟ ಸಂಪೂರ್ಣ ಸಿಸಿಟಿಯಲ್ಲಿ ಸೆರೆಯಾಗಿದೆ.
ಸುಮ್ಮನಿರುವಂತೆ ಮನವಿ ಮಾಡಲು ಹೋದವರಿಗೂ ಪುಂಡರ ಗುಂಪು ಮನಸ್ಸೋ ಇಚ್ಚೆ ರಸ್ತೆಯಲ್ಲೆಲ್ಲಾ ಓಡಾಡಿಸಿಕೊಂಡು ಹೊಡೆದಿದೆ. ಬಿಟ್ಟುಬಿಡಿ ಎಂದು ಮನವಿ ಮಾಡಿದರೂ ಬಿಟ್ಟಿಲ್ಲ. ಇದೆಲ್ಲವೂ ಬೈಲುಕುಪ್ಪೆ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲೇ ನಡೆದಿದೆ. ಆದರೆ ರಾತ್ರಿ ಹತ್ತುವರೆ ಗಂಟೆಯಲ್ಲಿ ಇದೆಲ್ಲವೂ ನಡೆದಿರುವುದರಿಂದ ಪೊಲೀಸರ ಗಮನಕ್ಕೂ ಬಂದಂತಿಲ್ಲ.
ಇಷ್ಟೆಲ್ಲಾ ಪುಂಡಾಟ ನಡೆಸಿರುವ ಯುವಕರ ಗುಂಪು ಇಷ್ಟಕ್ಕೇ ಸುಮ್ಮನಾಗದೆ ತಾವು ಹಿಡಿದಿದ್ದ ಬಡಿಗೆಗಳನ್ನು ಹೆದ್ದಾರಿಯಲ್ಲೇ ಬೀಸಿ ರಸ್ತೆಗೆ ಹೊಡೆದು ಕ್ರೌರ್ಯ ಮೆರೆದಿದ್ದಾರೆ. ಇಷ್ಟೆಲ್ಲವೂ ಮಾಡಿರೋದು ಬೈಲುಕುಪ್ಪೆಯವರೇ ಆದ ಪುಡಿ ರೌಡಿಸಂ ಮಾಡುತ್ತಿದ್ದ ಯುವಕರು ಅಫ್ತಾ ವಸೂಲಿಗಾಗಿ ಹವಾ ಕ್ರಿಯೇಟ್ ಮಾಡೋದಕ್ಕೆ ಅಂತಲೇ ಹೀಗೆಲ್ಲಾ ಮಾಡಿದೆ ಎನ್ನೋದು ಸ್ಥಳೀಯರಾದ ಮಾನ್ ಇನಾಯತ್ ಎಂಬುವರ ಅಭಿಪ್ರಾಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ