ಬೆಂಗಳೂರು (ನ.24): ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಐಎಂಎ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ರೋಷನ್ ಬೇಗ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಮೂರು ದಿನಗಳಿಂದ ಜೈಲಿನಲ್ಲಿದ್ದ ರೋಷನ್ ಬೇಗ್ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ನಿನ್ನೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದರು. ಬೇಗ್ನನ್ನು ಸಿಬಿಐ ಹಾಜರುಪಡಿಸಿತು. ಕ್ವಾರಂಟೈನ್ ಸಿಂಗಲ್ ಸೆಲ್ನಲ್ಲಿದ್ದ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಆಕ್ಸಿಜನ್ ಬೆಡ್ಗೆ ಶಿಫ್ಟ್ ಮಾಡಲಾಗಿದೆ. ಇಂದು ಮುಂಜಾನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಅವರನ್ನು ಜೈಲು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸಕ್ಕರೆ ಕಾಯಿಲೆ, ಬಿಪಿ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ.
ದಿನಕ್ಕೆ ಎರಡು ಬಾರಿ ಎಂಬಂತೆ ಇಂದು ಬೇಗ್ ಗೆ ಶುಗರ್ ಮತ್ತು ಬಿಪಿ ಟೆಸ್ಟ್ ಮಾಡಿಲಾಗಿದೆ. ಆದರೆ, ಅವರ ಹೆಚ್ಚು ಆತಂಕಕ್ಕೆ ಒಳಗಾದ ಹಿನ್ನಲೆ ಅವರ ಬಿಪಿ ಹಾಗೂ ಶುಗರ್ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗಿದೆ. ಜೈಲೂಟದಂತೆ ಅವರಿಗೆ ಆಹಾರ ನೀಡಲಾಗುತ್ತಿದೆ.
ಇಂದು ಬೆಳಗ್ಗೆ ಸಿಬಿಐ ರೋಷನ್ ಬೇಗ್ ಅವರ ಕುಟುಂಬಸ್ಥರ ಮನೆ ಮೇಲೆ ದಾಳಿ ನಡೆಸಿದ್ದು, ಪ್ರಕರಣದ ಕುರಿತು ಸಾಕ್ಷ್ಯ ಹುಡುಕಾಟ ನಡೆಸಿದೆ. ಈಗಾಗಲೇ ಪರಪ್ಪನ ಅಗ್ರಹಾರದಲ್ಲಿ ಬೇಗ್ ಇದ್ದು, ಪ್ರಕರಣದ ಕುರಿತು ಮತ್ತುಷ್ಟು ಸಾಕ್ಷ್ಯಿಗಳ ಹುಡುಕಾಟ ನಡೆಸಲಾಗಿದೆ.
ಇದನ್ನು ಓದಿ: ಅರಣ್ಯ ಅಭಿವೃದ್ಧಿ ನಿಗಮಕ್ಕೆ ತಾರಾ ಅನುರಾಧಾ; ಇಲ್ಲಿದೆ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ
ಪ್ರಕರಣದ ವಿಚಾರಣೆಗಾಗಿ ನ್ಯಾಯಾಂಗ ಬಂಧನದಲ್ಲಿರುವ ಬೇಗ್ ಅವರನ್ನು ವಶಕ್ಕೆ ಪಡೆಯಲು ಸಿಬಿಐ ಮುಂದಾಗಿದೆ. ಈ ಸಂಬಂಧ 120B, r/w 420, 406, 405 ಮತ್ತು 128 ಸೆಕ್ಷನ್ ಅಡಿಯಲ್ಲಿ ರೋಷನ್ ಬೇಗ್ ಮೇಲೆ ಕೇಸ್ ದಾಖಲು ಮಾಡಲಾಗಿದೆ. ರೋಷನ್ ಬೇಗ್ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ.
ಐಎಂಎ ಬಹುಕೋಟಿ ಪ್ರಕರಣದಲ್ಲಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಖಾನ್ನಿಂದ ರೋಷನ್ ಬೇಗ್ ಸುಮಾರು 200 ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಇದರ ಜೊತೆಗೆ ಐಷಾರಾಮಿ ಉಡುಗೊರೆಯನ್ನು ಅವರು ಪಡೆದಿದ್ದಾರೆ ಎಂಬ ಆರೋಪ ದಾಖಲಾಗಿದೆ. ಇನ್ನು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರೋಷನ್ ಬೇಗ್ ಕಾಂಗ್ರೆಸ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಮುಂದಾಗಲು ತಯಾರಿ ನಡೆಸಿದ್ದರು. ಬೇಗ್ ಸಿಬಿಐನಿಂದ ತಪ್ಪಿಸಿಕೊಳ್ಳಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ