ಬೆಂಗಳೂರು: ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ (Hindu Religious Institutions) ಆಯುಕ್ತೆ ರೋಹಿಣಿ ಸಿಂಧೂರಿ (IAS Officer Rohini Sindhuri) ಅವರು ಶಾಸಕ ಸಾ.ರಾ ಮಹೇಶ್ (Sa Ra Mahesh) ಅವರ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಇಂದು ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ (IPS Officer D. Roopa) ಅವರು ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ 19 ವಿವಿಧ ಆರೋಪಗಳ ಜೊತೆ ಕೆಲವು ಪ್ರಶ್ನೆಗಳನ್ನೂ ಹಾಕಿದ್ದರು.
ಸದ್ಯ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರೋಹಿಣಿ ಸಿಂಧೂರಿ ಅವರು, ಮಾಧ್ಯಮಗಳಲ್ಲಿ (Media) ತಮ್ಮ ಖಾಸಗಿ ಫೋಟೋಗಳನ್ನು (Private Photos) ಬಳಕೆ ಮಾಡದಂತೆ ಮನವಿ ಮಾಡಿದ್ದಾರೆ. ಪ್ರತಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಖಾಸಗಿ ಫೋಟೋಗಳನ್ನು ಶೇರ್ ಮಾಡಿದ ಕಾರಣಕ್ಕೆ ರೂಪಾ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳಿಗೆ ರೋಹಿಣಿ ಸಿಂಧೂರಿ ಮನವಿ
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರೋಹಿಣಿ ಸಿಂಧೂರಿ ಅವರು, ಸಾಮಾಜಿಕ ಮಾಧ್ಯಮಗಳಿಂದ ಹಾಗೂ ವಾಟ್ಸಾಪ್ ಸ್ಟೇಟಸ್ಗಳಿಂದ ಸ್ಕ್ರೀನ್ ಶಾಟ್ಗಳ ಮೂಲಕ ಸಂಗ್ರಹಿಸಿದ ಫೋಟೋಗಳನ್ನು ನನ್ನ ತೇಜೋವಧೆ ಮಾಡಲು ರೂಪಾ ಐಪಿಎಸ್ ಬಳಿಸಿದ್ದಾರೆ.
ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯಾಗಿ ಅದರಲ್ಲೂ ಮಹಿಳೆಯಾಗಿ ಇನ್ನೊಬ್ಬ ಮಹಿಳೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕಾನೂನು ಉಲ್ಲಂಘನೆಯನ್ನು ಮಾಡಿದ್ದಾರೆ. ಸದರಿಯವರ ವಿರುದ್ಧ ನಾನು ಶೀಘ್ರದಲ್ಲಿಯೇ ಕಾನೂನು ಕ್ರಮ ಕೈಗೊಳ್ಳಲಿದ್ದೇನೆ.
ಮುಂದುವರೆದು, ಈ ಫೋಟೋಗಳನ್ನು ತಾವುಗಳು ತಮ್ಮ ಗೌರವಾನ್ವಿತ ಮಾಧ್ಯಮಗಳಲ್ಲಿ ಬಳಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಒಬ್ಬರು ತಮ್ಮ ವೈಯಕ್ತಿಕ ಹಗೆತನಕ್ಕೆ ನನ್ನ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದನ್ನ, ಮಾಧ್ಯಮಗಳಲ್ಲಿ ಬಿತ್ತರವಾಗುವುದು ಬಹಳ ನೋವಿನ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ನನ್ನ ವೈಯಕ್ತಿಕ ಫೋಟೋಗಳನ್ನು ತಮ್ಮ ಗೌರವಾನ್ವಿತ ಮಾಧ್ಯಮಗಳಲ್ಲಿ ಬಳಸದಂತೆ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.
ಆರೋಪಗಳಿಗೆ ರೋಹಿಣಿ ಸಿಂಧೂರಿ ಸ್ಪಷ್ಟನೆ ಏನು?
ಐಪಿಎಸ್ ಅಧಿಕಾರಿ ರೂಪಾ ರೋಹಿಣಿ ಸಿಂಧೂರಿಗೆ ಬಗ್ಗೆ ಇಷ್ಟೆಲ್ಲಾ ಆರೋಪಗಳನ್ನ ಮಾಡಿದ್ದಾರೆ. ಇದಕ್ಕೆ ರೋಹಿಣಿ ಸಿಂಧೂರಿ ಪ್ರತಿಕ್ರಿಯೆ ನೀಡಿಲ್ಲ, ಬದಲಿಗೆ ರೂಪಾ ವಿರುದ್ಧ ಪತ್ರಿಕಾ ಹೇಳಿಕೆ ರಿಲೀಸ್ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವೈಯಕ್ತಿಕ ಹಗೆ ಸಾಧಿಸುತ್ತಿದ್ದಾರೆ. ಹಗೆ ಸಾಧಿಸುತ್ತಿರುವುದು ಸಮಾಜಕ್ಕೆ ಬಹಳಷ್ಟು ಅಪಾಯಕಾರಿ. ಡಿ.ರೂಪಾ ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡಿದ್ದಾರೆ.
ಐಪಿಎಸ್ ರೂಪಾ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ನನ್ನ ತೇಜೋವಧೆ ಮಾಡಲು ರೂಪಾ ಐಪಿಎಸ್ ಫೋಟೋಗಳನ್ನ ಬಳಸಿದ್ದಾರೆ. ಫೋಟೋ ಕಳಿಸಿದ್ದೇನೆ ಎನ್ನುವ ಅಧಿಕಾರಿಗಳ ಹೆಸರು ಬಹಿರಂಗಪಡಿಸಲಿ. ರೂಪಾ ನಡೆಸುತ್ತಿರುವ ತೇಜೋವಧೆ ವಿರುದ್ದ ಕಾನೂನು ಹೋರಾಟ ಮಾಡುತ್ತೇನೆ, ಸಕ್ಷಮ ಪ್ರಾಧಿಕಾರದಲ್ಲೂ ದೂರು ನೀಡುತ್ತೇನೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನೂ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ