ಸಚಿವರ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳು, ಸಂಚಾರ ದುಸ್ತುರ; ರಿಪೇರಿಗೂ ಮುಂದಾಗದ ಸರ್ಕಾರದ ವಿರುದ್ದ ಜನರ ಆಕ್ರೋಶ

ಯಾವಾಗಲೂ ಬೆಂಗಳೂರು ಇಲ್ಲವಾದರೆ ತಮ್ಮ ಮಹಾರಾಷ್ಟ್ರದ ಮನೆಯಲ್ಲೆ ಇರ್ತಾರೆ. ನಮ್ಮ ಕ್ಷೇತ್ರದ ಸಮಸ್ಯೆ ಕುರಿತು ತಲೆ ಮಾತ್ರ ಕೆಡಿಸಿಕೊಳ್ಳಲ್ಲ. ಕನಿಷ್ಠ ಮೂಲಭೂತ ಸೌಕರ್ಯವಾದ ರಸ್ತೆಗಳನ್ನ ರಿಪೇರಿ ಮಾಡುವ ಕೆಲಸ ಕೂಡ ಆಗುತ್ತಿಲ್ಲ ಎಂದು ಇಲ್ಲಿನ ಜನ ಆಕ್ರೋಶ ಹೊರ ಹಾಕಿದ್ದಾರೆ.

ರಸ್ತೆ ಗುಂಡಿ ಮುಚ್ಚುತ್ತಿರುವ ಸಾರ್ವಜನಿಕರು

ರಸ್ತೆ ಗುಂಡಿ ಮುಚ್ಚುತ್ತಿರುವ ಸಾರ್ವಜನಿಕರು

  • Share this:
ಚಿಕ್ಕೋಡಿ(ಸೆ.20): ಕಳೆದ ಎರಡು ವರ್ಷಗಳಿಂದ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದದಿಂಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿಪ್ಪಾಣಿ, ಕಾಗವಾಡ ಹಾಗೂ ಅಥಣಿ ತಾಲೂಕಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಹಾಳಾದ ರಸ್ತೆಗಳಲ್ಲಿ ಸಂಚಾರ ಮಾಡುವುದೇ ದುಸ್ತುರವಾಗಿದೆ. ಅದರಲ್ಲೂ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಗ್ರಾಮದ ರಸ್ತೆಗಳು ಸಂಪೂರ್ಣ ಹಾಳಾಗಿ ರಸ್ತೆಗಳಲ್ಲಿ ಒಂದು ಅಡಿ ಆಳದಷ್ಟು ತಗ್ಗು ಗುಂಡಿಗಳು ನಿರ್ಮಾಣಗೊಂಡಿವೆ. ಸಚಿವೆ ಶಶಿಕಲಾ ಜೋಲ್ಲೆ ಅವರ ಕ್ಷೇತ್ರ ನಿಪ್ಪಾಣಿ. ನಿಪ್ಪಾಣಿ ತಾಲೂಕಿನ ಅಕ್ಕೋಳ ಸಿದ್ನಾಳ, ಹುಣ್ಣರಗಿ, ಜತ್ರಾಟ ಬೀವಶಿ, ಗ್ರಾಮಗಳ ನಡುವಿನ ರಸ್ತೆಗಳ ಕಥೆ ಮಾತ್ರ ಹೇಳ ತೀರದು ಈ ಗ್ರಾಮಗಳಿಗೆ ಪ್ರಯಾಣ ಮಾಡಬೇಕು ಅಂದ್ರೆ ಅದೊಂದು ಸಾಹಸಮಯದ ಪ್ರಯಾಣ ಆಗಿರುತ್ತದೆ. ಅತಿಯಾದ ಮಳೆಯಿಂದ ರಸ್ತೆಗಳ ಮೇಲಿನ ಡಾಂಬರ ಸಂಪೂರ್ಣ ಕಿತ್ತು ಹೋಗಿದೆ. ಅಲ್ಲದೆ ರಸ್ತೆಯುದ್ದಕ್ಕೂ 3-4 ಅಡಿಯಷ್ಟು ದೊಡ್ಡದಾದ ಗುಂಡಿಗಳು ಬಿದ್ದಿವೆ. ಇಂತಹ ರಸ್ತೆಗಳಲ್ಲೆ ಜನ ನಿತ್ಯವೂ ಸಂಚಾರ ನಡೆಸುತ್ತಾರೆ. ಇನ್ನು ರಸ್ತೆಗಳ ಸಮಸ್ಯೆ ಕುರಿತು ಸಚಿವರ ಗಮನಕ್ಕೂ ತಂದರು ಯಾವುದೆ ಪ್ರಯೋಜನ ಮಾತ್ರ ಆಗಿಲ್ಲಾ.  ಅಧಿಕಾರಿಗಳು ಕನಿಷ್ಠ ರಿಪೇರಿ ಕೆಲಸವನ್ನಾದ್ರು ಮಾಡ್ತಾರೆ ಅಂದ್ರೆ ಅಧಿಕಾರಿಗಳು ಇತ್ತಕಡೆ ಸುಳಿಯೋದು ಇಲ್ಲಾ ಎಂದು ಗ್ರಾಮಸ್ಥರು ಹಿಡಿ ಶಾಪ ಹಾಕಿದ್ದಾರೆ.

ಗ್ರಾಮಸ್ಥರಿಂದಲೆ ರಸ್ತೆ ರಿಪೇರಿ

ಅಧಿಕಾರಿಗಳ ಅಸಡ್ಡೆ ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದ ಜನ ತಮ್ಮ ಗ್ರಾಮದ ರಸ್ತೆಯನ್ನ ತಾವೆ ರಿಪೇರಿ ಮಾಡಲು ಮುಂದಾಗಿದ್ದಾರೆ. ದಿನಾಲೂ ಸಿದ್ನಾಳ ಗ್ರಾಮದಿಂದ ನೂರಾರು ಗ್ರಾಮಸ್ಥರು ಅಕ್ಕೋಳ, ನಿಪ್ಪಾಣಿ ಹೀಗೆ ಅನೇಕ ಗ್ರಾಮಗಳಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಹೂಗುತ್ತಿದ್ದು ಈ ಹದಗೆಟ್ಟ ರಸ್ತೆಯಿಂದ ಅನೇಕ ದ್ವೀಚಕ್ರ ವಾಹನಗಳು ಅಪಘಾತವಾಗಿದ್ದನ್ನ ಕಂಡು ಗ್ರಾಮದಲ್ಲಿ ಚಂದಾ ಎತ್ತಿ ತಗ್ಗು ಗುಂಡಿಗಳನ್ನ ಮುಚ್ಚಿ ತಾತ್ಕಾಲಿಕ ರಿಪೇರಿ ಮಾಡಿಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ; ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಇನ್ನು ನಿಪ್ಪಾಣಿ ಕ್ಷೇತ್ರದ ಕಥೆ ಇದಾದ್ರೆ ಸಚಿವ ಶ್ರೀಮಂತ ಪಾಟೀಲ್ ಅವರ ಕ್ಷೇತ್ರ ಕಾಗವಾಡ ಪರಿಸ್ಥಿತಿ ಹೊಸದೇನಲ್ಲ ಕಿರಣಗಿ,  ಗುಂಡೆವಾಡಿ, ಮಧಬಾವಿ, ಅರಳಿಹಟ್ಟಿ, ಶಿರೂರ, ಜುಗುಳು, ಮಂಗಾವತಿ, ಇಂಗಳಿ  ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ ಇಲ್ಲಿನ ಜನ ನಗರ ಪ್ರದೇಶಗಳಿಗೆ ಬರಬೇಕು ಅಂದ್ರೆ ಅದೊಂದು ಸಾಹಸವೆ ಸರಿ. ಈ ರಸ್ತೆಯಲ್ಲಿ ಬಂದ್ರೆ ವಾಪಸ್ ಮನೆಗೆ ಹೋಗ್ತಿವಿ ಅನ್ನೊ ನಂಬಿಕೆ ಕೂಡ ಇರಲ್ಲ, ಅಷ್ಟರ ಮಟ್ಟಿಗೆ ರಸ್ತೆಗಳು ಹಾಳಾಗಿ ಹೋಗಿದ್ದಾವೆ.

ಕೈಗೆ ಸಿಗದ ಸಚಿವರು

ಇನ್ನು ಕಾಗವಾಡ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶ್ರೀಮಂತ ಪಾಟೀಲ್ ಕ್ಷೇತ್ರವನ್ನ ಮಾದರಿ ಕ್ಷೇತ್ರ, ನಂದನ ವನ ಮಾಡುವ ಭರವಸೆ ಕೊಟ್ಟು ಮತಗಳನ್ನು ಪಡೆದು ಹೋದವರು ಮತ್ತೆ ವಾಪಸ್ ಆಗಿಲ್ಲಾ. ನಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳೊನ ಅಂದ್ರೆ ಸಚಿವರು ನಮ್ಮ ಕೈಗೆ ಸಿಗಲ್ಲ. ಯಾವಾಗಲೂ ಬೆಂಗಳೂರು ಇಲ್ಲವಾದರೆ ತಮ್ಮ ಮಹಾರಾಷ್ಟ್ರದ ಮನೆಯಲ್ಲೆ ಇರ್ತಾರೆ. ನಮ್ಮ ಕ್ಷೇತ್ರದ ಸಮಸ್ಯೆ ಕುರಿತು ತಲೆ ಮಾತ್ರ ಕೆಡಿಸಿಕೊಳ್ಳಲ್ಲ. ಕನಿಷ್ಠ ಮೂಲಭೂತ ಸೌಕರ್ಯವಾದ ರಸ್ತೆಗಳನ್ನ ರಿಪೇರಿ ಮಾಡುವ ಕೆಲಸ ಕೂಡ ಆಗುತ್ತಿಲ್ಲ ಎಂದು ಇಲ್ಲಿನ ಜನ ಆಕ್ರೋಶ ಹೊರ ಹಾಕಿದ್ದಾರೆ.

ಒಟ್ಟಿನಲ್ಲಿ ಗಡಿ ಭಾಗದ ಜನ ಕನಿಷ್ಠ ಮೂಲಭೂತ ಸೌಕರ್ಯವಾದ ರಸ್ತೆಗಳಿಲ್ಲದೆ ನಿತ್ಯ ನರಕ ಅನುಭವಿಸುವ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ. ಸಚಿವರ ಕ್ಷೇತ್ರದಲ್ಲೆ ಇಂತಹ ಪರಿಸ್ಥಿತಿ ಆದ್ರೆ ಇನ್ನು ಸಾಮಾನ್ಯ ಕ್ಷೇತ್ರಗಳ ಸ್ತೀತಿ ಹೇಗೆ ಅನ್ನುವ ಟೀಕೆಗಳು ವ್ಯಕ್ತವಾಗಿದೆ. ಕೂಡಲೆ ಸಚಿವರು ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಬೇಕಾಗಿದೆ.
Published by:Latha CG
First published: