ಬೆಂಗಳೂರು: ಎರಡು ದಿನಗಳ ಹಿಂದೆ ವೃದ್ಧನೊಬ್ಬನನ್ನು ಸ್ಕೂಟರ್ ಚಾಲಕನೊಬ್ಬ ಒಂದೂವರೆ ಕಿಲೋ ಮೀಟರ್ ದೂರ ಎಳೆದುಕೊಂಡು ಹೋಗಿದ್ದ ಘಟನೆ ನಡೆದಿತ್ತು. ಇದೀಗ ಬೆಂಗಳೂರಿನಲ್ಲಿ (Bengaluru) ಮತ್ತೆ ಅದೇ ರೀತಿಯ ಘಟನೆಯೊಂದು ನಡೆದಿದೆ. ಅಪಘಾತ (Accident) ಪ್ರಕರಣವೊಂದರಲ್ಲಿ ಕಾರನ್ನು ತಡೆಯಲು ಬಾನೆಟ್ ಹತ್ತಿ ಕುಳಿತಿದ್ದ ವ್ಯಕ್ತಿಯನ್ನು ಒಂದು ಕಿಲೋ ಮೀಟರ್ ದೂರ ಎಳೆದೊಯ್ದ ಘಟನೆ ಜ್ಞಾನಭಾರತಿ (Jnanabharathi) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಎರಡೂ ಕಡೆಯವರಿಂದ ದೂರು ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗಾಯಗೊಂಡಿದ್ದ ದರ್ಶನ್ ಎಂಬ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ನಡೆದಿದೆ. ಸಿಗ್ನಲ್ನಲ್ಲಿ ಎರಡು ಕಾರುಗಳ ನಡುವೆ ಸಣ್ಣ ಪ್ರಮಾಣದ ಅಪಘಾತ ಸಂಭವಿಸಿದೆ. ಟಾಟಾ ನೆಕ್ಸಾನ್ ಹಾಗೂ ಮಾರುತಿ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಸ್ವಿಪ್ಟ್ ಕಾರನ್ನು ದರ್ಶನ್ ಎಂಬಾತ ಹಾಗೂ ನಿಕ್ಸಾನ್ ಕಾರನ್ನು ಪ್ರಿಯಾಂಕ ಎಂಬಾಕೆ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕಾರಿನ ಬ್ಯಾನೆಟ್ ಮೇಲೆ ಕುಳಿತರೂ ಕಾರು ಚಾಲನೆ
ಅಪಘಾತ ಸಂಭವಿಸಿದಾಗ ದರ್ಶನ್ರಿಗೆ ಪ್ರಿಯಾಂಕ ಮಧ್ಯದ ಬೆರಳನ್ನು ತೋರಿಸಿ ಕೆಟ್ಟದಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕುಪಿತಕೊಂಡ ದರ್ಶನ್, ಪ್ರಿಯಾಂಕ ಕಾರನ್ನು ಹಿಂಬಾಲಿಸಿಕೊಂಡು ಮಂಗಳೂರು ಪಿಯು ಕಾಲೇಜು ಬಳಿ ಕಾರನ್ನು ತಡೆಯಲು ನಿಂತಿದ್ದಾರೆ. ಕಾರನ್ನು ನಿಲ್ಲಿಸದಿದ್ದಾಗ ದರ್ಶನ್ ಕಾರಿನ ಬಾನೆಟ್ ಮೇಲೆ ಏರಿದ್ದಾರೆ. ಆದರೂ ಕಾರನ್ನೂ ನಿಲ್ಲಿಸದೇ ಪ್ರಿಯಾಂಕ ಒಂದು ಕಿಲೋಮೀಟರ್ ದೂರದವರೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ.
ಕಾರನ್ನು ತಡೆದ ದರ್ಶನ್ ಸ್ನೇಹಿತರು
ಕಾರಿನ ಮೇಲೆ ಕುಳಿತರೂ ಕಾರನ್ನು ನಿಲ್ಲಿಸದೇ ಹೋಗುತ್ತಿದ್ದರಿಂದ ದರ್ಶನ್ ಕಡೆಯ ಹುಡುಗರು ಮತ್ತು ಸ್ಥಳೀಯರು ಬೈಕ್ನಲ್ಲಿ ಪ್ರಿಯಾಂಕ ಕಾರನ್ನು ಚೇಸ್ ಮಾಡಿ ಕಾರನ್ನು ಅಡ್ಡಗಟ್ಟಿ ದರ್ಶನ್ರನ್ನು ರಕ್ಷಿಸಿದ್ದಾರೆ. ಅಲ್ಲದೆ ಕಾರಿನ ಗಾಜುಗಳನ್ನು ಹೊಡೆದು ಒಳಗಿದ್ದ ಪ್ರಿಯಾಂಕ ಗಂಡ ಪ್ರಮೋದ್ಗೆ ಥಳಿಸಿದ್ದಾರೆ ಎನ್ನಲಾಗಿದೆ.
ಎರಡು ಕಡೆಯಿಂದ ಎಫ್ಐಆರ್
ಘಟನೆ ಸಂಬಂಧ ಎರಡೂ ಕಡೆಯವರಿಂದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಹಿದೆ. ಗಾಯಗೊಂಡಿರುವ ದರ್ಶನ್ರಿಂದ ಐಪಿಸಿ ಸೆಕ್ಸನ್ 307 ಅಡಿಯಲ್ಲಿ ಎಫ್ಐಆರ್ ದಾಖಲಾದರೆ, ಮಹಿಳೆ ಪ್ರಿಯಾಂಕ ಐಪಿಸಿ ಸೆಕ್ಸನ್ 354 ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ದರ್ಶನ್ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಬಾನೆಟ್ ಮೇಲೆ ಹತ್ತಿ ಕುಳಿತರೂ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆಂದು ದೂರು ನೀಡಿದರೆ, ಪ್ರಿಯಾಂಕ, ದರ್ಶನ್ ಹಾಗೂ ಸಹಚರರು ವಿರುದ್ಧ ತನ್ನ ಬಟ್ಟೆಯನ್ನು ಹರಿದು ಎಳೆದಾಡಿ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ.
ಐವರ ಬಂಧನ
ಕಾರಿನ ಮೇಲೆ ಯುವಕನನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರಿಂದ ಐವರ ಬಂಧನವಾಗಿದೆ. ಪ್ರಮೋದ್ ಹಾಗೂ ದರ್ಶನ್ ಎಂಬುವವರು ನೀಡಿರುವ ದೂರಿನ ಮೇಲೆ ಪ್ರಿಯಾಂಕ ಬಂಧನವಾಗಿದೆ. ಇನ್ನು ಪ್ರಿಯಾಂಕ ನೀಡಿರುವ ಲೈಂಗಿಕ ದೌರ್ಜನ್ಯ ದೂರಿನ ಅಡಿಯಲ್ಲಿ ದರ್ಶನ್, ಯಶವಂತ್, ಸುಜನ್ ಹಾಗೂ ವಿನಯ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ.
ದರ್ಶನ್ ತಾಯಿ ಹೇಳಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ತಾಯಿ ಹೇಳಿಕೆ ನೀಡಿದ್ದಾರೆ. ಉಲ್ಲಾಳ ರಸ್ತೆಯಲ್ಲಿ ದರ್ಶನ್ ಕಾರಿಗೆ ಕಾರೊಂದು ಅಡ್ಡ ಬಂದಿದೆ. ಅಷ್ಟು ಜೋರಾಗಿ ಏಕೆ ಹೋಡಿಸುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಇಷ್ಟಕ್ಕೆ ಕಾರಿನಲ್ಲಿದ್ದವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ, ಅಲ್ಲದೆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ದರ್ಶನ್ಗೆ ಹೊಡೆದಿದ್ದಾರೆ. ನಂತರ ಇವರೂ ಹೊಡೆದಿದ್ದಾರೆ. ಈ ಘಟನೆ ಬಳಿಕ ಕಾರನ್ನು ನಿಲ್ಲಿಸುವಂತೆ ಹೇಳಿ ದರ್ಶನ್ ಕಾರಿನ ಮುಂದೆ ಬಂದು ನಿಂತಿದ್ದಾನೆ.
ಆದರೂ ಆ ಮಹಿಳೆ ಕಾರನ್ನು ನಿಲ್ಲಿಸದೇ ಮುಂದೆ ಹೋಗಲು ಪ್ರಯತ್ನಿಸಿದ್ದಾರೆ. ಆಗ ದರ್ಶನ್ ಕಾರಿನ ಬಾನೆಟ್ ಮೇಲೆ ಏರಿದ್ದಾನೆ. ಆದರೂ ಕಾರನ್ನು ನಿಲ್ಲಿಸದೇ 2 ಕಿಮೀ ದೂರ ಹೋಗಿದ್ದಾರೆ. ದರ್ಶನ್ ಸ್ನೇಹಿತರು ಕಾರನ್ನು ನಿಲ್ಲಿಸಿದ್ದಕ್ಕೆ ಕಾರಿನ ಗಾಜುಗಳನ್ನು ಹೊಡೆದಿದ್ದಾರೆ. ಕಾರಿನ ಗಾಜು ಹೊಡೆಯುತ್ತಿದ್ದಂತೆ ಆಕೆಯ ಮೊದಲು ಹೋಗಿ ದೂರು ನೀಡಿದ್ದಾಳೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ