HOME » NEWS » State » RN SHETTY DEATH RNS GROUP OF COMPANIES OWNER RN SHETTY DIES BY HEART ATTACK IN BANGALORE SCT

RN Shetty Death: ಖ್ಯಾತ ಉದ್ಯಮಿ ಆರ್​ಎನ್​ ಶೆಟ್ಟಿ ಹೃದಯಾಘಾತದಿಂದ ನಿಧನ; ಸಿಎಂ ಯಡಿಯೂರಪ್ಪ ಸಂತಾಪ

RN Shetty Death: ಆರ್​.ಎನ್​. ಶೆಟ್ಟಿ ಮುರುಡೇಶ್ವರದಲ್ಲಿ ಸಮುದ್ರ ತೀರದಲ್ಲಿ ಬೃಹತ್ ಶಿವನ ಮೂರ್ತಿ, ಎತ್ತರದ ರಾಜಗೋಪುರವನ್ನು ಸ್ಥಾಪಿಸಿ, ಮುರುಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಆ ಜಾಗವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿದರು.

Sushma Chakre | news18-kannada
Updated:December 17, 2020, 9:02 AM IST
RN Shetty Death: ಖ್ಯಾತ ಉದ್ಯಮಿ ಆರ್​ಎನ್​ ಶೆಟ್ಟಿ ಹೃದಯಾಘಾತದಿಂದ ನಿಧನ; ಸಿಎಂ ಯಡಿಯೂರಪ್ಪ ಸಂತಾಪ
ಆರ್​ಎನ್​ ಶೆಟ್ಟಿ
  • Share this:
ಬೆಂಗಳೂರು (ಡಿ. 17): ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದ್ದ ಖ್ಯಾತ ಉದ್ಯಮಿ ಆರ್​.ಎನ್​. ಶೆಟ್ಟಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಆರ್​.ಎನ್​.ಎಸ್​ ಶಿಕ್ಷಣ ಸಂಸ್ಥೆಗಳ ಸ್ಥಾಪಕರೂ ಆಗಿರುವ ಆರ್​.ಎನ್. ಶೆಟ್ಟಿ ಅವರಿಗೆ 92 ವರ್ಷವಾಗಿತ್ತು. ಅವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಆರ್​ಎನ್​ಎಸ್​ ತಾಂತ್ರಿಕ ವಿದ್ಯಾಲಯ ಕಾಲೇಜಿನ ಆವರಣದಲ್ಲಿ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗುವುದು.

1928ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರುಡೇಶ್ವರದಲ್ಲಿ ಹುಟ್ಟಿದ ಆರ್​.ಎನ್. ಶೆಟ್ಟಿ ಉದ್ಯಮಿಯಾಗಿ ಯಶಸ್ವಿಯಾದರು. ತಮ್ಮ ಹುಟ್ಟೂರಾದ ಮುರುಡೇಶ್ವರದಲ್ಲಿ ಸಮುದ್ರ ತೀರದಲ್ಲಿ ಬೃಹತ್ ಶಿವನ ಮೂರ್ತಿ, ಎತ್ತರದ ರಾಜಗೋಪುರವನ್ನು ಸ್ಥಾಪಿಸಿ, ಮುರುಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಆ ಜಾಗವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿದ ಹೆಗ್ಗಳಿಕೆಯೂ ಆರ್​.ಎನ್. ಶೆಟ್ಟಿ ಅವರದ್ದೇ.

ಆರ್​.ಎನ್​. ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷಿಕ ಮನೆತನದಲ್ಲಿ ಹುಟ್ಟಿದ ಆರ್​.ಎನ್. ಶೆಟ್ಟಿ ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಹೋಟೆಲ್ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬಸ್ಥರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.ಶಿರಸಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ಆರಂಭಿಸಿದ ಆರ್​.ಎನ್. ಶೆಟ್ಟಿ ಬಳಿಕ ಆರ್​ಎನ್​ ಶೆಟ್ಟಿ ಆ್ಯಂಡ್ ಕಂಪನಿ ಎಂಬ ಕಂಪನಿಯನ್ನು 1967ರಲ್ಲಿ ಸ್ಥಾಪಿಸಿದರು. ಆ ಕಂಪನಿಯ ಪಾಲುದಾರರಾಗಿದ್ದ ಆರ್​ಎನ್​ ಶೆಟ್ಟಿ ಅದರ ಮೂಲಕ ಹೊನ್ನಾವರ-ಬೆಂಗಳೂರು ರಸ್ತೆಯ ಸೇತುವೆ ನಿರ್ಮಿಸಿದರು. ನಂತರ ಹಿಡಕಲ್ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ, ಮಾಣಿ ಡ್ಯಾಂ, ವರಾಹಿ ಡ್ಯಾಂ ಮುಂತಾದ ಯೋಜನೆಗಳ ಜೊತೆ ಕೈಜೋಡಿಸಿದರು. ಮಾರುತಿ ಉದ್ಯೋಗ್ ಲಿಮಿಟೆಡ್, ಆರ್​​ಎನ್​ಎಸ್​ ಮೋಟಾರ್ಸ್​, ಮುರುಡೇಶ್ವರ ಸೆರೆಮಿಕ್ಸ್, ನವೀನ್ ಹೋಟೆಲ್ ಲಿಮಿಟೆಡ್ ಸ್ಥಾಪಿಸಿ, ಉದ್ಯಮ ಕ್ಷೇತ್ರದಲ್ಲಿ ಆರ್​.ಎನ್. ಶೆಟ್ಟಿ ಖ್ಯಾತ ಪಡೆದರು.ಆರ್​ಎನ್​ಎಸ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಸ್ಥಾಪಿಸಿ ಶಿಕ್ಷಣ ರಂಗದಲ್ಲಿಯೂ ತಮ್ಮದೇ ಛಾಪು ಮೂಡಿಸಿದ ಆರ್​ಎನ್​ ಶೆಟ್ಟಿ ಅವರಿಗೆ 7 ಜನ ಮಕ್ಕಳು. ಮಂಗಳೂರು ಟೈಲ್ಸ್​ ತಯಾರಿಸುವ ಘಟಕ ಆರಂಭಿಸಿ ಸಾವಿರಾರು ಸ್ಥಳೀಯರಿಗೆ ಕೆಲಸ ಒದಗಿಸಿದರು. ದಿನಕ್ಕೆ 40,000 ಹೆಂಚುಗಳನ್ನು ತಯಾರಿಸುವ ಮಂಗಳೂರು ಟೈಲ್ಸ್​ ಘಟಕ ಕರ್ನಾಟಕದ ಅತಿದೊಡ್ಡ ಘಟಕಗಳಲ್ಲಿ ಒಂದಾಗಿದೆ.
Youtube Video

ಬೆಂಗಳೂರಿನಲ್ಲಿ ಫೈವ್ ಸ್ಟಾರ್​ ಹೋಟೆಲ್ ನಿರ್ಮಿಸಿ, ಅದನ್ನು ತಾಜ್ ಗ್ರೂಪ್​ನವರಿಗೆ ಲೀಸ್​ಗೆ ಕೊಟ್ಟರು. ಅದನ್ನು ತಾಜ್ ರೆಸಿಡೆನ್ಸಿ ಎಂದು ಕರೆಯಲಾಗುತ್ತದೆ. ಕೈಗಾರಿಕೆ, ಹೋಟೆಲ್ ಉದ್ಯಮ, ಶಿಕ್ಷಣ ಕ್ಷೇತ್ರ ಮುಂತಾದ ಹಲವು ಕ್ಷೇತ್ರಗಳಲ್ಲಿ ಆರ್​.ಎನ್. ಶೆಟ್ಟಿ ಪ್ರಸಿದ್ಧಿ ಪಡೆದಿದ್ದಾರೆ.
Published by: Sushma Chakre
First published: December 17, 2020, 9:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories