ಕಲ್ಲು ಮಾರಿಕೊಂಡು ಇದ್ದವರಿಗೇನು ಗೊತ್ತು?: ಪ್ರೀತಮ್​ ಗೌಡ ಅರೋಪಕ್ಕೆ ರೇವಣ್ಣ ತಿರುಗೇಟು


Updated:August 29, 2018, 5:24 PM IST
ಕಲ್ಲು ಮಾರಿಕೊಂಡು ಇದ್ದವರಿಗೇನು ಗೊತ್ತು?: ಪ್ರೀತಮ್​ ಗೌಡ ಅರೋಪಕ್ಕೆ ರೇವಣ್ಣ ತಿರುಗೇಟು

Updated: August 29, 2018, 5:24 PM IST
ಡಿಎಂಜಿ ಹಳ್ಳಿ ಅಶೋಕ್​, ನ್ಯೂಸ್​ 18 ಕನ್ನಡ

ಹಾಸನ(ಆ.29): ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಮಳೆಯಿಂದಾದ ಹಾನಿಯ ಕುರಿತಾಗಿ ಲೋಕೋಪಯೋಗಿ ಸಚಿವ ಹೆಚ್​. ಡಿ ರೇವಣ್ಣ ಪ್ರತಿಕ್ರಿಯಿಸಿದ್ದು, "ನಾಳೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದಾರೆ ಈ ಸಂದರ್ಭದಲ್ಲಿ ಮಳೆಯಿಂದಾದ ಹಾನಿಯ ಬಗ್ಗೆ ಸಿಎಂ ಪ್ರಧಾನಿಗೆ ಮನವಿ ಸಲ್ಲಿಸಲಿದ್ದಾರೆ. ಹಾಸನ ಜಿಲ್ಲೆಯ ಸುತ್ತಮುತ್ತ ಏಳು ಜಿಲ್ಲೆಗಳಲ್ಲಿ ಸಾಕಷ್ಟು ಆಸ್ತಿಪಾಸ್ತಿ ನಾಶವಾಗಿದೆ. ಬಿಸಿಲೆ ಘಾಟ್ ರಸ್ತೆ ಸರಿಪಡಿಸಲು ಇನ್ನೂ ಎರಡು ವರ್ಷಗಳ ಅವಧಿ ಬೇಕು. ಕೇಂದ್ರ ಸರ್ಕಾರ ಯಾವುದೇ ರಾಜಕೀಯ ಮಾಡಬಾರದು. ರಾಜ್ಯ ಸರ್ಕಾರ ಕೇಂದ್ರಕ್ಕೆ 2 ಸಾವಿರ ಕೋಟಿ ಹಣ ಬಿಡುಗಡೆ ಮಾಡುವಂತೆ ಪತ್ರ ಬರೆದಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಗೆ ಸ್ಪಂದಿಸುತ್ತಿಲ್ಲ" ಎಂದು ಕೇಂದ್ರವನ್ನು ದೂರಿದ್ದಾರೆ.

ಅಲ್ಲದೇ "ರಾಜ್ಯದಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಕೊಡಗಿನಲ್ಲಿ ರಸ್ತೆಗಳೇ ಸುಮಾರು 500 ಕೋಟಿಗೂ ಹೆಚ್ಚು ಹಾನಿಯಾಗಿದೆ. ಕೇರಳಕ್ಕೆ ಈಗಾಗಲೇ ಕೇಂದ್ರ ಸರ್ಕಾರ 500 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ರಾಜ್ಯಕ್ಕೆ ಕೇಂದ್ರ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ಬಿಜೆಪಿ ನಾಯಕರು ಬರೀ ಕುಮಾರಸ್ವಾಮಿ ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಬಿಜೆಪಿ ನಾಯಕರು ಭಾಷಣ ಮಾಡೋದು ಬಿಟ್ಟು ರಾಜಕೀಯ ಮಾಡದೇ ದೆಹಲಿಗೆ ಹೋಗಿ ಹಣ ತರಲಿ. ಪ್ರವಾಹದ ಭೀತಿಯಿಂದಾಗಿ ರಾಜ್ಯದ ಜನ ತತ್ತರಿಸಿಹೋಗಿದ್ದಾರೆ. ರಾಜ್ಯ ಸರ್ಕಾರ ಮನವಿ ಮಾಡಿದ ಅರ್ಧದಷ್ಟು ಹಣವನ್ನಾದ್ರೂ ಕೇಂದ್ರ ಬಿಡುಗಡೆ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.

ಭೂಗರ್ಭ ಶಾಸ್ತ್ರಜ್ಞರ ಭೇಟಿ

ಇದೇ ಸಂದರ್ಭದಲ್ಲಿ "ಶಿರಾಡಿಘಾಟ್ ಮತ್ತು ಮಡಿಕೇರಿ ಮಂಗಳೂರು ರಸ್ತೆಯಲ್ಲಿ ಇನ್ನೂ 6 ತಿಂಗಳು ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಡಿಕೇರಿಗೆ ಭೂಗರ್ಭ ಶಾಸ್ತ್ರಜ್ಞರೇ ಭೇಟಿ ನೀಡಿದ್ದರು. ಕುಸಿಯುತ್ತಿರುವ ಬೆಟ್ಟಗುಡ್ಡಗಳಿಂದಾಗಿ ಅವರೂ ಹೆದರಿಕೊಂಡು ಹೋಗಿದ್ದಾರೆ. ಕೊಡಗಿಗೆ ಈ ಹಿಂದೆಯೇ ಎರಡು ಬಾರಿ ಭೂಗರ್ಭಶಾಸ್ತ್ರಜ್ಞರು ಭೇಟಿ ನೀಡಿದ್ದಾರೆ. ಸೋಮವಾರಪೇಟೆ ಮತ್ತು ಸಕಲೇಶಪುರಕ್ಕೆ ನೂತನವಾಗಿ ಪರ್ಯಾಯ ರಸ್ತೆ ನಿರ್ಮಿಸಲಾಗುವುದು. ಅತಿಯಾದ ಮಳೆಯ ಹಿನ್ನೆಲೆ, 12 ಸಾವಿರ ಎಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಆಲೂಗಡ್ಡೆ ಶೇ80 ಕ್ಕೂ ಹೆಚ್ಚು ಹಾಳಾಗಿದೆ" ಎಂದು ರೇವಣ್ಣ ತಿಳಿಸಿದ್ದಾರೆ.

ಕಲ್ಲು ಮಾರಿಕೊಂಡು ಇದ್ದವರಿಗೇನು ಗೊತ್ತು?

ಹಾಸನಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಶೂನ್ಯ ಎಂಬ ಬಿಜೆಪಿ ಶಾಸಕ ಪ್ರೀತಮ್ ಗೌಡ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿರುವ ರೇವಣ್ಣ, "ಕಲ್ಲು ಮಾರಿಕೊಂಡು ಇದ್ದವರು ಅವರು, ಅವರಿಗೆ ಏನು ಗೊತ್ತು? ಸ್ವಲ್ಪ ಓದಿಕೊಂಡು ಬರೋಕೆ ಹೇಳಿ. ಅವರ ಬಗ್ಗೆ ನಾನು ಮಾತನಾಡಿದರೆ ಪೊಳ್ಳಾಗಬೇಕಾಗುತ್ತದೆ" ಎಂದೂ ಟೀಕಿಸಿದ್ದಾರೆ.
Loading...

ಸಚಿವ ಎ. ಮಂಜು ವಿರುದ್ಧ ಪರೋಕ್ಷ ವಾಗ್ದಾಳಿ

ಸಮ್ಮಿಶ್ರ ಸರ್ಕಾರ ಉರುಳಿದರೆ ಹೆಚ್. ಡಿ. ರೇವಣ್ಣ ಕಾರಣ ಎಂಬ ಮಾಜಿ ಸಚಿವ ಎ. ಮಂಜು ಆರೋಪ ವಿಚಾರವಾಗಿ ಮಾತನಾಡಿದ ಅವರು "ಮಾಜಿ ಸಚಿವ ಎ. ಮಂಜು ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಲು ಕರೆಯುವ ಮಿಷಿನ್ ನಿಂತಿದೆ ಅದಕ್ಕೆ ಈ ಆರೋಪ ಮಾಡುತ್ತಿದ್ದಾರೆ" ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ "ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿದ್ದ ಅಧಿಕಾರಿಗಳೇ ಇದ್ದಾರೆ. ನಾನು ಹಾಸನ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲ. ಎಲ್ಲಾ ಇಲಾಖೆಯಲ್ಲಿಯೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿದ್ದ ಅಧಿಕಾರಿಗಳೇ ಇದ್ದಾರೆ" ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

ಎತ್ತಿಹೊಳೆಯಿಂದ ಕುಸಿಯುತ್ತಿದೆಯೋ ಎಂದು ನಮಗೆ ತಿಳಿಯುತ್ತಿಲ್ಲ....!

ಮಡಿಕೇರಿಯಲ್ಲಿ ಭೂಕುಸಿತ ಮಾದರಿಯಲ್ಲೇ ಎತ್ತಿನಹೊಳೆಯಲ್ಲಿ ಭೂಕುಸಿತ ವಿಚಾರವಾಗಿ ನ್ಯೂಸ್18ಕನ್ನಡ ವಾಹಿನಿ ವರದಿ ಪ್ರಸಾರ ಮಾಡಿದ್ದು, ಇದೇ ಮೊದಲ ಬಾರಿ ಲೋಕೋಪಯೋಗಿ ಸಚಿವ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಾಗಿ ಮಾತನಾಡಿದ ಅವರು "ಅದು ಏನೂ ಅಂತಾ ನಮಗೆ ಗೊತ್ತಾಗುತ್ತಿಲ್ಲ. ಭೂಶಾಸ್ತ್ರಜ್ಞರಿಗೇ ಮಡಿಕೇರಿ ಮತ್ತು ಎತ್ತಿನಹೊಳೆ ಸುತ್ತಮುತ್ತಲ ಬೆಟ್ಟ ಕುಸಿಯುವ ಬಗ್ಗೆ ಗೊತ್ತಿಲ್ಲ. ಭೂಗರ್ಭ ಶಾಸ್ತ್ರಜ್ಞರೇ ಸ್ಥಳಕ್ಕೆ ಬರಲು ಹೆದರುತ್ತಿದ್ದಾರೆ. ಮಳೆ ನಿಲ್ಲುವವರೆಗೆ ಏನನ್ನೂ ಹೇಳಲಾಗಲ್ಲ. ನಿಖರವಾಗಿ ಹೇಳಬೇಕೆಂದರೆ ಮಳೆ ನಿಲ್ಲಲೇ ಬೇಕು. ಮೊದಲು ಭೂಗರ್ಭ ಶಾಸ್ತ್ರಜ್ಞರಿಂದ ತನಿಖೆ ಮಾಡಿಸುತ್ತೇವೆ. ಬಳಿಕ ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚೆ ಮಾಡುತ್ತೇವೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...