HOME » NEWS » State » RETURN THE MONEY TIED TO COVID TREATMENT BY THE PUBLIC DK SHIVAKUMAR APPEAL THE GOVT MAK

ಜನ ಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ಕಟ್ಟಿರುವ ಹಣ ಹಿಂದಿರುಗಿಸಿ; ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಮನವಿ

ಆಸ್ಪತ್ರೆ ಬಿಲ್ ಕಟ್ಟಲಾಗದೆ ಒದ್ದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಸೇರಿದವರ ಖರ್ಚು 5 ಲಕ್ಷ ರುಪಾಯಿಗಿಂತ ಕಡಿಮೆ ಆಗಿಲ್ಲ. ಅಂತವರ ಹಣವನ್ನು ಹಿಂದಿರುಗಿಸಿ ಎಂದು ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

news18-kannada
Updated:June 16, 2021, 11:24 PM IST
ಜನ ಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ಕಟ್ಟಿರುವ ಹಣ ಹಿಂದಿರುಗಿಸಿ; ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಮನವಿ
ಡಿಕೆ ಶಿವಕುಮಾರ್​ .
  • Share this:
ಬೆಂಗಳೂರು (ಜೂನ್ 16); 'ಆಸ್ಪತ್ರೆಗೆ ಹಣ ಕಟ್ಟಲಾಗದೆ ಪರದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಬಿಲ್ ಕಟ್ಟಲಾಗದೆ, ಹೆಣ ತರಲಾಗದ ಸ್ಥಿತಿಯೂ ಹಲವರಿಗಿದೆ. ಹೀಗಾಗಿ ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ವೆಚ್ಚ ಮಾಡಿರುವ ಹಣವನ್ನು ಹಿಂದಿರುಗಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಮನವಿ ಮಾಡಿದ್ದಾರೆ. ಬೆಂಗಳೂರಿನ ಜಯನಗರ, ಬಿಟಿಎಂ ಬಡಾವಣೆಯಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಆಯೋಜಿಸಿದ್ದ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ,

"ಮಾಧ್ಯಮಗಳ ವರದಿ ಪ್ರಕಾರ ಶೇ.47 ರಷ್ಟು ಜನಸಾಮಾನ್ಯರು ತಮ್ಮ ಬಳಿ ಇದ್ದ ಸಣ್ಣ-ಪುಟ್ಟ ಚಿನ್ನಾಭರಣ ಒತ್ತೆ ಇಟ್ಟು ಜೀವನ ನಡೆಸುತ್ತಿದ್ದಾರೆ. ಅದು ಅವರ ತಪ್ಪಲ್ಲ, ಅವರ ಸಾಲ ಮನ್ನಾ ಮಾಡಿ ಎಂದು ನಾನು ಕೇಳುವುದಿಲ್ಲ. ಆದರೆ ಆಸ್ಪತ್ರೆ ಬಿಲ್ ಕಟ್ಟಲಾಗದೆ ಒದ್ದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಸೇರಿದವರ ಖರ್ಚು 5 ಲಕ್ಷ ರುಪಾಯಿಗಿಂತ ಕಡಿಮೆ ಆಗಿಲ್ಲ.

ಸಾಕಷ್ಟು ಜನ ಹಣ ಕಟ್ಟಲಾಗುತ್ತಿಲ್ಲ ಅಂತಾ ನನ್ನ ಬಳಿಯೇ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಗೆ ಹೋದವರಲ್ಲಿ ಸಾಕಷ್ಟು ಜನ ಹೆಣವಾಗಿ ಬಂದರು. ಕುಟುಂಬ ಸದಸ್ಯರು ಸತ್ತರೆ, ಆಸ್ಪತ್ರೆ ಬಿಲ್ ಕಟ್ಟಿ ಹೆಣ ತರಲಾಗದ ಸ್ಥಿತಿ ಹಲವರಿಗಿದೆ. ಇವರಿಗೆ ಸರ್ಕಾರ ನೆರವಾಗಬೇಕು" ಎಂದು ಮನವಿ ಮಾಡಿದ್ದಾರೆ.

"ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನ ತಮ್ಮ ಹಣ ತೆಗೆದುಕೊಳ್ಳುವುದರಿಂದ ಹಿಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ, ಆಕ್ಸಿಜನ್, ಔಷಧ ಪಡೆಯಲು ಮಾತ್ರವಲ್ಲದೆ, ಕಡೆಗೆ ಶವಸಂಸ್ಕಾರಕ್ಕೂ ಕ್ಯೂ ನಿಲ್ಲುವಂತ ದುಸ್ಥಿತಿ ನಿರ್ಮಾಣವಾಯಿತು. ಇಂತಹ ಕೆಟ್ಟ ಸರ್ಕಾರವನ್ನು ನಾವು ಇದುವರೆಗೂ ನೋಡಿಲ್ಲ. ಈ ಸಮಸ್ಯೆಯಿಂದ ಮುಕ್ತಿ ಸಿಗಬೇಕಾದರೆ ಜನ ಈ ಸರ್ಕಾರವನ್ನು ಕಿತ್ತೊಗೆಯಬೇಕು.

ಕೊರೋನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಬೆಂಗಳೂರಿನ ಜನ ಸಾಮಾನ್ಯರಿಗೆ ಸತತ ನೆರವು ಕಾರ್ಯಕ್ರಮ ಮುಂದುವರಿಸಿಕೊಂಡು ಬಂದಿದ್ದು, ಬಿಟಿಎಂ ಹಾಗೂ ಜಯನಗರ ಕ್ಷೇತ್ರದಲ್ಲಿ. ಕಳೆದ ವರ್ಷವೂ ನಾನು ಇಲ್ಲಿಗೆ ನಾಲ್ಕು ಬಾರಿ ಆಗಮಿಸಿದ್ದೆ. ಈ ವರ್ಷವೂ ಬಂದಿದ್ದೇನೆ. 50 ಸಾವಿರ ಬಡ ಕುಟುಂಬಗಳಿಗೆ ನಮ್ಮ ನಾಯಕರು ಈ ಸಹಾಯ ಮಾಡುತ್ತಿದ್ದಾರೆ.

ಆಹಾರ ಕಿಟ್, ತರಕಾರಿ ಹಾಗೂ ಮೆಡಿಕಲ್ ಕಿಟ್ ಗಳನ್ನು ತಮ್ಮ ಸ್ವಂತ ಹಣದಿಂದ ನೀಡುತ್ತಿದ್ದಾರೆಯೇ ಹೊರತು, ಇವರಾರಿಗೂ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ. ಕಾರ್ಮಿಕ ಸಚಿವಾಲಯದಿಂದ ಬಂದ ಫುಡ್ ಕಿಟ್ ಮೇಲೆ ತಮ್ಮ ಫೋಟೋ ಹಾಕಿಕೊಂಡು ಹಂಚುತ್ತಿಲ್ಲ. ಮತದಾರರ ಬದುಕು ಉಳಿಸಲು ನಮ್ಮ ನಾಯಕರು ತಮ್ಮ ಶ್ರಮದ ಹಣದಿಂದ ನೆರವು ನೀಡಿ, ಅಮೋಘ ಸೇವೆ ಮಾಡುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಎಸ್​ಪಿ ಪಕ್ಷದಿಂದ ಅಮಾನತುಗೊಂಡ ಶಾಸಕರು ಅಖಿಲೇಶ್ ಭೇಟಿ; ಸಮಾಜವಾದಿ ಪಕ್ಷದಕ್ಕೆ ಮಾಯಾವತಿ ಶಾಪ!100 ನಾಟೌಟ್ ಜನರ ಹೋರಾಟ:

"ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮಾಡಿದ 100 ನಾಟೌಟ್ ಪ್ರತಿಭಟನೆ ಕೇವಲ ಪಕ್ಷದ ಕಾರ್ಯಕ್ರಮ ಅಲ್ಲ. ಅದು ಜನರ ಆಕ್ರೋಶದ ಪ್ರತಿಧ್ವನಿ. ಈ ವರ್ಷ 50 ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಅಮೆರಿಕದಲ್ಲೂ ಇಲ್ಲಿಗಿಂತ ಕಡಿಮೆ ಬೆಲೆ ಇದೆ. ಇಲ್ಲಿನ ಬೆಲೆ ಹೆಚ್ಚಳದಿಂದ ದಿನಬಳಕೆ ವಸ್ತುಗಳಿಂದ ಹಿಡಿದು ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ.

ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಟ್ರಬಲ್ ಶೂಟ್ ಸಭೆ ಆರಂಭ; ತಡವಾಗಿ ಬಂದು ಅಸಮಾಧಾನದ ಸಂದೇಶ ನೀಡಿದರಾ ಯೋಗೀಶ್ವರ್..?

ಆದರೆ ಜನರ ಆದಾಯದಲ್ಲಿ ಏನಾದರೂ ಏರಿಕೆಯಾಗಿದೆಯಾ..? ಇಲ್ಲವೇ ಇಲ್ಲ. ಆದರೆ ಸರ್ಕಾರದ ಬೊಕ್ಕಸ ಮಾತ್ರ ತುಂಬುತ್ತಿದೆ. ಅದೇ ಕಾರಣಕ್ಕೆ ನಾವು ಈ ಸರ್ಕಾರ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಹೇಳುತ್ತಿದ್ದೇವೆ. ಕೊರೋನಾ ವಿಚಾರದಲ್ಲಿ ಡೆತ್ ಆಡಿಟ್ ಮಾಡಿ ಎಂದು ನಾವು ಆಗ್ರಹಿಸಿದೆವು. ಈಗ ನಮ್ಮ ಒತ್ತಾಯದ ಮೇರೆಗೆ ಕೆಲವು ಮೃತರಿಗೆ ₹1 ಲಕ್ಷ ರುಪಾಯಿ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ.
Youtube Video

ಯಡಿಯೂರಪ್ಪನವರೆ, ಕೋವಿಡ್ ಚಿಕಿತ್ಸೆಗಾಗಿ ಯಾರೆಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಹಣ ಖರ್ಚು ಮಾಡಿದ್ದಾರೋ, ಅವರಿಗೆ ಆ ಹಣ ಹಿಂದುರಿಗಿಸಿ. ನಿಮ್ಮ ಆಯುಷ್ಮಾನ್ ಭಾರತ ಯೋಜನೆ ಮೂಲಕವಾಗಲಿ ಅಥವಾ ಬೇರೆ ಯಾವುದೇ ಯೋಜನೆಗಳ ಮೂಲಕವಾಗಲಿ ಜನರಿಗೆ ಅವರ ಹಣ ಹಿಂದಿರುಗಿಸಿ ಎಂದು ಕಾಂಗ್ರೆಸ್ ಪರವಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Published by: MAshok Kumar
First published: June 16, 2021, 11:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories