Investigation Report: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ; 600 ಪುಟಗಳ ತನಿಖಾ ವರದಿ ಸಲ್ಲಿಕೆ

ಅಕ್ರಮದಲ್ಲಿ ಜೈಲಿನ ಸಿಬ್ಬಂದಿ ಜೊತೆ ಕೈದಿ ಸೇರಿ 10ಕ್ಕೂ ಹೆಚ್ಚು ಮಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎನ್ನಲಾಗಿದೆ. ಅಕ್ರಮ ಬಗ್ಗೆ ಜೈಲಿನಲ್ಲಿ ಆಗಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ತನಿಖಾ ತಂಡ ವರದಿ ಸಲಹೆ ನೀಡಿದೆ.

ಪರಪ್ಪನ ಅಗ್ರಹಾರ

ಪರಪ್ಪನ ಅಗ್ರಹಾರ

  • Share this:
ಬೆಂಗಳೂರು (ಜೂ 21) : ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ನಡೆದಿದ್ದ ಎನ್ನಲಾಗಿದ್ದ ಅಕ್ರಮ ಬಗ್ಗೆ ತನಿಖೆ ನಡೆಸಿ ರಿಪೋರ್ಟ್ (Report)  ನೀಡಲಾಗಿದೆ. ಐಪಿಎಸ್ ಅಧಿಕಾರಿ ಎಡಿಜಿಪಿ ಮುರುಗನ್ (ADGP Murugan) ಅವರು ವರದಿ ನೀಡಿದ್ದು, ಜೈಲಿನಲ್ಲಿ ಅವ್ಯವಹಾರ ನಡೆದಿರುವುದು ತನಿಖೆಯಲ್ಲಿ ಸಾಬೀತಾಗಿದ್ದು ಜೈಲು ಸಿಬ್ಬಂದಿ (Prison Guard) ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದಾರೆ. ಜೈಲಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಗಾಂಜಾ ದಂಧೆ, ಸೆರೆಮನೆಯಲ್ಲಿ ಇದ್ದುಕೊಂಡು ಪರೋಕ್ಷವಾಗಿ ಅಪರಾಧ ಚಟುವಟಿಕೆ (Criminal Activity) ಭಾಗಿ, ಐಷಾರಾಮಿ ಸೌಲಭ್ಯ (Luxury Facility) ಕಲ್ಪಿಸಲು ಸಿಬ್ಬಂದಿಗೆ ಲಂಚಾವತಾರ ಬಗ್ಗೆ ಕಳೆದ ಜನವರಿಯಲ್ಲಿ ಮಾಧ್ಯಮಗಳಲ್ಲಿ ವಿಡಿಯೋ ಬಿತ್ತರವಾಗಿತ್ತು.

600 ಪುಟಗಳ ತನಿಖಾ ವರದಿ

ಇದು ಸರ್ಕಾರದ ಮಟ್ಟದಲ್ಲಿಯೂ ತೀವ್ರ ಚರ್ಚೆಗೆ ಎಡೆ  ಮಾಡಿಕೊಟ್ಟಿತ್ತು. ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಐಪಿಎಸ್ ಅಧಿಕಾರಿ ಮುರುಗನ್ ಅವರಿಗೆ ಸೂಚಿಸಿತ್ತು. ಇದರಂತೆ ತನಿಖೆ ಕೈಗೊಂಡ ಮುರುಗನ್ ನೇತೃತ್ವದ ತನಿಖಾ ತಂಡ ಜೈಲಿಗೆ ಖುದ್ದು ತೆರಳಿ ಸಾಕ್ಷಿಗಳ ವಿಚಾರಣೆ ಸೇರಿ ಎಲ್ಲಾ ಆಯಾಮದಲ್ಲಿ ವಿಚಾರಣೆ ನಡೆಸಿ ಕಾರಾಗೃಹ ಇಲಾಖೆಯ ಮುಖ್ಯಸ್ಥ ಅಲೋಕ್ ಮೋಹನ್ ಸುಮಾರು 600 ಪುಟಗಳ ತನಿಖಾ ವರದಿ ನೀಡಿದೆ.

ಜೈಲಿನಲ್ಲಿ ಅವ್ಯಾಹತವಾಗಿ ಡ್ರಗ್ಸ್ ದಂಧೆ

ಲಂಚ ನೀಡುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲೇ ಉನ್ನತ ತನಿಖೆಗೆ ಆದೇಶಿಸಿದ್ದ ಸರ್ಕಾರಕ್ಕೆ ತನಿಖಾ ತಂಡ ವರದಿ ನೀಡಿದೆ. ಜೈಲಿನಲ್ಲಿ ಅವ್ಯಾಹತವಾಗಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಅಕ್ರಮದ ಹಿಂದೆ ಜೈಲು ಸಿಬ್ಬಂದಿ ಹಾಗೂ ಅಧಿಕಾರಿಗಳ ಕೈವಾಡವಿದೆ. ಸೆರೆಮನೆಗೆ ಸುಲಭವಾಗಿ ಮೊಬೈಲ್, ಮಾದಕವಸ್ತು ಅಡೆತಡೆಯಿಲ್ಲದೆ ಬರುತ್ತಿದೆ. ಇದರಿಂದ ಸಿಬ್ಬಂದಿ ಕೈಚಳಕ ಜೊತೆಗೆ ಭದ್ರತಾ ಲೋಪವಿದೆ. ಮೊಬೈಲ್ ಬಳಕೆಯಿಂದ ಪರೋಕ್ಷವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ.

10ಕ್ಕೂ ಹೆಚ್ಚು ಮಂದಿ ವಿರುದ್ಧ ಕ್ರಮಕ್ಕೆ ಶಿಫಾರಸು

ಅಕ್ರಮದಲ್ಲಿ ಜೈಲಿನ ಸಿಬ್ಬಂದಿ ಜೊತೆ ಕೈದಿ ಸೇರಿ 10ಕ್ಕೂ ಹೆಚ್ಚು ಮಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎನ್ನಲಾಗಿದೆ. ಅಕ್ರಮ ಬಗ್ಗೆ ಜೈಲಿನಲ್ಲಿ ಆಗಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ತನಿಖಾ ತಂಡ ವರದಿ ಸಲಹೆ ನೀಡಿದೆ. ಆಡಳಿತಾತ್ಮಕವಾಗಿ ಬದಲಾವಣೆ ಮಾಡುವಂತೆ ಹೇಳಿದೆ.

ತಪ್ಪಿತಸ್ಥರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದ್ದು, ಬಹಳ ವರ್ಷಗಳಿಂದ ಠಿಕಾಣಿ ಹೂಡಿದ್ದ ಸಿಬ್ಬಂದಿ ವರ್ಗಾವಣೆ ಮಾಡಬೇಕು. ಭದ್ರತಾ ವ್ಯವಸ್ಥೆಯಲ್ಲಿ ಇನ್ನಷ್ಟು ಬಲಗೊಳಿಸಬೇಕು. ಜೈಲಿನಲ್ಲಿ ಭಯದ ವಾತಾವರಣವಿದ್ದು ಇದನ್ನು ಹೋಗಲಾಡಿಸುವ ಕೆಲಸವಾಗಬೇಕಿದೆ ಎಂಬುದರ ಸೇರಿದಂತೆ ಹಲವು ಸುಧಾರಣಾತ್ಮಕ ಅಂಶಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದು, ಸದ್ಯ ಕಾರಾಗೃಹ ಇಲಾಖೆಯ ಎಡಿಜಿಪಿ ಅಲೋಕ್ ಮೋಹನ್ ಮುಖಾಂತರ ಸರ್ಕಾರ ವರದಿ ನೀಡಿದೆ.

7 ಮಂದಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ

ಇದರ ಬೆನ್ನಲ್ಲೇ ಜೈಲಿನ‌ 7 ಮಂದಿ ಅಧಿಕಾರಿಗಳನ್ನ ಬೇರೆ ಬೇರೆ ಜೈಲಿಗಳಿಗೆ ಶಿಸ್ತುಕ್ರಮದ ಮೇಲೆ ವರ್ಗಾವಣೆ ಮಾಡಲಾಗಿದೆ. ಐಪಿಎಸ್ ಅಧಿಕಾರಿ ಎಸ್.ಮುರುಗನ್ ಅವರು ನೀಡಿದ್ದ ವರದಿ ಪರಿಶೀಲಿಸಿರುವ ಸರ್ಕಾರ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ‌.

ಜೈಲಿಗೆ ಶಿಸ್ತುಕ್ರಮದ ಮೇಲೆ ವರ್ಗಾವಣೆ

ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್.‌ ಅಶೋಕ್ (ವಿಜಯಪುರ), ಎಸ್.ಎನ್.ರಮೇಶ್ (ಬಳ್ಳಾರಿ), ಶಿವಾನಂದ ಕೆ.ಗಾಣಿಗಾರ್ (ಬೆಳಗಾವಿ),  ಉಮೇಶ್ ಆರ್.ದೊಡ್ಡಮನಿ (ಮೈಸೂರು), ಲೊಕೇಶ್ ಪಿ. (ಧಾರವಾಡ), ಭೀಮಣ್ಣ ದೇವಪ್ಪ ನೆದಲಗಿ (ಶಿವಮೊಗ್ಗ) ಹಾಗೂ ಮಹೇಶ್ ಸಿದ್ದನಗೌಡ ಪಾಟೀಲ್ ಕಲಬುರಗಿ ಜೈಲಿಗೆ ಶಿಸ್ತುಕ್ರಮದ ಮೇಲೆ ವರ್ಗಾವಣೆ ಮಾಡಿದೆ.

ಜೈಲಿನಲ್ಲಿ‌ ಐಷರಾಮಿ ಸೌಲಭ್ಯಕ್ಕಾಗಿ ಸಿಬ್ಬಂದಿ,‌ ಡ್ರಗ್ಸ್ ಅವ್ಯವಹಾರದ ಬಗ್ಗೆ ವಿಡಿಯೊ ವೈರಲ್ ಆಗಿತ್ತು. ಈ ಸಂಬಂಧ ತನಿಖೆ ನಡೆಸಿ 18 ಮಂದಿ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ‌ ಜರುಗಿಸಲು ಶಿಫಾರಸ್ಸು ಸೇರಿದಂತೆ ಹಲವು ಅಂಶಗಳ ಬಗ್ಗೆ‌ ಮುರುಗನ್ ಅವರು ವರದಿ ನೀಡಿದ್ದರು.
Published by:Pavana HS
First published: