K Sudhakar: ಕೋವಿಡ್ ಬಗ್ಗೆ ಉತ್ತರ ಕೇಳದೆ ಪಲಾಯನ ಮಾಡಿದ ಕಾಂಗ್ರೆಸ್ ಬದ್ಧತೆ ಬಟಾಬಯಲು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ

ಐಸಿಎಂಆರ್ ರೂಪಿಸಿದ ಮಾರ್ಗಸೂಚಿ ಪ್ರಕಾರವೇ ಮರಣಗಳನ್ನು ದಾಖಲಾಗಿಸುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ ನಲ್ಲಿ ಆಗಿರುವ ಕ್ಲೇಮುಗಳೆಲ್ಲ ಮರಣಗಳು ಎಂದು ತಪ್ಪಾಗಿ ಸದನಕ್ಕೆ ಮಾಹಿತಿ ನೀಡಿದ್ದಾರೆ ಎಂದು ಸುಧಾಕರ್ ಆರೋಪಿಸಿದರು.

ಸಚಿವ ಸುಧಾಕರ್

ಸಚಿವ ಸುಧಾಕರ್

 • Share this:
  ಬೆಂಗಳೂರು (ಸೆಪ್ಟೆಂಬರ್ 24, ಶುಕ್ರವಾರ): ವಿಧಾನಸಭೆಯ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕೋವಿಡ್ ಕುರಿತು ಸರ್ಕಾರದ ಉತ್ತರ ಕೇಳದೆ ಪಲಾಯನ ಮಾಡಿರುವ ಕಾಂಗ್ರೆಸ್ ನ (Congress) ನಡೆ, ಜನರ ಆರೋಗ್ಯದ ಬಗ್ಗೆ ಪಕ್ಷಕ್ಕೆ ಇರುವ ಕಾಳಜಿ ಮತ್ತು ಬದ್ಧತೆಯನ್ನು ಬಟಾಬಯಲು ಮಾಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (Health Minister K Sudhakar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಗುರುವಾರ ಕೋವಿಡ್ ಕುರಿತು ದೀರ್ಘ ಚರ್ಚೆ ನಡೆದಿತ್ತು. ಶುಕ್ರವಾರ ಸಚಿವ ಡಾ.ಕೆ.ಸುಧಾಕರ್ ಅವರು ಉತ್ತರ ನೀಡಲು ಮುಂದಾದಾಗ ಕಾಂಗ್ರೆಸ್ ಸದಸ್ಯರು ಉತ್ತರವನ್ನು ಕೇಳದೆ ಸಭಾತ್ಯಾಗ ಮಾಡಿದರು.

  ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಡಾ.ಕೆ.ಸುಧಾಕರ್, ಕೋವಿಡ್ ನಿರ್ವಹಣೆ ಕುರಿತು ಸದನದಲ್ಲಿ 5 ಗಂಟೆ ರಾಜಕೀಯ ಭಾಷಣ ಮಾಡಿದ ವಿಪಕ್ಷಗಳಿಗೆ ಇಂದು ಸರ್ಕಾರದ ಉತ್ತರ ಕೇಳುವ ಆಸಕ್ತಿಯೂ ಇಲ್ಲ, ಧೈರ್ಯವೂ ಇಲ್ಲ. ಸತ್ಯವನ್ನು ಕೇಳದೆ ಅವರು ಪಲಾಯನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸದಸ್ಯರು, ತಾವು ಮಾಡಿರುವ ಎಲ್ಲ ಆರೋಪ ಸತ್ಯಕ್ಕೆ ದೂರವಾದುದು, ರಾಜಕೀಯ ಪ್ರೇರಿತ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ನಡೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕೋವಿಡ್ ಸಾವಿನಲ್ಲೂ ರಾಜಕೀಯ ಮಾಡಲು ಹೊರಟಿರುವ ಕಾಂಗ್ರೆಸ್ ನ ಕೀಳು ಸಂಸ್ಕೃತಿಯನ್ನು ರಾಜ್ಯದ ಜನರು ಗಮನಿಸಿದ್ದಾರೆ. ಸಾವಿನ ಮನೆಯಲ್ಲೂ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ ನ ನೀಚ ರಾಜಕೀಯವನ್ನು ಜನರು ಕ್ಷಮಿಸುವುದಿಲ್ಲ ಎಂದು ಸಚಿವರು ಆಕ್ರೋಶ ಹೊರಹಾಕಿದ್ದಾರೆ.

  “ನಿಂದಿಸುವನೊಬ್ಬ, ಸ್ತುತಿಸುವನೊಬ್ಬ,
  ಇವರಿಬ್ಬರು ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ.
  ಪಾಪವನೊಬ್ಬ ಕೊಂಬ, ಪುಣ್ಯವನೊಬ್ಬ ಕೊಂಬ,
  ಕೂಡಲಸಂಗಮದೇವಾ, ನಿಮ್ಮ ಶರಣರು ನಿತ್ಯಮುಕ್ತರು”

  ಎಂದು ಜಗದ್ಗುರು ಬಸವಣ್ಣನವರು ಹೇಳಿದ್ದಾರೆ. ಅದೇ ರೀತಿ ಪ್ರತಿಪಕ್ಷಗಳು ನಿಂದನೆ ಮಾಡುವುದು ಹೊಸ ವಿಚಾರವಲ್ಲ. ಆದರೆ ಕಾಂಗ್ರೆಸ್ ನವರಂತೆ ರಾಜಕೀಯ ಭಾಷಣ ಮಾಡಬಾರದು.ಇದು ಶತಮಾನದ ಅತೀ ದೊಡ್ಡ ಸಾಂಕ್ರಾಮಿಕವಾಗಿದ್ದು, ಸ್ವತಂತ್ರ ಭಾರತ ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲಾಗಿದೆ. ಸ್ವಾತಂತ್ರ್ಯ ಬಂದ ನಂತರ ನಡೆದ ಎಲ್ಲ ಯುದ್ಧಗಳಲ್ಲಿ ನಾವು ಎಷ್ಟು ಜನರನ್ನು ಕಳೆದುಕೊಂಡಿದ್ದೆವೆಯೋ ಪ್ರಾಯಶಃ ಅದಕ್ಕಿಂತ ಹೆಚ್ಚು ಜನರನ್ನು ಈ ಸಾಂಕ್ರಾಮಿಕದಲ್ಲಿ ಕಳೆದುಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ವಿಪಕ್ಷಗಳಿಂದ ಜನತೆ ನಿರೀಕ್ಷಿಸುವುದು ಆಪಾದನೆ ಅಲ್ಲ, ಸಂವೇದನೆ ಎಂಬುದನ್ನು ಅರಿಯಬೇಕು. ಸಂಘರ್ಷ ಅಲ್ಲ ಸಹಕಾರ, ಪ್ರತಿಷ್ಠೆ ಅಲ್ಲ ಪ್ರಾಮಾಣಿಕತೆ, ರಾಜಕಾರಣ ಅಲ್ಲ ಅಂತಃಕರಣ ಎಂಬುದನ್ನು ತಿಳಿಯಬೇಕು ಎಂದು ಸಚಿವರು ಹೇಳಿದ್ದಾರೆ.

  ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಬೇರೆ ಬೇರೆ ಇರಬಹುದು. ಆದರೆ ಆಡಳಿತ ಹಾಗೂ ವಿರೋಧ ಪಕ್ಷಗಳ ಗುರಿ ಒಂದೇ ಆಗಿರಬೇಕು. ನಮ್ಮ ದೃಷ್ಟಿ ಸದಾ ಜನಹಿತದ ಕಡೆ ಇದ್ದು, ಸದಾ ಜನ ಕಲ್ಯಾಣದ ಗುರಿ ಇರಬೇಕು. ಆದರೆ ಇಂದು ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರದ ದೃಷ್ಟಿ ಜನಹಿತದ ಮೇಲಿದ್ದರೆ, ವಿಪಕ್ಷಗಳ ದೃಷ್ಟಿ ಅಧಿಕಾರದ ಕುರ್ಚಿಯ ಮೇಲಿದೆ. ಸರ್ಕಾರದ ಕಾರ್ಯಗಳು ಜನರ ಜೀವ ಉಳಿಸುವ, ಜನಕಲ್ಯಾಣದ ಕಡೆಗೆ ಇದ್ದರೆ, ವಿಪಕ್ಷಗಳ ಚಟುವಟಿಕೆಗಳು ಸಾವಿನ ಮನೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಡೆ ಇದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

  ಅಂಕಿ ಅಂಶ ಮುಚ್ಚಿಟ್ಟಿಲ್ಲ

  ಕೊರೋನಾದಿಂದ ಉಂಟಾದ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದ್ದೇವೆ ಎಂದು ವಿಪಕ್ಷಗಳು ಆರೋಪ ಮಾಡುವುದು ಸತ್ಯಕ್ಕೆ ದೂರವಾದ ಮಾತು. ಕೋವಿಡ್ ಅಂಕಿ ಅಂಶಗಳನ್ನು ಮುಚ್ಚಿಡುವ ಯಾವುದೇ ಅವಶ್ಯಕತೆ ಆಗಲಿ ಅಥವಾ ಉದ್ದೇಶ ಆಗಲಿ ನಮ್ಮ ಸರ್ಕಾರಕ್ಕೆ ಇಲ್ಲ. ಐಸಿಎಂಆರ್ ಮಾರ್ಗಸೂಚಿ ಪ್ರಕಾರವೇ ಎಲ್ಲ ಅಂಕಿ- ಅಂಶಗಳು ದಾಖಲಾಗುತ್ತವೆ. ನಾವೆಲ್ಲರೂ ಒಂದು ವ್ಯವಸ್ಥೆಯಲ್ಲಿ, ಸಾಂವಿಧಾನಿಕ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಭಾರತ ಒಂದು ಕ್ರಿಯಾಶೀಲ, ಮುಕ್ತ ಪ್ರಜಾಪ್ರಭುತ್ವವಾಗಿದ್ದು, ಮೂರು ಹಂತಗಳ ಪ್ರಜಾಪ್ರಭುತ್ವ ಇದೆ. ಗ್ರಾಮ ಪಂಚಯಿತಿಗಳವರೆಗೂ ಅಧಿಕಾರ ವಿಕೇಂದ್ರೀಕರಣ ಆಗಿದೆ. ಮುಕ್ತವಾದ ಮಾಧ್ಯಮಗಳು ಇವೆ. ಎಲ್ಲಕ್ಕಿಂತ ಮಿಗಿಲಾಗಿ ಇವತ್ತಿನ ದಿನ ಜನರು ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾದ ಸೋಶಿಯಲ್ ಮೀಡಿಯಾಗಳಿವೆ. ಇಂತಹ ಮುಕ್ತ ವ್ಯವಸ್ಥೆಯಲ್ಲಿ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಸಾಧ್ಯವೇ? ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.

  ಸದನಕ್ಕೆ ತಪ್ಪು ಮಾಹಿತಿ

  ಐಸಿಎಂಆರ್ ರೂಪಿಸಿದ ಮಾರ್ಗಸೂಚಿ ಪ್ರಕಾರವೇ ಮರಣಗಳನ್ನು ದಾಖಲಾಗಿಸುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ ನಲ್ಲಿ ಆಗಿರುವ ಕ್ಲೇಮುಗಳೆಲ್ಲ ಮರಣಗಳು ಎಂದು ತಪ್ಪಾಗಿ ಸದನಕ್ಕೆ ಮಾಹಿತಿ ನೀಡಿದ್ದಾರೆ. ಎಸ್‍ಎಎಸ್‍ಟಿ ಸಂಸ್ಥೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ವಿಮೆ ಯೋಜನೆಯನ್ನು ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ಕ್ಲೇಮ್ ಬಂದಿರುವುದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಸೋಂಕಿತರದ್ದಾಗಿದೆ. ಮೊದಲನೇ ಅಲೆಯಲ್ಲಿ ವೈರಾಣುವಿನ ಗುಣಲಕ್ಷಣಗಳಿಗೂ ಎರಡನೇ ಅಲೆಯಲ್ಲಿ ವೈರಾಣುವಿನ ಗುಣಲಕ್ಷಣಗಳಿಗೂ ಬಹಳ ವ್ಯತ್ಯಾಸವಿದೆ. ಎರಡನೇ ಅಲೆಯಲ್ಲಿ ವೈರಾಣು ಬಹಳ ತೀವ್ರವಾಗಿ ಹರಡುವ ಮತ್ತು ಹೆಚ್ಚು ಗಂಭೀರ ಸೋಂಕು ಉಂಟುಮಾಡುವ ಲಕ್ಷಣ ಹೊಂದಿತ್ತು. ಇದು ಯಾವ ತಜ್ಞರ ಊಹೆಗೂ ಮತ್ತು ಅಂದಾಜಿಗೂ ಮೀರಿದ್ದ ಪರಿಸ್ಥಿತಿಯಾಗಿತ್ತು ಎಂದು ಸಚಿವರು ಹೇಳಿದ್ದಾರೆ.

  ಇದನ್ನು ಓದಿ: Cinema Theatres Open: ಪೂರ್ಣಪ್ರಮಾಣದಲ್ಲಿ ಸಿನಿಮಾ ಥಿಯೇಟರ್ ತೆರೆಯಲು ಅನುಮತಿ; ಅ.3ರಿಂದ ಪಬ್ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್!

  ಮೂಲಸೌಕರ್ಯ ಅಭಿವೃದ್ಧಿ

  ಕೋವಿಡ್ 2 ನೇ ಅಲೆಗೆ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಪ್ರತಿಪಕ್ಷದವರು ಟೀಕಿಸಿದ್ದರು. ಆದರೆ ಸಚಿವ ಡಾ.ಕೆ.ಸುಧಾಕರ್ ಅವರು, ಸರ್ಕಾರ ಮಾಡಿಕೊಂಡ ಸಿದ್ಧತೆಗಳ ಬಗ್ಗೆ ಅಂಕಿ ಅಂಶ ಸಹಿತ ವಿವರವಾದ ಮಾಹಿತಿಯನ್ನು ಸದನಕ್ಕೆ ಸಲ್ಲಿಸಿದ್ದಾರೆ.

  ಮೊದಲ ಅಲೆಯಲ್ಲಿ ಗರಿಷ್ಠ ಒಂದು ದಿನಕ್ಕೆ ದಾಖಲಾದ ಪ್ರಕರಣಗಳನ್ನು ಗಮನಿಸಬೇಕು. ಆಗ 2020 ರ ಅಕ್ಟೋಬರ್ 7 ರಂದು ದಾಖಲಾದ ಪ್ರಕರಣ 10,947. ಎರಡನೇ ಅಲೆಯಲ್ಲಿ 2021 ರ ಮೇ 5 ರಂದು ದಾಖಲಾದ ಪ್ರಕರಣ 50,112. ಅಂದರೆ ಮೊದಲನೇ ಅಲೆಗಿಂತ ಎರಡನೇ ಅಲೆ 5 ಪಟ್ಟು ಹೆಚ್ಚು ವೇಗವಾಗಿತ್ತು. ರೂಪಾಂತರಗೊಂಡ ವೈರಾಣುವಿನಿಂದಲೂ ಸಮಸ್ಯೆ ಹೆಚ್ಚಾಗಿತ್ತು ಎಂಬ ವಾಸ್ತವವನ್ನು ಸಚಿವರು ವಿವರಿಸಿದ್ದಾರೆ.
  Published by:HR Ramesh
  First published: