WEF: 7 ವರ್ಷದಲ್ಲಿ 50 ಸಾವಿರ ಕೋಟಿ ರೂ ಹೂಡಿಕೆಗೆ ಕರ್ನಾಟಕದ ಜೊತೆ ಸಹಿ ಹಾಕಿದೆ ರಿನ್ಯೂ ಪವರ್

ಈ ಕಂಪನಿಯು ಮುಂದಿನ 7 ವರ್ಷಗಳಲ್ಲಿ ಎರಡು ಹಂತಗಳಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಮೊದಲ ಹಂತದಲ್ಲಿ 11,900 ಕೋಟಿ ರೂ.ಗಳನ್ನು ರಾಜ್ಯದಲ್ಲಿ ನಡೆಯುತ್ತಿರುವ ಯೋಜನೆಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ.

ಒಪ್ಪಂದಕ್ಕೆ ಸಹಿ ಹಾಕಿರೋದು

ಒಪ್ಪಂದಕ್ಕೆ ಸಹಿ ಹಾಕಿರೋದು

  • Share this:
ನವೀಕರಿಸಬಹುದಾದ ಇಂಧನ ಸಂಸ್ಥೆ ರಿನ್ಯೂ ಪವರ್ (Renewable energy firm ReNew Power) ಕರ್ನಾಟಕ ಸರ್ಕಾರದೊಂದಿಗೆ (Karnataka Government) ಮುಂದಿನ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ (Investment) ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ. ಮಂಗಳವಾರ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ (World Economic Forum) ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸ್ವಿಸ್ ಸ್ಕೀ ರೆಸಾರ್ಟ್ ಟೌನ್‌ ನಲ್ಲಿ ನಡೆದ WEF ಸಭೆಗೆ ಭೇಟಿ ನೀಡಿದ ಎರಡನೇ ದಿನದಂದು ಸಿಎಂ ಬೊಮ್ಮಾಯಿ ಅವರು ವಿವಿಧ ದೇಶಗಳ ಉದ್ಯಮದ ಮುಖ್ಯಸ್ಥರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು. ಸಭೆಯಲ್ಲಿ ಕರ್ನಾಟಕದತ್ತ ಹೂಡಿಕೆದಾರರನ್ನು ಸೆಳೆಯಲು ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದಾರೆ.

ರಿನ್ಯೂ ಪವರ್ 30,000 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯದೊಂದಿಗೆ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸಂಗ್ರಹಣೆ ಮತ್ತು ಗ್ರೀನ್ ಹೈಡ್ರೋಜನ್‌ನಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ಹಂತಗಳಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ

ಈ ಕಂಪನಿಯು ಮುಂದಿನ 7 ವರ್ಷಗಳಲ್ಲಿ ಎರಡು ಹಂತಗಳಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಮೊದಲ ಹಂತದಲ್ಲಿ 11,900 ಕೋಟಿ ರೂ.ಗಳನ್ನು ರಾಜ್ಯದಲ್ಲಿ ನಡೆಯುತ್ತಿರುವ ಯೋಜನೆಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಈ ಯೋಜನೆಗಳು ಮುಂದಿನ ಎರಡು ವರ್ಷಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಇನ್ನು ಎರಡನೇ ಹಂತದಲ್ಲಿ ಮುಂದಿನ 5 ವರ್ಷ ನವೀಕರಿಸಬಹುದಾದ ಇಂಧನ ಮತ್ತು ಹಸಿರು ಹೈಡ್ರೋಜನ್ ಘಟಕಗಳನ್ನು ಸ್ಥಾಪಿಸಲು ರೂ 37,500 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ.

ಇದನ್ನೂ ಓದಿ:  WEF Davos: ಕರ್ನಾಟಕದಲ್ಲಿ 2 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಲುಲು, 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ

ಈ ಒಪ್ಪಂದವನ್ನು ಕರ್ನಾಟಕದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮೈಲಿಗಲ್ಲು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಣ್ಣಿಸಿದ್ದಾರೆ.

12 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆ

ರಿನ್ಯೂ ಪವರ್ ದೇಶದ ಒಂಬತ್ತು ರಾಜ್ಯಗಳಲ್ಲಿರುವ 120 ಪವನ, ಸೌರ ಮತ್ತು ಜಲವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಿದೆ. ಕಂಪನಿಯು ದೇಶದಲ್ಲಿ ತನ್ನ ಸ್ಥಾವರಗಳ ಮೂಲಕ ಸುಮಾರು 12 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇನ್ನು ವಿಶೇಷವಾಗಿ ರಿನ್ಯೂ ಪವರ್ ಕರ್ನಾಟಕದಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ.

ಮಂಗಳವಾರದಂದು ಮುಖ್ಯಮಂತ್ರಿಗಳು ಭಾರ್ತಿ ಎಂಟರ್‌ ಪ್ರೈಸಸ್‌ ನ ಅಧ್ಯಕ್ಷ ಮತ್ತು ಸಿಇಒ ಸುನಿಲ್ ಭಾರ್ತಿ ಮಿತ್ತಲ್ ಅವರನ್ನು ಭೇಟಿಯಾದರು. ರಾಜ್ಯದಲ್ಲಿ 'ಮೆಗಾ ಡೇಟಾ ಸೆಂಟರ್' ಸ್ಥಾಪಿಸಲು ಮಿತ್ತಲ್ ಅವರು ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದು, ಇದನ್ನು ನನಸಾಗಿಸಲು ರಾಜ್ಯ ಸರ್ಕಾರದಿಂದ ಎಲ್ಲ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಲಾಗಿದೆ.

ಹೂಡಿಕೆ ಅವಕಾಶಗಳ ಕುರಿತು ಚರ್ಚೆ

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಕೂಡ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳ ಕುರಿತು ಚರ್ಚೆ ನಡೆಸಿದ್ದಾರೆ.

ಈ ಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ, ಬಿಟಿ ಸಚಿವ ಸಿ ಎನ್ ಅಶ್ವಥ್ ನಾರಾಯಣ್, ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ, ಸಿಎಂ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್, ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ಅದಾನಿ ಭೇಟಿಯ ಬಗ್ಗೆ ನಿರಾಣಿ ಟ್ವೀಟ್

ಅದಾನಿ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರಾಣಿ, "ಅದಾನಿ ಗ್ರೂಪ್ ಇತ್ತೀಚೆಗೆ ಕರ್ನಾಟಕದಲ್ಲಿ ಸುಮಾರು 50,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಆಸಕ್ತಿಯನ್ನು ವ್ಯಕ್ತಪಡಿಸಿದೆ. ಇದು ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ಜಾನ್ಸನ್ ಕಂಟ್ರೋಲ್ಸ್‌ನ ಸಿಇಒ ಜಾರ್ಜ್ ಆಲಿವರ್, ಐಬಿಎಂ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ ಕೃಷ್ಣ, ಹನಿವೆಲ್ ಇಂಟರ್‌ನ್ಯಾಶನಲ್ ಇಂಕ್ ಸರ್ಕಾರದ ಸಂಬಂಧಗಳ ಉಪಾಧ್ಯಕ್ಷ ಆಮಿ ಚಿಯಾಂಗ್ ಅವರೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳ ಕುರಿತು ಮುಖ್ಯಮಂತ್ರಿ ಮಾತುಕತೆ ನಡೆಸಿದರು.

ಇದನ್ನೂ ಓದಿ:  Wormy chocolate: 89 ರೂ ಬೆಲೆಯ ಚಾಕ್ಲೇಟ್ ನಲ್ಲಿ ಹುಳು; 50 ಲಕ್ಷ ರೂ. ಪರಿಹಾರ ಕೇಳಿದ ಬೆಂಗಳೂರಿನ ವ್ಯಕ್ತಿ

"ವೋಲ್ವೋ ಜಾಗತಿಕವಾಗಿ ತಮ್ಮ ಗುಣಮಟ್ಟ ಮತ್ತು ನಿಖರವಾದ ಇಂಜಿನಿಯರಿಂಗ್‌ ಗೆ ಹೆಸರುವಾಸಿಯಾಗಿದೆ.  ಇಂದು ವೋಲ್ವೋ ಸಿಇಒ ಶ್ರೀ ಮಾರ್ಟಿನ್ ಲುಂಡ್‌ಸೆಡ್ ಅವರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿದ್ದು, ಅದ್ಭುತ ಕ್ಷಣವಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.
Published by:Mahmadrafik K
First published: