ಚಾಮರಾಜನಗರ: ಯೂಟ್ಯೂಬ್​ ಲೈವ್​ನಲ್ಲೇ ಮದುವೆ ನೋಡಿ ವಧು-ವರರಿಗೆ ಹರಸಿದ ಬಂಧು-ಮಿತ್ರರು

ನಮಗೆ ಪರಿಚಿತರಾದ ಚೇತನ್-‌ ಐಶ್ವರ್ಯ ಅವರ ವಿವಾಹ ಮಹೋತ್ಸವದ  ಸಂಪೂರ್ಣ ಚಿತ್ರಣವನ್ನು ಯುಟ್ಯೂಬ್ ಲೈವ್ ಮೂಲಕ ಕಣ್ತುಂಬಿಕೊಂಡೆವು.  ಈ ಮದುವೆಯಲ್ಲಿ ಖುದ್ದಾಗಿ ಭಾಗವಹಿಸಿದಷ್ಟೇ ಖುಷಿಯಾಯ್ತು, ಮನೆಯಲ್ಲಿ ಕುಳಿತೆ ಧಾರಾಮುಹೂರ್ತ ವೀಕ್ಷಿಸಿ  ವಧುವರರನ್ನು ಮನದುಂಬಿ ಹರೆಸಿದೆವು ಎನ್ನುತ್ತಾರೆ ರಾಮಮೂರ್ತಿ ಕುಟುಂಬದ ಸ್ನೇಹಿತರಾದ ನಂದೀಶ್ ವಿಶ್ವಕರ್ಮ.

ಮದುವೆ

ಮದುವೆ

  • Share this:
ಚಾಮರಾಜನಗರ (ಏ.25): ಎರಡನೇ ಅಲೆಯ ಕೊರೋನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಅಗತ್ಯ ವಸ್ತು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳ ಬಂದ್  ಸೇರಿದಂತೆ ಹಲವಾರು ಕ್ರಮ ಕೈಗೊಂಡಿರುವ ಸರ್ಕಾರ ಮದುವೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 50 ಜನಕ್ಕೆ ಮಿತಿಗೊಳಿಸಿದೆ.  ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಲವಾರು  ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ ಈ ಮಾರ್ಗಸೂಚಿ ಹೊರಡಿಸುವುದಕ್ಕೂ ಮೊದಲೇ ನೂರಾರು ಮದುವೆಗಳು ನಿಗದಿಯಾಗಿವೆ. ಮದುವೆಗೆ ನೆಂಟರಿಷ್ಟರು ಬಂಧುಬಳಗದವರು, ಸ್ನೇಹಿತರು ಹೀಗೆ ಸಾವಿರಾರು ಜನರಿಗೆ ಲಗ್ನಪತ್ರಿಕೆ ಹಂಚಿ  ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದನ್ನು ನೋಡಿದ್ದೇವೆ. ಆದರೆ  ಸರ್ಕಾರ ವಿವಾಹ ಸಮಾರಂಭಗಳಿಗೆ 50 ಜನರಿಗೆ ಮಿತಿ ಹೇರಿದ ಕೂಡಲೇ ಸರ್ಕಾರದ ಮಾರ್ಗಸೂಚಿ ಪಾಲಿಸಲು ಮುಂದಾದ ಚಾಮರಾಜನಗರದ  ಕುಟುಂಬವೊಂದು ಮದುವೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ತೀರಾ ಹತ್ತಿರದ ಸಂಬಂಧಿ ಗಳನ್ನೊಳಗೊಂಡಂತೆ  50 ಜನರಿಗೆ ಸೀಮಿತಗೊಳಿಸಿ ಉಳಿದ ಆಹ್ವಾನಿತರಿಗೆ ಮದುವೆ ಸಮಾರಂಭವನ್ನು ‌ಕಣ್ತುಂಬಿಕೊಳ್ಳುವಂತೆ ಮಾಡಲು ಯುಟ್ಯೂಬ್ ಲೈವ್ ಗೆ ಮೊರೆ ಹೋಗಿತ್ತು. 

ಚಾಮರಾಜನಗರದ ಶಂಕರಪುರ ಬಡಾವಣೆಯ  ಎಸ್‌. ಗಾಯತ್ರಿ ಮತ್ತು ಎಸ್ ರಾಮಮೂರ್ತಿ  ಅವರ ಪುತ್ರ ಆರ್. ಚೇತನ್ ಹಾಗೂ  ನಂಜನಗೂಡಿನ ಕೋಮಲ ಎಸ್.ಗುರುರಾಜ್ ದಂಪತಿ ಯ ಪುತ್ರಿ ಐಶ್ವರ್ಯ ಅವರ ಮದುವೆಯನ್ನು ಇಂದು ನಂಜನಗೂಡು ತಾಲೋಕು ಸಿಂಧುವಳ್ಳಿಯ ಶ್ರೀ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ನಡೆಸಲು ನಿಶ್ಚಯಿಸಲಾಗಿತ್ತು.

ಈ ಮದುವೆಗೆ ವಧು ವರ ಎರಡೂ ಕಡೆಯಿಂದ 2000 ಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿತ್ತು. ಅದ್ದೂರಿ ಮದುವೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ  ಕೊರೋನಾ ನಿಯಂತ್ರಣ ದ ಹಿನ್ನಲೆಯಲ್ಲಿ ಸರ್ಕಾರ ಹಲವಾರು ನಿರ್ಬಂಧ ಹೇರಿದ ಹಿನ್ನಲೆಯಲ್ಲಿ ವರನ ಕಡೆಯಿಂದ 20 ಜನ ವಧುವಿನ ಕಡೆಯಿಂದ 20 ಜನ ಮಾತ್ರ ಭಾಗವಹಿಸಲು ತೀರ್ಮಾನಿಸಿದ ಎರಡೂ ಕುಟುಂಬಗಳು ಉಳಿದ ಆಹ್ವಾನಿತರಿಗೆ  ಮದುವೆ ಸಮಾರಂಭದ ಚಿತ್ರಣವನ್ನು ಯುಟ್ಯೂಬ್ ಲೈವ್ ಮೂಲಕ ತೋರಿಸುವ ತಂತ್ರಜ್ಞಾನಕ್ಕೆ ಮೊರೆ ಹೋಯ್ತು.

ವಿಕ್ಟೋರಿಯಾ ಕ್ಯಾಂಪಸ್​​​ನಲ್ಲಿ ಮೇಕ್​ಶಿಫ್ಟ್​ ಆಸ್ಪತ್ರೆ ನಿರ್ಮಿಸಲು ನಿರ್ಧಾರ; ಆರೋಗ್ಯ ಸಚಿವ ಸುಧಾಕರ್

ಆಹ್ವಾನಿತರಿಗೆ  ನಿನ್ನೆಯೇ ವಾಟ್ಸಪ್ ಮೂಲಕ  ಯುಟೂಬ್ ಲೈವ್ ಲಿಂಕ್ ಕಳುಹಿಸಿದ ಕುಟುಂಬದವರು  ಲೈವ್ ನಲ್ಲಿ ಮದುವೆ ಸಮಾರಂಭ ವೀಕ್ಷಿಸಿ  ಆನ್ ಲೈನ್ ನಲ್ಲೇ ಹರಸುವಂತೆ  ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಮದುವೆಗೆ ಬರದಿದ್ದವರು ಯೂಟ್ಯೂಬ್ ಲೈವ್ ಮೂಲಕ ಮದುವೆ ಸಮಾರಂಭವನ್ನು ಕಣ್ತುಂಬಿಕೊಂಡರು.

ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ  ವರನ ತಂದೆ ರಾಮಮೂರ್ತಿ, ಕೊರೋನಾ ನಿರ್ಬಂಧಗಳ ಹಿನ್ನಲೆಯಲ್ಲಿ  ನಾವು ಆಹ್ವಾನ ನೀಡಿದ್ದವರು ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂಬುದು  ಗೊತ್ತಾಗಿ ಒಂದು ಕಡೆ ಬೇಸರವಾಯ್ತು. ಆದರೆ ನಮ್ಮಿಂದ ಯಾವುದೇ ತೊಂದರೆ ಆಗಬಾರದು ಎಂದು ನಿರ್ಧರಿಸಿ ಎರಡೂ ಕಡೆಯಿಂದ ಕೇವಲ 50 ಮಂದಿ  ಮಾತ್ರ ಭಾಗವಹಿಸಲು ತೀರ್ಮಾನಿಸಿದೆವು ಹಾಗೂ ಮಿಕ್ಕ ಆಹ್ವಾನಿತ ಬಂಧು-ಬಳಗದರು, ಸ್ನೇಹಿತರು ಮನೆಯಲ್ಲೇ ಕುಳಿತು ವಿವಾಹ ಮಹೋತ್ಸವ ನೋಡಿ ಹರಸಲಿ ಎಂಬ ಉದ್ದೇಶದಿಂದ  ಯೂಟ್ಯೂಬ್ ಲೈವ್  ಮಾಡಿದೆವು ಎಂದು ತಿಳಿಸಿದರು.

ನಮಗೆ ಪರಿಚಿತರಾದ ಚೇತನ್-‌ ಐಶ್ವರ್ಯ ಅವರ ವಿವಾಹ ಮಹೋತ್ಸವದ  ಸಂಪೂರ್ಣ ಚಿತ್ರಣವನ್ನು ಯುಟ್ಯೂಬ್ ಲೈವ್ ಮೂಲಕ ಕಣ್ತುಂಬಿಕೊಂಡೆವು.  ಈ ಮದುವೆಯಲ್ಲಿ ಖುದ್ದಾಗಿ ಭಾಗವಹಿಸಿದಷ್ಟೇ ಖುಷಿಯಾಯ್ತು, ಮನೆಯಲ್ಲಿ ಕುಳಿತೆ ಧಾರಾಮುಹೂರ್ತ ವೀಕ್ಷಿಸಿ  ವಧುವರರನ್ನು ಮನದುಂಬಿ ಹರೆಸಿದೆವು ಎನ್ನುತ್ತಾರೆ ರಾಮಮೂರ್ತಿ ಕುಟುಂಬದ ಸ್ನೇಹಿತರಾದ ನಂದೀಶ್ ವಿಶ್ವಕರ್ಮ.

ಒಟ್ಟಾರೆ ಕೊರೋನಾ ಹಿನ್ನಲೆಯಲ್ಲಿ ವಿವಾಹ ಮಹೋತ್ಸವ ವನ್ನು  ಶಾಸ್ತ್ರೋಕ್ತವಾಗಿ  ನಡೆಸಿ  ಕೋವಿಡ್ ನಿಯಮಗಳನ್ನು ಪಾಲಿಸಲು ಹಾಗೂ ಜನರು ಗುಂಪುಗೂಡುವುದನ್ನು  ತಪ್ಪಿಸಲು ತಂತ್ರಜ್ಞಾನದ ಮೊರೆಹೋದ ವಧು ವರರ ಕುಟುಂಬದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Published by:Latha CG
First published: