ಮೈಸೂರು ದಸರಾ ಮೂಲ ಆಚರಣೆ ಎಲ್ಲಿಯದು ಗೊತ್ತಾ?; ವಿಶ್ವಪ್ರಸಿದ್ಧ ಹಂಪಿಗೂ ಮೈಸೂರು ದಸರಾಗೂ ಏನೂ ಸಂಬಂಧ?

ಹಂಪಿ

ಹಂಪಿ

  • News18
  • Last Updated :
  • Share this:
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಅ.18):  ಮೈಸೂರಿನಲ್ಲಿ ನಾಡಹಬ್ಬ ದಸರಾ ವಿಜೃಂಭಣೆಯಿಂದ ಜರುಗುತ್ತಿದೆ. ಒಂಬತ್ತು ದಿನಗಳ ಕಾಲ ಈ ಆಚರಣೆಯನ್ನು ನೋಡುವುದೇ ಬಲು ಸೊಗಸು. ಅಸಲಿಗೆ ಇಂತಹ ವೈಭವದ ಆಚರಣೆ ಶುರುವಾಗಿದ್ದು ಎಲ್ಲಿ? ಅಷ್ಟಕ್ಕೂ ವಿಶ್ವಪ್ರಸಿದ್ಧ ಹಂಪಿಗೂ ಮೈಸೂರಿನ ದಸರಾಗೂ ಏನು ಸಂಬಂಧ? ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.

ವಿಶ್ವಪ್ರಸಿದ್ಧ ಮೈಸೂರು ದಸರಾ ಅದ್ಧೂರಿತನದಿಂದ ಮಿಂದೆದ್ದಿದೆ. ಆದರೆ ಇದರ ಮೂಲಹಬ್ಬ, ರೂಪುರೇಷೆ, ಅರಸು ಕಾಲದ ಆಚರಣೆಯ ವಿಜೃಂಭಣೆ ಹಂಪಿಯ ವಿಜಯನಗರ ಕಾಲದ ಮುಂದುವರಿದ ಭಾಗವಾಗಿದೆ. ಹೌದು, ವಿಜಯನಗರದ ಅರಸರ ಕಾಲದಲ್ಲಿ ನವರಾತ್ರಿ ದಿನಗಳಲ್ಲಿ ಮಹಾ ರಾಜಧಾನಿ ಹಂಪಿಯಲ್ಲಿ ಅತ್ಯಂತ ವಿಜೃಂಭಣೆಂದ ಜರುಗುತ್ತಿತ್ತು.

ದಸರಾ ಹಬ್ಬವನ್ನು ಇಡೀ ಅರಸು ಮನೆಗಳಲ್ಲಿಯೇ ವಿಜಯನಗರದ ಅರಸರು ಹಂಪಿಯಲ್ಲಿ ವಿಶಿಷ್ಟವಾಗಿ ಕಟ್ಟಿಸಿರುವ 'ಮಹಾನವಮಿ ದಿಬ್ಬ’ದಲ್ಲಿ ಜರುಗುತ್ತಿತ್ತು. ಹತ್ತನೆಯ ದಿನ ನಡೆಯುತ್ತಿದ್ದ 'ಸೇನಾ ಪರಿವೀಕ್ಷಣಾ ಕಾರ್ಯಕ್ರಮವೇ ಇದರ ಪ್ರಮುಖ ಕೇಂದ್ರವಾಗಿತ್ತು. ಇದನ್ನು ಸೇನಾಶಕ್ತಿ, ಸಾರ್ವಭೌಮತ್ವ ಎಂದೇ ಕರೆಯುತ್ತಿದ್ದರು. ವಿಜಯನಗರ ಕಾಲದ ಅರಸರು ನಡೆಸಿಕೊಂಡು ಬರುತ್ತಿದ್ದ ಹತ್ತು ದಿನಗಳ ವಿಜಯದಶಮಿ ಆಚರಣೆಯನ್ನು ಅಷ್ಟೇ ವಿಜೃಂಭಣೆಯಿಂದ ಮುಂದುವರೆಸಿಕೊಂಡು ಬಂದಿದ್ದು ಮೈಸೂರು ರಾಜರಾಗಿದ್ದು, ಅದು ಈಗಲೂ ಅಷ್ಟೇ ಪ್ರಸಿದ್ಧಿ ಪಡೆದಿರುವುದು ಕಂಡುಬರುತ್ತದೆ.

ವಿಜಯನಗರ ಕಾಲದ ಅರಸರ ಆಳ್ವಿಕೆ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ಈಗಿನ ಇತರೆ ರಾಜ್ಯಗಳು ಕೂಡ ಇವರ ಒಡೆತನದಲ್ಲಿದ್ದವು. ವಿಜಯನಗರದ ಅರಸರ ಆಳ್ವಿಕೆಯಲ್ಲಿ ಮೈಸೂರು ರಾಜರುಗಳು ಕೂಡ ಸಾಮಂತರಾಗಿದ್ದರು. ಯುದ್ಧದಲ್ಲಿ ವಿಜಯನಗರ ಪತನವಾದ ಮೇಲೆ ಹಂಪಿಯಲ್ಲಿ ನಡೆದುಕೊಂಡು ಬಂದಿದ್ದ ನವರಾತ್ರಿ ವೈಭವ, ವಿಜಯದಶಮಿ ಆಚರಣೆಯನ್ನು ಮೈಸೂರು ಅರಸರು ತಮ್ಮಲ್ಲಿ ವಿಜೃಂಭಣೆಯಿಂದ ಹಬ್ಬವನ್ನು ಆಚರಣೆ ಮಾಡಲು ಶುರುಮಾಡಿದರು. ಮಹಾನವಮಿ ವೈಭವವು ವಿಜಯನಗರದ ಅರಸರ ನಂತರ ಅತ್ಯಂತ ವೈಭವೋಪೇತವಾಗಿ ನಡೆದಿದ್ದು, ಮುಂದುವರೆಸಿಕೊಂಡು ಬಂದಿದ್ದು ಮೈಸೂರು ಅರಸರೇ ಎಂದು ಕನ್ನಡ ವಿವಿ ಪ್ರಾಧ್ಯಾಪಕರಾದ ಡಾ ಎಸ್ ವೈ ಸೋಮಶೇಖರ್ ಅಭಿಪ್ರಾಯಪಡುತ್ತಾರೆ.

ಮಹಾನವಮಿ ದಿಬ್ಬದಲ್ಲಿ ದಸರಾ ಸಂಭ್ರಮ ಹೇಗಿರುತ್ತಿತ್ತು?

ವಿಜಯದಶಮಿಯ ನವರಾತ್ರಿ ಹಾಗೂ ಕೊನೆಯ ದಿನ ವಿಜಯನಗರದ ರಾಜಧಾನಿ ಹಂಪಿ ಹಬ್ಬದ ವಾತಾವರಣ ಮನೆ ಮಾಡಿರುತ್ತಿತ್ತು. ಒಂಬತ್ತು ದಿನಗಳನ್ನು ವಿಜಯದಶಮಿ ಉತ್ಸವಕ್ಕಾಗಿ ಮೀಸಲಿಡುತ್ತಿದ್ದರು. ಬೆಳಗಿನ ಅರ್ಧ ದಿನವನ್ನು ಅರಸರು, ಮಾಂಡಲಿಕರು, ಪ್ರಮುಖರು ಪೂಜೆ, ಯಜ್ಞ, ಯಾಗಾದಿ ಬಲಿದಾನಗಳಿಗೆ ಮೀಸಲಿಡುತ್ತಿದ್ದರು. ಪುರೋಹಿತರ ಮಾರ್ಗದರ್ಶನ, ಪರಿವಾರದವರ ಸಹಯೋಗದೊಂದಿಗೆ ಅರಸರು ಪಾಲ್ಗೊಳ್ಳುತ್ತಿದ್ದರು. ಮಧ್ಯಾಹ್ನ 3ರಿಂದ ಮಧ್ಯರಾತ್ರಿಯವರೆಗೆ ಉಳಿದರ್ದ ದಿನವನ್ನು ವೈಭವ ಪ್ರದರ್ಶನಕ್ಕೆ ಮೀಸಲಿಡುತ್ತಿದ್ದರು. ಸೇನಾಶಕ್ತಿ, ಕಲೆ, ಸಾಹಸ ಪ್ರದರ್ಶನಗಳು, ಚತುರ ಕ್ರೀಡೆಗಳು, ಸಂಗೀತ ವಾದ್ಯವೃಂದಗಳು ಕಾರ್ಯಕ್ರಮಗಳು ನಡೆಯುತ್ತಿದ್ದವು. ಹತ್ತನೆಯ ದಿವಸ ದಶಮಿ ಹಬ್ಬದಂದು ಇಡೀ ದಿನ ಅರಸರು ಉಪವಾಸವಿರುತ್ತಿದ್ದರು. ತಮ್ಮ ಶಕ್ತಿ, ಸಾಹಸ, ಸಂಪತ್ತುಗಳನ್ನು ಪ್ರದರ್ಶಿಸುತ್ತಿದ್ದರು. ತಮ್ಮ ಆಯುಧಗಳನ್ನು ಕೂಡ ಆಯುಧ ಪೂಜೆ ದಿನ ಪ್ರದರ್ಶನಕ್ಕಿಡುತ್ತಿದ್ದರು.

ವಿಜಯನಗರ ಕಾಲದಲ್ಲಿ ಶುರುವಾದ ಅದ್ಧೂರಿ ವಿಜಯದಶಮ ಸಂಭ್ರಮ ಇದೀಗ ಕೇವಲ ಮೈಸೂರಿಗೆ ಸೀಮಿತವಾಗಿದೆ. ಹಂಪಿಯ ಮಹಾನವಮಿ ದಿಬ್ಬದ ಮೇಲೆ ರಾಜರು ಕೂತು ನೋಡುತ್ತಿದ್ದರು. ಅಂಥ ಪರಂಪರೆಯ ಪ್ರದೇಶದಲ್ಲೀಗ ಎಳ್ಳಷ್ಟು ದಸರಾ ಸಂಭ್ರಮವಿಲ್ಲ. ವಿಜಯನಗರ ಕಾಲದಲ್ಲಿ ನಡೆಯುತ್ತಿದ್ದ ಪರಂಪರೆ ಮುಂದುವರೆಯಬೇಕು. ಕೊನೆ ಪಕ್ಷ ಅದನ್ನು ನೆನಪಿಸುವಂಥ ಕಾರ್ಯಕ್ರಮ ಮಾಡಬೇಕೆನ್ನುವುದು ರಾಜಮನೆತನ ಹಾಗೂ ಸ್ಥಳೀಯರ ಅಭಿಲಾಷೆ.

First published: