ರೆಡ್ಡಿ ಇಸ್ ಕಮಿಂಗ್, ಬಳ್ಳಾರಿಗಲ್ಲ ಮೊಳಕಾಲ್ಮೂರಿಗೆ; ಕುಚುಕು ಗೆಳೆಯನ ಪರ ರೆಡ್ಡಿ ಪ್ರಚಾರ

news18
Updated:April 13, 2018, 7:09 PM IST
ರೆಡ್ಡಿ ಇಸ್ ಕಮಿಂಗ್, ಬಳ್ಳಾರಿಗಲ್ಲ ಮೊಳಕಾಲ್ಮೂರಿಗೆ; ಕುಚುಕು ಗೆಳೆಯನ ಪರ ರೆಡ್ಡಿ ಪ್ರಚಾರ
  • Advertorial
  • Last Updated: April 13, 2018, 7:09 PM IST
  • Share this:
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಮೇ. 13) :  ಬಿಜೆಪಿ ಟಿಕೆಟ್ ಗಾಗಿ ಶುರುವಾಗಿರುವ ಭಿನ್ನಮತ ಮೊಳಕಾಲ್ಮೂರು ಕ್ಷೇತ್ರದಲ್ಲಿ ತಾರಕಕ್ಕೇರಿದೆ. ಅಭ್ಯರ್ಥಿಯಾಗಿ ಶ್ರೀರಾಮುಲು ಪ್ರಚಾರ ಆರಂಭಿಸಿದ ಮೊದಲ ದಿನವೇ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶದ ಬಿಸಿ ಮುಟ್ಟಿದೆ.

ಇಷ್ಟೆಲ್ಲ ರಾದ್ಧಾಂತವಾದ್ರೂ ಶ್ರೀರಾಮುಲು ಮಾತ್ರ ತನಗೆ ಯಾವುದೇ ತೊಂದರೆಯಾಗಿಲ್ಲ ಎನ್ನುವಂತೆ  ಮುಂದೆ ಹಜ್ಜೆ ಇಡುತ್ತಿದ್ದಾರೆ. ಮೊಳಕಾಲ್ಮೂರಿನಿಂದಲೇ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಇವರ ಹಿಂದಿರುವ ಶಕ್ತಿ ಆಪ್ತ ಜನಾರ್ದನ ರೆಡ್ಡಿ ಪ್ರಚಾರಕ್ಕೆ ಬರುತ್ತಿರುವುದೇ ಇವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಆಪ್ತ ಗೆಳೆಯ ಕುಚುಕು ಶ್ರೀರಾಮುಲು ಸ್ಪರ್ಧಿಸುತ್ತಿರುವ ಮೊಳಕಾಲ್ಮೂರು ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಿದ್ದಾರೆ. ಇಂಥದೊಂದು ಮಾಹಿತಿಯನ್ನು ರೆಡ್ಡಿ ಬಳಗದ ಆಪ್ತ ಮೂಲಗಳಿಂದ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ದೊರೆತಿದೆ. ಈ ಕಾರಣಕ್ಕಾಗಿಯೇ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಂಡಾಯ, ಭಿನ್ನಮತ, ಬೆಂಬಲಿಗರು ಅದೆಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಯಾವುದನ್ನೂ ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಪ್ರಚಾರಕ್ಕೆ ಅಧಿಕೃತವಾಗಿ ಇಂದಿನಿಂದ ಪ್ರಚಾರ ಶುರುಮಾಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಿಜೆಪಿ ಪಕ್ಷಕ್ಕೂ ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯಿಂದ ರೆಡ್ಡಿ ಮುಂದಿನ ನಡೆ ಏನು ಎಂಬುದರ ಬಗ್ಗೆ ಸಾಕಷ್ಟು ರಾಜಕೀಯ ಚರ್ಚೆಯೂ ನಡೆಯಿತು. ಕಾಕತಾಳೀಯವೆಂಬಂತೆ ದೆಹಲಿಯಲ್ಲಿ ಸಚಿವ ಸಂತೋಷ್ ಲಾಡ್ ತಂಗಿದ್ದ ಹೋಟೆಲ್ ನಲ್ಲಿ ಜನಾರ್ದನ ರೆಡ್ಡಿ ಕುಶಲೋಪರಿ ವಿಚಾರ ಪಕ್ಷ ಬಿಡುವ ಬಗ್ಗೆ ಚರ್ಚೆಗೆ ಕಾಣರವಾಯಿತು.

ಆದರೆ ಆಪ್ತ ಸಂಸದ ಬಿ ಶ್ರೀರಾಮುಲು, ರೆಡ್ಡಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರೋದಿಲ್ಲ, ಬಿಜೆಪಿ ಬಿಟ್ಟು ಹೋಗುವುದಿಲ್ಲ. ಸಂತೋಷ್ ಲಾಡ್ ತಂಗಿದ್ದ ಹೋಟೆಲ್ ನಲ್ಲಿ ಸಿಕ್ಕಿದ್ದ ಅವರಿಗೆ ಹಲೋ ಎಂದಷ್ಟೇ ಹೇಳಿದ್ದಾರೆ ಎಂದು ಈ ಬಗ್ಗೆ ನ್ಯೂಸ್ 18ಗೆ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಪಕ್ಷ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ದಿನದಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಂಡಾಯ ಆರಂಭವಾಗಿದೆ. ಶಾಸಕ ತಿಪ್ಪೇಸ್ವಾಮಿ ಸಾವಿರಾರು ಬೆಂಬಲಿಗರು ಬಳ್ಳಾರಿಗೇ ಆಗಮಿಸಿ ಶ್ರೀರಾಮುಲು ಮನೆಗೆ ಮುತ್ತಿಗೆ ಹಾಕಲು ಲಪ್ರಯತ್ನಿಸಿದ್ದರು. ಇಂದು ನಾಯಕನಹಟ್ಟಿಯಿಂದ ಪ್ರಚಾರ ಮಾಡಲು ಬಂದ ಶ್ರೀರಾಮುಲುಗೆ ಪೊರಕೆ, ಚಪ್ಪಲಿಯ ಸ್ವಾಗತ ದೊರೆತಿದೆ. ‘ಬಳ್ಳಾರಿ ಕಳ್ಳ’ ಎಂದು ಬೆಂಬಲಿಗರು ಮೂಡಿಸಲಿಸಿದ್ದಾರೆ. ಇನ್ನುಳಿದ ಗ್ರಾಮಗಳಲ್ಲಿ ಅಂಥದ್ದೇನು ವಿರೋಧ ವ್ಯಕ್ತವಾಗಲಿಲ್ಲ.ಆರಂಭದಲ್ಲಿ ಸಾಕಷ್ಟು ಬೆಂಬಲಿಗರಿಂದ ವಿರೋಧ ವ್ಯಕ್ತವಾದರೂ ಏನೂ ನಡೆದೇ ಇಲ್ಲವೆನ್ನುವಂತೆ ನಾನು ಇಲ್ಲಿಂದಲೇ ಸ್ಪರ್ಧಿಸಿ ಗೆಲ್ಲುವುದಾಗಿ ಶ್ರೀರಾಮುಲು ಪಣ ತೊಟ್ಟಿದ್ದಾರೆ. ಇಂಥ ಅಗಾಧವಾದ ಆತ್ಮವಿಶ್ವಾಸಕ್ಕೆ ಗೆಳೆಯ ಜನಾರ್ದನ ರೆಡ್ಡಿ ರಾಮುಲು ಪರ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎನ್ನುವುದು ಪ್ರಮುಖ ಕಾರಣ.

ತಾನು ಸ್ಪರ್ಧಿಸುತ್ತಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಈ ಬಾರಿ ಸಹೋದರ, ಮಾಜಿ ಸಂಸದ ಫಕೀರಪ್ಪ ಅವರಿಗೆ ಬಿಟ್ಟುಕೊಡಲಿದ್ದಾರೆ. ಕಂಪ್ಲಿ ಕ್ಷೇತ್ರದಲ್ಲಿ ಸೋದರಳಿಯ ಸುರೇಶ್ ಬಾಬು ಟಿಕೆಟ್ ಘೋಷಣೆಯಾಗಿದ್ದು ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸಲಿದ್ದೇವೆ ಎಂದು ಶಾಸಕ ಸುರೇಶ್ ಬಾಬು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಪಕ್ಷಕ್ಕೂ ನಮಗೂ ಸಂಬಂಧವಿಲ್ಲವೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿರಬಹುದು. ಆದರೆ ಶ್ರೀರಾಮುಲು ಪರ ಪ್ರಚಾರ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲವಲ್ಲಾ ಎನ್ನುವ ತರ್ಕ ರೆಡ್ಡಿ ಪಾಳಯದ್ದಾಗಿದೆ.

ಇನ್ನು ಸುಪ್ರಿಂಕೋರ್ಟ್ ಸೂಚನೆ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಓಡಾಡಲು ವಾಸ್ತವ್ಯ ಹೂಡಲು ಯಾವುದೇ ತೊಂದರೆಯಿಲ್ಲ. ಕುಚುಕು ಗೆಳೆಯ ಶ್ರೀರಾಮುಲು ಪರ ರೆಡ್ಡಿ ಪ್ರಚಾರಕ್ಕೆ ಬರುವುದರಿಂದ ನಿಜಕ್ಕೂ ಒಳಿತಾಗುತ್ತದೆಯೇ ಅನ್ನೋದು ಫಲಿತಾಂಶದಿಂದ ಗೊತ್ತಾಗಬೇಕಿದೆ.
First published:April 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ