ರೆಡ್ಡಿ ಪಾಳಯಕ್ಕಿಲ್ಲ ವರಮಹಾಲಕ್ಷ್ಮಿ ಹಬ್ಬ; ಏಳು ವರ್ಷ ಕಳೆದರೂ ಒಲಿಯದ ಅಮ್ಮ!

news18
Updated:August 24, 2018, 10:09 AM IST
ರೆಡ್ಡಿ ಪಾಳಯಕ್ಕಿಲ್ಲ ವರಮಹಾಲಕ್ಷ್ಮಿ ಹಬ್ಬ; ಏಳು ವರ್ಷ ಕಳೆದರೂ ಒಲಿಯದ ಅಮ್ಮ!
  • News18
  • Last Updated: August 24, 2018, 10:09 AM IST
  • Share this:
ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಆ.24): ಹೆಂಗಳೆಯರ ವರಮಹಾಲಕ್ಷ್ಮಿ ಹಬ್ಬವನ್ನು ಎಲ್ಲರೂ ಸಂಭ್ರಮ ಸಡಗರಿಂದ ಆಚರಿಸುತ್ತಾರೆ. ಬಳ್ಳಾರಿಯಲ್ಲಿ ಈ ಹಬ್ಬ ನೆನಪಿಸಿಕೊಂಡ ಕೂಡಲೇ ರೆಡ್ಡಿ ಪಾಳಯದಲ್ಲಿ ಬೇಸರ ಹೆಚ್ಚಾಗುತ್ತದೆ. ವೈಭೋಗದಿಂದ ಆಚರಿಸುತ್ತಿದ್ದ ಈ ಹಬ್ಬವನ್ನು ರೆಡ್ಡಿ ಸಹೋದರರು ಇಡೀ ದೇಶವೇ ಕಣ್ತುಂಬಿಕೊಳ್ಳುವಂತೆ ಸಂಭ್ರಮ ಸಡಗರಿಂದ ಮಾಡುತ್ತಿದ್ದರು. ಅದಕ್ಕೆ ಪ್ರಮುಖ ಕಾರಣ ಬಿಜೆಪಿ ಹಿರಿಯ ನಾಯಕಿ, ಈಗಿನ ಕೇಂದ್ರ ಸಚಿವ ಸುಷ್ಮಾ ಸ್ವರಾಜ್. ಆದರೆ ಆಗಿನ ವೈಭೋಗವೆಲ್ಲ ಅಕ್ರಮ ಗಣಿಯಿಂದಾಗಿ ಕರಗಿಹೋಗಿದೆ. ಪ್ರೀತಿಯ ಅಮ್ಮ ಮಕ್ಕಳಿಂದ ದೂರ ಸರಿದು ಏಳು ವರುಷಗಳೇ ಕಳೆದಿವೆ. ರೆಡ್ಡಿ ಈಗಲೂ ತನ್ನೂರು ಬಳ್ಳಾರಿಗೆ ಬರಲಾಗುತ್ತಿಲ್ಲ. ಶ್ರೀರಾಮುಲು ಏಕಾಂಗಿ ಹೋರಾಟ ನಿಂತಿಲ್ಲ.

ಮತ್ತೊಂದು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಬಳ್ಳಾರಿಯ ರೆಡ್ಡಿ ಪಾಳಯದಲ್ಲಿ ಕಲರ್ ಫುಲ್ ಹಬ್ಬದ ಕಳೆ ಈ ವರುಷವೂ ಕಾಣುತ್ತಿಲ್ಲ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷ ಮಾಜಿ ಸಚಿವ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಶ್ರೀರಾಮುಲು ನೇತೃತ್ವದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಜರುಗಬೇಕಾಗಿತ್ತು. ಆದರೆ ರೆಡ್ಡಿ ಪಾಳಯ ಕಿಂಗ್ ಮಾಜಿ ಸಚಿವ ಜನಾರ್ದನ ರೆಡ್ಡಿ ಈಗಲೂ ತಮ್ಮೂರು ಬಳ್ಳಾರಿಗೆ ಬರಲು ಸುಪ್ರಿಂಕೋರ್ಟ್ ಅಡ್ಡಗೆರೆ ಗೀಚಿದೆ. ಇದು ರೆಡ್ಡಿಗೆ ಹಾಗೂ ಅವರ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತಿದ್ದ ರೆಡ್ಡಿ ಸಹೋದರರ ಅಮ್ಮ ಸುಷ್ಮಾ ಸ್ವರಾಜ್ ಬರೋಬ್ಬರಿ ಕಳೆದ ಏಳು ವರ್ಷಗಳಿಂದ ಬಳ್ಳಾರಿ ಕಡೆ ಮುಖ ಮಾಡಿಲ್ಲ. 2011ರಲ್ಲಿ ಬಳ್ಳಾರಿಗೆ ಆಗಮಿಸಿದ ಸುಷ್ಮಾ ಮನೆ ಮಗಳಾಗಿ ಎಂದಿನಿಂದ ಡಾ ಬಿ ಕೆ ಶ್ರೀನಿವಾಸಮೂರ್ತಿಯಲ್ಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರೆಡ್ಡಿ ಪಾಳಯ ನಡೆಸುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಕೊನೆಯ ಕಾರ್ಯಕ್ರಮ ಇದಾದ ಬಳಿಕ 2011ರ ಸೆಪ್ಟೆಂಬರ್ 5ರಂದು ಜನಾರ್ದನ ರೆಡ್ಡಿ ಯಾವಾಗ ಬಂಧನವಾಯಿತೋ ಅಂದಿನಿಂದ ಸುಷ್ಮಾ ರೆಡ್ಡಿ ಪಾಳಯದ ಜೊತೆಗಿನ ಸಂಬಂಧ ಕಡೆದುಕೊಂಡರು.

ರೆಡ್ಡಿ ಪಾಳಯಕ್ಕೆ ರಾಜಕೀಯವಾಗಿ ಉತ್ತುಂಗಕ್ಕೇರಲು ಸಾಕಷ್ಟು ಮೈಲೇಜ್ ಕೊಟ್ಟ ಹಬ್ಬವಿದು. 1997ರಲ್ಲಿ ಜನಾರ್ದನ ರೆಡ್ಡಿ ಆರಂಭಿಸಿದ್ದ ಎನೋಬಲ್ ಇಂಡಿಯಾ ಫೈನಾನ್ಸ್ ಕಂಪನಿ ಹೆಸರಿನಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಲು ಆರಂಭಿಸಿದ್ದರು. ಯಾವಾಗ 1999 ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಲು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಕಣಕ್ಕಿಳಿದರೋ ಆಗಿನಿಂದ ಶುರುವಾಯಿತು ರೆಡ್ಡಿ ಪಾಳಯದ ಪೊಲಿಟಿಕಲ್ ಮೈಲೇಜ್. ಸುಷ್ಮಾ ಬಳ್ಳಾರಿಗರನ್ನು ಉದ್ದೇಶಿಸಿ ವೇದಿಕೆಯಲ್ಲಿ "ನಾನು ನಿಮ್ಮ ಮನೆಮಗಳು – ನೀವು ಓಟು ಕೊಡಿ ಬಿಡಿ. ಆದರೆ ನಾನು ಮಾತ್ರ ಪ್ರತಿವರ್ಷ ವರಮಹಾಲಕ್ಷ್ಮಿ ಪೂಜೆಗೆ ಬಳ್ಳಾರಿಗೆ ತಪ್ಪದೇ ಬರುತ್ತೇನೆ. ಬಳ್ಳಾರಿ ನನ್ನ ತವರುಮನೆ," ಎಂದು ಘೋಷಿಸಿದ್ದರು. ಆಗಿನಿಂದ ಶ್ರೀರಾಮುಲು ನೇತೃತ್ವದಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸಾಮೂಹಿಕ ವಿವಾಹ ಮಾಡಲು ಶುರುಮಾಡಿದರು. 1999ರಿಂದ 2011ರವರೆಗೆ ಸುಷ್ಮಾ ಪ್ರತಿವರ್ಷ ಚಾಚೂ ತಪ್ಪದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಿರಿಯ ನಾಯಕಿ ಸುಷ್ಮಾ ಬರುತ್ತಿದ್ದರಿಂದ ನಿತಿನ್ ಗಡ್ಕರಿ, ಅನಂತಕುಮಾರ್, ಸದಾನಂದಗೌಡ, ಯಡಿಯೂರಪ್ಪ ಆದಿಯಾಗಿ ಎಲ್ಲರೂ ಆಗಮಿಸಿದ್ದರು. ರೆಡ್ಡಿ ಪಾಳಯ ದೊಡ್ಡ ಮಟ್ಟದಲ್ಲಿ ರೆಡ್ಡಿ ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಕಲರ್ ಫುಲ್ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಇಂಥ ಹಬ್ಬದ ದಿನ ಇದೀಗ ರೆಡ್ಡಿ ಪಾಳಯಕ್ಕೆ ಕೇವಲ ಸುಮಧುರ ನೆನಪು ಮಾತ್ರ.

ರೆಡ್ಡಿ ಬಂಧನದ ನಂತರ ಮೇಲಿಂದ ಮೇಲೆ ಬಿದ್ದ ಹೊಡೆತಗಳಿಂದ ರೆಡ್ಡಿ ಪಾಳಯ ವಾಪಸಾಗಲು ಸಾಕಷ್ಟು ಪ್ರಯತ್ನ ನಡೆಸಿತ್ತಾದರೂ ಎದ್ದೇಳಲು ಆಗಲಿಲ್ಲ. ಆಗಿನ ವೈಭೋಗದ ಕಾರ್ಯಕ್ರಮ ಈಗ ನೆನಪಾಗಿ ಉಳಿದಿದೆ. ಕಳೆದ ಮೂರು ವರ್ಷಗಳಿಂದ ವರಮಹಾಲಕ್ಷ್ಮಿ ದಿನದಂದು ಆಯೋಜಿಸುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅಕ್ಟೋಬರ್, ನವೆಂಬರ್ ನಲ್ಲಿ ಸಿಂಪಲ್ ಆಗಿ ನಡೆಸುತ್ತಿದ್ದರು. ಈ ವರ್ಷವು ಅಷ್ಟೇ ಸರಳವಾಗಿ ಕಾರ್ಯಕ್ರಮ ನಡೆಯುವ ಸಾಧ್ಯತೆಯೇ ಹೆಚ್ಚಿದೆ. ಏಕೆಂದರೆ ಬಳ್ಳಾರಿಗೆ ಆಪ್ತ ರೆಡ್ಡಿ ಈಗಲೂ ಬರುವಂತಿಲ್ಲ. ಕಳೆದ ವರ್ಷ ರೆಡ್ಡಿ ಮಾತನಾಡಿದ ವೀಡಿಯೋವನ್ನು ಕಾರ್ಯಕ್ರಮದಲ್ಲಿ ಪ್ಲೇ ಮಾಡಿ ಸಂತಸ ಪಡಬೇಕಾಯಿತು. ಈ ಬಾರಿಯೂ ಬಳ್ಳಾರಿ ಬರುವಂತೆ ಅನುಮತಿ ದೊರೆಯುವುದು ಕಷ್ಟವಾಗಿದೆ. ಇನ್ನು ರೆಡ್ಡಿ ಪಾಳಯಕ್ಕೆ ರಾಜಕೀಯವಾಗಿರುವ ಅಸ್ತ್ರ ಶ್ರೀರಾಮುಲು ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಗಾದಿ ಹತ್ತಿರದಲ್ಲಿಯೇ ಇತ್ತು. ಚುನಾವಣೆಯಲ್ಲಿ ಬಿಜೆಪಿಯೂ ಹೆಚ್ಚು ಸ್ಥಾನ ಪಡೆದರೂ ಸಮ್ಮಿಶ್ರ ಸರ್ಕಾರ ಅಧಿಕಾರ ಪಡೆಯಬೇಕಾಯಿತು. ಹೆಂಗಳೆಯರ ಪ್ರೀತಿಯ ವರಮಹಾಲಕ್ಷ್ಮಿ ಹಬ್ಬ ರೆಡ್ಡಿ ಪಾಳಯಕ್ಕೂ ಅಷ್ಟೂ ಪ್ರಮುಖವಾದುದು.
First published: August 24, 2018, 10:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading