news18-kannada Updated:September 18, 2020, 8:38 PM IST
ಸಾಂದರ್ಭಿಕ ಚಿತ್ರ
ಕೊಡಗು (ಸೆ.18): ಆಶ್ಲೇಷ ಮಳೆಗೆ ನಲುಗಿದ್ದ ಕೊಡಗಿನಲ್ಲಿ ನಾಳೆಯಿಂದ ಮತ್ತೆ ವರುಣ ಆರ್ಭಟಿಸಲಿದ್ದು, ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ನಾಳೆಯಿಂದ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. 19 ರಿಂದ 21ರವರೆಗೆ ಮೂರು ದಿನಗಳ ಕಾಲ 115 ಮಿಲಿ ಮೀಟರ್ನಿಂದ 204 ಮಿಲಿ ಮೀಟರ್ವರೆಗೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ನದಿ ಪಾತ್ರ ಹಾಗೂ ಬೆಟ್ಟ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕಳೆದೆರಡು ದಿನಗಳಿಂದ ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ನಾಳೆಯಿಂದ ಈ ಮಳೆ ಮತ್ತಷ್ಟು ವ್ಯಾಪಕವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜುಲೈನಲ್ಲಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿತ್ತು. ಗುಡ್ಡ ಕುಸಿತಕ್ಕೆ ಅರ್ಚಕರ ಕುಟುಂಬ ಬಲಿಯಾಗಿತ್ತು. ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಹಲವಾರು ಮನೆ ಕುಸಿದಿದ್ದವು. ಈ ಹಿನ್ನೆಲೆ ಈ ಬಾರಿ ಕೂಡ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸ್ಥಳೀಯರಲ್ಲಿ ಮನವಿ ಮಾಡಿದ್ದು, ತುರ್ತು ದೂರುವಾಣಿ ಸಂಪರ್ಕಿಸುವಂತೆ ತಿಳಿಸಿದೆ.
ರಾಜ್ಯದ ಇತರೆ ಭಾಗದಲ್ಲಿ ಮುಂದುವರೆದ ಮಳೆ:
ಕಳೆದ ಮೂರುದಿನಗಳಿಂದ ಬೀದರ್, ರಾಯಚೂರು ಕಲಬುರಗಿಯಲ್ಲಿ ಧಾರಾಕಾರಣ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೀದರ್ನ ಮಾಜ್ರಾ, ಕಲಬುರಗಿಯ ಕಾಗಿಣಾ ನದಿಗಳು ಒಉಕ್ಕಿ ಹರಿಯುತ್ತಿದ್ದು, ಚಿತ್ತಾಪುರ ಸೇಡ., ಕಾಳಗಿ, ಚಿಂಚೋಳಿ, ಭಾಲ್ಕಿ , ಔರಾದ್ನ ಅನೇಕ ಕಡೆ ಸಂಚಾರ ವ್ಯವಸ್ಥೆ ಕಡಿತಗೊಂಡಿದೆ. ನದಿ, ಕೆರೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಹಲವು ಸೇತುವೆ ಮುಳುಗಿವೆ.
ದಾವಣಗೆರೆ, ಚಿತ್ರದುರ್ಗು, ಉಡುಪಿ, ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಿದೆ. ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಕೆಎಸ್ಎನ್ಡಿಎಂಸಿ ಟ್ವೀಟ್ ಮೂಲಕ ತಿಳಿಸಿದೆ.
Published by:
Seema R
First published:
September 18, 2020, 8:38 PM IST