ಸಿಲಿಕಾನ್ ಸಿಟಿಯಲ್ಲಿ ( Silicon City) ಹೊಸ ವರ್ಷ ಅಂದರೆ ಎಂಜಿ ರೋಡ್, ಕೋರಮಂಗಲ, ಚರ್ಚ್ಸ್ಟ್ರೀಟ್ ಹೀಗೆ ಹಲವು ಏರಿಯಾಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಯುವಕ-ಯುವತಿಯರು ಸೇರಿ ಎಲ್ಲರೂ ಪಾರ್ಟಿ, ಹಾಡ, ಕುಣಿತ ಅಂತಾ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುತ್ತಾರೆ. ಅಂತೆಯೇ ಮದ್ಯ ಸೇವನೆಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ. ಹೊಸ ವರ್ಷದಲ್ಲಿ ಡ್ರಂಕ್ ಅಂಡ್ ಡ್ರೈವ್ ಕೇಸ್ಗಳಿಗೆ ಬರವೇ ಇರುವುದಿಲ್ಲ, ಯಾವುದೇ ಅಪಘಾತಗಳು ಸಂಭವಿಸದೇ ಇರಲಿ ಎಂದು ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ಸಹ ಜನ ಪಾರ್ಟಿಯಲ್ಲಿ (Party) ಚೆನ್ನಾಗಿ ಕುಡಿದು ಗಾಡಿ ಓಡಿಸಿ ಅವಘಡಕ್ಕೆ ದಾರಿ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಈ ವರ್ಷ ಹೊಸ ವರ್ಷದ ರಾತ್ರಿ ಇಳಿಕೆಯಾಗಿವೆ ಡ್ರಂಕ್ ಅಂಡ್ ಡ್ರೈವ್ ಕೇಸ್
ಆದರೆ ಅಚ್ಚರಿ ಏನೆಂದರೆ, ಈ ವರ್ಷ ಹೊಸ ವರ್ಷದಾಚರಣೆಯಲ್ಲಿ ಕೇವಲ 95 ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಟ್ರಾಫಿಕ್ ಪೊಲೀಸ್ ಇಲಾಖೆ ತೆಗೆದುಕೊಂಡ ಕೆಲವು ಹೊಸ ನಿಯಮಗಳು ಅಪಘಾತಗಳನ್ನು ತಪ್ಪಿಸಲು ಮತ್ತು ಡ್ರಂಕ್ ಎಂಡ್ ಡ್ರೈವ್ ಪ್ರಕರಣಗಳನ್ನು ತಗ್ಗಿಸಲು ಸಾಧ್ಯವಾಯಿತು ಎಂದು ಸಂಬಂಧಿತ ಅಧಿಕಾರಿಗಳು ಹೇಳಿದ್ದಾರೆ.
ಕೇಸ್ಗೆ ಕಡಿವಾಣ ಹಾಕಿದ ಹೊಸ ಉಪಕ್ರಮಗಳು
ಕೋವಿಡ್ ಸಂದರ್ಭದಲ್ಲಿ ಹೊಸ ವರ್ಷದ ಆಚರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೆ 2022 ರಿಂದ ಸಂಭ್ರಮ ಜೋರಾಗಿಯೇ ಇದೆ. ಹೀಗಾಗಿ ಪೊಲೀಸರು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ಕೋರಮಂಗಲ ಮತ್ತು ಇಂದಿರಾನಗರದಲ್ಲಿ ಸಾಕಷ್ಟು ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರು.
ನಗರದಾದ್ಯಂತ ಸುಮಾರು 8,500 ಪೊಲೀಸರ ನಿಯೋಜನೆ, ಡ್ರೋನ್ ಕ್ಯಾಮೆರಾ, ಸಾರಿಗೆ ವ್ಯವಸ್ಥೆ ಹೀಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರು.
ಇದನ್ನೂ ಓದಿ: ಅಪರಿಚಿತರಿಗೆ ನಿಮ್ಮ ಮೊಬೈಲ್ ಕೊಡುವ ಮುನ್ನ ಎಚ್ಚರ!
ಮುಖ್ಯವಾಗಿ ಕುಡಿದು ವಾಹನ ಓಡಿಸುವ ಸವಾರರನ್ನು ತಪಾಸಣೆ ಮಾಡುವ ಬದಲು ವಾಹನ ಸಂಚಾರವನ್ನು ನಿಯಂತ್ರಿಸಿದರು, ಇದು ಡ್ರಂಕ್ ಎಂಡ್ ಡ್ರೈವ್ ಪ್ರಕರಣಗಳ ಇಳಿಕೆಗೆ ಕಾರಣವಾಯಿತು.
ಮಧ್ಯರಾತ್ರಿ 2 ಗಂಟೆಯವರೆಗೆ ಲಭ್ಯವಿದ್ದ ಮೆಟ್ರೋ, ಬಸ್
ಹೊಸ ವರ್ಷದ ರಾತ್ರಿ ಮೆಟ್ರೋ ರೈಲುಗಳು ಮತ್ತು ಬಿಎಂಟಿಸಿ ಬಸ್ಗಳು ಮಧ್ಯರಾತ್ರಿ 2 ಗಂಟೆಯವರೆಗೆ ಲಭ್ಯವಿದ್ದವು. ಹೀಗಾಗಿ ಪಾರ್ಟಿ ಮುಗಿಸಿದ ಬಳಿಕ ಅನೇಕರು ಸಾರ್ವಜನಿಕ ಸಾರಿಗೆಗಳ ಮೂಲಕ ಪ್ರಯಾಣಿಸಿದ್ದಾರೆ.
ಈ ಕ್ರಮ ಕುಡಿದು ವಾಹನ ಚಲಾಯಿಸುವ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ ಮತ್ತು ಅಪಘಾತಗಳೂ ಕಡಿಮೆಯಾಗಿವೆ ಎಂದು ಎಂ ಎ ಸಲೀಂ, ವಿಶೇಷ ಪೊಲೀಸ್ ಕಮಿಷನರ್ ತಿಳಿಸಿದರು.
ಟ್ರಾಫಿಕ್ ಇನ್ಸ್ಪೆಕ್ಟರ್ಗಳಿಗೆ ಮಾತ್ರ ಕುಡಿದು ವಾಹನ ಚಲಾಯಿಸುವ ತಪಾಸಣೆ ಮಾಡಲು ಅಧಿಕಾರ ನೀಡುವ ಎಸ್ಒಪಿಯಲ್ಲಿನ ಬದಲಾವಣೆಯು ಈ ಪ್ರಕರಣಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂ ಎನ್ ಅನುಚೇತ್ ಹೇಳಿದ್ದಾರೆ. "ಇದು ಉತ್ತಮ ಜಾರಿ ಮತ್ತು ಜಾಗೃತಿಯ ಫಲಿತಾಂಶವಾಗಿದೆ" ಎಂದು ಅವರು ಹೇಳಿದರು.
ಪೂರ್ವ ಸಂಚಾರ ವಿಭಾಗದಲ್ಲಿ 45 ಪ್ರಕರಣ
ಪೂರ್ವ ಸಂಚಾರ ವಿಭಾಗದಲ್ಲಿ ವರದಿಯಾದ 45 ಕುಡುಕರ ಪ್ರಕರಣಗಳಲ್ಲಿ ಹೆಚ್ಚಿನವು ವೈಟ್ಫೀಲ್ಡ್, ಮಡಿವಾಳ ಮತ್ತು ಹುಳಿಮಾವು ಮುಂತಾದ ಹೊರ ಪ್ರದೇಶಗಳಿಂದ ಬಂದಿವೆ.
CBD ಯಲ್ಲಿ ನಿಯೋಜಿಸಲಾದ 400 ಟ್ರಾಫಿಕ್ ಪೊಲೀಸರು ವಾಹನಗಳ ಚಲನೆಯನ್ನು ನಿಯಂತ್ರಿಸುವಲ್ಲಿ ಹೆಚ್ಚು ಗಮನಹರಿಸಿದ್ದಾರೆ ಎಂದು ಅವರು ಹೇಳಿದರು.
ಪೇಟೆ ಪ್ರದೇಶಗಳು ಮತ್ತು ಪಶ್ಚಿಮ ಉಪನಗರಗಳನ್ನು ಒಳಗೊಂಡಿರುವ ಪಶ್ಚಿಮ ವಿಭಾಗದಲ್ಲಿ, ತಪಾಸಣೆಗೆ ಒಳಗಾದ 700 ವಾಹನ ಚಾಲಕರ ಪೈಕಿ 35 ಮಂದಿ ಮಾತ್ರ ಪಾನಮತ್ತರಾಗಿದ್ದರು ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ, ಪಶ್ಚಿಮ) ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಹಿಂದಿನ ವರ್ಷದ ಪ್ರಕರಣಗಳು
* 2020 ರಲ್ಲಿ ಬೆಂಗಳೂರಿನಲ್ಲಿ 500 ಕುಡಿದು ವಾಹನ ಚಾಲನೆ ಪ್ರಕರಣಗಳು ಕಂಡುಬಂದಿದ್ದರೆ, 2019 ರಲ್ಲಿ 667 ಪ್ರಕರಣಗಳು ದಾಖಲಾಗಿದ್ದವು.
* 2021 ಮತ್ತು 2022ರಲ್ಲಿ ಹೊರಾಂಗಣ ಆಚರಣೆಗಳಿಗೆ ಹಲವಾರು ನಿಷೇಧಗಳಿದ್ದವು. ಆದಾಗ್ಯೂ 2022 ರಲ್ಲಿ 26,000 ಕ್ಕೂ ಹೆಚ್ಚು ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ದಾಖಲಾಗಿವೆ.
* ಈ ವರ್ಷ 95 ಪ್ರಕರಣಗಳಲ್ಲಿ, 45 ಪೂರ್ವದಲ್ಲಿ, 35 ಪಶ್ಚಿಮದಲ್ಲಿ ಮತ್ತು 15 ಉತ್ತರ ಸಂಚಾರ ವಿಭಾಗದಲ್ಲಿ ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ