ಜಲೀಲನ ಪಾತ್ರದಿಂದ ಹಿಡಿದು ಕನ್ನಡದ ಕರ್ಣನಾಗಿ ಅಂಬಿ ಬೆಳೆದು ಬಂದ ಹಾದಿ...

news18
Updated:November 25, 2018, 9:39 AM IST
ಜಲೀಲನ ಪಾತ್ರದಿಂದ ಹಿಡಿದು ಕನ್ನಡದ ಕರ್ಣನಾಗಿ ಅಂಬಿ ಬೆಳೆದು ಬಂದ ಹಾದಿ...
 • News18
 • Last Updated: November 25, 2018, 9:39 AM IST
 • Share this:
ಬೆಂಗಳೂರು: ಕನ್ನಡ ಚಿತ್ರರಂಗದ ಕರ್ಣ, ರೆಬೆಲ್​ ಸ್ಟಾರ್​, ಮಂಡ್ಯದ ಗಂಡು... ಹೀಗೆ ಸಾಲು ಸಾಲು ಬಿರುದಾಂಕಿತಗಳಿಂದ ಕರೆಸಿಕೊಳ್ಳುತ್ತಿದ್ದ ಎಲ್ಲರ ಅಚ್ಚು ಮೆಚ್ಚಿನ ನಾಯಕ ಅಂಬರೀಶ್​ ಇಂದು ಎಲ್ಲರನ್ನೂ ಅಗಲಿದ್ದಾರೆ.

ಮಂಡ್ಯ ಜಿಲ್ಲೆಯ ದೊಡ್ದರಸಿನಕೆರೆ ಗ್ರಾಮದಲ್ಲಿ 1952 ಮೇ 29ರಂದು ಹುಚ್ಚೇಗೌಡ ಮತ್ತು  ತಾಯಿ ಪದ್ಮಮ್ಮ ದಂಪತಿಗೆ ಅಮರನಾಥ್ (ಅಂಬರೀಶ್)​ ಜನಿಸಿದರು. ಖ್ಯಾತ ಪಿಟೀಲು ವಾದಕ ಚೌಡಯ್ಯ (ಪಿಟೀಲು ಚೌಡಯ್ಯ) ಇವರ ತಾತಾ. ಮಂಡ್ಯದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅಂಬರೀಶ್​ ಮೈಸೂರಿನಲ್ಲಿ ಅಂಬರೀಶ್​ ಪದವಿ ಪಡೆದುಕೊಂಡರು.

ಸಿನಿಮಾ ಪ್ರಯಾಣ


ಕನ್ನಡ ಚಿತ್ರರಂಗದ ಸುವರ್ಣ ಯುಗ ಎಂದು ಕರೆಯಲಾಗುವ 70ರ ದಶಕದಲ್ಲಿ ಪುಟ್ಟಣ್ಣ ಕಣಗಾಲ್​ ಅವರ ಮಾಂತ್ರಿಕ ಶಕ್ತಿ ಚಿತ್ರರಂಗದ ದಿಕ್ಕನ್ನೇ ಬದಲಿಸಿತ್ತು. 1971ರಲ್ಲಿ ಪುಟ್ಟಣ್ಣ ಕಣಗಾಲ್​ 'ನಾಗರಹಾವು' ಚಿತ್ರಕ್ಕೆ ಸಣ್ಣ ಪಾತ್ರವೊಂದರಲ್ಲಿ ನಟಿಸಲು ಹೊಸ ಮುಖವೊಂದನ್ನು ಹುಡುಕುತ್ತಿದ್ದರು. ಅದೇ ವೇಳೆಗೆ ಅಂಬರೀಶ್​ ಅವರ ಸ್ನೇಹಿತ ಸಂಗ್ರಾಮ್​ ಅವರು ಅಂಬರೀಶ್​ ಹೆಸರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಸೂಚಿಸುತ್ತಾರೆ. ಆದರೆ, ಸ್ಕ್ರೀನ್​ ಟೆಸ್ಟ್​ ದಿನದಂದು ಅಂಬರೀಶ್​ ಕಾಣೆಯಾಗಿಬಿಡುತ್ತಾರೆ. ಅಂತೂ ಕೊನೆಗೆ ಸಂಗ್ರಾಮ್​ ಅವರು ಅಂಬರೀಶ್​ರನ್ನು ಹುಡುಕಿ ಕರೆ ತರುತ್ತಾರೆ. ಸ್ಟುಡಿಯೋಗೆ (ಮೈಸೂರು ಪ್ರೀಮಿಯರ್ ಸ್ಟುಡಿಯೋ) ಅವರನ್ನು ಬಲವಂತವಾಗಿ ಎಳೆದುಕೊಂಡು ಬರಲಾಗುತ್ತದೆ.


ಅಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್​ ಅವರು ಅಂಬರೀಶ್​ರನ್ನು ನೋಡಿ, ಮೇಕಪ್ ಅಪ್​ ಮಾಡಿಕೊಂಡು, ಸ್ಕ್ರೀನ್​ ಟೆಸ್ಟ್​ಗೆ ಬರುವಂತೆ ಹೇಳುತ್ತಾರೆ. ಅದರಂತೆ ಅಂಜಿಕೆಯಿಂದಲೇ ಅಂಬರೀಶ್​ ಪಾತ್ರಕ್ಕೆ ತಯಾರಾಗಿ ಬರುತ್ತಾರೆ. ಇದು ಕಾಲೇಜು ಹುಡುಗಿಯನ್ನು ರೇಗಿಸುವ ಸಣ್ಣ ಮತ್ತು ಅತ್ಯಂತ ಪ್ರಭಾವಶಾಲಿ ಪಾತ್ರ ಎಂದು ಪುಟ್ಟಣ್ಣ ಕಣಗಾಲ್ ವಿವರಿಸಿ ಹೇಳುತ್ತಾರೆ. ಅಂಬರೀಶ್ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಅದೇ ಚಿತ್ರದಲ್ಲಿ ವಿಷ್ಣುವರ್ದನ್​ ನಾಯಕ ನಟನಾಗಿ ಮೊದಲ ಬಾರಿಗೆ ನಟಿಸುತ್ತಾರೆ. ಈ ಚಿತ್ರ ಕನ್ನಡ ಸಿನಿಮಾ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತದೆ. ಅಂಬರೀಶ್​ ಅಂದು ಆ ಚಿತ್ರದಲ್ಲಿ ನಟಿಸಿದ್ದ ಪಾತ್ರದ ಹೆಸರು 'ಜಲೀಲ​'. ಈ ಒಂದು ಸಣ್ಣ ಪಾತ್ರದ ಮೂಲಕ ಅಂಬರೀಶ್​ ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರದಲ್ಲಿ ಹೊಸ ಟ್ರೆಂಡ್​ಅನ್ನೇ ಸೃಷ್ಟಿ ಮಾಡಿದ್ದರು. ಇದೇ ಚಿತ್ರ ಹಿಂದಿಗೆ ರೀಮೇಕ್​ ಆದಾಗಲೂ ಆ ಪಾತ್ರವನ್ನು ಅಂಬರೀಶ್​ ಅವರೇ ಜಲೀಲಾ ಪಾತ್ರ ಮಾಡಿದ್ದರು. ಬಹುಶಃ ಅದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ಹಿಂದಿಯಲ್ಲಿ ನಟಿಸಿದ್ದರು.ಅಂಬರೀಶ್​ ನಾಯಕನಟನಾಗಿ ಅಭಿನಯಿಸಿದ ಮೊದಲ ಚಿತ್ರ 'ಅಮರನಾಥ್'. ಆದರೆ, ನಾಯಕ ನಟನಾಗಿ ಅವರಿಗೆ ಯಶಸ್ಸು ಸಿಗುವುದು ಅವರ ಆತ್ಮೀಯ ಸ್ನೇಹಿತ ರಾಜೇಂದ್ರ ಸಿಂಗ್ ಬಾಬು ಅವರು 1980ರಲ್ಲಿ ನಿರ್ದೇಶಿಸಿದ 'ಅಂತ' ಚಿತ್ರದ ಮೂಲಕ. ಈ ಚಿತ್ರ  ಸಿನಿಮಾ ರಂಗದಲ್ಲೇ ಹೊಸ ದಾಖಲೆ ನಿರ್ಮಿಸುತ್ತದೆ. ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗೆ ರಿಮೇಕ್​ ಆಗುತ್ತದೆ. ಆ ಚಿತ್ರದಲ್ಲಿ ಅಂಬರೀಶ್ ನಿರ್ವಹಿಸಿದ್ದ ಕನ್ವರ್​ ಲಾಲ್​ ಪಾತ್ರ ಮತ್ತು ಆ ಪಾತ್ರದ ಡೈಲಾಗ್​ 'ಕುತ್ತೆ ಕನ್ವರ್​ ನಹೀ ಕನ್ವರ್​ ಲಾಲ್​ ಬೋಲೋ' ಇಂದಿಗೂ ಅಜರಾಮರ.


ಅಂಬರೀಶ್​ ಅವರು ಪುಟ್ಟಣ್ಣ ಕಣಗಾಲ್​ ಅವರ 'ಪಡುವಾರಳ್ಳಿ ಪಾಂಡವರು', 'ಶುಭಮಂಗಳ' ಮತ್ತು 'ರಂಗನಾಯಕಿ' ಚಿತ್ರಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


ಅಂಬರೀಶ್ 80ರ ದಶಕದಲ್ಲಿ ಚಿರಯುವಕನ ಪಾತ್ರದಲ್ಲಿ ಹಲವು ಸಿನಿಮಾಗಳಲ್ಲಿ ಮಿಂಚಿದವರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ರಾಜಕೀಯ ವಿಡಂಬನೆಯ ಅಂತ ಚಿತ್ರವನ್ನು ಹಿಂದಿ ಮತ್ತು ತಮಿಳಿನಲ್ಲಿ ಅವರೇ ನಿರ್ದೇಶಿಸುತ್ತಾರೆ. ಈ ವಿವಾದಾತ್ಮಕ ಚಿತ್ರ ಭಾರತದಲ್ಲಿ ಮೊದಲ ಬಾರಿಗೆ ರಾಜಕಾರಣಿಗಳು, ಸರ್ಕಾರದ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮುಖವನ್ನು ಅನಾವರಣ ಮಾಡಿತ್ತು. 'ಚಕ್ರವ್ಯೂಹ' ಮತ್ತು 'ನ್ಯೂ ಡೆಲ್ಲಿ' ಸಿನಿಮಾಗಳು ಕೂಡ ಇದೇ ಆಯಾಮದಲ್ಲಿ ಇದ್ದವು.
ಅಂಬರೀಶ್​ ಅವರ ಬಹುಮುಖ್ಯವಾದ ಇತರೆ ಸಿನಿಮಾಗಳು ಎಂದರೆ, 'ರಂಗನಾಯಕಿ', 'ಟೋನಿ',  'ರಾಣಿ ಮಹಾರಾಣಿ', 'ಒಲವಿನ ಉಡುಗೊರೆ', 'ಹೃದಯ ಹಾಡಿತು', 'ಹಾಂಕಾಂಗ್​ನಲ್ಲಿ ಏಜೆಂಟ್​ ಅಮರ್', 'ಮಣ್ಣಿನ ಮಗ' ಮತ್ತು 'ಒಡಹುಟ್ಟಿದವರು' ಹಾಗೂ 'ಮಸಣದ ಹೂವು', 'ಏಳು ಸುತ್ತಿನ ಕೋಟೆ' ಮತ್ತು ಮಲೆಯಾಳಂನ 'ಗಾನಂ'  ಅಂಬರೀಶ್​ ಅವರ ನಟನೆಗೆ ಕನ್ನಡಿ ಹಿಡಿದ ಚಿತ್ರಗಳು. ಚಿತ್ರರಂಗದ ದಂತಕತೆ ಡಾ.ರಾಜ್​ಕುಮಾರ್​ ಅವರೊಂದಿಗೂ ಅಂಬರೀಶ್​ ನಟಿಸಿದ್ದರು.


ಅಂಬರೀಶ್ ಅವರು 1991 ರಲ್ಲಿ ಕನ್ನಡದ ಖ್ಯಾತ ನಟಿ ಸುಮಲತಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದರು. ಕನ್ನಡ ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಶ್ ಅವರಿಗೆ 2013 ರಲ್ಲಿ  ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಗೌರವ ಡಾಕ್ಟರೇಟ್  ನೀಡಿ ಗೌರವಿಸಿದೆ. • ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ಯುತ್ತಮ ನಟ - 1982

 • ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ಯುತ್ತಮ ಸಹಾಯ ನಟ ( ಮಸಣದ ಹೂವು - 1985-86)

 • ಫಿಲ್ಮ್ ಫೇರ್ ಪ್ರಶಸ್ತಿ - ಅತ್ಯುತ್ತಮ ನಟ - ಒಲವಿನ ಉಡುಗೊರೆ

 • ಎನ್.ಟಿ.ಆರ್ ರಾಷ್ಟ್ರೀಯ ಪ್ರಶಸ್ತಿ - 2005

 • ಜೀವಮಾನ ಫಿಲ್ಮ್ ಫೇರ್ ಪ್ರಶಸ್ತಿ - 2009

 • ನಂದಿ ಪ್ರಶಸ್ತಿ( ಆಂಧ್ರ ಸರ್ಕಾರ) - 2009

 • ಟಿವಿ 9 ಸ್ಯಾಂಡಲ್ ವುಡ್ ಸ್ಟಾರ್ ಪ್ರಶಸ್ತಿ - 2012

 • ವಿಷ್ಣುವರ್ದನ್ ಪ್ರಶಸ್ತಿ (ಕರ್ನಾಟಕ ಸರ್ಕಾರ) - 2011


First published: November 25, 2018, 12:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading