Cabinet Crisis: ನಡ್ಡ-ಬೊಮ್ಮಾಯಿ ಭೇಟಿ ಬಳಿಕವೂ ಬಗೆಹರಿಯದ ಸಮಸ್ಯೆ; ಸಂಪುಟ ವಿಸ್ತರಣೆ ವಿಳಂಬಕ್ಕೆ ಏನು ಕಾರಣ?

ಸಚಿವ ಸಂಪುಟ ವಿಸ್ತರಣೆ ಸುಲಭಕ್ಕೆ ಸಾಧ್ಯ ಆಗುತ್ತಿಲ್ಲ. ಅದೇ ಕಾರಣಕ್ಕೆ ಇಂದು ಮಂಗಳವಾರ ಬೆಳಿಗ್ಗೆಯೇ ಬೆಂಗಳೂರಿಗೆ ತೆರಳಬೇಕಿದ್ದ ಬಸವರಾಜ ಬೊಮ್ಮಾಯಿ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ.

ಬೊಮ್ಮಾಯಿ

ಬೊಮ್ಮಾಯಿ

  • Share this:
ನವದೆಹಲಿ, ಆ. 3: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದ ಒತ್ತಡ ಹೆಚ್ಚಾಗುತ್ತಿದ್ದು ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಆದ್ಯಕ್ಷ ಜೆ.ಪಿ. ನಡ್ಡ ಭೇಟಿ ಮಾಡಿ ಸುದೀರ್ಘವಾದ ಸಮಾಲೋಚನೆ ನಡೆಸಿದ್ದಾರೆ. ಆದರೆ ಹೈಕಮಾಂಡ್ ನಾಯಕರಿಂದ ಸಚಿವ ಸಂಪುಟಕ್ಕೆ ಅನುಮೋದನೆ ಸಿಕ್ಕಿಲ್ಲ. ಇದರಿಂದ ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬವಾಗುತ್ತಿದ್ದು ಗುರುವಾರ (ಆಗಸ್ಟ್ 5) ಅಥವಾ ಶುಕ್ರವಾರ (ಆಗಸ್ಟ್ 6) ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಸೋಮವಾರ ರಾತ್ರಿ ಜೆ.ಪಿ. ನಡ್ಡ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ನೀಡಲಾಗಿದೆ. ಎಷ್ಟು ಮಂದಿ ಸಚಿವರಾಗಬೇಕು, ಯಾರು ಇರಬೇಕು? ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿ ಮಾಡಬೇಕಾ? ಮಾಡಿದರೆ ಎಷ್ಟು ಜನರಿಗೆ ಅವಕಾಶ ಮಾಡಿಕೊಡಬೇಕು? ಎಂಬುದನ್ನು ಹೈಕಮಾಂಡ್ ನಾಯಕರು ನಿರ್ಧರಿಸಲಿದ್ದಾರೆ. ನಾಳೆ (ಮಂಗಳವಾರ) ಸಂಜೆಯೊಳಗೆ ಪಟ್ಟಿಗೆ ಹೈಕಮಾಂಡಿನ ಮುದ್ರೆ ಬೀಳಲಿದೆ. ಬಳಿಕ ಕೂಡಲೇ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಸಚಿವ ಸಂಪುಟ ವಿಸ್ತರಣೆ‌ ಸುಲಭಕ್ಕೆ ಸಾಧ್ಯ ಆಗುತ್ತಿಲ್ಲ. ಅದೇ ಕಾರಣಕ್ಕೆ ಬೆಳಿಗ್ಗೆಯೇ ಬೆಂಗಳೂರಿಗೆ ತೆರಳಬೇಕಿದ್ದ ಬಸವರಾಜ ಬೊಮ್ಮಾಯಿ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ.

ಹೈಕಮಾಂಡ್ ನಾಯಕರಿಂದ ಯಾವುದೇ ಸಂದರ್ಭದಲ್ಲಿ ಕರೆ ಬರಬಹುದು, ಮತ್ತೊಮ್ಮೆ ಜೆ.ಪಿ. ನಡ್ಡ ಭೇಟಿ ಆಗಬೇಕಾಗಬಹುದು, ಕೆಲವೊಂದು ಹೆಸರುಗಳ ಬಗ್ಗೆ ಮಾಹಿತಿ ಅಥವಾ ಸ್ಪಷ್ಟೀಕರಣ ಕೊಡಬೇಕಾಗಬಹುದು ಎಂಬ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಉಳಿದುಕೊಂಡಿದ್ದು ಬಹುತೇಕ ಸಚಿವರ ಪಟ್ಟಿಗೆ ಹೈಕಮಾಂಡ್ ನಾಯಕರ ಮೊಹರು ಬಿದ್ದ ಬಳಿಕವೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎನ್ನಲಾಗುತ್ತಿದೆ.‌ ಜೆ.ಪಿ. ನಡ್ಡ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಳು ಪ್ರಮುಖ ಅಂಶಗಳ ಹಿನ್ನಲೆಯಲ್ಲಿ ಚರ್ಚೆ ಮಾಡಿದ್ದಾರೆ. ಇವೇ ಅಂಶಗಳು ಸಂಪುಟ ವಿಸ್ತರಣೆ ವಿಳಂಬವಾಗಲು ಕಾರಣ ಎನ್ನಲಾಗಿದೆ. ಆ ಅಂಶಗಳು ಕೆಳಕಂಡಂತಿವೆ:

ಇದನ್ನೂ ಓದಿ: ರೈತರ ಸಹಕಾರ ಇಲ್ಲದೇ ಕಾವೇರಿ ಉಳಿಸಿ ಅಭಿಯಾನ ಅಸಾಧ್ಯ: ಬೆಂಗಳೂರಿನಲ್ಲಿ ಜಗ್ಗಿ ವಾಸುದೇವ್

1) ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕೋ ಬೇಡವೋ?
2) ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ?
3) ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಂದು ಬಿಜೆಪಿ ಸರ್ಕಾರ ರಚನೆ ಆಗಲು ಕಾರಣಕರ್ತರಾದ ವಲಸೆ ಸಚಿವರ ಪೈಕಿ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೋ ಬೇಡವೋ?
4) ತಮ್ಮ ರಾಸಲೀಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರುವ ಸಿಡಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯಗಳಿಂದ ತಡೆಯಾಜ್ಞೆ ತಂದಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ?
5) ಈ ಸರ್ಕಾರಕ್ಕೆ ಇನ್ನು ಒಂದು ಮುಕ್ಕಾಲು ವರ್ಷ ಮಾತ್ರ ಬಾಕಿ ಇರುವುದರಿಂದ ಒಂದೇ ಸಲಕ್ಕೆ 30 ಜನರನ್ನು ಸಚಿವ ಸಂಪುಟ ಸೇರಿಸಿಕೊಳ್ಳಬೇಕೋ ಅಥವಾ ಕೆಲವು ಸ್ಥಾನಗಳನ್ನು ಹಾಗೆ ಇಟ್ಟುಕೊಳ್ಳಬೇಕೋ?
6) ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿ ಮಾಡಬೇಕೋ ಬೇಡವೋ? ಮಾಡಿದರೆ ಎಷ್ಟು ಜನರನ್ನು ಮಾಡಬೇಕು ಮತ್ತು ಯಾವ ಮಾನದಂಡ ಅನುಸರಿಸಬೇಕು?
7) ಕೆಲವು ಹಿರಿಯರನ್ನು ಸಂಪುಟದಿಂದ ಕೈಬಿಡಬೇಕಾ ಬೇಡವಾ? ಈ ವಿಷಯದಲ್ಲಿ ಯಾವ ‌ನಿಲುವು ತೆಗೆದುಕೊಳ್ಳಬೇಕು? ಯಾರನ್ನು ಕೈಬಿಡಬೇಕು?

ಇನ್ನೊಂದೆಡೆ ಅರವಿಂದ ಬೆಲ್ಲದ್, ಲಕ್ಷಣ ಸವದಿ, ಸಿಸಿ ಪಾಟೀಲ್, ಸುನಿಲ್ ವಲ್ಯಾಪುರ, ರಾಜೂಗೌಡ ಮತ್ತು ಸತೀಶ್ ರೆಡ್ಡಿ, ಹೊಳಲ್ಕೆರೆ ಚಂದ್ರಪ್ಪ ಕೂಡ ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಚಿವರನ್ನಾಗಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

ವರದಿ: ಧರಣೀಶ ಬೂಕನಕೆರೆ
Published by:Vijayasarthy SN
First published: