ಜಯನಗರದಲ್ಲಿ ಬಿಜೆಪಿ ಸೋಲಲು ಪ್ರಮುಖ ಕಾರಣಗಳೇನು?


Updated:June 13, 2018, 7:01 PM IST
ಜಯನಗರದಲ್ಲಿ ಬಿಜೆಪಿ ಸೋಲಲು ಪ್ರಮುಖ ಕಾರಣಗಳೇನು?
ಪ್ರಹ್ಲಾದ್ ಬಾಬು

Updated: June 13, 2018, 7:01 PM IST
- ನ್ಯೂಸ್18 ಕನ್ನಡ

ಬೆಂಗಳೂರು (ಜೂನ್ 13): ತನ್ನ ಭದ್ರಕೋಟೆ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿದೆ. ಬಿಜೆಪಿ ಶಾಸಕ ಬಿ.ಎನ್. ವಿಜಯಕುಮಾರ್ ನಿಧನ ಹಾಗೂ ಬಿಜೆಪಿಯ ಕೈತಪ್ಪಿದ ಅಧಿಕಾರದಿಂದ ಪಕ್ಷಕ್ಕೆ ಅನುಕಂಪದ ಅಲೆಗಳಿರಬಹುದೆಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಅನಂತಕುಮಾರ್ ಸಂಪೂರ್ಣವಾಗಿ ಗಮನ ಹರಿಸಿದರೂ ಪಕ್ಷಕ್ಕೆ ಗೆಲುವಿನ ನಗೆ ಬರಲಿಲ್ಲ. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಈ ಕ್ಷೇತ್ರದ ಮೂಲಕ ರಾಜಕಾರಣಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿ ಗೆಲ್ಲಲು ಮತ್ತು ಪ್ರಹ್ಲಾದ್ ಬಾಬು ಸೋಲಲು ಪ್ರಮುಖ ಕಾರಣಗಳೇನು?

ಬಿಜೆಪಿ ಸೋಲಿಗೆ ಸಂಭಾವ್ಯ ಕಾರಣಗಳು:

1) ಒಮ್ಮತದ ಅಭ್ಯರ್ಥಿಯ ಆಯ್ಕೆ ಇಲ್ಲ
2) ಬಿಜೆಪಿ ಕಾರ್ಪೊರೇಟರ್​ಗಳ ಭಿನ್ನಮತ
3) ಅನಂತಕುಮಾರ್ ವರ್ಸಸ್ ಬಿಎಸ್​ವೈ ಬಣಗಳ ತಿಕ್ಕಾಟ
4) ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದದ್ದು
Loading...

5) ರಾಮಲಿಂಗ ರೆಡ್ಡಿ ತಂತ್ರಗಳು
6) ವೋಟಿಂಗ್ ಪರ್ಸೆಂಟೇಜ್ ಕಡಿಮೆಯಾಗಿದ್ದು

ಭಿನ್ನಮತ:
ಬಿ.ಎನ್. ವಿಜಯಕುಮಾರ್ ನಿಧನದ ನಂತರ ಕ್ಷೇತ್ರದ ಟಿಕೆಟ್​ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಹಾಲಿ ಮತ್ತು ಮಾಜಿ ಕಾರ್ಪೊರೇಟರ್​ಗಳಾದ ನಾಗರಾಜ್, ನಟರಾಜ್, ರಾಮಮೂರ್ತಿ, ಸೋಮಶೇಖರ್, ಮಂಜುನಾಥ ರೆಡ್ಡಿ, ಗೋವಿಂದ ನಾಯ್ಡು ಸೇರಿದಂತೆ ಹಲವರು ಜಯನಗರದ ಟಿಕೆಟ್​ಗಾಗಿ ಪೈಪೋಟಿ ನಡೆಸಿದರು. ಆದರೆ, ಅಂತಿಮವಾಗಿ ವಿಜಯ್​ಕುಮಾರ್ ಅವರ ಸೋದರ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ಕೊಡಲು ವರಿಷ್ಠರು ನಿರ್ಧರಿಸಿದ್ದರು. ಆರೆಸ್ಸೆಸ್​ನಲ್ಲಿ ಸಕ್ರಿಯವಾಗಿದ್ದ ಪ್ರಹ್ಲಾದ್ ಬಾಬು ಕ್ಷೇತ್ರದ ರಾಜಕಾರಣಕ್ಕೆ ಹೊಸಬರಾದರೂ ಅವರಿಗೆ ಟಿಕೆಟ್ ಕೊಟ್ಟಿದ್ದು ಉಳಿದವರಿಗೆ ಬೇಸರ ತಂದಿತು. ತಾವು ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ವಿಜಯಕುಮಾರ್ ಅವರನ್ನು ಗೆಲ್ಲಿಸಿಕೊಂಡು ಬರುತ್ತಿರುವ ತಮ್ಮಲ್ಲೇ ಯಾರಾದರೊಬ್ಬರಿಗೆ ಟಿಕೆಟ್ ಕೊಡಬೇಕೆಂದು ಸ್ಥಳೀಯ ಬಿಜೆಪಿ ಮುಖಂಡರು ಅಸಮಾಧಾನಪಟ್ಟರು. ಬಹಿರಂಗವಾಗಿಯೇ ಬಂಡಾಯ ಏಳುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಭಿನ್ನಮತವನ್ನು ಶಮನ ಮಾಡಲು ಯತ್ನಿಸಿದರು. ಕ್ಷೇತ್ರದಲ್ಲಿ ಬಿಜೆಪಿ ಸೋತರೆ ಕಾಂಗ್ರೆಸ್ ನೆಲೆ ಭದ್ರಗೊಳಿಸಿದಂತಾಗುತ್ತದೆ. ಮುಂದೆ ನಗರಸಭಾ ಚುನಾವಣೆಯಲ್ಲೂ ಬಿಜೆಪಿಗೆ ಕಷ್ಟವಾಗಬಹುದೆಂದು ವರಿಷ್ಠರು ಎಚ್ಚರಿಕೆ ನೀಡಿದರು. ಆದರೂ, ತೃಪ್ತಿಯಾಗದ ಸ್ಥಳೀಯ ಬಿಜೆಪಿ ಮುಖಂಡರು ಮನಃಪೂರ್ವಕವಾಗಿ ಕೆಲಸ ಮಾಡಲಿಲ್ಲ ಎಂದು ಹೇಳಲಾಗುತ್ತಿದೆ. ಇವರೆಲ್ಲರೂ ಒಮ್ಮನಸಿನಿಂದ, ಒಗ್ಗಟ್ಟಿನಿಂದ ಕೆಲಸ ಮಾಡಿದ್ದರೆ ಬಿಜೆಪಿ ಗೆಲುವು ಸುಲಭವಾಗುತ್ತಿತ್ತೆನ್ನಲಾಗಿದೆ.

ಇದೇ ವೇಳೆ, ಪ್ರಹ್ಲಾದ್ ಬಾಬು ಅವರನ್ನು ಅಭ್ಯರ್ಥಿಯನ್ನಾಗಿ ಆರಿಸುವ ನಿರ್ಧಾರದ ಹಿಂದೆ ಅನಂತಕುಮಾರ್ ಅವರ ಹಸ್ತವಿತ್ತು. ಬಿಎಸ್​ವೈ ಬಣಕ್ಕೆ ಇದು ಇಷ್ಟವಿರಲಿಲ್ಲ. ಇದೂ ಕೂಡ ಪ್ರಹ್ಲಾದ್ ಬಾಬು ಗೆಲುವಿಗೆ ಅಡ್ಡಗಾಲಾಯಿತೆಂಬ ಮಾತಿದೆ.

ಜೆಡಿಎಸ್ ಅಭ್ಯರ್ಥಿ ಹಿಂದೆ ಸರಿದದ್ದು:
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದೂ ಬಿಜೆಪಿಗೆ ಯಡವಟ್ಟಾಗಿದೆ. ಜೆಡಿಎಸ್ ಪಕ್ಷಕ್ಕೆ ಇಲ್ಲಿ ಕೆಲ ಮತಬ್ಯಾಂಕ್ ಇದೆ. ಆ ಪಕ್ಷದ ಅಭ್ಯರ್ಥಿಯಾಗಿದ್ದ ಕಾಳೇಗೌಡರು ಕಣದಲ್ಲಿದ್ದದ್ದರೆ ಕನಿಷ್ಠ 15 ಸಾವಿರ ವೋಟುಗಳನ್ನಾದರೂ ಪಡೆಯುತ್ತಿದ್ದರು. ಹಾಗಾಗಿದ್ದರೆ ಬಿಜೆಪಿಯ ಗೆಲುವು ನಿಶ್ಚಿತವಾಗಿರುತ್ತಿತ್ತು. ಆದರೆ, ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಕಡೆಯ ಕ್ಷಣದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯು ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದರು.

ರಾಮಲಿಂಗ ರೆಡ್ಡಿ ತಂತ್ರಗಳು:
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮ ಪುತ್ರಿಯನ್ನು ಜಯನಗರ ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡುಬರುವ ಮುನ್ನ ಸಾಕಷ್ಟು ಚಾಣಾಕ್ಷ್ಯತೆ ಮೆರೆದಿದ್ದಾರೆ. ತಮ್ಮ ಪಕ್ಷದ ಹಿರಿಯ ಮುಖಂಡರನ್ನು ಅವರು ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಕರೆಸಲೇ ಇಲ್ಲ. ಬಿಜೆಪಿಯ ಭದ್ರಕೋಟೆಯಲ್ಲಿ ಏನಾದರೂ ಯಡವಟ್ಟು ಹೇಳಿಕೆ ಕೊಟ್ಟು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಬಹುದೆಂದು ರಾಮಲಿಂಗಾ ರೆಡ್ಡಿ ಯಾರನ್ನೂ ಪ್ರಚಾರಕ್ಕೆ ಕರೆಸಲಿಲ್ಲ. ತಾವೇ ಖುದ್ದಾಗಿ ನಿಂತು ಮಗಳು ಹಾಗೂ ಸ್ಥಳೀಯ ಕಾರ್ಯಕರ್ತರ ಜೊತೆ ಸೇರಿ ಪ್ರಚಾರ ಮಾಡಿದರು. ಇದೂ ಕೂಡ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವಾಯಿತು.

ಮತದಾನದ ಪ್ರಮಾಣ ಕಡಿಮೆಯಾಗಿದ್ದು….
ಜಯನಗರದಂಥ ಸುಶಿಕ್ಷಿತರ ಕ್ಷೇತ್ರದಲ್ಲಿ ಹೆಚ್ಚು ಮತದಾನವಾದಷ್ಟೂ ಬಿಜೆಪಿಗೆ ಲಾಭ ಎಂಬ ಮಾತಿದೆ. ಆದರೆ, ಈ ಬಾರಿ ಜಯನಗರದಲ್ಲಿ ಸುಮಾರು 55% ಮತದಾನವಾಗಿತ್ತು. ಇದು ಕಾಂಗ್ರೆಸ್​ಗೆ ಲಾಭ ಎಂಬ ಮಾತು ಆಗಲೇ ಕೇಳಿಬಂದಿತ್ತು. ಸುಶಿಕ್ಷಿತರು ಹೆಚ್ಚಿನ ಪ್ರಮಾಣದಲ್ಲಿ ಬಂದು ವೋಟ್ ಹಾಕದೇ ಇದ್ದದ್ದು ಬಿಜೆಪಿ ಗೆಲುವಿಗೆ ತಡೆಯಾಯಿತೆಂದು ವಿಶ್ಲೇಷಿಸಲಾಗುತ್ತಿದೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...