ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಚಿವ ಎ. ಮಂಜು ಇದೀಗ ಮತ್ತೆ ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅರಕಲಗೂಡು ಮಂಜು ತಮ್ಮ ಬೆಂಬಲಿಗರ ಮೂಲಕ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಹೊಳೆನರಸೀಪುರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಧೃವನಾರಾಯಣ್ ಅವರಿಗೂ ಬೆಂಬಲಿಗರು ಒತ್ತಾಯಿಸಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ನಿವಾಸಕ್ಕೂ ಆಗಮಿಸಿದ ಬೆಂಬಲಿಗರು ತಮ್ಮ ನಾಯಕ ಎ. ಮಂಜು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪಶು ಸಂಗೋಪನೆ ಸಚಿವರಾಗಿದ್ದ ಎ. ಮಂಜು, ನಂತರ ಅಸ್ತಿತ್ವಕ್ಕೆ ಬಂದ ಮೈತ್ರಿ ಸರ್ಕಾರ ರಚನೆ ವಿರುದ್ಧದ ನಿಲುವು ತಳೆದಿದ್ದರು. ತಮ್ಮ ಇಡೀ ರಾಜಕಾರಣವೇ ಹೆಚ್. ಡಿ. ದೇವೇಗೌಡರ ಕುಟುಂಬದ ವಿರುದ್ಧ ಎಂಬಂತಿದ್ದ ಕಾರಣ, ಮಂಜು ಅವರಿಗೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಸಹ್ಯ ಎನಿಸಲಿಲ್ಲ.
ಮುಂದುವರೆದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಎದುರಿಸಿದ ಲೋಕಸಭೆ ಚುನಾವಣೆ ಎ. ಮಂಜು ರಾಜಕೀಯ ನಿರ್ಧಾರ ಮಾಡಲು ಕಾರಣವಾಯಿತು. ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಮೈತ್ರಿ ಅಭ್ಯರ್ಥಿಯಾದರೆ ಬೆಂಬಲ ನೀಡುತ್ತೇನೆ. ದೊಡ್ಡಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ ಬೆಂಬಲಿಸುವುದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿದರು. ಸಿದ್ದರಾಮಯ್ಯ ಅವರ ಶಿಷ್ಯನಾಗಿದ್ದರೂ, ಪಟ್ಟು ಹಿಡಿದವರಂತೆ ಕಾಂಗ್ರೆಸ್ ತೊರೆದರು. ಬಿಜೆಪಿ ಪಕ್ಷ ಸೇರ್ಪಡೆಯಾಗಿ ಹಾಸನ ಲೋಕಸಭೆ ಅಭ್ಯರ್ಥಿಯೂ ಆದರು. 2014ರ ಲೋಕಸಭೆ ಚುನಾವಣೆಯಲ್ಲಿ ತಾತ ಹೆಚ್. ಡಿ. ದೇವೇಗೌಡರ ವಿರುದ್ಧ ಸೋಲುಂಡಿದ್ದ ಮಂಜು, ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧವೂ ಹೀನಾಯ ಸೋಲು ಕಂಡರು.
ಮಂಕಾದ ಮಂಜು ವರ್ಚಸ್ಸು:
ಬಿಜೆಪಿ ಸೇರ್ಪಡೆಯಾಗಿ ಹಾಸನ ಲೋಕಸಭೆಗೆ ಸ್ಪರ್ಧಿಸಿದ್ದರೂ ಗೆಲುವು ಸಿಗಲಿಲ್ಲ. ಅಷ್ಟೊತ್ತಿಗಾಗಲೇ ಹಾಸನದ ಶಾಸಕರಾಗಿದ್ದ ಪ್ರೀತಂಗೌಡ, ಜಿಲ್ಲಾ ಬಿಜೆಪಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಚುನಾವಣೆಯಲ್ಲಿ ಪ್ರೀತಂಗೌಡರ 'ಸಹಕಾರ' ಅಷ್ಟಕಷ್ಟೇ ಇತ್ತು. ಇದೆಲ್ಲದರ ಜೊತೆಗೆ ದೇವೇಗೌಡರ ಕುಟುಂಬದ ಭರವಸೆಯ ಯುವ ನಾಯಕ ಪ್ರಜ್ವಲ್ ರೇವಣ್ಣ ವಿರುದ್ಧ ಎ. ಮಂಜು ಸೋಲು ಕಾಣಬೇಕಾಯಿತು. ಸೋಲು ಮಂಜು ವರ್ಚಸ್ಸಿಗೆ ಮಂಕು ಕವಿಯುವಂತೆ ಮಾಡಿದ್ದು ಸುಳ್ಳಲ್ಲ.
ಇದನ್ನೂ ಓದಿ: Ramesh Jarkiholi: ಉಲ್ಟಾ ಹೊಡೆದ ರಮೇಶ ಜಾರಕಿಹೊಳಿ; ಶಾಸಕ ಸ್ಥಾನಕ್ಕೆ ರಾಜೀನಾಮೆ ಮುಗಿದ ಅಧ್ಯಾಯ
ರಾಜಕೀಯ ಪುನರ್ಜನ್ಮಕ್ಕೆ ಕಾಂಗ್ರೆಸ್ ಅನಿವಾರ್ಯ:
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ, ನಂತರ ಸೋಲು, ಬಿಜೆಪಿಯಲ್ಲಿ ವೃದ್ಧಿಯಾಗದ ವರ್ಚಸ್ಸು ಇವೆಲ್ಲವೂ ಮಂಜು ಅವರು ಮತ್ತೊಂದು ರಾಜಕೀಯ ತಿರುವು ಬಯಸಲು ಕಾರಣವಾಗಿದೆ. ಹೀಗಾಗಿ ಮತ್ತದೇ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸರಿಯಾದೀತು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ.
ಅರಕಲಗೂಡಿನ ವಾಸ್ತವ:
ಬದಲಾದ ರಾಜಕೀಯ ಸನ್ನಿವೇಶ ಹಾಸನ ರಾಜಕಾರಣದಲ್ಲಿ ಅನೇಕ ಬದಲಾವಣೆ ತಂದಿದೆ. ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಅಂದಿನ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಯೋಗಾ ರಮೇಶ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪ್ರಸನ್ನಕುಮಾರ್ ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದರು. ಮುಂಬರುವ ವಿಧಾನಸಭೆ ಚುನಾವಣೆಗೆ ಯೋಗಾ ರಮೇಶ್ ಹಾಗೂ ಪ್ರಸನ್ನಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಲು ಅಣಿಯಾಗುತ್ತಿದ್ದಾರೆ. ಈ ಮಧ್ಯೆ ಎ. ಮಂಜು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುವ ತುಡಿತದಲ್ಲಿದ್ದಾರೆ. ಇದರ ಮೂಲಕ ಸಾಕಷ್ಟು ಬೆಳವಣಿಗೆಗೆ ಕಾರಣರಾಗುತ್ತಿದ್ದಾರೆ. ಅಂತಿಮವಾಗಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ತೀರ್ಮಾನ ಸಾಕಷ್ಟು ಮಹತ್ವ ಪಡೆದುಕೊಳ್ಳಲಿದೆ.
ವರದಿ: ದಶರಥ್ ಸಾವೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ