ಸಿದ್ದರಾಮಯ್ಯ ವಿರುದ್ಧ ಇಬ್ರಾಹಿಂ ತಿರುಗಿಬೀಳಲು ಕಾರಣ ಏನು?

ಇಬ್ರಾಹಿಂ ಅವರು ವಿಧಾನಪರಿಷತ್ ವಿಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಸಿದ್ದರಾಮಯ್ಯರಿಂದ ತನಗೆ ಆ ಸ್ಥಾನ ಸಿಕ್ಕೇ ಸಿಗುತ್ತದೆಂಬ ಬಲವಾದ ವಿಶ್ವಾಸದಲ್ಲಿಯೂ ಇದ್ದರು. ಆದರೆ, ಎಸ್.ಆರ್. ಪಾಟೀಲ್ ಅವರಿಗೆ ಆ ಸ್ಥಾನ ಹೋಗಿದ್ದು ಇಬ್ರಾಹಿಂ ಮುನಿಸಿಗೆ ಕಾರಣವೆನ್ನಲಾಗುತ್ತಿದೆ.

news18-kannada
Updated:November 5, 2019, 3:44 PM IST
ಸಿದ್ದರಾಮಯ್ಯ ವಿರುದ್ಧ ಇಬ್ರಾಹಿಂ ತಿರುಗಿಬೀಳಲು ಕಾರಣ ಏನು?
ಇಬ್ರಾಹಿಂ
  • Share this:
ಬೆಂಗಳೂರು(ನ. 05): ಸಿದ್ದರಾಮಯ್ಯ ಅವರ ಅತ್ಯಂತ ನೆಚ್ಚಿನ ಬಂಟರಲ್ಲಿ ಸಿ.ಎಂ. ಇಬ್ರಾಹಿಂ ಕೂಡ ಒಬ್ಬರು ಮತ್ತು ಪ್ರಮುಖರು. ಸಿದ್ದರಾಮಯ್ಯ ತೆಗೆದುಕೊಳ್ಳುವ ಯಾವುದೇ ನಿಲುವನ್ನೂ ತಮ್ಮದೇ ಶೈಲಿಯಲ್ಲಿ ರಸವತ್ತಾಗಿ ಬಣ್ಣಿಸಿ ಸಮರ್ಥಿಸಿಕೊಳ್ಳುತ್ತಿದ್ದವರು. ಈಗ ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯೇ ಕಾರಣ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಇಬ್ರಾಹಿಂ ಸಹಮತ ವ್ಯಕ್ತಪಡಿಸದೇ ಭಿನ್ನರಾಗ ಹಾಡಿದ್ದಾರೆ. ಸರ್ಕಾರ ಬೀಳಿಸಿದ ಮಾತನ್ನು ಪಕ್ಕಕ್ಕಿಟ್ಟು ನೆರೆ ಸಂತ್ರಸ್ತರ ಕುರಿತು ಯೋಚಿಸಿ ಎಂದು ಸಿದ್ದರಾಮಯ್ಯ ಅವರಿಗೇ ಇಬ್ರಾಹಿಂ ತಿಳಿವಳಿಕೆ ನೀಡಿದ್ದಾರೆ. ಸಿಎಂ ಇಬ್ರಾಹಿಂ ಅವರ ಈ ಬದಲಾದ ವರ್ತನೆ ಮತ್ತು ಧೋರಣೆ ಎರಡೂ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ವಿರುದ್ಧ ಸಿಎಂ ಇಬ್ರಾಹಿಂ ಮುನಿಸಿಕೊಳ್ಳಲು ಕಾರಣ ಇಲ್ಲದಿಲ್ಲ. ಮೂಲಗಳ ಪ್ರಕಾರ, ಇಬ್ರಾಹಿಂ ಅವರು ವಿಧಾನಪರಿಷತ್ ವಿಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಸಿದ್ದರಾಮಯ್ಯರಿಂದ ತನಗೆ ಆ ಸ್ಥಾನ ಸಿಕ್ಕೇ ಸಿಗುತ್ತದೆಂಬ ಬಲವಾದ ವಿಶ್ವಾಸದಲ್ಲಿಯೂ ಇದ್ದರು. ಆದರೆ, ಎಸ್.ಆರ್. ಪಾಟೀಲ್ ಅವರಿಗೆ ಆ ಸ್ಥಾನ ಹೋಯಿತು. ತಾನು ಅಷ್ಟು ಕೇಳಿಕೊಂಡರೂ ತನಗೆ ಆ ಸ್ಥಾನ ಕೊಡಸಲಿಲ್ಲವಲ್ಲಾ ಎಂಬ ಕೋಪ ಸಿದ್ದರಾಮಯ್ಯ ಮೇಲೆ ಇಬ್ರಾಹಿಂಗೆ ಒಳಗಿಂದೊಳಗೆ ಇದ್ದೇ ಇತ್ತು. ಇದೀಗ ಅದು ಸ್ಫೋಟಗೊಂಡಿದೆ ಎನ್ನುತ್ತವೆ ಮೂಲಗಳು.

ಇದನ್ನೂ ಓದಿ: 17 ಪತಿವ್ರತೆಯರ ಬಗ್ಗೆ ಚರ್ಚೆ ಮಾಡಿದ್ದು ಸಾಕು ನೆರೆ ಸಂತ್ರಸ್ತರ ಕುರಿತು ಯೋಚಿಸಿ; ಸಿದ್ದುಗೆ ಟಾಂಗ್ ಕೊಟ್ಟ ಸಿಎಂ ಇಬ್ರಾಹಿಂ

ಸಿದ್ದರಾಮಯ್ಯ ಅವರು ಇಬ್ರಾಹಿಂ ಬದಲು ಎಸ್.ಆರ್. ಪಾಟೀಲ್ ಅವರಿಗೆ ವಿಪಕ್ಷ ನಾಯಕ ಸ್ಥಾನ ಕೊಡಿಸಲು ಅವರದ್ದೇ ಕಾರಣಗಳಿವೆ. ಬಾದಾಮಿ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲಲು ಪ್ರಮುಖ ಕಾರಣಕರ್ತರು ಎಸ್.ಆರ್. ಪಾಟೀಲ್ ಅವರೇ. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯಗೆ ಬಾದಾಮಿ ಗೆಲುವು ನಿಜಕ್ಕೂ ಬೆಲೆ ಕಟ್ಟಲಾಗದಂಥದ್ದು. ಹೀಗಾಗಿ, ಎಸ್.ಆರ್. ಪಾಟೀಲ್ ಅವರನ್ನು ಯಾವುದೇ ಕಾರಣಕ್ಕೂ ಕೈಬಿಡದಿರಲು ಸಿದ್ದರಾಮಯ್ಯ ಗಟ್ಟಿ ನಿರ್ಧಾರ ಮಾಡಿದ್ದರು. ಉತ್ತರ ಕರ್ನಾಟಕ, ಲಿಂಗಾಯತ ಮತ್ತು ಸೀನಿಯರ್ ಕೋಟಾಗಳಡಿ ಎಸ್.ಆರ್. ಪಾಟೀಲ್ ಅವರನ್ನು ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಪರಿಗಣಿಸುವಂತೆ ಹೈಕಮಾಂಡ್​ಗೆ ಮನವಿ ಮಾಡಿದ್ದರು ಸಿದ್ದರಾಮಯ್ಯ.

ಇನ್ನು, ಸಿ.ಎಂ. ಇಬ್ರಾಹಿಂ ಅವರನ್ನು ಪರಿಷತ್ ಸದಸ್ಯನನ್ನಾಗಿ ಮಾಡಿದ್ದು ಕೂಡ ಸಿದ್ದರಾಮಯ್ಯನವರೆಯೇ. ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಇಬ್ರಾಹಿಂ ದುಂಬಾಲು ಬಿದ್ದಾಗಲೇ ಸಿದ್ದರಾಮಯ್ಯ ಸುತಾರಾಂ ಆಗಲ್ಲ ಎಂದು ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್​ನ ಹಿರಿಯರ ವಿರೋಧದ ನಡುವೆಯೂ ನಿನ್ನನ್ನು ಪರಿಷತ್ ಸದಸ್ಯನನ್ನಾಗಿ ಮಾಡಿದೆ. ಯೋಜನಾ ಆಯೋಗದ ಉಪಾಧ್ಯಕ್ಷನನ್ನಾಗಿ ಮಾಡಿದೆ. ಈಗ ಪರಿಷತ್ ವಿಪಕ್ಷ ನಾಯಕ ಸ್ಥಾನ ನಿನಗೆ ಕೊಡಿಸುವುದು ಕಷ್ಟ ಎಂದು ಇಬ್ರಾಹಿಂಗೆ ಸ್ಪಷ್ಟವಾಗಿ ಮನದಟ್ಟು ಮಾಡಿದ್ದರು ಸಿದ್ದರಾಮಯ್ಯ. ಆದರೂ ಕೂಡ ಇಬ್ರಾಹಿಂ ಅವರ ಮುನಿಸು ಆರಿಲ್ಲ. ಈಗ ಬಹಿರಂಗವಾಗಿಯೇ ಸಿದ್ದರಾಮಯ್ಯ ಹೇಳಿಕೆಗಳಿಗೆ ವ್ಯಂಗ್ಯ ಮಾಡುವಂಥ ಪ್ರತಿಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ಇಬ್ರಾಹಿಂ ಮುನಿಸು ಕ್ಷಣಿಕವಾ ಅಥವಾ ಅನರ್ಹ ಶಾಸಕರ ರೀತಿ ಬಂಡಾಯ ಸ್ವರೂಪ ಪಡೆದುಕೊಳ್ಳುತ್ತದಾ ಕಾದು ನೋಡಬೇಕು.

(ವರದಿ: ಚಿದಾನಂದ ಪಟೇಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 5, 2019, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading